Monday, June 22, 2009

ವಿಮರ್ಶೆ

ಸಾಹಿತ್ಯ ವಿಮರ್ಶೆ ಎಂಬ ಪ್ರಾಕಾರ ನಮ್ಮಲ್ಲಿ ಆರಂಭವಾದದ್ದು ಪಾಶ್ಚಿಮಾತ್ಯರ ಪ್ರಭಾವದಿಂದ. ಬಹುಶಃ ಅದರ ಜೊತೆಗೇ ಸಾಹಿತ್ಯಕ್ಕೂ ಅದರ ವಿಮರ್ಶೆಗೂ ಇರುವ ವಿರೋಧ ಸಂಬಂಧವೂ ಕೂಡ. ಪ್ರಾಚೀನ ಕಾಲದಲ್ಲಿ ನಮ್ಮಲ್ಲಿ ಕಾವ್ಯಗಳಿಗೆ ಟೀಕೆ ಟಿಪ್ಪಣಿ, ವ್ಯಾಖ್ಯಾನ ಮತ್ತು ಭಾಷ್ಯಗಳನ್ನು ಬರೆಯುತ್ತಿದ್ದರು. ಅವುಗಳಲ್ಲಿ ಕಾವ್ಯಗಳ ವಿಶ್ಲೇಷಣೆ ಇದ್ದರೂ ಅವು ಸಾಹಿತ್ಯ ವಿಮರ್ಶೆ ಅಥವಾ ಕಾವ್ಯ ವಿಮರ್ಶೆಯೆಂಬ ಹೆಸರನ್ನು ಪಡೆದುಕೊಂಡಿರಲಿಲ್ಲ. ಹಿಂದಿನ ಟೀಕಾಕಾರರುಗಳೆಲ್ಲರ ಉದ್ದೇಶ ಒಬ್ಬ ಕವಿಯ ಕಾವ್ಯ ಪೋಷಣೆಗೆ ಅನುಕೂಲಕರವಾದ ಮತ್ತು ಕಾವ್ಯ ಓದುವಿಕೆಗೆ ನೆರವಾಗುವ ಟೀಕೆ ಟಿಪ್ಪಣಿಗಳನ್ನು ಬರೆಯುವುದಾಗಿತ್ತು. ಈ ಟೀಕಾ ಪ್ರಾಕಾರದ ಸ್ವರೂಪ ಆಧುನಿಕ ಕಾಲದಲ್ಲಿ ಹೆಚ್ಚು ಹೆಚ್ಚು ಅಂತರ್ಮುಖವಾಗತೊಡಗಿತು.


ಸಾಹಿತ್ಯದ ಮೌಲ್ಯ ಮಾಪನ ವಿಮರ್ಶೆಯ ಮುಖ್ಯ ಕರ್ತವ್ಯ. ಮತ್ತೊಂದು ಮುಖ್ಯವಾದ ಅಂಶವೆಂದರೆ ಪ್ರಾಚೀನ ಕಾಲದ ಟೀಕೆ ಟಿಪ್ಪಣಿಗಳಿಗಿಂತ ಭಿನ್ನ ರೂಪ ಹೊಂದಿದ ಈ ವಿಮರ್ಶೆ, ಸಾಹಿತ್ಯ ರಚನೆಯಂತೆ ಒಂದು ಕಲೆಯಲ್ಲ. ಇದೊಂದು ಶಾಸ್ತ್ರ. ಏಕೆಂದರೆ ಮೌಲ್ಯಮಾಪನ ಜವಾಬ್ದಾರಿಯಾದಾಗ ಈ ಮೌಲ್ಯಮಾಪನಕ್ಕೆ ಪ್ರಮಾಣಗಳನ್ನು ನಿರ್ಧರಿಸುವುದೂ ಅನಿವಾರ್ಯ. ಈ ಪ್ರಮಾಣಗಳಿಗನುಸಾರ ವಿಮರ್ಶೆಯ ನಿರ್ವಹಣೆಯಾಗಬೇಕು ಎಂಬಲ್ಲಿಗೆ ವಿಮರ್ಶೆಯಲ್ಲಿ ಇರಬಹುದಾಗಿದ್ದ ಹೆಚ್ಚಿನಪಾಲು ಕಲೆಯ ಲಕ್ಷಣಗಳು ಕಳೆದು ಹೋಗುತ್ತವೆ. ಸಾಹಿತ್ಯ ಹಲವಾರು ಭಿನ್ನ ವಸ್ತುಗಳನ್ನು ಕೂಡಿಸುತ್ತದೆ. ಸಾಹಿತ್ಯಕಾರನಿಗೆ ಇರುವ ಕಲ್ಪನಾ ಸ್ವಾತಂತ್ಯ್ರ ಅಪಾರ. ಆದರೆ ವಿಮರ್ಶಕನಿಗೆ ಈ ಬಗೆಯ ಸ್ವಾತಂತ್ರ್ಯವಿಲ್ಲ. ಈ ಅಸ್ವಾತಂತ್ರ್ಯವೇ ವಿಮರ್ಶೆಗೆ ಶಾಸ್ತ್ರದ ಸ್ವರೂಪ ತಂದು ಕೊಡುವುದು.


