Monday, June 22, 2009

ವಿಮರ್ಶೆ

ಸಾಹಿತ್ಯ ವಿಮರ್ಶೆ ಎಂಬ ಪ್ರಾಕಾರ ನಮ್ಮಲ್ಲಿ ಆರಂಭವಾದದ್ದು ಪಾಶ್ಚಿಮಾತ್ಯರ ಪ್ರಭಾವದಿಂದ. ಬಹುಶಃ ಅದರ ಜೊತೆಗೇ ಸಾಹಿತ್ಯಕ್ಕೂ ಅದರ ವಿಮರ್ಶೆಗೂ ಇರುವ ವಿರೋಧ ಸಂಬಂಧವೂ ಕೂಡ. ಪ್ರಾಚೀನ ಕಾಲದಲ್ಲಿ ನಮ್ಮಲ್ಲಿ ಕಾವ್ಯಗಳಿಗೆ ಟೀಕೆ ಟಿಪ್ಪಣಿ, ವ್ಯಾಖ್ಯಾನ ಮತ್ತು ಭಾಷ್ಯಗಳನ್ನು ಬರೆಯುತ್ತಿದ್ದರು. ಅವುಗಳಲ್ಲಿ ಕಾವ್ಯಗಳ ವಿಶ್ಲೇಷಣೆ ಇದ್ದರೂ ಅವು ಸಾಹಿತ್ಯ ವಿಮರ್ಶೆ ಅಥವಾ ಕಾವ್ಯ ವಿಮರ್ಶೆಯೆಂಬ ಹೆಸರನ್ನು ಪಡೆದುಕೊಂಡಿರಲಿಲ್ಲ. ಹಿಂದಿನ ಟೀಕಾಕಾರರುಗಳೆಲ್ಲರ ಉದ್ದೇಶ ಒಬ್ಬ ಕವಿಯ ಕಾವ್ಯ ಪೋಷಣೆಗೆ ಅನುಕೂಲಕರವಾದ ಮತ್ತು ಕಾವ್ಯ ಓದುವಿಕೆಗೆ ನೆರವಾಗುವ ಟೀಕೆ ಟಿಪ್ಪಣಿಗಳನ್ನು ಬರೆಯುವುದಾಗಿತ್ತು. ಈ ಟೀಕಾ ಪ್ರಾಕಾರದ ಸ್ವರೂಪ ಆಧುನಿಕ ಕಾಲದಲ್ಲಿ ಹೆಚ್ಚು ಹೆಚ್ಚು ಅಂತರ್ಮುಖವಾಗತೊಡಗಿತು.


ಸಾಹಿತ್ಯದ ಮೌಲ್ಯ ಮಾಪನ ವಿಮರ್ಶೆಯ ಮುಖ್ಯ ಕರ್ತವ್ಯ. ಮತ್ತೊಂದು ಮುಖ್ಯವಾದ ಅಂಶವೆಂದರೆ ಪ್ರಾಚೀನ ಕಾಲದ ಟೀಕೆ ಟಿಪ್ಪಣಿಗಳಿಗಿಂತ ಭಿನ್ನ ರೂಪ ಹೊಂದಿದ ಈ ವಿಮರ್ಶೆ, ಸಾಹಿತ್ಯ ರಚನೆಯಂತೆ ಒಂದು ಕಲೆಯಲ್ಲ. ಇದೊಂದು ಶಾಸ್ತ್ರ. ಏಕೆಂದರೆ ಮೌಲ್ಯಮಾಪನ ಜವಾಬ್ದಾರಿಯಾದಾಗ ಈ ಮೌಲ್ಯಮಾಪನಕ್ಕೆ ಪ್ರಮಾಣಗಳನ್ನು ನಿರ್ಧರಿಸುವುದೂ ಅನಿವಾರ್ಯ. ಈ ಪ್ರಮಾಣಗಳಿಗನುಸಾರ ವಿಮರ್ಶೆಯ ನಿರ್ವಹಣೆಯಾಗಬೇಕು ಎಂಬಲ್ಲಿಗೆ ವಿಮರ್ಶೆಯಲ್ಲಿ ಇರಬಹುದಾಗಿದ್ದ ಹೆಚ್ಚಿನಪಾಲು ಕಲೆಯ ಲಕ್ಷಣಗಳು ಕಳೆದು ಹೋಗುತ್ತವೆ. ಸಾಹಿತ್ಯ ಹಲವಾರು ಭಿನ್ನ ವಸ್ತುಗಳನ್ನು ಕೂಡಿಸುತ್ತದೆ. ಸಾಹಿತ್ಯಕಾರನಿಗೆ ಇರುವ ಕಲ್ಪನಾ ಸ್ವಾತಂತ್ಯ್ರ ಅಪಾರ. ಆದರೆ ವಿಮರ್ಶಕನಿಗೆ ಈ ಬಗೆಯ ಸ್ವಾತಂತ್ರ್ಯವಿಲ್ಲ. ಈ ಅಸ್ವಾತಂತ್ರ್ಯವೇ ವಿಮರ್ಶೆಗೆ ಶಾಸ್ತ್ರದ ಸ್ವರೂಪ ತಂದು ಕೊಡುವುದು.


ಹತ್ತೊಂಭತ್ತನೆಯ ಶತಮಾನಕ್ಕಿಂತ ಮೊದಲು ಭಾರತದ ಯಾವ ಭಾಷೆಯಲ್ಲೂ ವಿಮರ್ಶೆ ಗದ್ಯರೂಪದಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಕಾಳಿದಾಸನ 'ರಘುವಂಶ' ಮತ್ತು 'ಮೆಘಸಂದೇಶ' ಗಳಿಗೆ ಮಲ್ಲಿನಾಥನು ಬರೆದ ಟೀಕಾಗ್ರಂಥವು ಆಧುನಿಕ ವಿಮರ್ಶೆಯನ್ನು ಸ್ವಲ್ಪ ಮಟ್ಟಿಗೆ ಹೋಲುತ್ತದೆ. ಅವನು ತನ್ನ ಗ್ರಂಥದ ಆರಂಭದಲ್ಲೇ 'ಮೂಲದಲ್ಲಿ ಇಲ್ಲದಿರುವುದರ ಕುರಿತು ನಾನು ಬರೆಯುವುದಿಲ್ಲ. ಕೃತಿಗೆ ಬೇಡವಾದದ್ದನ್ನು ಏನೂ ಹೇಳುವುದಿಲ್ಲ' ಎನ್ನುತ್ತಾನೆ. ಆದರೆ ಮಲ್ಲಿನಾಥನ ಟೀಕಾಗ್ರಂಥವು ಗದ್ಯಾವತಾರದೆಲ್ಲೇನಿಲ್ಲ. ಅದೂ ಕಾವ್ಯವೇ. ಆದರೆ ಆ ಕಾವ್ಯದ ವಸ್ತುವೂ ಇಂದಿನ ವಿಮರ್ಶೆಗಳಂತೆ ಸ್ವತಂತ್ರವಾಗಿ ನಿಲ್ಲುವುದಿಲ್ಲ. ಮಲ್ಲಿನಾಥನ ಈ ಟೀಕಾಗ್ರಂಥವನ್ನೊಂದನ್ನು ಓದಿಕೊಂಡರೆ ಏನೊಂದೂ ಅರ್ಥವಾಗುವುದಿಲ್ಲ. ಮೂಲಕಾವ್ಯಗಳನ್ನು ಓದಿಕೊಳ್ಳುತ್ತ ಈ ಟೀಕೆಯನ್ನು ಓದಬೇಕು. ಆಗ ಮಾತ್ರ ಕಾವ್ಯದ ರಸಾಸ್ವಾದನೆ ಆಗುತ್ತದೆ.


