Sunday, May 3, 2009

ಬೇಂದ್ರೆ ಕಾವ್ಯದಲ್ಲಿ ಒಲವು

(ಮೊನ್ನೆ ಕುರ್ತುಕೋಟಿಯವರು ಬೇಂದ್ರೆ ಕಾವ್ಯಗಳ ಬಗ್ಗೆ ಬರೆದ ಲೇಖನವೊಂದನ್ನು ಓದುತ್ತಿದ್ದೆ. ಬೇಂದ್ರೆ ಅವರ ಕಾವ್ಯ ಅಷ್ಟೇ ಅಲ್ಲ, ಅವರ ಕಾವ್ಯದ ಬಗ್ಗೆ ಓದುವುದೂ ಕೂಡ ಅಷ್ಟೇ ಆನಂದವನ್ನು ತರುತ್ತದೆ. ಆ ಆನಂದವನ್ನು ತಮ್ಮೊಂದಿಗೆ ಹಂಚಿಕೊಳ್ಳಬೇಕು ಎಂಬ ಆಸೆ ಆಯಿತು. ಜೊತೆಗೆ ಈ ಕಾಡಬೆಳದಿಂಗಳ ವಿಹಾರಕ್ಕೆ ಬೇಂದ್ರೆ ಕಾವ್ಯದ ಕುರಿತಾದ ಮಾತುಗಳು ಇನ್ನಷ್ಟು ತಂಪನ್ನು ನೀಡಲಿ ಎಂಬ ಆಶಯವೂ ಸೇರಿಕೊಂಡದ್ದರಿಂದ ಈ ಲೇಖನ ಬರೆಯೋಣವೆನ್ನಿಸಿತು. )

ಕಾಲಕ್ಕೂ ಕಾವ್ಯಕ್ಕೂ ಇರುವ ಸಂಬಂಧ ವಿಚಿತ್ರವಾದದ್ದು. ಒಂದು ಯುಗ ತನಗೆ ಬೇಕಾದ ಕವಿಯನ್ನು ಆರಿಸಿಕೊಳ್ಳುವಂತೆ ಆ ಕವಿ ಕೂಡ ತನಗೆ ಅನುಕೂಲವಾದ ಕಾವ್ಯವನ್ನು ಸೃಷ್ಟಿಸಬಲ್ಲ . ಆ ಕಾವ್ಯ ಹೊಸ ಯುಗಕ್ಕೇ ಜೀವಕೊಡುತ್ತದೆ. ಅಂತೆಯೇ ಬೇಂದ್ರೆಯವರ ಕಾವ್ಯ ನವೋದಯದ ಕಾಲದ ಉತ್ಕೃಷ್ಟ ಫಲವಾಗಿರುವಂತೆ ಬೇಂದ್ರೆಯವರ ಕಾವ್ಯ ಕನ್ನಡದಲ್ಲಿ ನವೂದಯವನ್ನೇ ಸೃಷ್ಟಿಸಿತು ಎಂದೂ ಹೇಳಬಹುದು. ಈ ನವೋದಯಕಾಲದ ಬಹುಪಾಲು ಕಾವ್ಯಗಳ ವಸ್ತುವಾಗಿದ್ದು ಪೌರಾಣಿಕ ಕಾವ್ಯಗಳಿಗಿಂತ ತೀರ ಭಿನ್ನವಾದ ಸಾಮಾನ್ಯಜನರ ಜೀವನದಲ್ಲಿನ 'ಒಲವು'. ಬೇಂದ್ರೆಯವರು ತಮ್ಮ ಕಾವ್ಯಗಳಲ್ಲಿ ಒಲವನ್ನು ವಸ್ತುವಾಗಿ ಬಳಸಿದಷ್ಟು ಸುಂದರವಾಗಿ ಮತ್ತು ಸಹಜವಾಗಿ ಮತ್ತೆ ಯಾವ ಕವಿಯೂ ಬಳಸಿರಲಾರ. ಅವರು ತಮ್ಮ ಕಾವ್ಯಗಳಲ್ಲಿ ತುಂಬಿದ ಒಲವು, ಅತ್ಯಂತ ಸಾಮಾನ್ಯವಾಗಿರುವುದನ್ನೇ ಹೇಳುತ್ತಾ ದೈವಿಕತೆಯನ್ನು ಪಡೆದುಕೊಂಡುಬಿಡುವುದು ತುಂಬಾ ವಿಶೇಷವಾದದ್ದು.