ಹತ್ತೊಂಭತ್ತನೆಯ ಶತಮಾನಕ್ಕಿಂತ ಮೊದಲು ಭಾರತದ ಯಾವ ಭಾಷೆಯಲ್ಲೂ ವಿಮರ್ಶೆ ಗದ್ಯರೂಪದಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಕಾಳಿದಾಸನ 'ರಘುವಂಶ' ಮತ್ತು 'ಮೆಘಸಂದೇಶ' ಗಳಿಗೆ ಮಲ್ಲಿನಾಥನು ಬರೆದ ಟೀಕಾಗ್ರಂಥವು ಆಧುನಿಕ ವಿಮರ್ಶೆಯನ್ನು ಸ್ವಲ್ಪ ಮಟ್ಟಿಗೆ ಹೋಲುತ್ತದೆ. ಅವನು ತನ್ನ ಗ್ರಂಥದ ಆರಂಭದಲ್ಲೇ 'ಮೂಲದಲ್ಲಿ ಇಲ್ಲದಿರುವುದರ ಕುರಿತು ನಾನು ಬರೆಯುವುದಿಲ್ಲ. ಕೃತಿಗೆ ಬೇಡವಾದದ್ದನ್ನು ಏನೂ ಹೇಳುವುದಿಲ್ಲ' ಎನ್ನುತ್ತಾನೆ. ಆದರೆ ಮಲ್ಲಿನಾಥನ ಟೀಕಾಗ್ರಂಥವು ಗದ್ಯಾವತಾರದೆಲ್ಲೇನಿಲ್ಲ. ಅದೂ ಕಾವ್ಯವೇ. ಆದರೆ ಆ ಕಾವ್ಯದ ವಸ್ತುವೂ ಇಂದಿನ ವಿಮರ್ಶೆಗಳಂತೆ ಸ್ವತಂತ್ರವಾಗಿ ನಿಲ್ಲುವುದಿಲ್ಲ. ಮಲ್ಲಿನಾಥನ ಈ ಟೀಕಾಗ್ರಂಥವನ್ನೊಂದನ್ನು ಓದಿಕೊಂಡರೆ ಏನೊಂದೂ ಅರ್ಥವಾಗುವುದಿಲ್ಲ. ಮೂಲಕಾವ್ಯಗಳನ್ನು ಓದಿಕೊಳ್ಳುತ್ತ ಈ ಟೀಕೆಯನ್ನು ಓದಬೇಕು. ಆಗ ಮಾತ್ರ ಕಾವ್ಯದ ರಸಾಸ್ವಾದನೆ ಆಗುತ್ತದೆ.


