Sunday, October 4, 2009
ಕನ್ನಡ ಸಾಹಿತ್ಯದಲ್ಲಿ ಅನುಭಾವ-೨
"ನಾಯಮಾತ್ಮಾ ಪ್ರವಚನೇನ ಅಭ್ಯೋ ನ ಮೇಧಯಾ ನ ಬಹುಧಾ ಶ್ರುತೇನ" ಅಂದರೆ, ಆತ್ಮಜ್ಞಾನವು ಪ್ರವಚನದಿಂದಾಗಲಿ, ಮೇಧಾಶಕ್ತಿಯಿಂದಾಗಲಿ ಅಥವಾ ಶ್ರವಣದಿಂದಾಗಲಿ ಲಭ್ಯವಾಗುವುಂಥದ್ದಲ್ಲ. ಆತ್ಮವು, ಕೇವಲ ಭೌತಿಕವಾದ ಇವೆಲ್ಲಕ್ಕೂ ಅತೀತವಾದದ್ದು. ಒಳಗಣ್ಣು ತೆರೆದಾಗ ಮಾತ್ರ ಆ ದಿವ್ಯ ಬೆಳಕು ಒಳಕ್ಕೆ ಹರಿಯುತ್ತದೆ, ಆ ಬಂಗಾರದ ಮುಚ್ಚಳ ತೆರೆದು ಸತ್ಯದ ದರ್ಶನವಾಗುತ್ತದೆ. ಜಗತ್ತಿನ ಇತಿಹಾಸದಲ್ಲಿ ಹಲವರು ಸತ್ಯಶೋಧನೆಯ ಈ ಮಾರ್ಗದಲ್ಲಿ ಸಾಗಿದ್ದಾರೆ. ಅವರಲ್ಲಿ ಅನೇಕರಿಗೆ ಸತ್ಯದರ್ಶನ ಸಾಧ್ಯವಾಗಿದೆ. ಆದರೆ ಅಂತಹ ಅನುಭಾವಿಗಳಲ್ಲಿ ಕೆಲವರು ಮಾತ್ರ ತಮಗಾದ ಆ ಅನುಭವವನ್ನು ಶಬ್ದಗಳಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ಇಂತಹ ಒಂದು ಮಹದ್ಪ್ರಯತ್ನವನ್ನು ಹದಿನೈದನೇ ಶತಮಾನದಲ್ಲಿ ದಾಸರು ಕನ್ನಡ ನೆಲದಲ್ಲಿ ವ್ಯಾಪಕವಾಗಿ ಮಾಡಿದರು. ಈ ದಾಸಸಾಹಿತ್ಯದಿಂದ ನಮ್ಮ ಕನ್ನಡ ಸಾಹಿತ್ಯವು ಇನ್ನಷ್ಟು ಶ್ರೀಮಂತವಾಯಿತು.
ಪುರಂದರ ದಾಸರು, ಕನಕದಾಸರು, ಮತ್ತು ವಾದಿರಾಜರದು ದಾಸಸಾಹಿತ್ಯದಲ್ಲಿ ಜನಪ್ರಿಯ ಹೆಸರುಗಳು. ಇವರೆಲ್ಲರೂ ಮಧ್ವಾಚಾರ್ಯರು ಪ್ರತಿಪಾದಿಸಿದ ದ್ವೈತ ಸಿದ್ದಾಂತವನ್ನು ಅನುಸರಿಸಿದವರಾದ್ದರಿಂದ ಆ ಮಾದರಿಯಲ್ಲೇ ಇವರ ಅನುಭಾವ ಮಾರ್ಗವೂ ಬೆಳೆದು ಬಂದಿತು. ಇವರೆಲ್ಲರೂ ಹರಿಯನ್ನೇ ಸರ್ವೋತ್ತಮನೆಂದು ಭಾವಿಸಿ ತಮ್ಮ ಜೀವನದ ಆ ಶ್ರೇಷ್ಠ ಸತ್ಯವನ್ನು ಕಂಡುಕೊಂಡವರು. ದಾಸರು ಹರಿಯನ್ನು ಸಾಕಾರ ಸಗುಣ ರೂಪದಲ್ಲಿ ಆರಾಧಿಸಿದವರು. ಆದುದರಿಂದಲೇ ದಾಸರದು ಭಕ್ತಿಪಂಥವಾಯಿತು. ಆ ದೈವೀ ಶಕ್ತಿಯೊಡನೆ ವಿವಿಧ ಮಾನವೀಯ ಸಂಬಧವನ್ನು ಭಾವಿಸಿ, ಪ್ರೇಮಿಸಿ, ಆ ಭಕ್ತಿಯ ಆನಂದವನ್ನು ಭಕ್ತರಾಗಿ ದೇವನಿಂದ ಬೇರೆಯಾಗಿಯೇ ನಿಂತು ಸವಿದರು. ಒಮ್ಮೆ ಮಗನಂತೆ, ಒಡೆಯನಂತೆ, ಸ್ನೇಹಿತನಂತೆ, ಪತಿಯಂತೆ ದೇವನನ್ನು ದಾಸರು ಕಂಡಿದ್ದಾರೆ. ಕೆಲವೊಮ್ಮೆ ಸೇವಕನಾಗಿ, ತಾಯಿಯಾಗಿ ವಾತ್ಸಲ್ಯ ಭಾವದಿಂದ ದೇವನನ್ನು ಉಪಾಸಿಸಿದ್ದಾರೆ.
"ದಾಸನ ಮಾಡಿಕೊ ಎನ್ನ ಸ್ವಾಮಿ,
ಸಾಸಿರ ನಾಮದ ವೇಂಕಟರಮಣ."
ಎನ್ನುವಲ್ಲಿ ಹನುಮಂತನ ದಾಸ್ಯಭಕ್ತಿ..
"ಪೋಗುವುದಿಚಿತವೇ ಮಾಧವ ಮಧುರೆಗೆ
ಬಾಗುವೆ ಎಲೋ ನಿನಗೆ"
ಎನ್ನುವಲ್ಲಿ ಪ್ರಿಯ ಸಖನಿಗಾಗಿ ಹಂಬಲಿಸುವ ರಾಧೆಯ ವಿರಹ...
"ಕರುಣಾಕರ ನೀನೆಂಬುವುದ್ಯಾತಕೋ
ಭರವಸೆಯಿಲ್ಲೆನೆಗೆ..."
ಇದು ನಿನಗೆ ಧರ್ಮವೇ ಇಂದಿರೇಶಾ,
ಬದಿಗ ನೀನಾಗಿದ್ದು ಭೀತಿಪಡಿಸುವುದು"
ಎನ್ನುವಾಗ ತೋರುವ ಅರ್ಜುನನ ಸಖ್ಯ ಭಕ್ತಿ....
"ಪೋಗದಿರೆಲೋ ರಂಗ, ಬಾಗಿಲಿಂದಾಚೆ
ಭಾಗವತರು ಬಂದು ಕರೆದೆತ್ತಿಕೊಂಡೊಯ್ಯುವರೋ"
ಎನ್ನುವಲ್ಲಿ ಯಶೋಧೆಯ ವಾತ್ಸಲ್ಯ ಭಾವ..
ಎಲ್ಲವೂ ದಾಸರ ಕಾವ್ಯದಲ್ಲಿ ವ್ಯಕ್ತವಾಗುತ್ತವೆ. ದಾಸರ ಪೂರ್ಣ ಸಮರ್ಪಣೆಯ ಭಾವದಿಂದಲೇ ಅವರ ಭಕ್ತಿ ಮಾರ್ಗದಲ್ಲಿನ ಸಾಧನೆ ಬೆಳೆದು ಪೂರ್ಣಗೊಳ್ಳುತ್ತದೆ. ಯಾರು ಹೇಗೆ ತಮ್ಮ ದೇವನನ್ನು ಆರಾಧಿಸುವರೋ ಅದೇ ರೂಪದಲ್ಲಿ ಅವನ ದರ್ಶನ ಲಭಿಸುತ್ತದೆ ಎನ್ನುತ್ತಾರೆ ದಾಸರು.
ತಾವು ಕಂಡ ಆ ಸಾಕಾರ ಮೂರ್ತಿಯ ವರ್ಣನೆಯೂ ಅತ್ಯಂತ ಸೊಗಸಾಗಿ ದಾಸರು ಮಾಡುತ್ತಾರೆ.
"ಕೃಷ್ಣಮೂರ್ತಿ ಕಣ್ಣಮುಂದೆ ನಿಂತಿದೆ,
ಮಸ್ತಕದಲ್ಲಿ ಮಾಣಿಕದ ಕಿರೀಟ,
ಕಸ್ತೂರಿ ತಿಲಕದಿಂದೆಸೆವ ಲಲಾಟ,
ಹಸ್ತದಿಂದ ಕೊಳಲನೂದುವ ಓರೆನೋಟ,
ಕೌಸ್ತುಭ ಎಡಬಲದಲ್ಲಿ ಓಡ್ಯಾಣ..."
ದಾಸರು ತೋರಿಸುವ ದೇವ, ಪೀತಾಂಬರ ಉಟ್ಟ, ಮಾಣಿಕ್ಯ ಕಿರೀಟ ಧರಿಸಿದ, ಕೊರಳಲ್ಲಿ ತುಳಸೀಮಾಲೆಯಿಂದ ಶೋಭಿಸುವ, ಕಸ್ತೂರಿ ತಿಲಕವಿರುವ ಸಾಕಾರ ರೂಪ. ಆದರೆ ಆ ರೂಪವೂ ಹಾಗೂ ಆ ರೂಪದ ಜೊತೆಗಿನ ಅನುಬಂಧ ಕೂಡ ಪ್ರಾಪಂಚಿಕ ಎಲ್ಲ ಬಂಧನಗಳನ್ನೂ ಮೀರಿದ್ದು. ಮತ್ತು ಅವರ ಬಂಧ ಆ ಒಂದು ರೂಪದೊಂದಿಗೆ ಮಾತ್ರ. ದಾಸರ ಈ ಭಾವವನ್ನು ಸ್ಪಷ್ಟವಾಗಿ ಕಾಣಬಹುದು ಇಂತಹ ಕೀರ್ತನೆಗಳಲ್ಲಿ.
"ಯಾರು ಒಲಿದರೇನು ನಮಗಿನ್ನಾರು ಮುನಿದರೇನು,
ಕ್ಷೀರಸಾಗರಶಾಯಿಯಾದವನ ಸೇರಿದಂಥ ಹರಿದಾಸರಿಗೆ,
ಊರನಾಳುವ ದೊರೆಗಳು ನಮ್ಮನು ದೂರ ಅಟ್ಟಿದರೇನು?
ವಾರಿಜನಾಭನ ವಸುದೇವನ ಸುತನ ಸಾರಿದಂಥ ಹರಿದಾಸರಿಗೆ."
ದಾಸರ ಕಾವ್ಯಗಳಲ್ಲಿ ಸಾಕ್ಷಾತ್ಕಾರ ಅನುಭವದ ಕೊನೆಯ ಹಂತದಲ್ಲೂ ಸಾಕಾರ ಮೂರ್ತಿಯ ವರ್ಣನೆಯನ್ನೇ ಕಾಣುತ್ತೇವೆ. ಶರಣರಂತೆ "ಲೀಲೆಯಾದೊಡೆ ಉಮಾಪತಿ, ಲೀಲೆ ತಪ್ಪಿದೊಡೆ ಸ್ವಯಂಭು" ಎಂಬಂತಹ ನಿರಾಕಾರ ದೈವತ್ವದ ಕಲ್ಪನೆ ಕಾಣಬರುವುದಿಲ್ಲ. ದಾಸರು ಪಕ್ಷಿವಾಹನ, ಲಕ್ಷ್ಮೀರಮಣನಾದ, ಪನ್ನಗಶಯನನಾದ ಸರ್ವಾಲಂಕಾರ ಭೂಷಿತ ಹರಿಯನ್ನು ಮಾತ್ರ ಕಾಣಬಲ್ಲರು. ಹರಿಯು, ತುಳಸಿ ಕೌಸ್ತುಭ ಪೀತಾಂಬರ ಸಹಿತನಾಗಿಯೇ ತನ್ನ ಸಾತ್ವಿಕ ರೂಪದಿಂದ ದಾಸರ ಅಂತರಂಗವನ್ನು ಹೊಕ್ಕಿರುವಂತೆ ತೋರುತ್ತದೆ.