ಬೇಂದ್ರೆ ಅವರ ಪ್ರಾರಂಭದ ಪ್ರಣಯ ಕಾವ್ಯ ಸಂಕಲನಗಳಲ್ಲಿ ಕಾಮ ಪ್ರಧಾನವಾದ ಕವಿತೆಗಳೇ ಹೆಚ್ಚು. ಅಂತಹ ಒಂದು ಕವನ ಸಂಕಲನ 'ಕಾಮ ಕಸ್ತೂರಿ'. ಅದರ ಮುನ್ನುಡಿಯಲ್ಲೇ 'ಕಾಮ ಕಸ್ತೂರಿಯಂತೆ ಒಕ್ಕಾಲು ಮದ ಮುಕ್ಕಾಲು ಮಣ್ಣು, ಆದರೂ ಗಮಗಮಿಸುವ ಸವಿಗಂಪು ! ' ಎನ್ನುತ್ತಾರೆ. ಅದರಲ್ಲಿನ ಒಂದು ಕವನದ ಸಾಲು ' ಕವಳ ಮೆಲ್ಲುವ ಬಾಯ ಹವಳ ತುಟಿಯ ಹಿಂಡುತ್ತ ನಿವಳ ನಿಂತಾಳ ನಿಳವೀಲೆ ಗಿಣಿ ಹೇಳ ಇವಳ ಮನವೆಲ್ಲಿ ಇರಬಹುದೆಂದು ' . ಇದು ಹಳ್ಳಿ ಯುವಕನೊಬ್ಬ ತನ್ನ ಮನದನ್ನೆಯ ನಿಲವನ್ನು ಬಣ್ಣಿಸುವ ರೀತಿ. ಇಲ್ಲಿಯ ಪದ, ಪ್ರತಿಮೆ ಮತ್ತು ಧಾಟಿ ಎಲ್ಲ ಜಾನಪದ. ಆದರೂ ಇದು ಕಟ್ಟಿಕೊಡುವ ಅನುಭಾವ ಇದೆಯಲ್ಲ ಅದು ಮಾತ್ರ ಎಷ್ಟು ಪರಿಷ್ಕೃತ ನೋಡಿ. 'ಇವಳ ಮನವೆಲ್ಲಿ ಇರಬಹುದು?' ಎಂಬ ಸಾಲಿನಲ್ಲಿನ ಅಂತರ್ಮುಖತೆ ಅದು ಸಂಪೂರ್ಣ ನಾಗರಿಕ ಅಲ್ಲವೇ?? ಇದೇ ಹೊತ್ತಿನ ಅವರ ಇನ್ನೊಂದು ಕವನ, ' ಕಲ್ಪವೃಕ್ಷ ಬೃಂದಾವನಂಗಳಲಿ ' . ಅಲ್ಲಿ ಅವರು ಪ್ರಣಯಾನುಭವವನ್ನು ಬೆಳಕು ಕತ್ತಲೆ, ಅಮೃತ ವಿಷಗಳಿಗೆ ಹೋಲಿಸುತ್ತಾರೆ. (ಒಂದೊಂದು ಸಾಲಿನಲ್ಲೂ contrast ನಿರೂಪಿಸುತ್ತ ಸಾಗುವ ಈ ಕವಿತೆ ತುಂಬಾ ಜಟಿಲವಾಗಿ ತೋರುತ್ತದೆ.) ' ಬಾಲ ಸುತ್ತಿ ಹೆಡೆಯೆತ್ತಿ ತೂಗುತಿರೆ ಭೊಗಸುಪ್ತಕಾಲ ಈ ತೋಳಿನಲಿ ಹೋಳು ಮೈ ಇರಲು ಬೀಸಿತಿಂದ್ರಜಾಲ ' ಇಂತಹ ಸಾಲುಗಳಲ್ಲಿ ಕಾಮದ ಅಂತರ್ಮುಖತೆಯಲ್ಲಿಯೇ ಸಾಂಸ್ಕೃತಿಕ ಮೌಲ್ಯಗಳಾದ ಸೌಂದರ್ಯ ಮತ್ತು ಆಧ್ಯಾತ್ಮಿಕತೆಯೆರಡೂ ಸೇರಿಬಿಡುತ್ತವೆ.