ಕನ್ನಡದಲ್ಲಿ ಈ ಹೊಸ ವಿಮರ್ಶೆಯ ಸ್ವರೂಪ ಆರಂಭವಾದದ್ದು ನವೋದಯ ಸಾಹಿತ್ಯದೊಂದಿಗೆ. ನವೋದಯದ ಕಾಲದ ಬಹುಪಾಲು ದೊಡ್ಡ ದೊಡ್ಡ ಕವಿಗಳು ವಿಮರ್ಶಕರೂ ಆಗಿದ್ದರು. ಆದ್ದರಿಂದ ನವೋದಯ ಕಾಲದ ಸಾಹಿತ್ಯದ ಆಶೋತ್ತರಗಳನ್ನು, ಅಪೇಕ್ಷೆಗಳನ್ನು ಮತ್ತು ಕಾವ್ಯದ ಕಲ್ಪನೆಗಳನ್ನು ನವೋದಯ ಕಾಲದಲ್ಲಿ ಉದಿಸಿದ ವಿಮರ್ಶೆ ಸರಿಯಾಗಿ ಪ್ರತಿಫಲಿಸುತ್ತದೆ. ಪ್ರಾಚೀನ ಕವಿಗಳ ಅಲಂಕಾರಿಕತೆ , ಆ ಕಾವ್ಯಗಳಲ್ಲಿನ ಪಾತ್ರರಚನೆಯಲ್ಲಿ ಕಂಡುಬರುವ ಮಾನವ ಸಂಬಂಧಗಳ ಅಭಾವ ಇವುಗಳನ್ನು ನವೋದಯ ವಿಮರ್ಶೆ ಟೀಕಿಸುತ್ತದೆ. ಆದರೆ ಪ್ರಾಚೀನ ಕಾವ್ಯದಲ್ಲಿ ನವೋದಯದ ಲಕ್ಷಣಗಳನ್ನು ಕಂಡರೆ ಉತ್ಸಾಹದಿಂದ ಬೀಗುತ್ತದೆ. ಈ ರೀತಿ ಸಂಬಂಧವನ್ನು ನವೋದಯ ಕಾಲದ ವಿಮರ್ಶೆ ಕಾವ್ಯ ಮತ್ತು ಸಾಹಿತ್ಯದೊಡನೆ ಬೆಳೆಸಿಕೊಂಡಿತ್ತು .

ಅದರ ಜೊತೆಗೇ ಕಾವ್ಯವೂ ವಿಮರ್ಶೆಯನ್ನು ಹೇಗೆ ಸ್ವೀಕರಿಸುತ್ತದೆ ಎಂಬುವುದೂ ಮುಖ್ಯವಾಗುತ್ತದೆ. 'ತಿಳಿಬಾನಿನೆಡೆಯಲ್ಲಿ ಹುಣ್ಣಿಮೆ ಚಂದ್ರ ಮೂಡಿಯೇ ಮೂಡಿದನು, ಕೆಲಸವಿಲ್ಲದ ವಿಮರ್ಶಕ ವಿಮರ್ಶೆಯ ಮಾಡಿಯೇ ಮಾಡಿದನು'. ಕುವೆಂಪು ಅವರ ಈ ಪದ್ಯದಲ್ಲಿ ವಿಮರ್ಶೆಯ ಬಗ್ಗೆ ಕಾವ್ಯದ ನಿಲುವು ಏನಿರಬಹುದೆಂದು ಸ್ಪಷ್ಟವಾಗುತ್ತದೆ. ಬೇಂದ್ರೆಯವರ ದೃಷ್ಟಿಕೂನವೂ ಕೂಡ ವಿಮರ್ಷೆಯ ಬಗೆಗೆ ಅಷ್ಟೇನೂ ಹಿತವಾಗಿರುವಂತೆ ತೋರುವುದಿಲ್ಲ. ಅವರ ಒಂದು ಕವಿತೆಯಲ್ಲಿ ಕಾವ್ಯವೆಂದರೆ ಅಮೃತಕ್ಕೆ ಮೇಲೆ ಹಾರುವ ಗರುಡ, ಆದರೆ ವಿಮರ್ಶೆ ಹಾವಿನಂತೆ ಹೊಟ್ಟೆ ಹೊಸೆಯುವ ಜಂತು ಎಂಬರ್ಥಬರುವಂತೆ ಹೇಳುತ್ತಾರೆ. ಇಲ್ಲಿ ವಿಮರ್ಶೆ, ಕಾವ್ಯಕ್ಕೆ ವಿರುದ್ಧವಾದ ತತ್ವವಾಗಬಹುದು ಎಂಬುದನ್ನು ಸೂಕ್ಷ್ಮವಾಗಿ ಹೇಳಿದಂತಿದೆ. ಆದರೆ ಅವರ ಇನ್ನೊಂದು ಕವನದಲ್ಲಿ 'ನಿನ್ನ ಮುಖ ಸ್ಪರ್ಶವೊಂದೇ ಸಾಕು, ಹೊಸ ಸೃಷ್ಟಿಯೇ ಬರಬಹುದು' ಎನ್ನುತ್ತಾರೆ. ಅಂದರೆ ಎಲ್ಲ ಕಾವ್ಯಗಳೂ, ಕವಿಗಳೂ ಅಪೇಕ್ಷಿಸುವುದು ಸಹೃದಯರನ್ನು. ಆದರೆ ಅವನ ಮೌಲ್ಯನಿರ್ಣಯ ಬೇಡ ಎಂಬುವುದೂ ಸ್ಪಷ್ಟ.