ದಾಸರಿಗೆ ಇಹ ಲೋಕದ ಜೀವನ ನೀರ ಮೇಲಣ ಗುಳ್ಳೆಯಂತೆ ಕಾಣುತ್ತದೆ. ದೇವರ ಕೃಪೆಯನ್ನು ನಂಬಿ ಆತನಿಗೇ ಎಲ್ಲವನ್ನೂ ಒಪ್ಪಿಸಿ ಬದುಕಬೇಕೆನ್ನುತ್ತಾರೆ.
"ಕೆರೆಯ ನೀರನು ಕೆರೆಗೆ ಚಲ್ಲಿ,
ವರವ ಪಡೆದವರಂತೆ ಕಾಣಿರೋ..
ಹರಿಯ ಕರುಣದೊಳಾದ ಭಾಗ್ಯವ ಹರಿ ಸಮರ್ಪಣೆ ಮಾಡಿ ಬದುಕಿರೋ"
ಎನ್ನುವಂತೆ ಜೀವನ ಇರಬೇಕು. ಇಂತಹ ಉನ್ನತ ಜೀವನದ ಆದರ್ಶ, ಉದಾತ್ತ ಕಲ್ಪನೆ, ರೀತಿ ನೀತಿಗಳ ಉಪದೇಶಗಳನ್ನು ದಾಸರ ಕೀರ್ತನೆಗಳಲ್ಲಿ ಕಾಣಬಹುದು.
ಶರಣ ಸಾಹಿತ್ಯದಂತೆ ದಾಸ ಸಾಹಿತ್ಯವೂ ಕೂಡ ಸಮಾಜದ ಮೇಲೆ ಅಗಾಧವಾದ ಪ್ರಭಾವ ಬೀರಿತು. ಸರಳವಾದ ಸುಂದರವಾದ ಕೀರ್ತನೆಗಳು ಎಲ್ಲರ ಮನೆ ಮನೆಗಳಲ್ಲಿ ಇಂದಿಗೂ ಕೇಳಬರುತ್ತವೆ. ಸಾಹಿತ್ಯದ ಜೊತೆಗೆ ಸಂಗೀತದ ಪ್ರಭಾವವನ್ನೂ ಆಧ್ಯಾತ್ಮಿಕ ಸಾಧನೆಗೆ ಬಳಸಿಕೊಂಡರು ದಾಸರು. ದಾಸಸಾಹಿತ್ಯಕ್ಕೆ ಅದರಲ್ಲಿಯೂ ಮುಖ್ಯವಾಗಿ ಪುರಂದರದಾಸರು ಮತ್ತು ಕನಕ ದಾಸರಿಗೆ ಸಂಗೀತ ಕ್ಷೇತ್ರದಲ್ಲೂ ಬಹಳ ಪ್ರಾಮುಖ್ಯವಾದ ಸ್ಥಾನವಿದೆ. ಆದರೆ ಸಂಗೀತವಾಗಲೀ ಸಾಹಿತ್ಯವಾಗಲಿ ಶರಣರಂತೆಯೇ ದಾಸರಿಗೂ ತಮ್ಮ ಜೀವನವನ್ನು ಅಭಿವ್ಯಕ್ತಗೊಳಿಸಲು ಮಾತ್ರ ಬೇಕಾಗಿತ್ತು, ಹೊರತೂ ಸಾಹಿತ್ಯ ರಚನೆಯೇ ಅವರ ಉದ್ದೇಶವಾಗಿರಲಿಲ್ಲ. ತಮ್ಮ ಸಾಧನೆಯಲ್ಲಿ ತೋರಿದ ಸಮಸ್ಯೆಗಳು, ಪ್ರಾರಂಭದ ದಿನಗಳಲ್ಲಿ ತಮ್ಮಲ್ಲಿದ್ದ ತಳಮಳಗಳು ಮತ್ತು ಅವುಗಳನ್ನು ಮೆಟ್ಟಿ ನಿಂತು ತಾವು ಬದುಕಿದ ಸಾತ್ವಿಕ ಜೀವನ ಎಲ್ಲವನ್ನೂ ದಾಸರು ಕೀರ್ತನೆಗಳ ಮೂಲಕವೇ ಹೊರಹೊಮ್ಮಿಸಿದರು. "ಯಾರಿಗೆ ಯಾರುಂಟು ಎರವಿನ ಸಂಸಾರ, ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ" ಇಂತಹ ಕೀರ್ತನೆಗಳನ್ನು ಅರ್ಥವರಿತು ಹಾಡಿದಾಗ, ಹಾಡುವವರ ಮತ್ತು ಕೇಳುವವರ ಮನಸ್ಸು ಒಂದು ಕ್ಷಣ ಕಾಲವಾದರೂ ಅಂತರ್ಮುಖವಾಗದೆ ಇರಲಾರದು.
ಒಟ್ಟಿನಲ್ಲಿ ದಾಸಸಾಹಿತ್ಯ ವಿಸ್ತಾರದಿಂದಲೂ ಗುಣದಿಂದಲೂ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟವಾದ ಸ್ಥಾನವನ್ನು ಪಡೆಯಲು ಅರ್ಹವಾಗಿದೆ. ದಾಸಸಾಹಿತ್ಯದಲ್ಲಿ ಬಂದಿರುವ ಅನೇಕ ಮಾತುಗಳು, "ಆಕಳು ಡೊಂಕಾದರೆ ಹಾಲು ಡೊಂಕೇ", "ಕತ್ತೆ ಬಲ್ಲುದೇ ಕಸ್ತೂರಿಯ ಪರಿಮಳವ", "ಕೈಮೀರಿ ಹೋದದ್ದೇ ಕೃಷ್ಣಾರ್ಪಣ", ಸುಭಾಷಿತಗಳಾಗಿ ಜನಜೀವನದಲ್ಲಿ ಸೇರಿಕೊಂಡುಹೋಗಿವೆ. ಹೀಗೆ ಮಾನವನ ಜೀವನದ ಮಹೋದ್ದೇಶವನ್ನು ಸರಳವಾದ ಸುಂದರವಾದ ಮತ್ತು ಸಂಗೀತಮಯವಾದ ಕೀರ್ತನೆಗಳನ್ನು ಹಾಡಿದ ದಾಸರು ಕನ್ನಡದ ಜನರ ಹೃದಯದಲ್ಲಿ ನಿರಂತರವಾಗಿ ನೆಲಸಿದ್ದಾರೆ.
(ಈ ಲೇಖನಗಳಿಗೆ ’ಕನ್ನಡ ಸಾಹಿತ್ಯದಲ್ಲಿ ಅನುಭಾವ’ ಎಂಬ ಶೀರ್ಷಿಕೆ ನೀಡಿದ್ದು ಅಷ್ಟು ಸಮಂಜಸವಾಗಿಲ್ಲವೇನೋ ಅನ್ನಿಸುತ್ತಿದೆ. ಎಕೆಂದರೆ ಕನ್ನಡದಲ್ಲಿನ ಅನುಭಾವ ಸಾಹಿತ್ಯ ಅತ್ಯಂತ ವಿಶಾಲವಾದದ್ದು. ದಾಸ ಸಾಹಿತ್ಯ ಮತ್ತು ಶರಣಸಾಹಿತ್ಯ ಎರಡು ಪ್ರಮುಖ ಘಟ್ಟಗಳಷ್ಟೆ. ಇವಲ್ಲದೇ ಹದಿನೈದನೇ ಶತಮಾನದಲ್ಲಿಯೇ ನಿಜಗುಣ ಶಿವಯೋಗಿಗಳು ಎಂಬ ಮಹಾ ಅನುಭಾವಿಯೊಬ್ಬರು ಆಗಿಹೊಗಿದ್ದಾರೆ. ಅವರಿಂದ ’ತತ್ವಸಾಹಿತ್ಯ’ ಎಂಬ ಹೊಸ ಪ್ರಾಕಾರ ಹುಟ್ಟಿಕೊಂಡಿತು. ತತ್ವ ಸಾಹಿತ್ಯದ ಬಗೆಗೆ ನನ್ನ ತಿಳುವಳಿಕೆ ಅತ್ಯಂತ ಅಲ್ಪ. ಶಿಶುನಾಳ ಷರೀಫರು ತೀರ ಇತ್ತಿಚೆಗೆ ಆಗಿಹೋದ ಅನುಭಾವಿಗಳು. ಶರೀಫರ ಗೀತೆಗಳೂ ಅನುಭಾವ ಸಾಹಿತ್ಯದಲ್ಲಿ ಅತ್ಯಂತ ಪ್ರಮುಖ ಸ್ಥಾನ ಪಡೆದಿವೆ. ಮತ್ತು ಬೇಂದ್ರೆ, ಡಿ.ವಿ.ಜಿ, ಪು.ತಿ.ನ ಅವರಂತಹ ನವೋದಯ ಕವಿಗಳ ಕಾವ್ಯದಲ್ಲಿ ಅನುಭಾವದ ಹೊಳಹನ್ನು ಹೇರಳವಾಗಿ ಕಾಣಬಹುದಾಗಿದೆ. ಇವರೆಲ್ಲರ ಕಾವ್ಯಗಳ ಬಗ್ಗೆ ಈ ಶೀರ್ಷಿಕೆಯಡಿ ನನ್ನಿಂದ ಎನನ್ನೂ ಬರೆಯಲು ಸಾಧ್ಯವಾಗಿಲ್ಲ. ಅಲ್ಲದೆ ದಾಸಸಾಹಿತ್ಯ ಹಾಗೂ ಶರಣ ಸಾಹಿತ್ಯದ ಕುರಿತಾಗಿಯೂ ಕೂಡ ಅತ್ಯಂತ ಸಂಕ್ಷೇಪವಾಗಿ ಬರೆದಿದ್ದೇನೆ. ಆದುದರಿಂದ ಈ ಎರಡು ಲೇಖನಗಳಿಗೆ ’ಕನ್ನಡ ಸಾಹಿತ್ಯದಲ್ಲಿ ಅನುಭಾವ’ ಎಂಬ ಶೀರ್ಷಿಕೆಯು ಅಷ್ಟು ಸರಿಯಾದುದ್ದಲ್ಲ. ಮತ್ತು ಈ ಲೇಖನಗಳು ಕೇವಲ ಶರಣ ಮತ್ತು ದಾಸ ಸಾಹಿತ್ಯಗಳತ್ತ ವಿಹಂಗಮ ನೋಟವಷ್ಟೇ.
ಮತ್ತೊಂದು ವಿಷಯವೇನೆಂದರೆ ಹಿಂದಿನ ಲೇಖನದಲ್ಲಿ ಕನ್ನಡದ ಜೈನಸಾಹಿತ್ಯದಲ್ಲಿ ಅನುಭಾವದ ಅಂಶಗಳು ಅಷ್ಟಾಗಿ ತೋರುವುದಿಲ್ಲ ಎಂಬ ಮಾತನ್ನು ಹೇಳಿದ್ದೆ. ಆದರೆ ನಿನ್ನೆ ಜೈನ ಸಾಹಿತ್ಯವನ್ನು ತಿಳಿದುಕೊಂಡ ಆತ್ಮೀಯರೊಬ್ಬರಲ್ಲಿ ಮಾತನಾಡುತ್ತ ಜೈನ ಸಾಹಿತ್ಯದಲ್ಲಿ ಕಂಡುಬರುವ ವೈರಾಗ್ಯದ ವರ್ಣನೆ, ತೀರ್ಥಂಕರರನ್ನು ಕುರಿತ ಪ್ರಾರ್ಥನೆಗಳು ಅನುಭಾವದ ಶ್ರೇಷ್ಠ ಅಭಿವ್ಯಕ್ತಿಗಳು ಎಂಬುದಾಗಿ ಅವರಿಂದ ತಿಳಿಯಿತು. ಜೈನ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡದೆ ಜೈನ ಸಾಹಿತ್ಯವು ಅನುಭಾವದ ಗುಣಗಳನ್ನು ಹೊಂದಿಲ್ಲ ಎಂಬ ಅಭಿಪ್ರಾಯವನ್ನು ಹೇಳಿದ್ದಕ್ಕಾಗಿ ಕ್ಷಮೆ ಕೇಳುತ್ತೇನೆ. ಓದುಗರಲ್ಲಿ ಯಾರಾದರೂ ಜೈನ ಸಾಹಿತ್ಯವನ್ನು ಅಭ್ಯಾಸ ಮಾಡಿದವರಿದ್ದರೆ, ದಯವಿಟ್ಟು ಅಲ್ಲಿ ಕಂಡುಬರುವ ಅನುಭಾವದ ಅಂಶಗಳ ಬಗ್ಗೆ ನಮ್ಮೆಲ್ಲರೊಂದಿಗೆ ಹಂಚಿಕೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ.)