ಕನ್ನಡದಲ್ಲಿ ಈ ಹೊಸ ವಿಮರ್ಶೆಯ ಸ್ವರೂಪ ಆರಂಭವಾದದ್ದು ನವೋದಯ ಸಾಹಿತ್ಯದೊಂದಿಗೆ. ನವೋದಯದ ಕಾಲದ ಬಹುಪಾಲು ದೊಡ್ಡ ದೊಡ್ಡ ಕವಿಗಳು ವಿಮರ್ಶಕರೂ ಆಗಿದ್ದರು. ಆದ್ದರಿಂದ ನವೋದಯ ಕಾಲದ ಸಾಹಿತ್ಯದ ಆಶೋತ್ತರಗಳನ್ನು, ಅಪೇಕ್ಷೆಗಳನ್ನು ಮತ್ತು ಕಾವ್ಯದ ಕಲ್ಪನೆಗಳನ್ನು ನವೋದಯ ಕಾಲದಲ್ಲಿ ಉದಿಸಿದ ವಿಮರ್ಶೆ ಸರಿಯಾಗಿ ಪ್ರತಿಫಲಿಸುತ್ತದೆ. ಪ್ರಾಚೀನ ಕವಿಗಳ ಅಲಂಕಾರಿಕತೆ , ಆ ಕಾವ್ಯಗಳಲ್ಲಿನ ಪಾತ್ರರಚನೆಯಲ್ಲಿ ಕಂಡುಬರುವ ಮಾನವ ಸಂಬಂಧಗಳ ಅಭಾವ ಇವುಗಳನ್ನು ನವೋದಯ ವಿಮರ್ಶೆ ಟೀಕಿಸುತ್ತದೆ. ಆದರೆ ಪ್ರಾಚೀನ ಕಾವ್ಯದಲ್ಲಿ ನವೋದಯದ ಲಕ್ಷಣಗಳನ್ನು ಕಂಡರೆ ಉತ್ಸಾಹದಿಂದ ಬೀಗುತ್ತದೆ. ಈ ರೀತಿ ಸಂಬಂಧವನ್ನು ನವೋದಯ ಕಾಲದ ವಿಮರ್ಶೆ ಕಾವ್ಯ ಮತ್ತು ಸಾಹಿತ್ಯದೊಡನೆ ಬೆಳೆಸಿಕೊಂಡಿತ್ತು .

ಅದರ ಜೊತೆಗೇ ಕಾವ್ಯವೂ ವಿಮರ್ಶೆಯನ್ನು ಹೇಗೆ ಸ್ವೀಕರಿಸುತ್ತದೆ ಎಂಬುವುದೂ ಮುಖ್ಯವಾಗುತ್ತದೆ. 'ತಿಳಿಬಾನಿನೆಡೆಯಲ್ಲಿ ಹುಣ್ಣಿಮೆ ಚಂದ್ರ ಮೂಡಿಯೇ ಮೂಡಿದನು, ಕೆಲಸವಿಲ್ಲದ ವಿಮರ್ಶಕ ವಿಮರ್ಶೆಯ ಮಾಡಿಯೇ ಮಾಡಿದನು'. ಕುವೆಂಪು ಅವರ ಈ ಪದ್ಯದಲ್ಲಿ ವಿಮರ್ಶೆಯ ಬಗ್ಗೆ ಕಾವ್ಯದ ನಿಲುವು ಏನಿರಬಹುದೆಂದು ಸ್ಪಷ್ಟವಾಗುತ್ತದೆ. ಬೇಂದ್ರೆಯವರ ದೃಷ್ಟಿಕೂನವೂ ಕೂಡ ವಿಮರ್ಷೆಯ ಬಗೆಗೆ ಅಷ್ಟೇನೂ ಹಿತವಾಗಿರುವಂತೆ ತೋರುವುದಿಲ್ಲ. ಅವರ ಒಂದು ಕವಿತೆಯಲ್ಲಿ ಕಾವ್ಯವೆಂದರೆ ಅಮೃತಕ್ಕೆ ಮೇಲೆ ಹಾರುವ ಗರುಡ, ಆದರೆ ವಿಮರ್ಶೆ ಹಾವಿನಂತೆ ಹೊಟ್ಟೆ ಹೊಸೆಯುವ ಜಂತು ಎಂಬರ್ಥಬರುವಂತೆ ಹೇಳುತ್ತಾರೆ. ಇಲ್ಲಿ ವಿಮರ್ಶೆ, ಕಾವ್ಯಕ್ಕೆ ವಿರುದ್ಧವಾದ ತತ್ವವಾಗಬಹುದು ಎಂಬುದನ್ನು ಸೂಕ್ಷ್ಮವಾಗಿ ಹೇಳಿದಂತಿದೆ. ಆದರೆ ಅವರ ಇನ್ನೊಂದು ಕವನದಲ್ಲಿ 'ನಿನ್ನ ಮುಖ ಸ್ಪರ್ಶವೊಂದೇ ಸಾಕು, ಹೊಸ ಸೃಷ್ಟಿಯೇ ಬರಬಹುದು' ಎನ್ನುತ್ತಾರೆ. ಅಂದರೆ ಎಲ್ಲ ಕಾವ್ಯಗಳೂ, ಕವಿಗಳೂ ಅಪೇಕ್ಷಿಸುವುದು ಸಹೃದಯರನ್ನು. ಆದರೆ ಅವನ ಮೌಲ್ಯನಿರ್ಣಯ ಬೇಡ ಎಂಬುವುದೂ ಸ್ಪಷ್ಟ.

ಕೆಲವು ನವೋದಯ ಕವಿಗಳ ವಿಮರ್ಶಾ ಗ್ರಂಥಗಳನ್ನು ಅವಲೋಕಿಸಿದರೆ ಅವುಗಳಿಗೆ ಪ್ರಬಂಧದ ಲಕ್ಷಣಗಳಿರುವುದು ಕಂಡು ಬರುತ್ತದೆ. ಪ್ರಬಂಧಕಾರ ಸಾಮಾನ್ಯವಾದ ಜೀವನಾನುಭವವನ್ನು ಪರೀಕ್ಷಿಸಿ, ಪ್ರಶ್ನಿಸುತ್ತ ಬೆಲೆಕಟ್ಟುವಂತೆ ವಿಮರ್ಶಕ ತನ್ನ ಸಾಹಿತ್ಯದ ಅನುಭವವನ್ನು ಪ್ರಶ್ನಿಸಿ ಬೆಲೆಕಟ್ಟುತ್ತಾನೆ . ಉದಾಹರಣೆಗೆ ಬಿ.ಎಂ.ಶ್ರೀ ಅವರ 'ಕುಮಾರವ್ಯಾಸ' ಎಂಬ ದೀರ್ಘವಾದ ಲೇಖನವನ್ನು ನೋಡಬಹುದು. ಇಲ್ಲಿ ಕುಮಾರವ್ಯಾಸ ಪಂಪನಿಗಿಂತ ದೊಡ್ಡ ಕವಿ ಎಂಬಂತೆ ಬಿಂಬಿಸುತ್ತಾರೆ. ಶ್ರೀಯವರ ಭಾಷೆಯ ಸೌಂದರ್ಯದಿಂದಲೇ ಆ ಲೇಖನ ವಿಶಿಷ್ಟವೆನಿಸುತ್ತದೆ. ಇಂಥದೇ ಇನ್ನೊದು ಉದಾಹರಣೆಯೆಂದರೆ ಬೇಂದ್ರೆಯವರ 'ನಾಗಚಂದ್ರನ ಮಲ್ಲಿನಾಥ ಪುರಾಣ' ಎಂಬ ಲೇಖನ. ನಾಗಚಂದ್ರನ ವಾಕ್ಯಗಳನ್ನು ಮತ್ತು ವರ್ಣನೆಗಳನ್ನು ನೇರವಾಗಿ ಉಪಯೋಗಿಸುತ್ತಾ ಇಡೀ ಕಾವ್ಯವನ್ನೇ ಮೌಲ್ಯಮಾಪನಮಾಡುತ್ತಾರೆ. ನಾಗಚಂದ್ರನ ದರ್ಶನ, ನಾಗಚಂದ್ರನದೇ ಕಥೆ, ಆದರೆ ವಿಮರ್ಶೆಯ ಕೃತಿ ಮಾತ್ರ ಬೇಂದ್ರೆಯವರದು. ನವೋದಯಕಾಲದ ವಿಮರ್ಶಾಸಾಹಿತ್ಯದಲ್ಲಿ ಇದೊಂದು ಅಪರೂಪದ ಲೇಖನ. ಹೀಗೆಯೇ ಮಾಸ್ತಿಯವರ 'ವಿಮರ್ಶೆ' ಮತ್ತು ಡಿ.ವಿ.ಜಿ ಯವರ 'ಜೀವನ ಸೌಂದರ್ಯ ಮತ್ತು ಸಾಹಿತ್ಯ' ಮೊದಲಾದ ಕೃತಿಗಳು ಕನ್ನಡದ ಆಧುನಿಕ ವಿಮರ್ಶೆಗೆ ಹೊಸ ಸ್ವರೂಪ ನೀಡಿದವು. ಮುಂದೆ ಮುಗಳಿಯವರ 'ಕನ್ನಡ ಸಾಹಿತ್ಯ ಚರಿತ್ರೆ' ಮತ್ತು 'ತವನಿಧಿ' ಯಂತಹ ವಿಮರ್ಶಾಗ್ರಂಥಗಳು ಬಂದವು. ಇವೆಲ್ಲ ವಿಮರ್ಶೆಯ ವೈವಿಧ್ಯ ಮತ್ತು ಬಹುರೂಪತೆ ದರ್ಶಿಸಿದವು. ಮತ್ತು ಇದರ ಜೊತೆಗೆ ಸಾಹಿತ್ಯ ಬೇರೆ ವಿಮರ್ಶೆ ಬೇರೆ, ಒಂದು ಕಲೆಯಾದರೆ ಇನ್ನೊದು ಶಾಸ್ತ್ರ ಎಂಬ ಸ್ಪಷ್ಟವಾದ ಅರಿವು ಮೂಡಿಸಿದವು.