ಆದರೆ ಅವರ ನಂತರದ ಪ್ರಣಯ ಕವಿತೆಗಳನ್ನು ನೋಡಿದರೆ ಅಲ್ಲಿನ ಅನುಭವ ತಂತಾನೇ ಅನುಭಾವವಾಗುವುದು ತೋರುತ್ತದೆ. ನಾದಲೀಲೆಯಲ್ಲಿನ ಕವನಗಳಲ್ಲಿ ಇಂಥದ್ದನ್ನು ಹೇರಳವಾಗಿ ಕಾಣಬಹುದು. ಅವರು ತೋರಿಸುವ ವಿರಹದ ಉತ್ಕಟತೆ ಅದ್ಭುತ. ಈ ಸಾಲುಗಳನ್ನೇ ನೋಡಿ ' ಕಾಣದ ವಸ್ತುವಿನ ಕಾಣಬೇಕೆಂಬಾಸೆ, ಮಿತಿಯ ಮೀರಿದೆ ಜೀವಾ '. ಆ ಕಾಣದ ವಸ್ತು ಪ್ರಿಯಕರನಾಗಿರಬಹುದು ಅಥವಾ ದೇವರು?? ಹೀಗೆ ಅದೃಶ್ಯದೊಡನೆ ನೋಡಬಯಸುವ ದೃಷ್ಟದ ಹಂಬಲವಿರಬಹುದೇ ಎಂದು ಪ್ರಶ್ನಿಸಿದಂತೆ ಅನ್ನಿಸುವ ಕವಿತೆಗಳು ನಾದಲೀಲೆಯಲ್ಲಿ ಇವೆ. ಅವರ ಒಲವಿನ ಕಾವ್ಯಗಳಲ್ಲಿನ ಇನ್ನೊಂದು ಮಗ್ಗುಲು ಅಂದರೆ ಮುಗ್ಧತೆ ಮತ್ತು ಪ್ರೌಢತೆಯನ್ನು ಒಟ್ಟೊಟ್ಟಿಗೇ ಅವರು ಹೇಳುವ ರೀತಿ. 'ನಾನು ಬಡವಿ, ಆತ ಬಡವ, ಒಲವೆ ನಮ್ಮ ಬದುಕು' ಎಂಬ ಅವರ ಕಾವ್ಯನಾಯಿಕೆಯೊಬ್ಬಳ ಮಾತಿನಲ್ಲಿರುವ ಮುಗ್ಧತೆ ಮತ್ತು ಆ ಪ್ರೌಢತೆ ಅದ್ಭುತವಾದದ್ದು.

ಅವರ ಇನ್ನೊಂದು ವಿಶಿಷ್ಟ ಒಲವಿನ ಕವಿತೆ 'ಹುಬ್ಬಳ್ಳಿಯಾಂವಾ'. ಆ ಕವಿತೆಯಲ್ಲಿನ ನಾಯಿಕೆಯ ಸುಖದುಃಖ ಉನ್ಮಾದಗಳು ಐಂದ್ರಿಕತೆಯಿಂದ ತುಂಬಿ ತುಳುಕುತ್ತವೆ. 'ಬಂಗಾರ ಹುಡಿಲೆ ಭಂಡಾರನ ಬೆಳೆಸೆಂದಾವ' , ' ಜೋಗತೇರಿಗೆ ಮೂಗುತಿ ಅಂತ ನನಗ ಅಂದಾವಾ'. ಇಲ್ಲಿನ ಅತಿಶಯೋಕ್ತಿ ಅನುಭವವನ್ನು ಅನುಭಾವವಾಗಿಸುವ ಅವರ ಕಾವ್ಯದ ಒಂದು ಉಪಾಯ! ಕಳೆದುಹೋದ (ಸೆಟಕೊಂಡು ಹೋದ) ಸೆಟ್ಟರ ಹುಡುಗನನ್ನು ಕಾಯುತ್ತ ಹಾದಿ ಬೀದಿ ಹುಡುಕುವ ಈ ನಾಯಿಕೆಯ ವಿರಹ ಚೆನ್ನಮಲ್ಲಿಕಾರ್ಜುನನನ್ನು ಹುಡುಕುವ ಅಕ್ಕನನ್ನು ನೆನಪಿಸುವುದು ಇದೇ ಕಾರಣಕ್ಕೆ. ಒಮ್ಮೆ ಕಂಡು ಮರೆಯಾದ ಆ ಸೆಟ್ಟರ ಹುಡುಗನ ಚೆಲುವು ಮನಸ್ಸಿಗೆ ಇಂತಹ ಉನ್ಮಾದ ತಂದಿರಬೇಕಿದ್ದರೆ ಆ ಪ್ರಣಯದ ಅನುಭವದ ಶಕ್ತಿ ಹೇಗಿರಬೇಡ?!