ಕೆಲವು ನವೋದಯ ಕವಿಗಳ ವಿಮರ್ಶಾ ಗ್ರಂಥಗಳನ್ನು ಅವಲೋಕಿಸಿದರೆ ಅವುಗಳಿಗೆ ಪ್ರಬಂಧದ ಲಕ್ಷಣಗಳಿರುವುದು ಕಂಡು ಬರುತ್ತದೆ. ಪ್ರಬಂಧಕಾರ ಸಾಮಾನ್ಯವಾದ ಜೀವನಾನುಭವವನ್ನು ಪರೀಕ್ಷಿಸಿ, ಪ್ರಶ್ನಿಸುತ್ತ ಬೆಲೆಕಟ್ಟುವಂತೆ ವಿಮರ್ಶಕ ತನ್ನ ಸಾಹಿತ್ಯದ ಅನುಭವವನ್ನು ಪ್ರಶ್ನಿಸಿ ಬೆಲೆಕಟ್ಟುತ್ತಾನೆ . ಉದಾಹರಣೆಗೆ ಬಿ.ಎಂ.ಶ್ರೀ ಅವರ 'ಕುಮಾರವ್ಯಾಸ' ಎಂಬ ದೀರ್ಘವಾದ ಲೇಖನವನ್ನು ನೋಡಬಹುದು. ಇಲ್ಲಿ ಕುಮಾರವ್ಯಾಸ ಪಂಪನಿಗಿಂತ ದೊಡ್ಡ ಕವಿ ಎಂಬಂತೆ ಬಿಂಬಿಸುತ್ತಾರೆ. ಶ್ರೀಯವರ ಭಾಷೆಯ ಸೌಂದರ್ಯದಿಂದಲೇ ಆ ಲೇಖನ ವಿಶಿಷ್ಟವೆನಿಸುತ್ತದೆ. ಇಂಥದೇ ಇನ್ನೊದು ಉದಾಹರಣೆಯೆಂದರೆ ಬೇಂದ್ರೆಯವರ 'ನಾಗಚಂದ್ರನ ಮಲ್ಲಿನಾಥ ಪುರಾಣ' ಎಂಬ ಲೇಖನ. ನಾಗಚಂದ್ರನ ವಾಕ್ಯಗಳನ್ನು ಮತ್ತು ವರ್ಣನೆಗಳನ್ನು ನೇರವಾಗಿ ಉಪಯೋಗಿಸುತ್ತಾ ಇಡೀ ಕಾವ್ಯವನ್ನೇ ಮೌಲ್ಯಮಾಪನಮಾಡುತ್ತಾರೆ. ನಾಗಚಂದ್ರನ ದರ್ಶನ, ನಾಗಚಂದ್ರನದೇ ಕಥೆ, ಆದರೆ ವಿಮರ್ಶೆಯ ಕೃತಿ ಮಾತ್ರ ಬೇಂದ್ರೆಯವರದು. ನವೋದಯಕಾಲದ ವಿಮರ್ಶಾಸಾಹಿತ್ಯದಲ್ಲಿ ಇದೊಂದು ಅಪರೂಪದ ಲೇಖನ. ಹೀಗೆಯೇ ಮಾಸ್ತಿಯವರ 'ವಿಮರ್ಶೆ' ಮತ್ತು ಡಿ.ವಿ.ಜಿ ಯವರ 'ಜೀವನ ಸೌಂದರ್ಯ ಮತ್ತು ಸಾಹಿತ್ಯ' ಮೊದಲಾದ ಕೃತಿಗಳು ಕನ್ನಡದ ಆಧುನಿಕ ವಿಮರ್ಶೆಗೆ ಹೊಸ ಸ್ವರೂಪ ನೀಡಿದವು. ಮುಂದೆ ಮುಗಳಿಯವರ 'ಕನ್ನಡ ಸಾಹಿತ್ಯ ಚರಿತ್ರೆ' ಮತ್ತು 'ತವನಿಧಿ' ಯಂತಹ ವಿಮರ್ಶಾಗ್ರಂಥಗಳು ಬಂದವು. ಇವೆಲ್ಲ ವಿಮರ್ಶೆಯ ವೈವಿಧ್ಯ ಮತ್ತು ಬಹುರೂಪತೆ ದರ್ಶಿಸಿದವು. ಮತ್ತು ಇದರ ಜೊತೆಗೆ ಸಾಹಿತ್ಯ ಬೇರೆ ವಿಮರ್ಶೆ ಬೇರೆ, ಒಂದು ಕಲೆಯಾದರೆ ಇನ್ನೊದು ಶಾಸ್ತ್ರ ಎಂಬ ಸ್ಪಷ್ಟವಾದ ಅರಿವು ಮೂಡಿಸಿದವು.