ಒಂದು ಕೃತಿ ಜಗತ್ತಿನ ಐತಿಹಾಸಿಕತೆಯಿಂದ ಹುಟ್ಟಿಬರುತ್ತದೆ . ಇಲ್ಲಿ ಐತಿಹಾಸಿಕತೆ ಕೇವಲ ಇತಿಹಾಸವಲ್ಲದೆ ಆಯಾಕಾಲದ ರಾಜಕೀಯ ಮತ್ತು ಸಾಮಾಜಿಕ ಶಕ್ತಿಗಳ ಕೇಂದ್ರ. ಈ ಕೇಂದ್ರ ಆ ಕೃತಿಯ ಅರ್ಥವಂತಿಕೆ ನಿರ್ಧರಿಸುತ್ತದೆ. ಇದೆ ಕಾರಣಕ್ಕಾಗಿಯೇ ಸಾಹಿತ್ಯ ರಚನೆಯ ನಿಯಮಗಳು ಕೂಡ ಕಾಲಕಾಲಕ್ಕೆ ಬದಲಾಗುತ್ತವೆ. ಹೀಗೆ ಸಾಹಿತ್ಯದ ಮೌಲ್ಯ ಮಾಪನದಂತೆ ಅದರ ಕೇಂದ್ರಕ್ಕೂ ವಿಮರ್ಶಕ ವಿಮರ್ಶೆ ಕೊಡಬೇಕಾಗುತ್ತದೆ. ಆದ್ದರಿಂದ ವಿಮರ್ಶೆ ಸಾಹಿತ್ಯ ಚರಿತ್ರೆಯ ಕೆಲಸವನ್ನು ಕೂಡ ಮಾಡುತ್ತದೆ. ವಿಮರ್ಶೆ ತಾನು ವಿಶಿಶ್ಟವೆನಿಸಿಕೊಳ್ಳುವುದು ಮತ್ತೊಂದು ಕಾರಣದಿಂದ. ಅದು, ವಿಮರ್ಶೆ ಮತ್ತು ಸಾಹಿತ್ಯ ಎರಡೂ ಅವಲಂಬಿಸುವುದು ಭಾಷೆಯನ್ನೇ. ಆದ್ದರಿಂದ ವಿಮರ್ಶೆ ಕೇವಲ ಸಾಹಿತ್ಯದ ಅರ್ಥಗ್ರಹಣದ ಕೆಲಸವನ್ನು ಮಾತ್ರವಲ್ಲದೇ ಸಾಹಿತ್ಯ ಸ್ಫುರಿಸಬಹುದಾದ ವಾಚ್ಯಾರ್ಥವನ್ನೂ ಮೀರಿದ ಅರ್ಥವನ್ನು ನೀಡಬೇಕು. ಅದಕ್ಕೆ ವಿಮರ್ಶಕ ಕೃತಿಯ ಬಹಿರ್ಮುಖತೆಯನ್ನೂ ಮತ್ತು ಅಂತರ್ಮುಖತೆಯನ್ನೂ ಓದುಗನ ಮುಂದಿಡಬೇಕು.

ವಿಮರ್ಶಕ ತನಗೆ ಗೊತ್ತಿಲ್ಲದಂತೆ ಮಾಡುವ ಇನ್ನೊದು ಕೆಲಸವೆಂದರೆ ತನ್ನ ವಿಮರ್ಶೆಯ ಮೂಲಕ ಇನ್ನೊದು ಕೃತಿಯನ್ನೇ ಹುಟ್ಟಿಸುವುದು! ನಮ್ಮ ವೇದಾಂತದಲ್ಲಿ ಭ್ರಮರಕೀಟಾನ್ಯಾಯ ಎಂಬ ಮಾತು ಬರುತ್ತದೆ. ಒಂದು ಕಣಜದ ಹುಳುವಿಗೆ ಯಾವಾಗಲೂ ಭ್ರಮರದ ಚಿಂತೆಯಂತೆ. ಆ ಚಿಂತೆ ಹೆಚ್ಚಾಗಿ ಅದೂ ಕೊನೆಯಲ್ಲಿ ತಾನೂ ಭ್ರಮರವಾಗಿ ಹೋಗುತ್ತದಂತೆ. ಸಾಹಿತ್ಯ ಮತ್ತು ವಿಮರ್ಶೆಯ ನಂಟೂ ಅಂಥದ್ದೇ ಎಂದು ನನಗನ್ನಿಸುತ್ತದೆ. ವಿಮರ್ಶೆಗೆ ಯಾವತ್ತಿದ್ದರೂ ಸಾಹಿತ್ಯದ್ದೇ ಚಿಂತೆ. ಆ ಚಿಂತೆಯೇ ಹೆಚ್ಚಾಗಿ ವಿಮರ್ಶೆಯೇ ಸಾಹಿತ್ಯವಾಗಿ ಪರಿಣಮಿಸಿದರೆ ಆಶ್ಚರ್ಯವೇನೂ ಇಲ್ಲ.
Monday, June 1, 2009