Thursday, September 24, 2009
ಕನ್ನಡ ಸಾಹಿತ್ಯದಲ್ಲಿ ಅನುಭಾವ-೧
ಕನ್ನಡದ ಸಾಹಿತ್ಯದ ಇತಿಹಾಸವನ್ನು ಗಮನಿಸಿದಾಗ ಅನುಭಾವ ಸಾಹಿತ್ಯ ಕನ್ನಡದಲ್ಲಿ ಜೈನಸಾಹಿತ್ಯದೊಂದಿಗೆ ಆರಂಭವಾಯಿತು ಎನ್ನಬಹುದು. ಆದರೂ ಜೈನ ಸಾಹಿತ್ಯಕ್ಕೆ ರಾಜಾಶ್ರಯದೊರೆತ ಕಾರಣದಿಂದಾಗಿ ಅಲ್ಲಿ ಅನುಭಾವದ ಅಂಶ ಅಷ್ಟಾಗಿ ತೋರದೆ ಸಾಹಿತ್ಯಿಕ ಅಂಶಗಳೇ ಹೆಚ್ಚಾಗಿ ಕಾಣಬರುತ್ತವೆ ಎಂದು ನನಗನ್ನಿಸುತ್ತದೆ. ಏಕೆಂದರೆ ಸಾಹಿತ್ಯ ರಚನೆ ಮತ್ತು ಅನುಭಾವ ಸಾಹಿತ್ಯದ ಉದ್ದೇಶಗಳು ಬೇರೆ ಬೇರೆ. ಸಾಹಿತ್ಯವೆಂದರೆ, ಒಂದು ಸಾಮಾನ್ಯ ಅರ್ಥದಲ್ಲಿ, ಅದು ಭಾವನಿಷ್ಠವಾದ, ಮನೋಲ್ಲಾಸಗೊಳಿಸುವ ಮತ್ತು ಸ್ವಲ್ಪ ಮಟ್ಟಿಗೆ ನೀತಿ ಸಾರುವ ಬರವಣಿಗೆ. ಆದರೆ, ಅನುಭಾವ ಸಾಹಿತ್ಯದ ರಸ, ಕೇವಲ ಬುದ್ದಿ ಮತ್ತು ಮನಸ್ಸನ್ನು ಮಾತ್ರ ತೃಪ್ತಿ ಪಡಿಸುವುದಾಗಿ ಉಳಿಯುವುದಿಲ್ಲ. ಅದು ಹೃದಯವನ್ನು ಅರಳಿಸಿ ಸತ್ಯದ ಪ್ರತ್ಯಕ್ಷ ದರ್ಶನ ಪಡೆಯವ ಹಂಬಲವನ್ನೂ ಜಿಜ್ಜ್ನಾಸೆಯನ್ನೂ ತುಂಬಿಸುತ್ತದೆ. ಮತ್ತು ಅತೀ ಮುಖ್ಯವಾಗಿ ಅನುಭಾವ ಸಾಹಿತ್ಯ, ಅನುಭಾವಿಯ ಅನುಪಮ ಆನಂದದಿಂದ ಜನ್ಮ ಪಡೆದದ್ದು. ಮಾತು ಮನಗಳಿಗೆ ಮೀರಿದ್ದು. ಅದು, ನಾರದರು ತಮ್ಮ ಭಕ್ತಿಸೂತ್ರದಲ್ಲಿ ಹೇಳುವಂತೆ "ಮೂಕಂ ಸ್ವಾದನವತ್", ಮೂಕನು ರುಚಿ ನೋಡಿದಂತೆ (ಅಂದರೆ ರುಚಿಯ ಅನುಭವವನ್ನು ಅವನಿಗೆ ತಿಳಿಸಲು ಶಕ್ಯವಿಲ್ಲ). ಆದರೂ ಅನುಭಾವಿಗೆ, ತಾನು ನಡೆದ ಹಾದಿ, ತಾನು ಕಂಡ ಸತ್ಯ ಮತ್ತು ಪಡೆದ ಆ ಆನಂದವನ್ನು ಲೋಕಕಲ್ಯಾಣಕ್ಕಾಗಿ ತಿಳಿಸಲು ಅನಿವಾರ್ಯ ವಾಹಕವಾಗಿ ಸಾಹಿತ್ಯ ಅವತರಿಸುತ್ತದೆ. ಹೊರತೂ ಸಾಹಿತ್ಯರಚನೆಯೇ ಮುಖ್ಯ ಉದ್ದೇಶವಾಗಿರುವುದಿಲ್ಲ. ಆದ್ದರಿಂದ ಕನ್ನಡ ಸಾಹಿತ್ಯದಲ್ಲಿ, ಮುಖ್ಯವಾಗಿ ಹನ್ನೆರಡನೇ ಶತಮಾನದಲ್ಲಿ ಸೃಷ್ಟಿಯಾದ ಶರಣ ಸಾಹಿತ್ಯ ಮತ್ತು ಹದಿನೈದನೇ ಶತಮಾನದಲ್ಲಿ ದಾಸರು ಹಾಡಿದ ದಾಸಸಾಹಿತ್ಯ ಇವೆರಡೂ ಅನುಭಾವ ಸಾಹಿತ್ಯದಲ್ಲಿ ಪ್ರಮುಖವಾದ ಘಟ್ಟಗಳಾಗಿವೆ.
ಶರಣ ಸಾಹಿತ್ಯ
ದರ್ಶನ, ಜೀವನದ ಗುರಿ ಮುಂತಾದ ಮಾತುಗಳಿಂದ ಸಾಹಿತ್ಯ ತನ್ನ ಸ್ವರೂಪವನ್ನು ಕಳೆದುಕೊಳ್ಳುತ್ತದೆ ಎಂಬ ಅಭಿಪ್ರಾಯ ಸಹಜ. ಸಾಹಿತ್ಯದ ಮುಖ್ಯ ಲಕ್ಷಣ ಭಾವ ಮತ್ತು ಆನಂದ. ಸೌಂದರ್ಯವನ್ನು ಕಂಡಾಗ ಸಾಹಿತಿಯ ಮನ ಭಾವದಿಂದ ತುಂಬಿ ಅದನ್ನು ತಾನೇ ಆಗಿ ಅನುಭವಿಸಿ, ಆ ರಸಾನುಭವದ ಆನಂದವನ್ನು ಕಾವ್ಯದ ಮೂಲಕ ಅಭಿವ್ಯಕ್ತಗೊಳಿಸುತ್ತಾನೆ. ’ಅದು ತಾನೇ ಆಗುವ’ ತಲ್ಲೀನತೆಯೇ ಸಾಹಿತಿ ಮತ್ತು ಅನುಭಾವಿಯಲ್ಲಿರುವ ಸಮಾನ ಧರ್ಮ. ಆದರೆ ಆ ’ಅದು’ ಯಾವುದು ಎಂಬುದರ ಮೇಲೆ ’ರಸಾನುಭವ’ ಅಥವಾ ’ಅನುಭಾವ’ ಸಿದ್ದವಾಗುತ್ತದೆ. ಆ ಬಾಹ್ಯ ಸೌಂದರ್ಯದ ಹಿಂದಿರುವ ಚಿರಂತನ ಸೌಂದರ್ಯವನ್ನು ಅನುಭಾವಿ ಕಾಣುತ್ತಾನೆ. ಮತ್ತು ಆನಂದ ಶಬ್ದವನ್ನು ವಿಶಾಲ ಅರ್ಥದಲ್ಲಿ ಪರಿಗಣಿಸಿದಾಗ ಅದು ಕೇವಲ ಮನಸನ್ನು ಉದ್ದೀಪನಗೊಳಿಸುವ ಭಾವ ಮಾತ್ರವಲ್ಲದೇ ಹೃದಯವನ್ನೂ ಧನ್ಯಗೊಳಿಸುವ ಭಾವ. ಅಂತಹ ಶಕ್ತಿಯನ್ನು ಒಳಗೊಂಡಾಗಲೇ ಸಾಹಿತ್ಯ ಸಾರ್ಥಕ. ಆ ಸಾರ್ಥಕತೆಯನ್ನೇ ಶರಣಸಾಹಿತ್ಯ ಪಡೆದಿದೆ.
ಶರಣಸಾಹಿತ್ಯ ಹುಟ್ಟಿದ್ದು ಉತ್ತರ ಕರ್ನಾಟಕದ ಭಾಗದಲ್ಲಿ. ಆದ್ದರಿಂದಲೇ ಶರಣರ ವಚನಗಳಲ್ಲಿ ಉತ್ತರ ಕರ್ನಾಟಕದ ಭಾಷೆಯ ಸೊಗಡೂ ಸೇರಿಹೊಗಿದೆ. ಬಸವಣ್ಣ, ಅಲ್ಲಮ ಪ್ರಭು, ಹಾವಿನಾಳ ಕಲ್ಲಯ್ಯ, ಅಕ್ಕಮಹಾದೇವಿ, ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ ಹೀಗೆ ನೂರಾರು ಶರಣರು ವಚನಗಳ ಮೂಲಕ ಸಾಮಾನ್ಯ ಜನತೆಯಲ್ಲೂ ಆಧ್ಯಾತ್ಮವನ್ನು ಬಿತ್ತಿದರು. ಬಸವಣ್ಣನವರ ಅನುಭವ ಮಂಟಪ ಶರಣರಿಗೆ ನೆಲೆಯಾಗಿ ಶರಣ ಸಾಹಿತ್ಯಕ್ಕೆ ಕೇಂದ್ರವಾಯಿತು.
ಶರಣರು ತೆರೆದ ಕಂಗಳಿಂದ ಜೀವನವನ್ನು ನೋಡಿದವರು. ಅವರ ಅಭಿವ್ಯಕ್ತಿಯ ಪ್ರಬಲವಾದ ಸಂವಹನ ವಚನಗಳ ಮೂಲಕವಾಗಿ ನಡೆದದ್ದು. ಮತ್ತು ಆ ಸಂವಹನವು ಯಶಸ್ವಿಯಾದದ್ದು ಅವರ ವಚನಗಳ ಮಾರ್ಮಿಕತೆಯಿಂದಾಗಿ. ಸಾಹಿತಿ ವಸ್ತುವಿನ ರೂಪವನ್ನು ವರ್ಣಿಸಿದರೆ, ಅನುಭಾವಿ ವಸ್ತುವಿನ ರಹಸ್ಯ ಸ್ವರೂಪವನ್ನು ಕುರಿತು ಯೋಚಿಸುತ್ತಾನೆ. ಶರಣರಲ್ಲಿ ಈ ಶಕ್ತಿಯನ್ನು ಕಾಣುತ್ತೇವೆ. ಲೋಕದ ಘಟನೆಗಳಿಂದ ಅವರ ಮನಸ್ಸು ಕವಿಯಂತೆ ಮಿಡಿಯುತ್ತದೆ. ಆದರೆ ಅಷ್ಟರಲ್ಲೇ ಕೊನೆಗೊಳ್ಳದೇ ಅವರ ಮುಂದಿನ ಸಾಧನೆಗೂ ಪ್ರೆರಣೆಯಾಗಿದೆ. ಆದ್ದರಿಂದಲೇ ಮೋಕ್ಷ, ಸೃಷ್ಟಿ ಮುಂತಾದ ವಿವೇಚನೆಯ ಭಾರವನ್ನು ಶರಣರ ವಚನಗಳು ಸುಲಭವಾಗಿ ಹೊರಬಲ್ಲವು ಮತ್ತು ಕಾವ್ಯಸೌಂದರ್ಯವನ್ನೂ ಬೀರಬಲ್ಲವು.