ಕೊನೆಯಲ್ಲಿ ಅವರ ಇನ್ನೊಂದು ಕವಿತೆಯ ಬಗ್ಗೆ ಗಮನ ಕೊಡಬೇಕು. ಅದು 'ಸಂಗೀತ'. ಬೇಂದ್ರೆಯವರು ತನ್ನ ಆತ್ಮಚರಿತ್ರೆಯನ್ನು ಅದರಲ್ಲಿ ನಿರೂಪಿಸಿದ್ದಾರೆ. ಅಲ್ಲಿನ ಅವರ ಪ್ರಣಯಾನುಭವ ವಿಶೇಷ. ಏಕೆಂದರೆ ಅವರ ಪತ್ನಿಯೇ ಇಲ್ಲಿ ಅವರ ಪ್ರಣಯಿನಿ. ಜಗತ್ತಿನ ಬಹುಪಾಲು ಎಲ್ಲ ಪ್ರಣಯ ಕಾವ್ಯಗಳಲ್ಲಿ ವಿವಾಹ ಪೂರ್ವ ಅಥವಾ ವಿವಾಹ ಬಾಹಿರ ಪ್ರಣಯವನ್ನು ನಿರೂಪಿಸಿದರೆ, ಬೇಂದ್ರೆ ವಿವಾಹೋತ್ತರ ಪ್ರಣಯವನ್ನು ನಿರೂಪಿಸುತ್ತಾರೆ. ( ಭಾಸನ ಸ್ವಪ್ನವಾಸವದತ್ತದ ನೆನಪು ತರುತ್ತದೆ ಇದು. ಅಲ್ಲಿ ವಾಸವದತ್ತೆ ಉದಯನನ ಸಖಿ, ಗ್ರಹಿಣಿ ಮತ್ತು ಪ್ರಿಯಶಿಷ್ಯೆ ಕೂಡ. ) ಬೇಂದ್ರೆಯವರ ಸಖಿಗೀತದ ಆದರ್ಶವೂ ಇದೇ. ಈ ಕವನಸಂಕಲನದ ಮೊದಲಿಗೆ ಐಂದ್ರಿಕ ಅನುಭವಗಳ ಕವಿತೆಗಳು ಇದ್ದರೂ ನಂತರದಲ್ಲಿ ಸಾವುನೋವುಗಳ ಆತಂಕ ಮತ್ತು ಬಡತನ ಸಿರಿವಂತಿಕೆಗಳ ನಿತ್ಯ ಅನುಭವಗಳೂ ಇವೆ.