ಸ್ವಪ್ನವಾಸವದತ್ತಂ

( ಭಾಸ ಭಾರತದ ಅತ್ಯಂತ ಪ್ರಾಚೀನ ನಾಟಕಕಾರರುಗಳಲ್ಲಿ ಒಬ್ಬ. ಸಂಸ್ಕೃತ ಸಾಹಿತ್ಯದಲ್ಲಿ ನಾಟಕಕಾರ ಎನ್ನುವುದಕ್ಕಿಂತ ಕವಿ ಎನ್ನುವುದು ಹೆಚ್ಚು ಸೂಕ್ತ. ಈತ ಕಾಳಿದಾಸನಿಗಿಂತ ಹಿಂದಿನವನು ಅಥವಾ ಅವನ ಸಮಕಾಲೀನ ಎಂತಲೂ ಹೇಳಲಾಗುತ್ತದೆ. ಸುಮಾರು ಕ್ರಿಸ್ತಶಕೆ ಮೂರನೇ ಶತಮಾನ. ಆದರೆ ಅವನ ದೇಶಕಾಲಾದಿಗಳ ಬಗ್ಗೆ ಇನ್ನೂ ನಿಖರವಾದ ಅಭಿಪ್ರಾಯ ಸಾಧ್ಯವಾಗದೇ 'ಭಾಸ ಸಮಸ್ಯೆ' ಎಂದೇ ಪ್ರಸಿದ್ದವಾಗಿದೆ. ಭಾಸನಿಂದ ರಚಿಸಲ್ಪಟ್ಟವು ಎಂದು ಹೇಳಲಾದ ನಾಟಕಗಳ ಸಂಗ್ರಹ ಕೇರಳದಲ್ಲಿ ದೊರೆತದ್ದರಿಂದ ಭಾಸ ದಕ್ಷಿಣ ಭಾರತದವನಿರಬೇಕೆಂದು ಊಹಿಸಲಾಗಿದೆ. ಈ ವರೆಗೆ ಅವನ ಸ್ವಪ್ನವಾಸವದತ್ತವೂ ಸೇರಿದಂತೆಸುಮಾರು ಹನ್ನೆರಡು ನಾಟಕಗಳು ಸಂಪಾದಿಸಲ್ಪಟ್ಟಿವೆ . )

ಸ್ವಪ್ನ ವಾಸವದತ್ತ ಆರು ಅಂಕಗಳ ನಾಟಕ. ಭಾಸ ಇದನ್ನು ತಾನೇ ರಚಿಸಿದ 'ಪ್ರತಿಜ್ಞಾಯೌಗಂಧರಾಯಣ' ಎಂಬ ನಾಟಕದ ಮುಂದುವರಿದ (sequel) ಭಾಗದಂತೆ ನಿರೂಪಿಸಿದ್ದಾನೆ. ಭಾಸನು ಭರತ ಮುನಿಯ ನಾಟ್ಯಶಾಸ್ತ್ರದ ಯಾವ ನಿಯಮಗಳನ್ನೂ ತನ್ನ ನಾಟಕ ರಚನೆಯಲ್ಲಿ ಪಾಲಿಸುವುದಿಲ್ಲ ಎಂಬ ಆಪಾದನೆ ಇದೆ. ಆದರೆ ಸ್ವಪ್ನವಾಸವದತ್ತದ ಮಟ್ಟಿಗೆ ಹೇಳುವದಾದರೆ ಇದೊಂದು ನಾಟ್ಯಶಾಸ್ತ್ರದ ಬಹುಪಾಲು ಎಲ್ಲ ನಿಯಮಗಳನ್ನು ಪಾಲಿಸುವ ಪರಿಪೂರ್ಣ ನಾಟಕ. ನಿಯಮದಂತೆ ನಾಟಕದ ತಲೆಬರಹ, ಆ ಕಥೆಯ ಯಾವುದಾದರೂ ಮುಖ್ಯ ದೃಷ್ಯವನ್ನು ಅಥವಾ ಅಲ್ಲಿನ ಮುಖ್ಯ ಪಾತ್ರವೊಂದರ (ನಾಯಕನ ಅಥವಾ ನಾಯಿಕೆಯ) ಹೆಸರನ್ನು ಹೇಳಬೇಕು. 'ವಾಸವದತ್ತಾ' ಈ ನಾಟಕದ ನಾಯಿಕೆ. ಮತ್ತು ನಾಯಕ, ವತ್ಸ ದೇಶದ ಮಹಾರಾಜನಾದ ಉದಯನ, ತನ್ನ ಪತ್ನಿ ವಾಸವದತ್ತೆಯನ್ನು ಕನಸಿನಲ್ಲಿ ಕಾಣುವ ಸನ್ನಿವೇಶ (ಸ್ವಪ್ನಾಂಕ) ಕಥೆಗೆ ಹೊಸ ತಿರುವನ್ನು ಕೊಡುತ್ತದೆ. ಅದಕ್ಕನುಸಾರ ಭಾಸ ಈ ನಾಟಕದ ಹೆಸರನ್ನು ಇಡುತ್ತಾನೆ. 'ಸ್ವಪ್ನವಾಸವದತ್ತಂ'. Dream of Vasavadatta.


" ಉದಯನವೇಂದು ಸವರ್ಣಾ
ವಾಸವದತ್ತಾಬಲೌ ಬಲಸತ್ವಾ
ಪದ್ಮಾವತೀ ಪೂರ್ಣೌ
ವಸಂತಕಂ ಭುಜೌ ಪಾತಾ "

ಈ ನಾಂದಿ ಪದ್ಯದೊಂದಿಗೆ ಸ್ವಪ್ನವಾಸವದತ್ತ ಆರಂಭವಾಗುತ್ತದೆ. ಇದು ಬಲರಾಮನ ಸ್ತುತಿ. (ಆದರೆ ಕೃಷಿ ದೇವತೆಯಾದ ಬಲರಾಮನನ್ನು ಭಾಸ ತನ್ನ ನಾಟಕದ ಆರಂಭದಲ್ಲಿ ಏಕೆ ನಮಿಸುತ್ತಾನೆ ಎಂಬುವುದಕ್ಕೆ ಸ್ಪಷ್ಟವಾದ ಉತ್ತರ ದೊರಕುವುದಿಲ್ಲ.) ಈ ನಾಂದಿಯಲ್ಲಿ ಗಮನಿಸಬೇಕಾದ ಸುಂದರ ಅಂಶವೆಂದರೆ ಭಾಸ, ಶ್ಲೇಶಾಲಂಕಾರದ ಸಹಾಯದಿಂದ ನಾಟಕದಲ್ಲಿಯ ಉದಯನ, ವಾಸವದತ್ತೆ, ಪದ್ಮಾವತಿ, ವಸಂತಕ ಇಂತಹ ಪ್ರಮುಖ ಪಾತ್ರಗಳ ಹೆಸರನ್ನು ಚಮತ್ಕಾರವಾಗಿ ಅಡಗಿಸಿರುವುದು.

ಇಲ್ಲಿರುವುದು ಬಲಭದ್ರನ ತೋಳುಗಳ ವರ್ಣನೆ. 'ಉದಯನವೇಂದು' ಎಂದರೆ ಉದಯಿಸುತ್ತಿರುವ ಚಂದ್ರ (ಇಂದು). ಬಲರಾಮನ ತೋಳುಗಳು ಆಗತಾನೆ ಉದಯಿಸುತ್ತಿರುವ ಚಂದ್ರನ ಬಣ್ಣದವು. Spotless white. ಈ ಸಾಲಿನಲ್ಲಿ ಉದಯನವೇಂದು ಎನ್ನುತ್ತಲೇ ಭಾಸ ತನ್ನ ನಾಟಕದ ನಾಯಕ, 'ಉದಯನ' ನ ಹೆಸರನ್ನು ಹೇಳಿಬಿಡುತ್ತಾನೆ. 'ವಾಸವದತ್ತಾಬಲೌ ಬಲಸತ್ವಾ' ಇದು ಎರಡನೇ ಸಾಲು. ಬಲಭದ್ರನು ಮದಿರಾ ಪ್ರಿಯ. ಅದಕ್ಕೆ ಭಾಸ, ಅವನ ತೋಳುಗಳಿಗೆ ಆ ಸುರಾಪಾನದಿಂದ (ಸುರೆ=ಆಸವ) ಬಲ ದೊರೆತು ಅವು ತುಂಬಿಕೊಂಡಿವೆ ಎನ್ನುತ್ತಾನೆ. ಈ ಸಾಲಿನಲ್ಲಿ ನಾಯಿಕೆ 'ವಸವದತ್ತಾ' ಳ ಹೆಸರು ಉಲ್ಲೇಖಿಸಿದಂತಾಗುತ್ತದೆ. 'ಪದ್ಮಾವತೀ ಪೂರ್ಣೌ', ಪದ್ಮ ಅಂದರೆ ಕಮಲ, ಕಮಲದಂತೆ ಅರಳಿರುವ ತೋಳುಗಳು ಬಲರಾಮನದ್ದು. ಇಲ್ಲಿ 'ಪದ್ಮಾವತೀ' ಪದಪ್ರಯೋಗ ಉದಯನನ ಎರಡನೇ ಪತ್ನಿಯ ಹೆಸರನ್ನು ಹೇಳುತ್ತದೆ. ವಸಂತಕನದ್ದು ಈ ನಾಟಕದಲ್ಲಿ ವಿದೂಷಕನ (comedian) ಪಾತ್ರ. ಈತ ಉದಯನನ ಆಪ್ತ ಮಿತ್ರ. ಅವನ ಹೆಸರನ್ನೂ ಭಾಸ ನಾಂದಿಯಲ್ಲೇ ಹೇಳಿಬಿಡುತ್ತಾನೆ. ಹೀಗೆ ನಾಟಕದ ಪಾತ್ರಗಳ ಪರಿಚಯ ನಮಗೆ ನಾಟಕದ ಮೊದಲಲ್ಲೇ ಮಾಡಿಸುತ್ತದೆ ಈ ನಾಂದಿ. ಆದರೆ ಪಾತ್ರಗಳ ಪ್ರವೇಶವಾಗುವವರೆಗೂ ಈ ನಾಂದಿ ಶ್ಲೋಕದ ಚಮತ್ಕಾರದ ಅರಿವಾಗುವುದಿಲ್ಲ. ಅಲ್ಲಿಯವರೆಗೆ ನಮಗೆ ಈ ಪದ್ಯದಲ್ಲಿ ಕಾಣುವುದು ಬಲಯುತವೂ ಸುಂದರವೂ ಆದ ಬಲರಾಮನ ತೋಳುಗಳು ನಮ್ಮನ್ನು ರಕ್ಷಿಸಲಿ ಎಂಬ ಕೋರಿಕೆ ಮಾತ್ರ.