ಅನಿರ್ವಚನೀಯವಾದ ತಮ್ಮ ಅನುಭವವನ್ನು ಮಾತಿನಲ್ಲಿ ಹಿಡಿದಿಡುವ ಶರಣರ ಸಾಹಸ ಕನ್ನಡ ಭಾಷೆಗೇ ಆಶ್ಚರ್ಯಕರವಾದ ಶಕ್ತಿಯನ್ನು ತಂದು ಕೊಟ್ಟಿದೆ. ಉದಾಹರಣೆಗೆ ಅಲ್ಲಮ ಪ್ರಭುವಿನ ಈ ವಚನವನ್ನೇ ನೋಡಿ.
"ಆದಿ ಅನಾದಿಯಿಲ್ಲದಂದು, ಹಮ್ಮುಬಿಮ್ಮುಗಳಿಲ್ಲದಂದು,
ಸುರಾಳ ನಿರಾಳವಿಲ್ಲದಂದು, ಶೂನ್ಯ ನಿಶ್ಯೂನ್ಯವಿಲ್ಲದಂದು
ಸಚಾರಚರವೆಲ್ಲ ರಚನೆಗೆ ಬಾರದಂದು,
ಗುಹೇಶ್ವರನೊಬ್ಬನೇ ಇದ್ದೆಯಲ್ಲ, ಇಲ್ಲದಂತೆ."
ಎಂದು ಅಲ್ಲಮಪ್ರಭುವು ಅವ್ಯಕ್ತವನ್ನು ಅತ್ಯಂತ ಸುಂದರವಾಗಿ ವರ್ಣಿಸುತ್ತಾನೆ.
"ಸಮುದ್ರದೊಳಗೆ ನೆರೆತೊರೆಗಳು ನೆಗಳ್ದವೆಂದರೆ
ಸಮುದ್ರದಿಂದನ್ಯಎಪ್ಪವೇ?
ನಿರ್ವಿಕಾರ, ನಿತ್ಯ, ನಿರಂಜನ, ನಿರ್ಗುಣ, ಪರಿಪೂರ್ಣ, ನಿರ್ವಿಕಲ್ಪ
ಪರಬ್ರಹ್ಮ ಶಿವನಿಂದನ್ಯವೆನ್ನಬಹುದೇ?"
ಸಮುದ್ರದಿಂದ ತೆರೆಗಳು ಎದ್ದರೂ ಸಮುದ್ರದಿಂದ ಭಿನ್ನ, ಅನ್ಯ ಎನ್ನಬಹುದೇ? ಹೀಗೆಯೇ ಸೃಷ್ಟಿಕರ್ತ ಮತ್ತು ಸೃಷ್ಟಿಯ ಸಂಬಂಧ ಎನ್ನುತ್ತಾನೆ ಅಲ್ಲಮ.
"ಗಗನವೇ ಹುಂಡಿಗೆ , ಆಕಾಶವೇ ಅಗ್ಗವಣಿ,
ಚಂದ್ರ ಸೂರ್ಯರಿಬ್ಬರೂ ಪುಷ್ಪ,
ರುದ್ರನೋಗರ, ಸುಯಿಧಾನ ನೋಡಾ,
ಗುಹೇಶ್ವರಲಿಂಗಕ್ಕೆ ಪೂಜೆನೋಡಾ!"
ಗಗನವೇ ಹುಂಡಿ, ಆಕಾಶವೇ ಅರ್ಘ್ಯ, ಸೂರ್ಯಚಂದ್ರರು ಪುಷ್ಪದಂತೆ, ಈ ಸರ್ವ ಸೃಷ್ಟಿಯೇ ಶಿವಲಿಂಗಕ್ಕೆ ಪೂಜೆಯಂತೆ ತೋರುತ್ತದೆ ಅಲ್ಲಮನಿಗೆ. ಪ್ರಭುದೇವನ ಇಂತಹ ವಚನಗಳಲ್ಲಿನ ಭ್ಹವ್ಯವಾದ ಕಲ್ಪನೆ, ಅನುಭವ, ಎಲ್ಲವೂ ಕವೀತ್ವದ ಎಲ್ಲ ಸ್ತರಗಳನ್ನೂ ಮೀರಿಸುತ್ತವೆ. ಪ್ರಭುವೇ ಹೇಳುವಂತೆ ಮಾತೇ ಜ್ಯೋತಿರ್ಲಿಂಗವಾದಂತೆ ತೋರುತ್ತದೆ.
ಅದೃಶ್ಟವನ್ನೂ ದೃಶ್ಟವಾಗಿಸುವ ಕಾವ್ಯ ಶರಣರದ್ದು. ಸರ್ವ ವಸ್ತುಗಳಲ್ಲೂ ವ್ಯಾಪಿಸಿರುವ ಶಿವನನ್ನು ಕುರಿತು ಬಸವಣ್ಣನವರು ಹೀಗೆ ಹೇಳಿದ್ದಾರೆ.
"ಮರೀಚಿಕೆಯೊಳಗಣ ಬಿಸಿಲಿನಂತೆ ಇದ್ದಿತ್ತ,
ಕ್ಷೀರದೊಳಗಣ ತುಪ್ಪದಂತೆ ಇದ್ದಿತ್ತ,...
ನುಡಿಯೊಳಗಣ ಅರ್ಥದಂತೆ ಇದ್ದಿತ್ತ..."
ಬಸವೇಶ್ವರರ ವಚನಗಳಲ್ಲಿಯಂತೂ ಭಕ್ತಿಯ ಮಿಡಿತ ಎಲ್ಲರ ಚೈತನ್ಯಗಳಲ್ಲಿ ದಿವ್ಯತೆ ತುಂಬುವಂತೆ ಮಾಡುತ್ತದೆ. ಅವರ "ಎನ್ನ ಕಾಲೇ ಕಂಬ, ದೇಹವೇ ದೇಗುಲ, ಸಿರ ಹೊನ್ನ ಕಳಶವಯ್ಯ.. ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ.." ಎಂಬ ಮಾತುಗಳಲ್ಲಿ ಅವರ ಸರ್ವಾರ್ಪಣೆ, ಅಹಂಕಾರ ನಿರಸನ ಇವುಗಳನ್ನು ಕಾಣಬಹುದು. ಅನುಭಾವದ ಕುರಿತ ಬಸವಣ್ಣನವರ ನಿಲುವನ್ನು ಈ ವಚನದ ಕೆಲವು ಸಾಲುಗಳಲ್ಲಿ ನೋಡಬಹುದು.
"ಪೂಜೆಯುಳ್ಳನ್ನಬರ ಲಿಂಗವ ಹಾಡಿದೆ,
ಮಾಟವುಳ್ಳನ್ನಬರ ಜಂಗಮವ ಹಾಡಿದೆ,
ಜಿಹ್ವೆಯುಳ್ಳನ್ನಬರ ಪ್ರಸಾದವ ಹಾಡಿದೆ,
ಈ ತ್ರಿವಿಧ ನಾಸ್ತಿಯಾದ ಬಳಿಕ
ಎನ್ನ ನಾ ಹಾಡಿಕೊಂಡೆ ಕಾಣಾ ಕೂಡಲ ಸಂಗಮದೇವಾ."
ಮಾತಿನ ಅರ್ಥಕ್ಕೆ ಮೀರಿದ ಪರಿಶುದ್ದ ಭಾವನೆಯನ್ನ ಈ ವಚನದಲ್ಲಿ ಕಾಣಬಹುದು.
ತಮ್ಮ ಸಾಧನೆಯಲ್ಲಿ ಸಿದ್ದಿಯನ್ನು ಪಡೆದ ಶರಣರೆಲ್ಲಾ ಈ ಎತ್ತರಕ್ಕೇ ಏರಿದವರು. ಅನುಭಾವವನ್ನು ಹೇಳಿದ ಅವರ ಮಾತುಗಳಲ್ಲಿ ಒಂದೇ ಸತ್ಯವನ್ನೇ ಕಾಣಬಹುದು. ’ಸಾವ ಕೆಡುವ ಗಂಡನರೊಯ್ದು ಒಲೆಯೊಳಗೆ ಇಕ್ಕಿ, ಸಾವಿಲ್ಲದ ಕೇಡಿಲ್ಲದ ಚೆಲುವಂಗೊಲಿದೆನಯ್ಯಾ’ ಎಂದು ಹಾಡಿ, "ಚಿಲಿ ಮಿಲಿ ಎಂದೋದುವ ಗಿಳಿಗಳಿರಾ ನೀವು ಕಾಣೀರೇ’ ಎಂದು ತನ್ನ ಪತಿ ಮಲ್ಲಿಕಾರ್ಜುನನಿಗೆ ಪರಿತಪಿಸುವ ಅಕ್ಕಮಹಾದೇವಿಯೂ, ತನ್ನ ಸತಿಪತಿ ಭಾವದ ಸಾಧನೆಯ ಕೊನೆಯಲ್ಲಿ ತಾನೇ ಪತಿಯಾಗಿ ಪರಿಣಮಿಸಿ ಹೀಗೆ ಹಾಡುತ್ತಾಳೆ.
"ತನು ನಿಮ್ಮ ರೂಪಾದ ಬಳಿಕ ನಾನಾರಿಗೆ ಮಾಡುವೆ?
ಮನ ನಿಮ್ಮ ರೂಪಾದ ಬಳಿಕ ನಾನಾರಿಗೆ ನೆನೆವೆ?
ಪ್ರಾಣ ನಿಮ್ಮ ರೂಪಾದ ಬಳಿಕ ನಾನಾರನಾರಾಧಿಸುವೆ?
ಅರಿವು ನಿಮ್ಮಲ್ಲಿ ಸ್ವಯವಾದ ಬಳಿಕ ನಾನಾರನರಿವೆ?
ಚೆನ್ನಮಲ್ಲಿಕಾರ್ಜುನ ನಿಮ್ಮಲ್ಲಿ ನೀವಾಗಿ ನಿಮ್ಮಿಂದ ನಿಮ್ಮ ಮರೆದೆನಯ್ಯಾ."
ವಚನ ಸಾಹಿತ್ಯದ ಸೌಂದರ್ಯವು ಉಳಿದ ಎಲ್ಲ ಸಾಹಿತ್ಯಗಳಿಗಿಂತ ಮಿಗಿಲಾದದ್ದು. ಅಲ್ಲಿಯವರೆಗೂ ಕನ್ನಡದಲ್ಲಿ ಬಳಕೆಯಲ್ಲಿದ್ದ ಚಂಪೂ ಶೈಲಿಯನ್ನು ಸಡಿಲಗೊಳಿಸಿ ಸರಳವಾದ ಮತ್ತು ಆಕರ್ಷಕವಾದ ಪರಿಣಾಮಕಾರಿಯಾದ ಭಾಷೆಯ ರೂಪವೊಂದನ್ನು ಕನ್ನಡ ಸಾಹಿತ್ಯದಲ್ಲಿ ಶರಣರು ತಂದರು. ತಮ್ಮ ಭಾವನೆಗಳನ್ನು ಮನಮುಟ್ಟುವಂತೆ ಹೇಳುವುದಕ್ಕಾಗಿ ಅವರು ಬಳಸಿಕೊಂಡ ಅಲಂಕಾರಗಳು, ಸಾದೃಶ್ಯಗಳೂ, ವಚನಗಳಿಗೆ ಅನೇಕ ಬಾರಿ ಭಾವಗೀತೆಗಳ ಸ್ವರೂಪವನ್ನು ತಂದು ಕೊಟ್ಟಿವೆ.
ಉದಾಹರಣೆಗೆ,
"ಚಕೋರಂಗೆ ಚಂದ್ರಮನ ಚಿಂತೆ,
ಅಂಬುಜಕೆ ಭಾನುವಿನ ಚಿಂತೆ,
ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ,
ಎನಗೆ ನಮ್ಮ ಕೂಡಲ ಸಂಗಮದೇವರ ನೆನೆವುದೇ ಚಿಂತೆ."
ಎಂಬ ವಚನಗಳಲ್ಲಿನ ಪ್ರಾಸಗಳ ಸೊಬಗು,
"ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ,
ಸುಳಿದು ಬೀಸುವ ವಾಯು ನಿಮ್ಮ ದಾನ,
ನಿಮ್ಮ ದಾನವನುಂಡು ಅನ್ಯರ ಹೊಗಳುವ
ಕುನ್ನಿಗಳನೇನೆಂಬೆ ರಾಮನಾಥ"
ಎನ್ನುವ ವಚನಗಳಲ್ಲಿರುವ ಶ್ಲೇಷೆಯನ್ನಾಗಲಿ ಗಮನಿಸಿದಾಗ ವಚನಕಾರರು ತಮ್ಮ ಭಾಷೆಯಲ್ಲಿ ಸಾಧಿಸಿರುಸುವ ಸಹಜತೆ ಕಾಣುತ್ತದೆ. ಅಲ್ಲದೆ ಅವರು ನೀಡುವ ಉಪಮಾನಗಳು, ರೂಪಕಗಳು ಓದುಗರ ಅನುಭವದ ಪರಿಧಿಯನ್ನೂ ಹೆಚ್ಚಿಸುತ್ತವೆ.
ಶರಣರ ಸ್ವತಂತ್ರ ಮನೋಭಾವ, ಆಚಾರ-ವಿಚಾರಗಳ ಸಮನ್ವಯ ಎಲ್ಲವೂ ಇಂದಿನ ವಿಚಾರವಂತ ಯುಗಕ್ಕೆ ಹೆಚ್ಚಾಗಿ ಹಿಡಿಸುತ್ತವೆ. ಸುಮಾರು ಒಂಭೈನೂರು ವರುಷಗಳ ಹಿಂದೆಯೇ ಶರಣರು ಕಾಯಕದ ಮಹತ್ವವನ್ನೂ ಆದರ್ಶವನ್ನೂ ಸಾರಿದ್ದಾರೆ. ಅವು ಇಂದಿಗೂ ಅಷ್ಟೇ ಪ್ರಸ್ತುತ. ಶರಣರು ತಾವು ಕಂಡ ಉಚ್ಚ ಆದರ್ಶಗಳು, ಎಲ್ಲರನ್ನೂ ಸಮಾನವಾಗಿ ಕಾಣುವ ಗುಣ, ಹೀಗೆ ಎಲ್ಲವನ್ನೂ ತಮ್ಮ ವಚನಗಳ ಮೂಲಕ ಸರಳವಾದ ಭಾಷೆಯಲ್ಲಿ ವ್ಯಕ್ತವಡಿಸಿದ್ದಾರೆ. ಅಲ್ಲದೇ ಕನ್ನಡ ಭಾಷೆಯನ್ನೂ ಶಕ್ತಿಯುತವನ್ನಾಗಿ ಮಾಡಿದ್ದಾರೆ. ಆದ್ದರಿಂದಲೇ ಶರಣ ಸಾಹಿತ್ಯ ವಿಶ್ವ ಸಾಹಿತ್ಯದಲ್ಲೇ ಶ್ರೇಷ್ಠ ಅನುಭಾವ ಸಾಹಿತ್ಯವಾಗಿ ಪರಿಣಮಿಸಿದೆ. ಮತ್ತು ಕನ್ನಡ ಸಾಹಿತ್ಯ ವಾಹಿನಿಯಲ್ಲಿ ಒಂದು ಉಜ್ವಲ ಘಟ್ಟವಾಗಿ ಇಂದಿಗೂ ಸಾಮಾನ್ಯ ಜನತೆಯಲ್ಲಿಯೂ ಆನುಭಾವದ ಆನಂದವನ್ನು ನೀಡಿ, ಆಧ್ಯಾತ್ಮದ ಜಾಗೃತಿಯನ್ನು ಮೂಡಿಸುವಲ್ಲಿ ಸಮರ್ಥವಾಗಿದೆ.
(ಅನುಭಾವ ಸಾಹಿತ್ಯದ ಇನ್ನೊಂದು ಪ್ರಮುಖ ಘಟ್ಟ ’ದಾಸ ಸಾಹಿತ್ಯ’. ಆ ಬಗ್ಗೆ ನನ್ನ ಮುಂದಿನ ಪೋಸ್ಟನಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.)
Wednesday, September 2, 2009
ಸಾವಿತ್ರಿ
(’ಸಾವಿತ್ರಿ’, ಶ್ರೀ ಅರಬಿಂದೋ ಅವರ ಮಹಾಕಾವ್ಯ. ಶ್ರೀ ಅರಬಿಂದೋ ಅವರ ಎಲ್ಲ ಮಹತ್ವದ ಕ್ರತಿಗಳೂ ಇಂಗ್ಲಿಷ್ ಭಾಷೆಯಲ್ಲಿಯೇ ರಚಿತವಾದವುಗಳಾಗಿದ್ದು ಸಾವಿತ್ರಿಯೂ ಸಹ ಅದೇ ಭಾಷೆಯಲ್ಲಿದೆ. ಅರಬಿಂದೋ ಯೋಗಿಗಳಂತೂ ಸತ್ಯ, ಆದರೆ ಮುಖ್ಯವಾಗಿ ಅವರು ಕವಿಗಳೂ ಹೌದು. ಬಾಲ್ಯದಿಂದಲೇ ಅವರ ಕಾವ್ಯ ಸೃಷ್ಟಿ ಮೂಡತೊಡಗಿತ್ತು. ’Early poems, Last poems' ಎಂಬ ಅವರ ಕವನ ಸಂಕಲನದ ಜೊತೆಗೆ ಗೀತ ನಾಟಕ, ಕಥನಕಾವ್ಯ ಮತ್ತು ಬಂಗಾಲಿಯಲ್ಲಿ ಅನೇಕ ಭಾವಗೀತಗಳು ಪ್ರಕಟವಾಗಿವೆ. ’ಸಾವಿತ್ರಿ’ ಅವರ ಕೃತಿಗಳಲ್ಲಿ ಮಹೋನ್ನತವಾದುದು. ’ಸಾವಿತ್ರಿ’ ಕೃತಿಯು ಅವರ ಜೀವನದ ಉತ್ತರಾರ್ಧದ ೨೫ ವರುಷಗಳ ಅವಧಿಯಲ್ಲಿ ರೂಪುಗೊಂಡಿತು. ಸುಮಾರು ೨೪ ಸಾವಿರ ದೀರ್ಘ್ ಪಾದಗಳನ್ನು ಒಳಗೊಂಡ ಮಹಾಕೃತಿ ’ಸಾವಿತ್ರಿ’. ಈ ಕಥನ ಕಾವ್ಯದಲ್ಲಿ ಬರುವ ’ಮರಣ’ ವನ್ನು ಕುರಿತ ಭಾಗ, ಶ್ರೀ ಅರಬಿಂದೋ ಅವರು ಕೊನೆಯುಸಿರೆಳೆಯುವ ಸ್ವಲ್ಪ ಪೂರ್ವದಲ್ಲಿ ರೂಪುಗೊಂಡಿತು. ತಾವು ಪಡೆದ ಸಾಕ್ಷಾತ್ಕಾರದ ಘಟನೆಯ ನಂತರದ ಅವಧಿಯಲ್ಲಿ ’ಸಾವಿತ್ರಿ’ ಕಾವ್ಯ ರಚನೆಗೊಂಡಿತೆಂದೂ ಹಾಗೂ ಅವರು ಹೊಂದಿದ ಪರಮಸತ್ಯದ ಸಂಪರ್ಕದಿಂದ ಮೂಡಿಬಂದಿತೆಂಬುದಾಗಿ ಅರಬಿಂದೋ ಅವರೇ ಕಾವ್ಯದ ಆರಂಭದಲ್ಲಿ ಹೇಳುತ್ತಾರೆ. ಅನುಭಾವ ಸಾಹಿತ್ಯ ಪ್ರಾಕಾರಗಳಲ್ಲಿ ’ಸಾವಿತ್ರಿ’ ಕೃತಿಯನ್ನು ಕಾವ್ಯರತ್ನವಾಗಿ ಪರಿಗಣಿಸಲಾಗುತ್ತದೆ. ಅರಬಿಂದೋ ಅವರೇ ತಮ್ಮ ’ಸಾವಿತ್ರಿ’ ಕಾವ್ಯದ ಬಗ್ಗೆ ಹೀಗೆನ್ನುತ್ತಾರೆ: " Savitri is an Experiment in Mystic Poetry, Spiritual poetry cast into a symbolic figure." )
’ಸಾವಿತ್ರಿ’ ಕಥನ ಕಾವ್ಯದ ವಸ್ತು, ಮಹಾಭಾರತದ ಅರಣ್ಯಪರ್ವದಲ್ಲಿ ಹೇಳಲಾದ ’ಸಾವಿತ್ರಿ-ಸತ್ಯವಾನರ' ಉಪಾಖ್ಯಾನವನ್ನು ಆಧರಿಸಿದೆ. ಅರಣ್ಯ ಪರ್ವದಲ್ಲಿ, ವನವಾಸವನ್ನು ಅನುಭವಿಸಿತ್ತಿರುವ ಧರ್ಮರಾಜನ ದುಃಖವನ್ನು ಹಗುರಗೊಳಿಸಲು ಮಾರ್ಕಾಂಡೇಯ ಮುನಿಗಳು ಪರಮ ಪತಿವ್ರತೆಯಾದ ಸಾವಿತ್ರಿಯ ಕಥೆಯನ್ನು ಹೇಳುತ್ತಾರೆ. ಮಾದ್ರದೇಶದ ಅರಸುವಾದ ಅಶ್ವಪತಿ ಹದಿನೆಂಟು ವರ್ಷಗಳ ಕಠೋರ ವ್ರತವನ್ನು ಆಚರಿಸಿ, ಸಾವಿತ್ರಿ ದೇವಿಯ ಪ್ರೀತ್ಯರ್ಥವಾಗಿ ಒಂದು ಲಕ್ಷ್ಯ ಯಜ್ಞಗಳನ್ನು ಮಾಡಿ ತೇಜಸ್ವಿನಿಯಾದ ಕನ್ಯೆಯೊಬ್ಬಳನ್ನು ಪುತ್ರಿಯಾಗಿ ಪಡೆಯುತ್ತಾನೆ. ಸಾವಿತ್ರಿ ದೇವಿಯ ವರಪ್ರಸಾದದ ಸಂಕೇತವೆಂದು ಪುತ್ರಿಗೆ ’ಸಾವಿತ್ರಿ’ ಎಂದೇ ನಾಮಕರಣವಾಗುತ್ತದೆ. ಸಾವಿತ್ರಿ ಅತ್ಯಂತ ಸುಂದರಿಯೂ, ದಿವ್ಯ ತೇಜಸ್ವಿನಿಯಾಗಿ ಬೆಳೆದು ನಿಲ್ಲಲಾಗಿ ಅವಳನ್ನು ವರಿಸಲು ತರುಣರೆಲ್ಲ ಹಿಂಜರಿಯುತ್ತಾರೆ. ಇದರಿಂದ ಚಿಂತಿತನಾದ ಅಶ್ವಪತಿಯು ಮಗಳಿಗೆ ’ನಿನ್ನ ಪತಿಯನ್ನು ನೀನೇ ಶೋಧಿಸು’ ಎಂಬುದಾಗಿ ಹೇಳಿ ದೇಶಸಂಚಾರದ ಸಿದ್ಧತೆ ಮಾಡಿದನು. ಆಕೆ ಎರಡು ವರ್ಷಗಳ ಕಾಲ ದೇಶವನ್ನೆಲ್ಲ ಸಂಚರಿಸಿ ಮರಳಿ ಬಂದು, ಸಾಲ್ವದೇಶದ ಅರಸು ಕುವರನಾದ ಸತ್ಯವಾನನನ್ನು ವರಿಸುವುದಾಗಿ ಹೇಳುತ್ತಾಳೆ. ಸತ್ಯವಾನನು, ರಾಜ್ಯವನ್ನು ಕಳೆದುಕೊಂಡ ಮತ್ತು ಅಂಧನಾದ ತನ್ನ ತಂದೆಯೊಂದಿಗೆ ತಪೋವನದಲ್ಲಿ ವಾಸಿಸುತ್ತಿರುತ್ತಾನೆ. ಆಗ ಅಲ್ಲಿಗೆ ಬರುವ ನಾರದರು ಸತ್ಯವಾನನು ತೇಜಸ್ವಿ, ಶೂರ, ವಿನಯಶೀಲ ಹಾಗು ಶಾಂತನು. ಆದರೂ ಸತ್ಯವಾನನು ಅಲ್ಪಾಯುಶಿಯಾದ್ದರಿಂದ ಬೇರೊಬ್ಬ ವರನನ್ನು ವರಿಸುವಂತೆ ಸಾವಿತ್ರಿಯಲ್ಲಿ ಆಗ್ರಹಿಸುತ್ತಾರೆ. ಆದರೆ ಸಾವಿತ್ರಿಯು ಒಪ್ಪದೆ ಸತ್ಯವಾನನ್ನೇ ವರಿಸಿ ಅವನೊಂದಿಗೆ ಸಂತೋಶದಿಂದ ಜೀವನ ನಡೆಸುತ್ತಿರಲಾಗಿ ಸತ್ಯವಾನನು ಅಕಾಲ ಮರಣವನ್ನಪ್ಪುತ್ತಾನೆ. ಆದರೆ ಸಾವಿತ್ರಿಯು ತನ್ನ ಪತಿಯ ಜೀವವನ್ನು ಸೆಳೆದ ಯಮಧರ್ಮನನ್ನು, ಪತಿಯನ್ನು ಹಿಂದುರಿಗಿಸೆಂದು ಹಿಂಬಾಲಿಸುತ್ತಾಳೆ. ಅವಳ ಮನೋಧೈರ್ಯ ಮತ್ತು ವಾಕ್ಚಾತುರ್ಯಗಳನ್ನು ಮೆಚ್ಚಿದ ಧರ್ಮನು ಪತಿಯ ಜೀವವನ್ನೊಂದನ್ನು ಬಿಟ್ಟು ಬೇಕಾದ ಯಾವುದಾದರೂ ನಾಲ್ಕು ವರಗಳನ್ನು ಕೇಳು ಎನ್ನಲಾಗಿ ಸಾವಿತ್ರಿಯು ತನ್ನ ಮಾವನಿಗೆ ಕಣ್ಣು, ಮತ್ತು ರಾಜ್ಯವನ್ನು ಹಾಗೂ ತನ್ನ ತಂದೆಗೆ ಪುತ್ರಶತ ಭಾಗ್ಯವನ್ನೂ ಬೇಡುತ್ತಾಳೆ. ಹಾಗೂ ಕೊನೆಯದಾಗಿ ತನಗೂ ಸತ್ಯವಾನನಿಗೂ ಪುತ್ರಶತಲಾಭವಾಗಲೆಂದು ಕೇಳಿಕೊಳ್ಳುತ್ತಾಳೆ. ಎಲ್ಲವೂ ಸಿದ್ದಿಸಲೆಂದು ಆಶಿರ್ವದಿಸಿದ ಯಮಧರ್ಮನು ಇನ್ನು ಹೊರಡೆನ್ನುತ್ತಾನೆ. ಅದಕ್ಕೆ ಸಾವಿತ್ರಿಯು ಸತ್ಯವಾನನಿಲ್ಲದೇ ನಾಲ್ಕನೇ ವರದ ಸಿದ್ದಿಯು ಹೇಗೆ ಸಾಧ್ಯವೆನ್ನಲಾಗಿ ಅವಳ ಭಕ್ತಿಯನ್ನು ಮೆಚ್ಚಿದ ಧರ್ಮನು ಸತ್ಯವಾನನ್ನು ತನ್ನ ಪಾಶದಿಂದ ಮುಕ್ತಗೊಳಿಸಿ ಆಶೀರ್ವದಿಸಿ ಕಳಿಸುತ್ತಾನೆ. ಇದು ಮೂಲ ಮಹಾಭಾರತದಲ್ಲಿನ ಕಥೆ.