ಬೇಂದ್ರೆಯವರ ಜೀವನದ ತುಂಬಾ ಹೃದಯ ಒಡೆದು ಚೂರಾಗುವ ಸನ್ನಿವೇಶಗಳು ತುಂಬಿದ್ದವು. ಚೊಚ್ಚಲ ಹಸುಗೂಸು ಹುಟ್ಟಿದೊಡನೆ ತೀರಿಹೋಯಿತು. ಜೊತೆಯಲ್ಲಿ ಆರ್ಥಿಕ ಸಂಕಷ್ಟ. ಹೀಗಿರುವಾಗ ಅವರ ದೀರ್ಘದಾಂಪತ್ಯದಲ್ಲಿ ಪರಸ್ಪರ ವಿಮುಖತೆ ಬಂದಿರಬಹುದು. ಇವೆಲ್ಲವನ್ನೂ ಅವರ ಒಲವಿನ ಕವನಗಳಲ್ಲಿ ಹೇರಳವಾಗಿ ಕಾಣಬಹುದು. ಅಂತೆಯೇ ಒಡೆದ ಹೃದಯದ ಕನ್ನಡಿಯನ್ನು ಜೋಡಿಸುವ ದಾಂಪತ್ಯದ ಕುಶಲತೆಗೇನೂ ಕಡಿಮೆ ಇಲ್ಲ ಅವರ ಕವನಗಳು. ಇದೇ ಅವರ ಕಾವ್ಯದ ಕುಶಲಕರ್ಮ ಮತ್ತು ಅವರ ಜೀವನದ ಕುಶಲಕರ್ಮವೂ ಆಗಿರುವುದು ದೊಡ್ಡ ಗುಣ. ಹೀಗೆ ಅವರ ಕವಿತೆಗಳಲ್ಲಿನ ಅತೀ ಉದ್ದದ ಪಲ್ಲವಿಯಾದ, ' ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರಾರು ಕಾಮಾಕ್ಷಿಯೇ? ' ಕೊನೆಯಲ್ಲೂ ಪ್ರಶ್ನೆಯಾಗಿ ಉಳಿದು ಒಲವಿನಂತೆ ನಿರಂತರ ಕಾಡುತ್ತದೆ.

9 comments:

  1. ಗೋದಾವರೀ,
    ಅದ್ಭುತವಾಗಿ ಬರೆಯುತ್ತೀರಿ ಅಲ್ಲ!
    ನನಗೆ ಬರೆಯುವುದರಲ್ಲಿ ಆಸಕ್ತಿಯೇ ಇಲ್ಲ ಅಂದವರಿದ್ದರು ಒಬ್ಬರು!!

    ಆಮೇಲೆ, ನೀವು ಸಂಸ್ಕೃತ ಕವಿಗಳ ಕುರಿತೂ ಬರೆಯಿರಿ..

    ReplyDelete
  2. ಗೋದಾವರಿ ಮೇಡಮ್,

    ಲೇಖನ ತುಂಬಾ ಚೆನ್ನಾಗಿದೆ...ಸುಂದರವಾಗಿ ಬರೆಯುತ್ತೀರಿ...ಇಂಥ ವಿಚಾರಗಳನ್ನು ಮತ್ತಷ್ಟು ಬರೆಯಿರಿ...
    ಆಹಾಂ! ನನ್ನ ಬ್ಲಾಗಿನಲ್ಲಿ ಮದುವೆ ಮನೆಯ ವಿಚಾರಗಳ ಬಗ್ಗೆ ಬರೆದಿದ್ದೇನೆ...ಸಾಧ್ಯವಾದರೆ ಬಿಡುವು ಮಾಡಿಕೊಂಡು ನೋಡಿ...ಇಷ್ಟವಾದರೆ ಕಾಮೆಂಟಿಸಿ...

    ಧನ್ಯವಾದಗಳು...

    ReplyDelete
  3. ಧನ್ಯವಾದಗಳು ರಾಘವೇಂದ್ರ.. ನಿಜ, ಅವರಿಗೆ ಇನ್ನೂ, ಬರೆಯುವುದರಲ್ಲಿ ಆಸಕ್ತಿಯಿಲ್ಲ !!!

    ಶಿವೂ ಅವರೇ ಖಂಡಿತವಾಗಿ ಓದುತ್ತೇನೆ.. ನೀವು ಸೆರೆಹಿಡಿಯುವ ಫೋಟೋಗಳಂತೆ ನಿಮ್ಮ ಬರವಣಿಗೆಯ ಬಗ್ಗೆಯೂ ಕುತೂಹಲವಿದೆ.. ಧನ್ಯವಾದಗಳು..

    ReplyDelete
  4. ಗೋದಾವರಿ,
    ಬೇಂದ್ರೆಯವರ ಒಲವಿನ ಕಾವ್ಯದ ಬಗೆಗೆ ಅರ್ಥವತ್ತಾಗಿ ಬರೆದಿದ್ದೀರಿ.
    ನನಗೆ ಮೆಚ್ಚುಗೆಯಾಯಿತು.