ಒಂದು ಕೃತಿ ಜಗತ್ತಿನ ಐತಿಹಾಸಿಕತೆಯಿಂದ ಹುಟ್ಟಿಬರುತ್ತದೆ . ಇಲ್ಲಿ ಐತಿಹಾಸಿಕತೆ ಕೇವಲ ಇತಿಹಾಸವಲ್ಲದೆ ಆಯಾಕಾಲದ ರಾಜಕೀಯ ಮತ್ತು ಸಾಮಾಜಿಕ ಶಕ್ತಿಗಳ ಕೇಂದ್ರ. ಈ ಕೇಂದ್ರ ಆ ಕೃತಿಯ ಅರ್ಥವಂತಿಕೆ ನಿರ್ಧರಿಸುತ್ತದೆ. ಇದೆ ಕಾರಣಕ್ಕಾಗಿಯೇ ಸಾಹಿತ್ಯ ರಚನೆಯ ನಿಯಮಗಳು ಕೂಡ ಕಾಲಕಾಲಕ್ಕೆ ಬದಲಾಗುತ್ತವೆ. ಹೀಗೆ ಸಾಹಿತ್ಯದ ಮೌಲ್ಯ ಮಾಪನದಂತೆ ಅದರ ಕೇಂದ್ರಕ್ಕೂ ವಿಮರ್ಶಕ ವಿಮರ್ಶೆ ಕೊಡಬೇಕಾಗುತ್ತದೆ. ಆದ್ದರಿಂದ ವಿಮರ್ಶೆ ಸಾಹಿತ್ಯ ಚರಿತ್ರೆಯ ಕೆಲಸವನ್ನು ಕೂಡ ಮಾಡುತ್ತದೆ. ವಿಮರ್ಶೆ ತಾನು ವಿಶಿಶ್ಟವೆನಿಸಿಕೊಳ್ಳುವುದು ಮತ್ತೊಂದು ಕಾರಣದಿಂದ. ಅದು, ವಿಮರ್ಶೆ ಮತ್ತು ಸಾಹಿತ್ಯ ಎರಡೂ ಅವಲಂಬಿಸುವುದು ಭಾಷೆಯನ್ನೇ. ಆದ್ದರಿಂದ ವಿಮರ್ಶೆ ಕೇವಲ ಸಾಹಿತ್ಯದ ಅರ್ಥಗ್ರಹಣದ ಕೆಲಸವನ್ನು ಮಾತ್ರವಲ್ಲದೇ ಸಾಹಿತ್ಯ ಸ್ಫುರಿಸಬಹುದಾದ ವಾಚ್ಯಾರ್ಥವನ್ನೂ ಮೀರಿದ ಅರ್ಥವನ್ನು ನೀಡಬೇಕು. ಅದಕ್ಕೆ ವಿಮರ್ಶಕ ಕೃತಿಯ ಬಹಿರ್ಮುಖತೆಯನ್ನೂ ಮತ್ತು ಅಂತರ್ಮುಖತೆಯನ್ನೂ ಓದುಗನ ಮುಂದಿಡಬೇಕು.