ಕೆಲವೇ ಸಾಲುಗಳಲ್ಲಿ ವ್ಯಾಸರು ಉಲ್ಲೇಖಿಸಿದ ಈ ಸುಂದರ ಕಥೆಯನ್ನು ಶ್ರೀ ಅರಬಿಂದರು ಹನ್ನೆರಡು ಅಧ್ಯಾಯಗಳಲ್ಲಿ ಹೇಳುತ್ತಾರೆ. ಮೊದಲ ಅಧ್ಯಾಯ ’The Book of Beginnings'. ಅದರ ಪ್ರಥಮ ಸರ್ಗದಲ್ಲಿ ಸಾಂಕೇತಿಕ ಅರುಣೋದಯದ ಚಿತ್ರವಿದೆ. ಸಾವಿತ್ರಿ ಎಚ್ಚರಗೊಳ್ಳುತ್ತಾಳೆ. ಸತ್ಯವಾನನು ಸಾಯುವ ದಿನವದು. ವಿಧಿಲಿಖಿತವನ್ನು ಬದಲಿಸಲು ಯಾರಿಗೆ ಸಾಧ್ಯ ಎಂದು ಹೇಳುತ್ತಲೇ ಸಾವಿತ್ರಿಯ ತಂದೆಯಾದ ಅಶ್ವಪತಿ ಮಹಾರಾಜನು ಹೇಗೆ ತನ್ನ ಯೋಗಸಾಧನೆಯಿಂದ ಸಾವಿತ್ರಿಯನ್ನು ಪುತ್ರಿಯಾಗಿ ಪಡೆದನೆಂಬ ವಿವರಣೆಯೊಂದಿಗೆ flash-back ಹೇಳುತ್ತ ಹೋಗುತ್ತಾರೆ. "A world's desire compelled her birth- ವಿಶ್ವದ ಹಿರಿ ಹಂಬಲವೇ ಸಾವಿತ್ರಿ ಜನ್ಮ ತಾಳಲು ಒತ್ತಾಯಪಡಿಸಿತು" ಎಂಬ ಮಾತನ್ನಾಡುತ್ತಾರೆ. ಹೀಗೆ ಸಾವಿತ್ರಿಯ ಜನನದ ಹಾಗೂ ಬೆಳವಣಿಗೆಯ ಕಥೆಯನ್ನು ’The book of Traveller of the worlds', 'The book of Divine Mother' ಮತ್ತು 'The book of Birth and Quest' ಎಂಬ ಮೂರು ಅಧ್ಯಾಯಗಳಲ್ಲಿ ಶ್ರೀ ಅರಬಿಂದೋ ವರ್ಣಿಸುತ್ತಾರೆ.
ಐದನೇಯ ಅಧ್ಯಾಯ ’The Book of Love'. ಈ ಅಧ್ಯಾಯದಲ್ಲಿ ಸಾವಿತ್ರಿಯು ತನ್ನ ವರನನ್ನು ಶೋಧಿಸಲು ಸಂಚರಿಸಿದ ವರ್ಣನೆ ಇದೆ. ಕೊನೆಯದಾಗಿ ಆಕೆ ಸತ್ಯವಾನನು ತನ್ನ ತಂದೆಯಾದ ದ್ಯುಮತ್ ಸೇನನ ಜೊತೆಗೆ ವಾಸಿಸುತ್ತಿರುವ ಅಶ್ರಮವನ್ನು ಪ್ರವೇಶಿಸುತ್ತಾಳೆ. ಅಲ್ಲಿನ ಪ್ರಕೃತಿಯ ವರ್ಣನೆಯನ್ನು ಕವಿ ಅತೀ ಸುಂದರವಾಗಿ ಮಾಡುತ್ತಾರೆ. ಅದು ’World of free and green delight' ಆಗಿತ್ತು ಎನ್ನುತ್ತಾರೆ. ಅಲ್ಲಿನ ವಾತಾವರಣದಲ್ಲಿ ಮೃದುತ್ವವಿತ್ತು, ಸೂಕ್ಶ್ಮ್ತೆತೆಯಿತ್ತು. ಆ ಆಶ್ರಮದಲ್ಲಿ ಸತ್ಯವಾನನ್ನು ಸಾವಿತ್ರಿ ನೊಡುತ್ತಾಳೆ. "her vision settled, caught and all was changed" - "ಆಕೆಯ ಕಣ್ಣು ಸ್ಥಿರವಾಗಿ ಅಲ್ಲಿಯೇ ನಿಂತಿತು, ಮತ್ತು ಎಲ್ಲವೂ ಪಲ್ಲಟವಾಯಿತು." ಎಂದು ಸಾವಿತ್ರಿಯ ಮನ ಸತ್ಯವಾನನಲ್ಲಿ ಸೇರಿದ್ದನ್ನು ಸುಂದರವಾಗಿ ಬಣ್ಣಿಸುತ್ತಾರೆ. "A mystic tumult from her depths arose"- "ಒಂದು ಅವಿದಿತ ಹರ್ಷ ಅವಳ ಆಂತರ್ಯದಿಂದ ಹೊರಹೊಮ್ಮಿತು." ಹೀಗೆ ಸತ್ಯವಾನನೊಂದಿಗೆ ಪರಸ್ಪರ ಸಂದರ್ಶನ-ಸಂಭಾಷಣೆಗಳಾದ ನಂತರ ವಿವಾಹದ ನಿರ್ಧಾರವಾಗುತ್ತದೆ. "The united Two began a greater age."-"ಅವರ ಮಿಲನವು ಅದೊಂದು ಉನ್ನತ ಯುಗವನ್ನೇ ನಿರ್ಮಿಸಿತು."
ಆರನೇ ಅಧ್ಯಾಯ ’The book of Fate'. ಸಾವಿತ್ರಿಯು ತನ್ನ ಸಂಚಾರವನ್ನು ಮುಗಿಸಿ ತನ್ನ ತಂದೆಯ ಮನೆಗೆ ಮರಳುತ್ತಾಳೆ. ಆ ಸಮಯದಲ್ಲಿ ಅಲ್ಲಿಯೇ ಇರುವ ನಾರದ ಮಹರ್ಷಿಗಳು ಸಾವಿತ್ರಿಯ ಅಪ್ರತಿಮ ಸೌಂದರ್ಯವನ್ನು ನೋಡಿ ಮಾಡಿದ ಭಾಷಣವು ವಿಶ್ವಸಾಹಿತ್ಯದಲ್ಲೇ ಒಂದು ಅಪೂರ್ವ ಕಾವ್ಯಭಾಗವೆಂದು ಹೇಳಲಾಗುತ್ತದೆ. ನಂತರ ಸಾವಿತ್ರಿಯು ತನ್ನ ಸಂಚಾರವನ್ನು ಕುರಿತು ವಿವರಿಸುತ್ತಾಳೆ. ಮತ್ತು ತಾನು ಸತ್ಯವಾನನನ್ನು ವರಿಸುವುದಾಗಿ ಹೇಳುತ್ತಾಳೆ. ಆಗ ನಾರದರು ಪ್ರಮಾದವಾಯಿತೆಂಬಂತೆ ಗಾಬರಿಯಾಗಿ ಸತ್ಯವಾನನು ಅಲ್ಪಾಯುಶಿಯೆಂದೂ ಇವತ್ತಿಗೆ ಸರಿಯಾಗಿ ಒಂದು ವರ್ಷಕ್ಕೆ ಮೃತ್ಯುಯೋಗವಿದೆಯೆಂದೂ ಹೇಳುತ್ತಾರೆ. ಆಗ ಚಿಂತೆಗೊಳಗಾಗುವ ಸಾವಿತ್ರಿಯ ತಂದೆಯು ಬೇರೊಬ್ಬ ವರನನ್ನು ಆರಿಸಲು ಕೇಳಿಕೊಳ್ಳುತ್ತಾನೆ. ಆಗ ಸಾವಿತ್ರಿಯು "ಪೂಜ್ಯ ಪಿತನೇ, ಏನೇ ಇರಲಿ, ಕೆಲವು ಸಂಗತಿಗಳನ್ನು ಒಮ್ಮೆಮಾತ್ರ ನಿರ್ಧರಿಸಲು ಸಾಧ್ಯ", " My father I have chosen. This is done." ಎಂದು ತನ್ನ ಅಚಲ ನಿರ್ಧಾರವನ್ನು ಹೇಳುತ್ತಾಳೆ. ಮೆಚ್ಚಿದ ನಾರದರು "The soul that can live alone with itself meets God" - "ಏಕಾಂಗಿಯಾಗಿ (ಸ್ವತಂತ್ರವಾಗಿ) ಇರಬಲ್ಲ ಜೀವಾತ್ಮ ಮಾತ್ರ ದೇವರ ದರ್ಶನ ಪಡೆಯುತ್ತದೆ" ಎಂದು ಹೇಳುತ್ತಾ ಆಕೆಯನ್ನು ಆಶೀರ್ವದಿಸಿ ಅವಳ ತಂದೆಯನ್ನು ಉದ್ದೇಶಿಸಿ "Alone she is equal to her mighty task" ಅವಳನ್ನು ಅವಳ ಮಟ್ಟಿಗೆ ಬಿಟ್ಟು ಬಿಡಿ ಎನ್ನುತ್ತಾರೆ. ಸಾವಿತ್ರಿ ಸತ್ಯವಾನರ ಮದುವೆಯು ಸೌಖ್ಯವಾಗಿ ನೆರವೇರಿ ಸಾವಿತ್ರಿಯು ಸತ್ಯವಾನನೊಂದಿಗೆ ತಪೋವನದಲ್ಲಿ ಸುಖದಿಂದ ಬದುಕುತ್ತಿರುತ್ತಾಳೆ.