    ReplyDelete
  5. ಗೋದಾವರಿ...
    ತುಂಬ ಚೆನ್ನಾಗಿ ಇದೆ.. ನಿಮ್ಮ ಲೇಖನ ಹಾಗು ಬರವಣಿಗೆಯ ಪರಿ.... ನಿಮ್ಮ ಎರಡು ಲೇಖನಗಳನ್ನು ನೋಡಿದೆ.. ಚೆನ್ನಾಗಿ ಇದೆ.. ಇದೆ ರೀತಿ ಉಪಯುಕ್ತ ಮಾಹಿತಿ ಕೊಡುತ್ತಿರಿ....
    ಬಿಡುವಾದಾಗ ನನ್ನ ಲೋಕಕ್ಕೂ ಒಮ್ಮೆ ಬಂದು ಹೋಗಿ

    ಗುರು

    ReplyDelete
  6. ನನ್ನ ಫೇವರಿಟ್ ಕವಿಯ ಬಗ್ಗೆ ಸೂಪರ್ರಾಗಿ ಬರ್ದಿದ್ದೀರಿ.. ಥ್ಯಾಂಕ್ಸ್.

    ReplyDelete
  7. ಬೇಂದ್ರೆ ಒಬ್ಬ ಅನುಭಾವಿ ಕವಿ ಅನ್ನುವ ಗೌರೀಶ ಕಾಯ್ಕಿಣಿ, "ಎಂಬತ್ತಾಲ್ಲು ಮಳೆಗಾಲಗಳಲ್ಲಿ ಮಿಂದೆದ್ದು ಮತ್ತೆ ಮತ್ತೆ ಶ್ರಾವಣದ ಸೊಬಗನ್ನು ಹೀರಿ ಹಿಗ್ಗಿದ ಅವರ ಅಸ್ಖಲಿತ ಪ್ರತಿಭೆ ಇಂದಿಗೂ 'ಮೊದಲಗಿತ್ತಿಯಂತೆ' ಮೆರೆಯುತ್ತಿದೆ" ಎನ್ನುತ್ತಾರೆ. ಬೇಂದ್ರೆ ಕವನಗಳಂದ್ರೆ ನಂಗೂ ಭಾಳ ಇಷ್ಟ. ಬೇಂದ್ರೆಗೆ ಬೇಂದ್ರೆನೇ ಸಾಟಿ ಅಲ್ವಾ?
    ಇನ್ನಷ್ಟು ಬರೆಯಿರಿ, ಕವಿ-ಕಾವ್ಯ-ಬರಹದ ಕೃಷಿ ಬೆಳೆಯಲಿ. ಓದೋಕೆ ಖುಷಿಯಾಗುತ್ತೆ.

    -ಧರಿತ್ರಿ

    ReplyDelete
  8. ಸುನಾಥ್ ಅವರೇ ಸಂತೋಷವಾಯಿತು.. ಧನ್ಯವಾದಗಳು.. ಹೀಗೆ ಬರುತ್ತಿರಿ..

    ಗುರು ನಿಮಗೆ ಕಾಡಬೆಳದಿಂಗಳಿಗೆ ಸ್ವಾಗತ..

    'ನೀಲಿಹೂವು' ಧನ್ಯವಾದಗಳು..

    ಧನ್ಯವಾದಗಳು ಧರಿತ್ರಿ.. ನಿಜ,ಬೇಂದ್ರೆಗೆ ಬೆಂದ್ರೇನೇ ಸಾಟಿ..

    ReplyDelete
  9. ಉರಿಗೊಬ್ಳೆ ಪದ್ಮಾವತಿ, ತಾluಕಿಗೊಂದೆ ತಾಲ್ಲೂಕಾಪಿಸು, ಜಿಲ್ಲೆಗೊಬ್ನೆ ಎಂಪಿ. ರಾಜ್ಯಕ್ಕೊಂದೆ ಬಾವುಟ, ರಾಷ್ಟ್ರಕೊಬ್ರೆ vajipeyi ಹ್ಯಾಗೋ... ವಿಶ್ವಕ್ಕೊಬ್ರೆ ಬೇಂದ್ರೆ...
    ನನಗೆ ಕನಸಲ್ಲಿ ಅಂದ್ರೆ ಪ್ರಾಣ, ಕುವೆಂಪು ಕಿ ಕಸಂ... ಅದಕ್ಕೆ ಕಾರಣ ಅವ್ರ ನೀ ಹಿಂಗ ನೋಡಬ್ಯಾಡ ನನ್ನ... ಕವನ....

    ReplyDelete