ವಿಮರ್ಶಕ ತನಗೆ ಗೊತ್ತಿಲ್ಲದಂತೆ ಮಾಡುವ ಇನ್ನೊದು ಕೆಲಸವೆಂದರೆ ತನ್ನ ವಿಮರ್ಶೆಯ ಮೂಲಕ ಇನ್ನೊದು ಕೃತಿಯನ್ನೇ ಹುಟ್ಟಿಸುವುದು! ನಮ್ಮ ವೇದಾಂತದಲ್ಲಿ ಭ್ರಮರಕೀಟಾನ್ಯಾಯ ಎಂಬ ಮಾತು ಬರುತ್ತದೆ. ಒಂದು ಕಣಜದ ಹುಳುವಿಗೆ ಯಾವಾಗಲೂ ಭ್ರಮರದ ಚಿಂತೆಯಂತೆ. ಆ ಚಿಂತೆ ಹೆಚ್ಚಾಗಿ ಅದೂ ಕೊನೆಯಲ್ಲಿ ತಾನೂ ಭ್ರಮರವಾಗಿ ಹೋಗುತ್ತದಂತೆ. ಸಾಹಿತ್ಯ ಮತ್ತು ವಿಮರ್ಶೆಯ ನಂಟೂ ಅಂಥದ್ದೇ ಎಂದು ನನಗನ್ನಿಸುತ್ತದೆ. ವಿಮರ್ಶೆಗೆ ಯಾವತ್ತಿದ್ದರೂ ಸಾಹಿತ್ಯದ್ದೇ ಚಿಂತೆ. ಆ ಚಿಂತೆಯೇ ಹೆಚ್ಚಾಗಿ ವಿಮರ್ಶೆಯೇ ಸಾಹಿತ್ಯವಾಗಿ ಪರಿಣಮಿಸಿದರೆ ಆಶ್ಚರ್ಯವೇನೂ ಇಲ್ಲ.




13 comments:

  1. ಗೋದಾವರಿ ಮೇಡಮ್,

    ವಿಮರ್ಶೆಯ ಬಗ್ಗೆ ಎಷ್ಟು ಸೊಗಸಾದ ಲೇಖನ! ನನಗೆ ಓದಿ ಅರ್ಥಮಾಡಿಕೊಳ್ಳಲು ಎರಡು ಬಾರಿ ಓದಬೇಕಾಯಿತು...ನಿಮ್ಮ ಪದಗಳು ತುಂಬಾ ಅರ್ಥಗರ್ಭಿತವಾಗಿವೆ...ಆಗಿನ ಕಾಲದಿಂದ ಈಗಿನ ಕಾಲದವರೆಗೆ ಸಾಹಿತ್ಯ ಅದರ ಒಳಹೊರವು...ಅದಕ್ಕೆ ವಿಮರ್ಶೆ ಹೇಗಿತ್ತು...ಅವುಗಳ ಅನುಕೂಲ-ಅನಾನುಕೂಲ. ಕಲ್ಪನೆ, ಇತ್ಯಾದಿಗಳ ಒಂದು ಮಾಹಿತಿಯುಕ್ತವಾದ ಲೇಖನವನ್ನು ಬರೆದಿದ್ದೀರಿ....

    ಧನ್ಯವಾದಗಳು..

    ReplyDelete
  2. ಗೋದಾವರಿ,
    ಪಾಶ್ಚಾತ್ಯ ವಿಮರ್ಶೆಯಿಂದಲೇ ಆಧುನಿಕ ಕನ್ನಡ ವಿಮರ್ಶೆ ಪ್ರಭಾವಿತವಾಗಿ ರೂಪುಗೊಂಡಿತು
    ಎನ್ನುವದು ಸರಿಯಾದ ಮಾತೇ.
    ಕನ್ನಡ ವಿಮರ್ಶಾರಂಗದಲ್ಲಿ ಕೀರ್ತಿನಾಥ ಕುರ್ತಕೋಟಿಯವರು ಹೊಸ ಯುಗವನ್ನೇ ಪ್ರಾರಂಭಿಸಿದರು. ೧೯೫೯ರಲ್ಲಿ ಪ್ರಕಟವಾದ ಅವರ ‘ಸಾಹಿತ್ಯ ಮತ್ತು ಯುಗಧರ್ಮ’
    ಲೇಖನವು ವಿಮರ್ಶೆಗೆ ಹೊಸ ದಿಕ್ಕನ್ನು ನೀಡಿತು ಎಂದು ಹೇಳಬಹುದು.

    ReplyDelete
  3. ಅದ್ಭುತವಾಗಿ ಬರೆದಿದ್ದೀರಿ..
    "ವಿಮರ್ಶಕ ಕೃತಿಯ ಬಹಿರ್ಮುಖತೆಯನ್ನೂ ಮತ್ತು ಅಂತರ್ಮುಖತೆಯನ್ನೂ ಓದುಗನ ಮುಂದಿಡಬೇಕು"
    "ವಿಮರ್ಶೆಗೆ ಯಾವತ್ತಿದ್ದರೂ ಸಾಹಿತ್ಯದ್ದೇ ಚಿಂತೆ. ಆ ಚಿಂತೆಯೇ ಹೆಚ್ಚಾಗಿ ವಿಮರ್ಶೆಯೇ ಸಾಹಿತ್ಯವಾಗಿ ಪರಿಣಮಿಸಿದರೆ ಆಶ್ಚರ್ಯವೇನೂ ಇಲ್ಲ"

    ಈ ಸಾಲುಗಳು ಇಷ್ಟವಾದವು..