'The Book of Yoga' ಏಳನೇ ಅಧ್ಯಾಯ. ಈ ಅಧ್ಯಾಯದಲ್ಲಿ ಸಾವಿತ್ರಿ ಸತ್ಯವಾನರ ಸುಖದ ದಾಂಪತ್ಯ ಜೀವನದ ವರ್ಣನೆ ಇದೆ. ಅವಳು ಆಶ್ರಮದ ಎಲ್ಲ ಕೆಲಸಗಳನ್ನು ಅತ್ಯಂತ ಪ್ರೇಮದಿಂದ ಗೈಯುತ್ತಿದ್ದಳು. ಅವುಗಳಲ್ಲೆಲ್ಲಾ 'A strange divinity shone- ಒಂದು ವಿಚಿತ್ರ ದೈವಿಕತೆ ಹೊಳೆಯತೊಡಗಿತು' ಎನ್ನುತ್ತಾರೆ ಅರಬಿಂದೋ. ಆದರೆ ವರ್ಷದ ಕೊನೆಯಾಗುತ್ತಿದ್ದಂತೆ ಸಾವಿತ್ರಿಗೆ ಸತ್ಯವಾನನ ವಿಧಿಲಿಖಿತ ನೆನಪಾಗತೊಡಗುತ್ತದೆ. "The grief of all the world came near to her- ಜಗತ್ತಿನ ದುಃಖವೆಲ್ಲವೂ ಆಕೆಯ ಬಳಿಗೆ ಬಂತು." ಆದರೂ ಆಕೆ ದುಃಖವನ್ನು ಯಾರಿಗೂ ತೋರಗೊಡಲಿಲ್ಲ. ಅವಳಿಗೆ ಇರುಇರುತ್ತಲೇ ಉತ್ಕಟ ಧ್ವನಿಯೊಂದು ಕೇಳತೊಡಗುತ್ತದೆ. "Find your soul, recover thy hid self- ನಿನ್ನ ಅಂತರಾತ್ಮವನ್ನು ಹುಡುಕು. ನಿನ್ನ ಆಳದಲ್ಲಿ ಅಡಗಿದ್ದನ್ನು ಹೊರತೆಗೆ". ಆಕೆ ತನ್ನನ್ನು ತಾನು ದೇಹಭಾವದಿಂದ ಬಿಡಿಸಿಕೊಂಡು ತನ್ನ ಆಂತರ್ಯದತ್ತ ನೋಡತೊದಗುತ್ತಾಳೆ. ಅಂತರಿಕ ಅಗ್ನಿ (Occult Fire) ಬಳಿ ಆಕೆ ಬರುತ್ತಾಳೆ. ಈ ಧ್ಯಾನದ ಸಮಯದಲ್ಲಿ ಆಕೆಗೆ ಆಂತರ್ಯದಲ್ಲಿ ಅನೇಕ ಅಡಚಣೆಗಳ ಅರಿವಾಗುತ್ತದೆ. ಅವನ್ನೆಲ್ಲವನ್ನು ಶ್ರೀ ಅರಬಿಂದೋ ವ್ಯಕ್ತಿಯಾಗಿಸುತ್ತಾರೆ (Personification). ಅವುಗಳನ್ನು 'The Mother of Seven Sorrows' ಎಂದು ಕರೆಯುತ್ತಾರೆ. ಆದರೆ ಸಾವಿತ್ರಿಯು ತನ್ನ ಆತ್ಮದ ತತ್ವದ ಅಂಶ (Part of The Soul) ಗಳೇ ಎಂದು ಭಾವಿಸಿ ಅವುಗಳಿಂದಲೂ ಆಧ್ಯಾತ್ಮದ ನೆರವು ಪಡೆಯುತ್ತಾಳೆ. ಅಧ್ಯಾಯದ ಕೊನೆಯಲ್ಲಿ ಅವಳು "She was no more herself but all the World- ಆಕೆ ಕೇವಲ ಅವಳು ಮಾತ್ರವಾಗಿರದೆ ಸಮಸ್ತ ವಿಶ್ವವೇ ಆಗಿದ್ದಳು." ಎನ್ನುತ್ತಾರೆ.
"The book of Death" ಎಂಟನೆಯ ಅಧ್ಯಾಯ. ಇಲ್ಲಿಂದ ಮತ್ತೆ ಕಥೆಯು 'flash back' ಮುಗಿದ ನಂತರದಲ್ಲಿ ಮುಂದುವರೆಯುತ್ತದೆ. ಆಕೆ ಬೆಳಗಿನಲ್ಲೆದ್ದು ಸತ್ಯವಾನನು ಶಿಲೆಯೊಂದರಲ್ಲಿ ಕಡೆದ ಮೂರ್ತಿಯೊಂದಕ್ಕೆ ನಮಿಸಿ ನಿತ್ಯದ ಕಾರ್ಯಗಳಲ್ಲಿ ತೊಡಗುತ್ತಾಳೆ. ಸತ್ಯವಾನ ಕಟ್ಟಿಗೆಗಾಗಿ ಕಾಡಿಗೆ ಹೊರಡಲಾಗಿ ತಾನೂ ಅವನ ಜೊತೆಗೆ ಹೋಗಿಬರುತ್ತೇನೆಂದು ಅತ್ತೆ ಮಾವಂದಿರ ಅಪ್ಪಣೆ ಪಡೆದು ಹೊರಡುತ್ತಾಳೆ. ಮುಂದಿನ ಕ್ಷಣ ಕ್ಷಣವೂ ಆಕೆಯನ್ನು ವಿಹ್ವಲ ಗೊಳಿಸುತ್ತದೆ. ಆದರೆ ಇದರ ಅರಿವಿಲ್ಲದ ಸತ್ಯವಾನನು ಮರವೊಂದನ್ನು ಕಡಿಯುತ್ತಿರುವಾಗ ಒಮ್ಮೆಲೇ ಕಡಿದ ಆ ಮರದ ವೇದನೆ ತನಗೆ ಆದಂತೆ ಭಾಸವಾಯಿತೆಂದು ಹೇಳತೊಡಗುತ್ತಾನೆ. ಸಾವಿತ್ರಿ ತಕ್ಷಣವೇ ಅವನನ್ನು ಮಲಗಿಸಿ ಅವನ ಶಿರವನ್ನು ತನ್ನ ಮಡಿಲಲ್ಲಿರಿಸಿಕೊಳ್ಳುತ್ತಾಳೆ. ಆಗ ಸತ್ಯವಾನನು "Savitri, Oh savitri, Lean down, my soul, and kiss me while I die - ನನ್ನ ಪ್ರಾಣಸ್ವರೂಪಳಾದ ಸಾವಿತ್ರಿಯೇ ಬಾಗಿ ಒಂದು ಮುದ್ದು ಕೊಡು ನಾನು ಸಾಯುತ್ತಿರುವೆ" ಎಂದು ನರಳುತ್ತಾನೆ. ಅವಳು ಸತ್ಯವಾನನ್ನು ಅಪ್ಪಿ ಹಿಡಿದು ಕೊನೆಯ ಮುದ್ದನ್ನು ಸಲ್ಲಿಸುತ್ತಾಳೆ. ಸತ್ಯವಂತನ ಜೀವವು ಆಕೆಯ ಅಪ್ಪುಗೆಯಿಂದ ಜಾರಿ ಹೋಗುತ್ತದೆ.
ಒಂಬತ್ತನೇ ಅಧ್ಯಾಯವಾದ "The Book of Eternal Night" ಮೃತ್ಯುವು ಸತ್ಯವಾನನ ಪ್ರಾಣವನ್ನು ಸೆಳೆದುಕೊಂದು ಹೊರಡುತ್ತಾನೆ. ಸಾವಿತ್ರಿಯು ಸೂಕ್ಷ್ಮಶರೀರದಲ್ಲಿ ಆತನನ್ನು ಹಿಂಬಾಲಿಸುತ್ತಾಳೆ. ಇಲ್ಲಿಯ ವರೆಗೆ ನಡೆದುದ್ದೆಲ್ಲ ಪೃಥ್ವಿಯ ವಾತಾವರಣದಲ್ಲಿ. ಮುಂದಿನ ಘಟನೆಗಳು ಸಾವಿತ್ರಿಯ ಆಂತರ್ಯದಲ್ಲಿ ನಡೆದಂತೆ ಅರಬಿಂದೋ ನಿರೂಪಿಸುತ್ತಾರೆ. ಯಮನನ್ನು ಹಿಂಬಾಲಿಸುತ್ತಾ ಅವಳು ಗಾಢಾಂಧಕಾರದಲ್ಲಿ ಇಳಿದಳು. ಅಲ್ಲಿನ ತಮಸ್ಸು ಆಕೆಯನ್ನು "ಇಲ್ಲಿಗೂ ಬರಬಲ್ಲೆಯ? ಇಲ್ಲಿಯೂ ಜೀವಿಸಬಲ್ಲೆಯ?" ಎಂದು ಪ್ರಶ್ನಿಸಿತು. ಅದಕ್ಕೆ ಸಾವಿತ್ರಿಯ ಮೌನವೇ ಉತ್ತರವಾಯಿತು. ಆಗ ಧರ್ಮನು "ಸತ್ಯವಾನನನ್ನು ಬಿಟ್ಟು ಕೆಲವೊಂದು ವರಗಳನ್ನು ಕೊಡುವೆ, ನಿನ್ನ ಗಾಯಗೊಂಡ ಬದುಕಿಗೆ." ಎನ್ನಲಾಗಿ ಸಾವಿತ್ರಿಯು "I bow not to thee, O huge mask of death... Conscious of immortality I walk. My god is love and sweetly suffers all- ಓ ಸಾವಿನ ಮುಸುಕೆ, ನಿನಗೆ ನಾನು ತಲೆಬಾಗುವುದಿಲ್ಲ. ಆ ಅಮೃತತ್ವದ ಅರಿವಿಂದಲೇ ನಾನು ಮುನ್ನಡೆಯುತ್ತೇನೆ. ಪ್ರೇಮವೇ ನನ್ನ ದೇವರು. ಆ ದೇವರೇ ಮಧುರವಾಗಿ ಸಕಲವನ್ನು ತಾಳಿಕೊಳ್ಳುವವ" ಎಂದು ನುಡಿಯುತ್ತಾಳೆ.