ಮೊದಲೇ ಹೇಳಿದಂತೆ ಸ್ವಪ್ನವಾಸವದತ್ತ ಪ್ರತಿಜ್ಜ್ನಾಯೌಗಂಧರಾಯಣ ಎಂಬ ನಾಟಕದ ಮುಂದುವರಿದ ಭಾಗ. ಪ್ರತಿಜ್ಜ್ನಾಯೌಗಂಧರಾಯಣ ನಾಟಕದ ಕೊನೆಯಲ್ಲಿ ಕುಶಲ ಮಂತ್ರಿಯಾದ ಯೌಗಂಧರಾಯಣನ ನೆರವಿನಿಂದ ಉದಯನ ಆವಂತಿ ದೇಶದ ರಾಜಕುವರಿ ವಾಸವದತ್ತೆಯನ್ನು ಅಪಹರಿಸಿ ವಿವಾಹವಾಗಿರುತ್ತಾನೆ. ಪ್ರತಿಜ್ಜ್ನಾಯೌಗಂಧರಾಯಣದ ನಾಯಕ ನಾಯಿಕೆಯರು ಉದಯನವಾಸವದತ್ತೆಯರಾದರೂ ಅಲ್ಲಿ ಇವರಿಬ್ಬರೂ ರಂಗದಮೇಲೆ ಬರುವುದೇ ಇಲ್ಲ! ಅಲ್ಲಿ ಯೌಗಂಧರಾಯಣನೇ ಮುಖ್ಯಪಾತ್ರವಹಿಸುತ್ತಾನೆ. ಆದರೆ ಸ್ವಪ್ನವಾಸವದತ್ತದಲ್ಲಿ ಮೊದಲ ದೃಷ್ಯದಲ್ಲೇ ವಾಸವದತ್ತೆಯ ಪ್ರವೇಶವಾಗುತ್ತದೆ.