    ReplyDelete
  4. ಶಿವೂ,

    ತುಂಬಾ ಧನ್ಯವಾದಗಳು..
    ನಿಮಗೆ ಇಷ್ಟವಾಯಿತು ಎಂದು ತಿಳಿದು ಸಂತೋಷವೆನಿಸಿತು..
    ಹೀಗೆ ಬರುತ್ತಿರಿ..

    ReplyDelete
  5. ಸುನಾಥ ಅವರೇ,

    ಕೀರ್ತಿನಾಥರ ಪ್ರಸ್ತಾಪವಿಲ್ಲದೆ ಕನ್ನಡ ಸಾಹಿತ್ಯ ವಿಮರ್ಶೆಯ ಬಗೆಗಿನ ಮಾತುಗಳು ಪೂರ್ಣಗೊಳ್ಳುವುದೇ ಇಲ್ಲ ಅಲ್ಲವೇ?

    'ಸಾಹಿತ್ಯ ಮತ್ತು ಯುಗಧರ್ಮ' ಅ.ನ.ಕೃಷ್ಣರಾಯರದ್ದು ಅಂತ ನನಗನ್ನಿಸುತ್ತದೆ. ಕುರ್ತುಕೊಟಿಯವರ ವಿಮರ್ಶಾ ಗ್ರಂಥ 'ಯುಗಧರ್ಮ ಮತ್ತು ಸಾಹಿತ್ಯ ದರ್ಶನ'. ಈ ಎರಡೂ ಗ್ರಂಥಗಳು ಕನ್ನಡ ಸಾಹಿತ್ಯ ವಿಮರ್ಶಾ ಲೋಕದಲ್ಲಿ ಪ್ರಮುಖವೆನಿಸಿದವು.

    ನೀವು ಹೇಳಿದಂತೆ ಕುರ್ತುಕೊಟಿಯವರ ವಿಮರ್ಶಾ ಗ್ರಂಥ ಕನ್ನಡ ಸಾಹಿತ್ಯ ವಿಮರ್ಶೆಗೆ ಹೊಸ ದಿಶೆ ನೀಡಿತು. ಕುರ್ತುಕೊಟಿಯವರ ಆಳವಾದ ಸಾಹಿತ್ಯ ಜ್ಞಾನ ಮತ್ತು ಅವರ ಲೇಖನಾ ಶೈಲಿ, ಎಲ್ಲವೂ ಲೇಖಕರನ್ನೂ ಪ್ರಭಾವಿಸಿದವು. 'ನವ್ಯಕಾವ್ಯ ಪ್ರಯೋಗ' ಮತ್ತು 'ಸಂಸ್ಕೃತಿ ಸ್ಪಂದನ' ಅದ್ಭುತವಾದ ವಿಮರ್ಶಾ ಗ್ರಂಥಗಳು.

    ಸುನಾಥ ಅವರೇ ನೀವು ಕುರ್ತುಕೋಟಿಯವರ ಬಗ್ಗೆ ನೆನಪಿಸಿದ್ದಕ್ಕೆ ತುಂಬಾ ಧನ್ಯವಾದಗಳು. ಈ ಲೇಖನ ಕೀರ್ತಿನಾಥರ ವಿಮರ್ಶೆಯ ಮಾತುಗಳಿಲ್ಲದೆ ಅಪೂರ್ಣವಾಗಿತ್ತು. ನೀವು ಆ ಬಗ್ಗೆ ಪ್ರಸ್ತಾಪಿಸಿ ಕೊರತೆಯನ್ನು ತುಂಬಿಕೊಟ್ಟಿರಿ.

    ReplyDelete
  6. ರಾಘವೇಂದ್ರ,

    ಧನ್ಯವಾದಗಳು..

    ReplyDelete
  7. ಗೋದಾವರಿ ಮೇಡಂ
    ನಿಮ್ಮ ಮಾತು ನಿಜ - ಅದನ್ನು ನಮ್ಮ ಬ್ಲಾಗ್ ಲೋಕಕ್ಕೆ ತರುವಲ್ಲಿ ನಿಮ್ಮಂಥ, ಸುನಾಥ್ ಸರ್ ರಂಥ ಬಲ್ಲಿದರಿಂದ ಸಾಧ್ಯ...ಅಂದರೆ...ನಮ್ಮ ಬ್ಲಾಗ್ ಪೋಸ್ಟ್ ಗಳನ್ನು ನೋಡಿ ವಿಮರ್ಶಿಸಿ ಸುಧಾರಣೆಗೆ ದಾರಿಮಾಡಿ. ಬ್ಲಾಗ್ ಪೋಸ್ಟ್ ಗಳಿಗೆ ತೀರ ನೀರಸ (ಅಂದರೆ ಬಹುತೇಕ ಮೆಚ್ಚುಗೆ) ಪ್ರತಿಕ್ರಿಯೆ ವೈಯಕ್ತಿಕ ಸುಧಾರಣೆಗೆ ಆರೋಗ್ಯಕರವಲ್ಲ...ಏನಂತೀರಿ?? ಸುನಾಥ್ ಸರ್ ನೀವೂ ದನಿಗೂಡಿಸಿ.

    ReplyDelete
  8. ಜಲಾನಯನ ಅವರೇ,

    ಧನ್ಯವಾದಗಳು..

    ನಾವು ಬರೆಯುವ ಪೋಸ್ಟ್ ಗಳಿಗೆ ದೊರೆಯುವ ಪ್ರತಿಕ್ರಿಯೆಗಳು ಖಂಡಿತವಾಗಿ ನಮ್ಮ ಬರವಣಿಗೆಯನ್ನು ಸುಧಾರಿಸಲು ನೆರವಾಗುತ್ತವೆ. ಜೊತೆಯಲ್ಲಿ ಪ್ರೋತ್ಸಾಹ ನೀಡುತ್ತವೆ ಕೂಡ. ನೀವು ಹೇಳಿದಂತೆ ಈ ಪ್ರತಿಕ್ರಿಯೆಗಳು ಪ್ರಾಮಾಣಿಕವಾಗಿದ್ದಷ್ಟು ವಯಕ್ತಿಕ ಸುಧಾರಣೆಗೆ ಹೆಚ್ಚು ಅನುಕೂಲವಾಗುತ್ತದೇ ಎನ್ನುವುದರಲ್ಲಿ ಸಂಶಯವಿಲ್ಲ.

    -ಗೋದಾವರಿ

    ReplyDelete
  9. ಒಳ್ಳೆಯ ಬರಹ. ಆದರೆ ಈಗಿನ ಕಾವ್ಯ, ಬರಹಗಳಿಗೆ ವಿಮರ್ಶಕರೇ ಇಲ್ಲವಲ್ಲ! ಈಗಿನ ಕಾಲದ ಬಹಳಷ್ಟು ಬರಹಗಳು, ಕವಿ, ಬರಹಗಾರರು ತೆರೆಮರೆಯಲ್ಲೇ ಉಳಿಯಲು ವಿಮರ್ಶೆಗಳ ಕೊರತೆ ಎಂದನಿಸುತ್ತದೆ.
    -ಧರಿತ್ರಿ

    ReplyDelete
  10. ನಿಮ್ಮ ಬ್ಲಾಗ್ ಕನ್ನಡ ಪ್ರಭ ಬ್ಲಾಗಾಯಣದಲ್ಲಿ ಬಂದಿದೆ. ನೋಡಿ. ಅಭಿನಂದನೆಗಳು
    http://www.kannadaprabha.com/pdf/epaper.asp?pdfdate=8/21/2009

    ReplyDelete
  11. ಧರಿತ್ರಿ,

    ತುಂಬಾ ಧನ್ಯವಾದಗಳು. ನೀವು ಕಳಿಸಿದ ಲಿಂಕ್ ನೋಡಿದೇ. ಸಂತೋಷವಾಯಿತು.
    ಕೆಲಸದ ಒತ್ತಡದಿಂದಾಗಿ ಬ್ಲಾಗಿಂಗ್ ಸಾಧ್ಯವಾಗುತ್ತಿಲ್ಲ. ನಿಮ್ಮ ಪ್ರೋತ್ಸಾಹ ಮತ್ತೆ ಬರವಣಿಗೆ ಆರಂಭಿಸಲು ನನ್ನನ್ನು ಪ್ರೇರೇಪಿಸಿತು.

    -
    ಗೋದಾವರಿ

    ReplyDelete