ಈ ನಾಟಕದ ಹಿನ್ನಲೆ ಹೀಗಿದೆ. ಪ್ರಿಯಸಖಿ ಮತ್ತು ಲಲಿತ ಕಲೆಗಳಲ್ಲಿ ತನ್ನ ಶಿಷ್ಯೆಯಾದ ವಾಸವದತ್ತೆಯನ್ನು ವಿವಾಹವಾದ ಬಳಿಕ ಉದಯನನಿಗೆ ರಾಜ್ಯಭಾರದಲ್ಲಿ ಆಸಕ್ತಿ ಕಳೆದುಹೋಗಿರುತ್ತದೆ. ಇದರಿಂದ ಉದಯನನ ರಾಜಧಾನಿ ಕೌಶಾಂಬಿ ವೈರಿರಾಜರುಗಳ ಪಾಲಾಗಿ ಹೋಗುತ್ತದೆ. ಕುಶಲ ಮಂತ್ರಿಯಾದ ಯೌಗಂಧರಾಯಣನು ರಾಜ್ಯವನ್ನು ಮತ್ತೆ ತಮ್ಮದಾಗಿಸಿಕೊಳ್ಳಲು ಉಪಾಯವೊಂದನ್ನು ಮಾಡುತ್ತಾನೆ. ಉದಯನ ಇಲ್ಲದ ಸಮಯದಲ್ಲಿ, ವಾಸವದತ್ತೆ ಮತ್ತು ಯೌಗಂಧರಾಯಣನು ಆಕಸ್ಮಿಕವಾಗಿ ಘಟಿಸಿದ ಬೆಂಕಿ ಅನಾಹುತವೊಂದರಲ್ಲಿ ಮೃತರಾದರು ಎಂಬುವಂತೆ ನಾಟಕವಾಡುತ್ತಾನೆ. ಜೊತೆಯಲ್ಲಿ ಯೌಗಂಧರಾಯಣನಿಗೆ ರಾಜ್ಯಬಲವರ್ಧನೆಗಾಗಿ ಉದಯನನು ಮಗಧ ದೇಶದ ರಾಜಕುಮಾರಿಯಾದ ಪದ್ಮಾವತಿಯನ್ನು ವರಿಸಿ ಮಗಧ ದೇಶದೊಂದಿಗೆ ಸಂಬಂಧ ಬೆಳೆಯಲಿ ಎಂಬ ಆಶಯವೂ ಇರುತ್ತದೆ. ವಾಸವದತ್ತೆಯೂ ಪತಿಯ ಒಳಿತಿಗಾಗಿ ಈ ನಾಟಕವನ್ನು ಒಪ್ಪಿಕೊಳ್ಳುತ್ತಾಳೆ. ಆದರೆ ವಾಸವದತ್ತೆಯನ್ನು ಕಳೆದುಕೊಂಡ ಉದಯನ ತೀವ್ರ ಶೋಕದಲ್ಲಿರುತ್ತಾನೆ.ಯೌಗಂಧರಾಯಣ ಓರ್ವ ಸನ್ಯಾಸಿಯಂತೆ ಮತ್ತು ವಾಸವದತ್ತೆ ಅವನ ತಂಗಿಯಾಗಿ ಆವಂತಿಕಾ ಎಂಬ ಹೆಸರಿನಲ್ಲಿ ಮಗಧ ರಾಜ್ಯಕ್ಕೆ ಬರುತ್ತಾರೆ ಎಂಬಲ್ಲಿಂದ ನಾಟಕದ ಮೊದಲ ಅಂಕ ಆರಂಭವಾಗುತ್ತದೆ. ಯೌಗಂಧರಾಯಣ ರಾಜಕುಮಾರಿ ಪದ್ಮಾವತಿಯನ್ನು ಭೇಟಿ ಮಾಡಿ ತನ್ನ ತಂಗಿಯ ಪತಿ ವ್ಯವಹಾರ ನಿಮಿತ್ತ ಹೊರ ಪ್ರದೇಶಕ್ಕೆ ಹೋಗಿರುವುದಾಗಿಯೂ ಆತ ಬಂದ ನಂತರದಲ್ಲಿ ಆಕೆಯನ್ನು ಕರೆದುಕೊಂಡು ಹೋಗುತ್ತೇನೆ ಮತ್ತು ಅಲ್ಲಿಯವರೆಗೆ ಪದ್ಮಾವತಿಯ ಸಖಿಯಂತೆ ವಾಸವದತ್ತೆಯನ್ನು ನೋಡಿಕೊಳ್ಳಬೇಕೆಂದು ಕೇಳಿಕೊಳ್ಳುತ್ತಾನೆ.ಮುಂದೆ ಉದಯನ ಮಗಧ ರಾಜ್ಯಕ್ಕೆ ಅತಿಥಿಯಾಗಿ ಬಂದಾಗ ಮಗಧ ದೇಶದ ರಾಜ ಉದಯನನ ರಾಜಧಾನಿ ಕೌಶಾಂಬಿಯನ್ನು ಮರಳಿ ಪಡೆಯಲು ಸಹಾಯ ಮಾಡಲು ಒಪ್ಪಿಕೊಳ್ಳುತ್ತಾನೆ. ಅದಕ್ಕೆ ಬದಲಾಗಿ ತನ್ನ ತಂಗಿ ಪದ್ಮಾವತಿಯನ್ನು ವಿವಾಹವಾಗುವಂತೆ ಉದಯನನನ್ನು ಕೇಳಿಕೊಳ್ಳುತ್ತಾನೆ. ಆದರೆ ಉದಯನನಿಗೆ ವಾಸವದತ್ತೆಯನ್ನು ಕಳೆದುಕೊಂಡ ದುಃಖ ಇನ್ನೂ ಮರೆಯಾಗಿರುವುದಿಲ್ಲ. ಆತನ ದುಃಖವನ್ನು ಭಾಸ, ಸೀತೆಯನ್ನು ಕಾಡಿನಲ್ಲಿ ಕಳೆದುಕೊಂಡ ರಾಮನ ಶೋಕಕ್ಕೆ ಹೋಲಿಸುತ್ತಾನೆ. ಆದರೂ ರಾಜ್ಯವನ್ನು ಉಳಿಸಿಕೊಳ್ಳುವ ಅನಿವಾರ್ಯ ಕಾರಣಗಳಿಂದ ಈ ವಿವಾಹಕ್ಕೆ ಒಪ್ಪಿಕೊಳ್ಳುತ್ತಾನೆ. ಇದರಿಂದ ಸಂತಸಗೊಂಡ ಪದ್ಮಾವತಿ ಈ ವಿಷಯವನ್ನು ತನ್ನ ಸಖಿ ಆವಂತಿಕಾಳಿಗೆ (ವಾಸವದತ್ತೆಗೆ) ತಿಳಿಸುತ್ತಾಳೆ. ವಾಸವದತ್ತೆಗೆ ತನ್ನ ಪತಿಯನ್ನು ತನ್ನ ಕಣ್ಣೆದುರಿಗೇ ಕಳೆದುಕೊಳ್ಳುವ ಬಗ್ಗೆ ಸಂಕಟವಾಗುತ್ತದೆ. ಆದರೆ ಭಾಸ ಆ ನೊಂದ ಮನಕ್ಕೆ ಸಾಂತ್ವನ ನೀಡಲೋ ಎಂಬಂತೆ ಒಂದು ಸುಂದರ ದೃಶ್ಯವನ್ನು ನಿರ್ಮಿಸುತ್ತಾನೆ. ಉದಯನ ಮತ್ತು ಆತನ ಮಿತ್ರ, ವಸಂತಕ ಮಗಧ ರಾಜನ ಅರಮನೆಯ ಲತಾಮಂಟಪದಲ್ಲಿ ಕುಳಿತಿರುವ ಸಂದರ್ಭದಲ್ಲಿ ವಾಸವದತ್ತೆಯೂ ಆ ಉದ್ಯಾನದ ಇನ್ನೊಂದು ಭಾಗದಲ್ಲಿರುತ್ತಾಳೆ. ಆಕೆ ಲತೆಗಳ ಸಮೂಹ ಮರೆಯಾದ ಕಾರಣದಿಂದ ಉದಯನ ಮತ್ತು ವಸಂತಕನಿಗೆ ಕಾಣುವುದಿಲ್ಲ. ಆದರೆ ವಾಸವದತ್ತೆ ಇವರು ಮಾತನಾಡುವುದನ್ನು ಕೇಳಿಸಿಕೊಳ್ಳುತ್ತಾಳೆ. ಆಗ ವಸಂತಕ ಉದಯನನನ್ನು ನಿನಗೆ ಪದ್ಮಾವತಿ ಮತ್ತು ವಾಸವದತ್ತೆಯರಲ್ಲಿ ಯಾರು ಹೆಚ್ಚು ಪ್ರಿಯರು ಎಂಬುದಾಗಿ ಕೇಳುತ್ತಾನೆ. ಅದಕ್ಕೆ ಉದಯನ ಪದ್ಮಾವತಿ ಗುಣವಂತೆ ಮತ್ತು ತನಗೆ ನೆಚ್ಚಿನವಳಾದರೂ, ವಾಸವದತ್ತೆ ತನ್ನ ಮೊದಲ ಪ್ರೇಮ ಮತ್ತು ಆಪ್ತ ಸಖಿ. ಅವಳ ಸ್ಥಾನ ತನ್ನ ಹೃದಯದಲ್ಲಿ ಮತ್ತೆ ಯಾರಿಂದಲೂ ತುಂಬಲು ಅಸಾಧ್ಯ ಎನ್ನುತ್ತಾನೆ. ಮನಸ್ಸಿಗೆ ಮುದ ನೀಡುವ ಇಂತಹ ಪ್ರಯೋಗಗಳನ್ನು ಭಾಸ ತನ್ನ ನಾಟಕಗಳಲ್ಲಿ ಹೇರಳವಾಗಿ ಮಾಡುತ್ತಾನೆ. ಸಂಸ್ಕೃತದ ಅನೇಕ ನಾಟಕಗಳಲ್ಲಿ ಮತ್ತು ಕಾವ್ಯಗಳಲ್ಲಿ ಉದಯನ ಎಂಬ ಹೆಸರಿನ ಪಾತ್ರವನ್ನು ಕಾಣಬಹುದು. ಆ ಎಲ್ಲ ನಾಟಕಗಳಲ್ಲಿ ಉದಯನನನ್ನು ಸ್ತ್ರೀಲೋಲುಪ ಮತ್ತು ಅತ್ಯಂತ ಚಂಚಲ ಪಾತ್ರವನ್ನಾಗಿ ಚಿತ್ರಿಸುತ್ತಾರೆ. ಆದರೆ ಸ್ವಪ್ನವಾಸವದತ್ತದಲ್ಲಿನ ಉದಯನ ಅತ್ಯಂತ ಸೌಮ್ಯವಾದ ಪಾತ್ರ. ಕಳೆದುಕೊಂಡ ಪತ್ನಿಗಾಗಿ ಪರಿತಪಿಸುತ್ತಿರುತ್ತಾನೆ.ಮುಂದೆ ಪದ್ಮಾವತಿ ಮತ್ತು ಉದಯನರ ಮದುವೆಯ ಸಂದರ್ಭದಲ್ಲಿ ವಾಸವದತ್ತೆಗೇ ವರಮಾಲೆಯನ್ನು ಸಿದ್ದಪಡಿಸುವಂತೆ ಪದ್ಮಾವತಿ ಕೇಳಿಕೊಳ್ಳುತ್ತಾಳೆ. ಆಗ ವಾಸವದತ್ತೆ ಆ ಮಾಲೆಯಲ್ಲಿ ಪತಿಯ ಆಯಸ್ಸು ಹೆಚ್ಚುವಂತೆ ಪ್ರಭಾವಿಸುವ ಮೂಲಿಕೆಯೊಂದನ್ನು ಹೆಚ್ಚು ಹೆಚ್ಚಾಗಿ ಸೇರಿಸಿ ವರಮಾಲೆಯನ್ನು ಸುಂದರವಾಗಿ ಸಿದ್ದಪಡಿಸುತ್ತಾಳೆ. ವಾಸವದತ್ತೆ ಮತ್ತು ಪದ್ಮಾವತಿಯರ ನಡುವೆ ಸಹಜವಾಗಿ ಇರಬಹುದಾಗಿದ್ದ ಸವತಿ ಅಸೂಯೆಯನ್ನು ಯಾವ ಸನ್ನಿವೇಶವನ್ನೂ ಭಾಸ ತೋರಿಸುವುದಿಲ್ಲ. ಬದಲಿಗೆ ಇವರಿಬ್ಬರಲ್ಲಿನ ಸ್ನೇಹವನ್ನು ಅಲ್ಲಲ್ಲಿ ತೋರಿಸುತ್ತಾನೆ.ಐದನೇ ಅಂಕ ಸ್ವಪ್ನಾಂಕ. ಈ ಅಂಕವನ್ನು ಅತ್ಯಂತ ಸುಂದರವಾಗಿ ಭಾಸ ನಿರೂಪಿಸಿದ್ದಾನೆ. ಪದ್ಮಾವತಿ ಮತ್ತು ಉದಯನರ ವಿವಾಹದ ಒಂದೆರಡು ದಿನಗಳ ನಂತರದಲ್ಲಿ ಪದ್ಮಾವತಿ ತಲೆಶೂಲೆಯಿಂದ ಬಳಲುತ್ತಿರುತ್ತಾಳೆ. ಅವಳನ್ನು ಬೇರೊಂದು ಅಂತಃಪುರದಲ್ಲಿ ವಿಶ್ರಾಂತಿಗಾಗಿ ಕರೆದುಕೊಂಡು ಹೋಗಿರುತ್ತಾರೆ. ಇದನ್ನು ಅರಿಯದ ಉದಯನ ಅವಳನ್ನು ಕಾಣಲು ಅವಳ ಅಂತಃಪುರಕ್ಕೆ ಬರುತ್ತಾನೆ. ಆದರೆ ಅವಳು ಅಲ್ಲಿ ಇರದಿದ್ದನ್ನು ನೋಡಿ ಕಾಯುತ್ತ ಕುಳಿತುಕೊಳ್ಳುವ ಅವನು ಮಧ್ಯಾಹ್ನದ ಸಮಯವಾದ್ದರಿಂದ ಅರಿವಿಲ್ಲದೆ ಅಲ್ಲಿಯೇ ನಿದ್ರೆಹೋಗುತ್ತಾನೆ. ಆ ಸಮಯದಲ್ಲಿ ಅಲ್ಲಿಗೆ ಬಂದ ವಸಂತಕ ಹೊದಿಕೆ ಹೊದಿಸಿ ಹೋಗುತ್ತಾನೆ. ಆ ಸಮಯದಲ್ಲಿ ವಾಸವದತ್ತೆ ಪದ್ಮಾವತಿಯನ್ನು ಭೇಟಿ ಮಾಡಲು ಅಲ್ಲಿಗೆ ಬರುತ್ತಾಳೆ. ಅವಳಿಗೆ ಉದಯನ ಅಲ್ಲಿ ಮಲಗಿರುವುದು ತಿಳಿಯದೆ ಪದ್ಮಾವತಿಯೇ ಮಲಗಿದ್ದಾಳೆಂದು ಭಾವಿಸಿ ಉದಯನನ ಹಣೆಯನ್ನು ಸ್ಪರ್ಶಿಸುತ್ತಾಳೆ. ತಕ್ಷಣವೇ ಆಕೆಗೆ ಮಲಗಿರುವುದು ಉದಯನ ಎಂಬ ಅರಿವಾಗಿ ಅವಸರದಿಂದ ಹೊರಟು ಹೋಗುತ್ತಾಳೆ. ಆದರೆ ಉದಯನನಿಗೆ ವಾಸವದತ್ತೆಯ ಜೊತೆಯಲ್ಲಿದ್ದಂತೆ ಸ್ವಪ್ನದಲ್ಲಿ ಅನುಭವವಾಗುತ್ತಿರುತ್ತದೆ. ಅಷ್ಟರಲ್ಲೇ ವಾಸವದತ್ತೆಯ ಸ್ಪರ್ಶ ಅವನನ್ನು ಎಚ್ಚರಿಸುತ್ತದೆ. ಆ ಸ್ಪರ್ಶ ವಾಸವದತ್ತೆಯದೇ ಎಂದು ಖಚಿತವಾಗಿ ಭಾವಿಸುವ ಉದಯನ ವಸಂತಕನನ್ನು ಕರೆದು ವಾಸವದತ್ತೆ ಇನ್ನೂ ಜೀವಿಸಿದ್ದಾಳೆ ಎಂದೆಲ್ಲ ಹೇಳುತ್ತಾನೆ. ಅದಕ್ಕೆ ವಸಂತಕ ನಿಮಗೆ ಕೇವಲ ಸ್ವಪ್ನವಾಗಿದೆ. ಇನ್ನೆಲ್ಲಿ ವಾಸವದತ್ತೆ ಬರಲು ಸಾಧ್ಯ. ಇನ್ನು ತಾವು ಪದ್ಮಾವತಿಯ ಬಗ್ಗೆ ಯೋಚಿಸಬೇಕಾಗಿ ಹೇಳುತ್ತಾನೆ. ಆದರೂ ಉದಯನನಲ್ಲಿ ವಾಸವದತ್ತೆ ನಿಸ್ಸಂಶಯವಾಗಿ ಬದುಕಿದ್ದಾಳೆ ಎಂಬ ಭಾವನೆ ಉಳಿದುಬಿಡುತ್ತದೆ.ಕೊನೆಯ ಅಂಕದಲ್ಲಿ ಮಗಧ ರಾಜನ ಸಹಾಯದಿಂದ ಉದಯನ ತನ್ನ ರಾಜ್ಯವನ್ನು ಮರಳಿ ಪಡೆಯುತ್ತಾನೆ. ತದನಂತರ ಪದ್ಮಾವತಿಯ ಆಶಯದಂತೆ ಅವರಿಬ್ಬರೂ ಆವಂತಿ ರಾಜ್ಯಕ್ಕೆ, ವಾಸವದತ್ತೆಯ ತಂದೆಯ ಮನೆಗೆ ಹೋಗುತ್ತಾರೆ. ಅಲ್ಲಿ ವಾಸವದತ್ತೆಯ ಭಾವ ಚಿತ್ರವನ್ನು ನೋಡುವ ಪದ್ಮಾವತಿ ಚಕಿತಗೊಳ್ಳುತ್ತಾಳೆ. ವಾಸವದತ್ತಾ ಮತ್ತು ತನ್ನ ಪ್ರಿಯ ಸಖಿ ಆವಂತಿಕೆಗೆ ಅತ್ಯಂತ ಹೋಲಿಕೆ ಇದೆ ಎಂಬುದಾಗಿ ಉದಯನನಿಗೆ ಹೇಳುತ್ತಾಳೆ. ಉದಯನ ತಕ್ಷಣ ಆವಂತಿಕೆಯನ್ನು ಬರಲು ಹೇಳುತ್ತಾನೆ. ಆದರೆ ಆವಂತಿಕೆ ಉದಯನನಿದ್ದಲ್ಲಿಗೆ ಬರಲು ಒಪ್ಪದೇ ಪರಪುರುಷನ ದರ್ಶನ ಪತಿಯಿಂದ ದೂರ ಇರುವ ತನಗೆ ತಕ್ಕದ್ದಲ್ಲ ಎಂದು ಪದ್ಮಾವತಿಗೆ ತಿಳಿಸುತ್ತಾಳೆ. ಅಲ್ಲಿಗೆ ಅದೇ ಸಮಯದಲ್ಲಿ ಯೌಗಂಧರಾಯಣ ಸನ್ಯಾಸಿ ವೇಷದಲ್ಲಿ ಬಂದು ಪದ್ಮಾವತಿಯ ಬಳಿ ತನ್ನ ತಂಗಿಯ ಪತಿ ಮರಳಿ ಬಂದಿದ್ದಾನೆ ಆದ್ದರಿಂದ ಕರೆದುಕೊಂಡು ಹೋಗಲು ಬಂದಿದ್ದೇನೆ ಎನ್ನುತ್ತಾನೆ. ಆದರೆ ಉದಯನನು ಯೌಗಂಧರಾಯಣನನ್ನು ಸುಲಭವಾಗಿ ಗುರುತಿಸಿ ಅಪ್ಪಿಕೊಂಡು ಸ್ವಾಗತಿಸುತ್ತಾನೆ. ವಾಸವದತ್ತೆ ಎಲ್ಲಿಯೆಂದು ಕೇಳಿದಾಗ ಆವಂತಿಕಾ ವೇಷದಲ್ಲಿದ್ದ ವಾಸವದತ್ತೆ ಎದುರಿಗೆ ಬರುತ್ತಾಳೆ. ಮತ್ತು ಯೌಗಂಧರಾಯಣ ವಾಸವದತ್ತೆಯನ್ನು ಉದಯನನಿಂದ ದೂರವಿಟ್ಟ ಉದ್ದೆಶವನ್ನೆಲ್ಲ ತಿಳಿಸಿ ಕ್ಷಮೆ ಯಾಚಿಸುತ್ತಾನೆ. ಮತ್ತು ವಾಸವದತ್ತೆ ಇಷ್ಟು ದಿನ ಪದ್ಮಾವತಿಯ ಜೊತೆಯಲ್ಲಿಯೇ ಇದ್ದುದಾಗಿಯೂ ಅವಳು ಪರಿಶುದ್ದಳಾಗಿರುವುದರಿಂದ ಒಪ್ಪಿಕೊಳ್ಳಬೇಕೆಂದೂ ಕೇಳಿಕೊಳ್ಳುತ್ತಾನೆ. ಉದಯನ ಸಂತಸದಿಂದ ವಾಸವದತ್ತೆಯನ್ನು ಸ್ವೀಕರಿಸುತ್ತಾನೆ. ಹೀಗೆ ಸ್ವಪ್ನವಾಸವದತ್ತ ನಾಟಕ ಸುಖಾಂತ್ಯ ಕಾಣುತ್ತದೆ.ಭಾಸ ಅದ್ಭುತ ನಾಟಕಕಾರ . ಅವನ ನಾಟಕಗಳಲ್ಲಿಯ ಭಾಷೆಯ ಸರಳತೆ ಮತ್ಯಾವ ಸಂಸ್ಕೃತ ನಾಟಕಕಾರರುಗಳಲ್ಲಿ ಕಾಣಬರುವುದಿಲ್ಲ. ಈ ಸಂಬಂಧ ಭಾಸ, ಕಾಳಿದಾಸನನ್ನೂ ಮೀರಿ ನಿಲ್ಲುತ್ತಾನೆ. ಮತ್ತು ಭಾಸನ ಹಾಸ್ಯಪ್ರಜ್ಞೆಯೂ ಅಷ್ಟೇ ಸುಂದರ. ಅದಕ್ಕೇ 'ಭಾಸೋ ಹಾಸಃ' ಎಂಬ ಮಾತು ಪ್ರಸಿದ್ದ. ಭಾಸನೆಂದರೇ ಹಾಸ್ಯ. ಈ ನಾಟಕದಲ್ಲಿ ವಸಂತಕನ ಮೂಲಕ ಅನೇಕ ಹಾಸ್ಯ ಸನ್ನಿವೇಶಗಳನ್ನು ಭಾಸ ಸೃಷ್ಟಿಸಿ ಓದುಗರಲ್ಲಿ ಮುದವನ್ನು ಉಂಟುಮಾಡುತ್ತಾನೆ. ಉದಯನ ವಾಸವದತ್ತೆಯ ವಿರಹದಿಂದ ದುಃಖಗೊಂಡು ಕುಳಿತಾಗ ವಸಂತಕ ಕಥೆಯೊಂದನ್ನು ಹೇಳುತ್ತೇನೆ ಎಂದು ಬರುತ್ತಾನೆ. ಹೀಗೆ ಕಥೆ ಪ್ರಾರಂಭಿಸುತ್ತಾನೆ. ಬ್ರಹ್ಮದತ್ತ ಎಂಬ ನಗರಿಯಲ್ಲಿ ಕೌಶಾಂಬಿ ಎಂಬ ರಾಜನಿದ್ದನು. ತಕ್ಷಣ ದುಃಖತಪ್ತನಾದ ಉದಯನ ತಲೆಯೆತ್ತಿ ನಗಲು ಆರಂಭಿಸುತ್ತಾನೆ. ಮತ್ತು ವಸಂತಕನನ್ನು ಕುರಿತು 'ಮೂರ್ಖ, ಅದು ಕೌಶಾಂಬಿ ನಗರಿ, ಅಲ್ಲಿನ ರಾಜ ಬ್ರಹ್ಮದತ್ತ ! ' ಎಂದು ಹೇಳುತ್ತಾನೆ. ಹೀಗೆ ಭಾಸ ಬೇಸರದ ಮತ್ತು ಶುಷ್ಕವೆನಿಸುವ ಸನ್ನಿವೇಶಗಳನ್ನು ತನ್ನ ಹಾಸ್ಯ ಪ್ರಜ್ಞೆಯಿಂದ ತಕ್ಷಣ ರಂಜನೀಯವಾಗಿ ಮಾಡಿಬಿಡುತ್ತಾನೆ.ಭಾಸನ ಕಾವ್ಯಭಾಷೆಗೆ ತನ್ನದೇ ಆದ ಒಂದು ವಿಶಿಷ್ಟ ಸ್ವಂತಿಕೆ ಇದೆ. ಅವನು ಕಾವ್ಯದಲ್ಲಿ ತನ್ನ ಹಿಂದಿನ ಕವಿಗಳ ಯಾರ ಮಾತುಗಳನ್ನೂ ಉದ್ದರಿಸುವುದಿಲ್ಲ.ಅವನ ಕಥೆ ಹೇಳುವಲ್ಲಿನ ಚಾಕಚಕ್ಯತೆಯೂ ಅಸಾಧಾರಣವಾದುದು. ಈ ಪ್ರಸ್ತುತ ನಾಟಕದಲ್ಲಿಯೇ ನೋಡಿದರೆ ಅವನು ತನ್ನ ನಾಟಕದಲ್ಲಿ ಮಾಡಿದ ಆಧುನಿಕ ಪ್ರಯೋಗಗಳು ಅಚ್ಚರಿಯನ್ನುಂಟುಮಾಡುತ್ತವೆ. ನೇರ ಸಂಭಾಷಣೆ ಮತ್ತು ಸನ್ನಿವೇಶಗಳನ್ನು ವಿವರವಾಗಿ ಬಣ್ಣಿಸುವ ಭಾಸನ ಶೈಲಿ ಎಲ್ಲಿಯೂ ನಿಸ್ಸಾರ ಅನ್ನಿಸುವುದಿಲ್ಲ. ಈ ಕಾರಣದಿಂದಾಗಿಯೇ ಭಾಸನ ನಾಟಕಗಳು ರಂಗದ ಮೇಲೆ ರಂಜನೀಯವಾಗಿ ಮೂಡಿಬರುತ್ತವೆ. ಕೇರಳದಲ್ಲಿ ಇತ್ತೀಚಿನ ಭಾಸನ ನಾಟಕಗಳ ರಂಗಪ್ರಯೋಗ ಅತ್ಯಂತ ಜನಪ್ರಿಯ ಮತ್ತು ಸಫಲಗೊಂಡಿವೆ. ಹೀಗೆ ಇಂದಿಗೂ ಭಾಸ ಸಹೃದಯರನ್ನು ತನ್ನ ಕಾವ್ಯಗಳತ್ತ ಸೆಳೆಯುತ್ತಿದ್ದಾನೆ.