ಹತ್ತನೇ ಅಧ್ಯಾಯ "The Book of the Double Twilight". ಮೃತ್ಯುವು ಸಾವಿತ್ರಿಯನ್ನು ಕುರಿತು " ಸಾವಿತ್ರಿಯೇ, ಭೂಲೋಕದ ಮಾನವೀಯ ಹಂಬಲಗಳನ್ನು ತೊರೆದು ಬಿಡು." ಎನ್ನುತ್ತಾನೆ. " My love is not a craving of the flesh.. It came to me from God, go God it returns. I cherish God the Fire- ನನ್ನ ಪ್ರೇಮವು ಭಗವಂತನಿಂದ ಬಂದದ್ದು. ಅವನೆಡೆಗೇ ಹೊರಟಿದೆ. ನನ್ನ ಅಭೀಪ್ಸೆ ಆ ಅಗ್ನಿ ಸ್ವರುಉಪನಾದ ದೇವನದ್ದು" ಎನ್ನುತ್ತಾಳೆ ಸಾವಿತ್ರಿ. ಹೀಗೆ ಮೃತ್ಯು ಮತ್ತು ಸಾವಿತ್ರಿಯರಲ್ಲಿ ದೀರ್ಘವಾದ ವಾದ - ವಿವಾದಗಳು ನಡೆಯುತ್ತವೆ. ಕೊನೆಯಲ್ಲಿ ಸಾವಿತ್ರಿಯು ತನ್ನ ತೆಜೋಮಯವಾದ ದಿವ್ಯ ರೂಪದನ್ನು (ಸಾವಿತ್ರಿ ದೇವಿಯ) ಮೃತ್ಯುವನ್ನು ಉದ್ದೇಶಿಸಿ "I am a deputy of the aspiring world, my siprits liberty I ask for all" - "ತಾನು ಜಗತ್ತಿನ ಅಭೀಪ್ಸೆಯ ಪ್ರತಿನಿಧಿಯೆಂದೂ, ತನಗಿದ್ದ ಆತ್ಮದ ಸ್ವಾತಂತ್ಯ್ರ ಸಕಲರಿಗೆ ಇರಲಿ" ಎಂದು ಉದ್ದರಿಸುತ್ತಾಳೆ. ""Release the soul of the world called Satyavan"- ಜಗದಾತ್ಮನಾದ ಸತ್ಯವಾನನ್ನು ಬಿಡುಗಡೆಗೊಳಿಸು." ಎನ್ನುತ್ತ್ತಾಳೆ. ಮೃತ್ಯುವು ಅವಳ ದಿವ್ಯ ಸ್ವರೂಪಕ್ಕೆ ಬೆರಗಾಗಿ ತತ್ತರಿಸುತ್ತಾನೆ. ಆಕೆಯ ಆಜ್ಞೆಯನ್ನು ಪಾಲಿಸದಿರಲು ಅವನಲ್ಲಿ ಯಾವ ಬಲವೂ ಉಳಿಯುವುದಿಲ್ಲ. "His body was eaten by the light- ಅವನ ದೇಹವನ್ನು ಬೆಳಕು (ದೇವಪ್ರಕಾಶವು) ನುಂಗಿಬಿಟ್ಟಿತು" ಎನ್ನುತ್ತಾರೆ ಕವಿ. ಸಾವಿನ ನೆರಳು ಕರಗಿಹೋಯಿತು. ನಂತರ ಆ ದಂಪತಿಗಳು ತೆಜೋರೂಪದಲ್ಲಿ ಪರಮಪುರುಷನಾದ ಭಗವಂತನಲ್ಲಿಗೆ ತಲುಪುತ್ತಾರೆ.
"The Book of Ever Lasting Day" ಹನ್ನೊಂದನೆಯ ಅಧ್ಯಾಯ. ಅಲ್ಲಿ ಪರಮಪುರುಷನು ದಂಪತಿಗಳನ್ನು ಭುವಿಗೆ ಮರಳದೆ ಸತ್ಯಲೋಕದಲ್ಲಿಯೇ ಇರಲು ಕೇಳುತ್ತಾನೆ. ಅದಕ್ಕೆ ಸಾವಿತ್ರಿಯು ನಿನ್ನ ಮಾಧುರ್ಯವನ್ನು ಭೂಲೋಕಕ್ಕೆ ಹಂಚಲು ತನಗೆ ಅನುಗ್ರಹಿಸು ಎಂದು ಕೇಳಿಕೊಳ್ಳುತ್ತಾಳೆ. ಅಂತೆಯೇ ಸಾವಿತ್ರಿ ಸತ್ಯವಾನರು ಭುವಿಗೆ ಮರಳುತ್ತಾರೆ. ಕೊನೆಯ ಅಧ್ಯಾಯ "Epilogue- ಮುಕ್ತಾಯ" . ತಪೋವನಕ್ಕೆ ಮರಳಿದ ಸಾವಿತ್ರಿ ಸತ್ಯವಾನರು ಸುಖದಿಂದ ಜೀವನ ನಡೆಸುತ್ತಾರೆ. ಸಾವಿತ್ರಿಯು ತನ್ನ ಜೀವನದ ಉದ್ದೇಶವನ್ನು ಹೀಗೆ ಹೇಳುತ್ತಾಳೆ: "That to feel love and oneness is to live.. Is all the truth I know or Seek.- ಪ್ರೇಮವನ್ನೂ ಏಕತೆಯನ್ನೂ ಅನುಭವಿಸುವುದೇ ಜೀವನ. ಅದೊಂದೇ ಸತ್ಯ. ಅದನ್ನೇ ನಾನು ಬಲ್ಲೆ ಮತ್ತು ಅದನ್ನೇ ನಾನು ಅರಸುತ್ತೇನೆ."
ಈ ಮಹಾಕಾವ್ಯದ ಉದ್ದೇಶವೂ ಅದೇ. ಪ್ರೇಮವನ್ನೂ ಏಕತೆಯನ್ನು ಅನುಭವಿಸುವುದೇ ಜೀವನ ಎಂಬ ಪರಮ ಸತ್ಯವನ್ನು ಜಗತ್ತಿಗೆ ತಿಳಿಸುವುದು. ಈ ಕಾವ್ಯದ ಯಾವ ಅಂಶವೂ ಮನೋಮಯ ಸ್ತರದಿಂದ ಹೊರಬಂದಿಲ್ಲ. ಈ ಕಾವ್ಯದಲ್ಲಿನ ಪ್ರತಿಯೊಂದು ಶಬ್ದವೂ, ಛಂದ, ತಾಳ, ಕಲ್ಪನೆ ಎಲ್ಲವೂ ಕವಿಯ ಆ ಉಚ್ಚಪ್ರಜ್ಞೆಯ ಪ್ರತೀಕವೆಂಬಂತೆಯೇ ಇವೆ. ಶ್ರೀ ಅರಬಿಂದೋ ಅವರೇ ಉದ್ದರಿಸಿರುವಂತೆ "ಭಗವತ್ ಸ್ಪರ್ಶವೊಂದಿದ್ದರೆ ಸಕಲವನ್ನೂ ಮಾಡಲು ಸಾಧ್ಯ" ಎಂಬ ಮಾತು ಈ ಸುಂದರ ಅನುಭಾವ ಕಾವ್ಯದ ಮೂಲಮಂತ್ರ.
Monday, June 22, 2009
ವಿಮರ್ಶೆ
ಸಾಹಿತ್ಯದ ಮೌಲ್ಯ ಮಾಪನ ವಿಮರ್ಶೆಯ ಮುಖ್ಯ ಕರ್ತವ್ಯ. ಮತ್ತೊಂದು ಮುಖ್ಯವಾದ ಅಂಶವೆಂದರೆ ಪ್ರಾಚೀನ ಕಾಲದ ಟೀಕೆ ಟಿಪ್ಪಣಿಗಳಿಗಿಂತ ಭಿನ್ನ ರೂಪ ಹೊಂದಿದ ಈ ವಿಮರ್ಶೆ, ಸಾಹಿತ್ಯ ರಚನೆಯಂತೆ ಒಂದು ಕಲೆಯಲ್ಲ. ಇದೊಂದು ಶಾಸ್ತ್ರ. ಏಕೆಂದರೆ ಮೌಲ್ಯಮಾಪನ ಜವಾಬ್ದಾರಿಯಾದಾಗ ಈ ಮೌಲ್ಯಮಾಪನಕ್ಕೆ ಪ್ರಮಾಣಗಳನ್ನು ನಿರ್ಧರಿಸುವುದೂ ಅನಿವಾರ್ಯ. ಈ ಪ್ರಮಾಣಗಳಿಗನುಸಾರ ವಿಮರ್ಶೆಯ ನಿರ್ವಹಣೆಯಾಗಬೇಕು ಎಂಬಲ್ಲಿಗೆ ವಿಮರ್ಶೆಯಲ್ಲಿ ಇರಬಹುದಾಗಿದ್ದ ಹೆಚ್ಚಿನಪಾಲು ಕಲೆಯ ಲಕ್ಷಣಗಳು ಕಳೆದು ಹೋಗುತ್ತವೆ. ಸಾಹಿತ್ಯ ಹಲವಾರು ಭಿನ್ನ ವಸ್ತುಗಳನ್ನು ಕೂಡಿಸುತ್ತದೆ. ಸಾಹಿತ್ಯಕಾರನಿಗೆ ಇರುವ ಕಲ್ಪನಾ ಸ್ವಾತಂತ್ಯ್ರ ಅಪಾರ. ಆದರೆ ವಿಮರ್ಶಕನಿಗೆ ಈ ಬಗೆಯ ಸ್ವಾತಂತ್ರ್ಯವಿಲ್ಲ. ಈ ಅಸ್ವಾತಂತ್ರ್ಯವೇ ವಿಮರ್ಶೆಗೆ ಶಾಸ್ತ್ರದ ಸ್ವರೂಪ ತಂದು ಕೊಡುವುದು.
ಹತ್ತೊಂಭತ್ತನೆಯ ಶತಮಾನಕ್ಕಿಂತ ಮೊದಲು ಭಾರತದ ಯಾವ ಭಾಷೆಯಲ್ಲೂ ವಿಮರ್ಶೆ ಗದ್ಯರೂಪದಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಕಾಳಿದಾಸನ 'ರಘುವಂಶ' ಮತ್ತು 'ಮೆಘಸಂದೇಶ' ಗಳಿಗೆ ಮಲ್ಲಿನಾಥನು ಬರೆದ ಟೀಕಾಗ್ರಂಥವು ಆಧುನಿಕ ವಿಮರ್ಶೆಯನ್ನು ಸ್ವಲ್ಪ ಮಟ್ಟಿಗೆ ಹೋಲುತ್ತದೆ. ಅವನು ತನ್ನ ಗ್ರಂಥದ ಆರಂಭದಲ್ಲೇ 'ಮೂಲದಲ್ಲಿ ಇಲ್ಲದಿರುವುದರ ಕುರಿತು ನಾನು ಬರೆಯುವುದಿಲ್ಲ. ಕೃತಿಗೆ ಬೇಡವಾದದ್ದನ್ನು ಏನೂ ಹೇಳುವುದಿಲ್ಲ' ಎನ್ನುತ್ತಾನೆ. ಆದರೆ ಮಲ್ಲಿನಾಥನ ಟೀಕಾಗ್ರಂಥವು ಗದ್ಯಾವತಾರದೆಲ್ಲೇನಿಲ್ಲ. ಅದೂ ಕಾವ್ಯವೇ. ಆದರೆ ಆ ಕಾವ್ಯದ ವಸ್ತುವೂ ಇಂದಿನ ವಿಮರ್ಶೆಗಳಂತೆ ಸ್ವತಂತ್ರವಾಗಿ ನಿಲ್ಲುವುದಿಲ್ಲ. ಮಲ್ಲಿನಾಥನ ಈ ಟೀಕಾಗ್ರಂಥವನ್ನೊಂದನ್ನು ಓದಿಕೊಂಡರೆ ಏನೊಂದೂ ಅರ್ಥವಾಗುವುದಿಲ್ಲ. ಮೂಲಕಾವ್ಯಗಳನ್ನು ಓದಿಕೊಳ್ಳುತ್ತ ಈ ಟೀಕೆಯನ್ನು ಓದಬೇಕು. ಆಗ ಮಾತ್ರ ಕಾವ್ಯದ ರಸಾಸ್ವಾದನೆ ಆಗುತ್ತದೆ.
ಕನ್ನಡದಲ್ಲಿ ಈ ಹೊಸ ವಿಮರ್ಶೆಯ ಸ್ವರೂಪ ಆರಂಭವಾದದ್ದು ನವೋದಯ ಸಾಹಿತ್ಯದೊಂದಿಗೆ. ನವೋದಯದ ಕಾಲದ ಬಹುಪಾಲು ದೊಡ್ಡ ದೊಡ್ಡ ಕವಿಗಳು ವಿಮರ್ಶಕರೂ ಆಗಿದ್ದರು. ಆದ್ದರಿಂದ ನವೋದಯ ಕಾಲದ ಸಾಹಿತ್ಯದ ಆಶೋತ್ತರಗಳನ್ನು, ಅಪೇಕ್ಷೆಗಳನ್ನು ಮತ್ತು ಕಾವ್ಯದ ಕಲ್ಪನೆಗಳನ್ನು ನವೋದಯ ಕಾಲದಲ್ಲಿ ಉದಿಸಿದ ವಿಮರ್ಶೆ ಸರಿಯಾಗಿ ಪ್ರತಿಫಲಿಸುತ್ತದೆ. ಪ್ರಾಚೀನ ಕವಿಗಳ ಅಲಂಕಾರಿಕತೆ , ಆ ಕಾವ್ಯಗಳಲ್ಲಿನ ಪಾತ್ರರಚನೆಯಲ್ಲಿ ಕಂಡುಬರುವ ಮಾನವ ಸಂಬಂಧಗಳ ಅಭಾವ ಇವುಗಳನ್ನು ನವೋದಯ ವಿಮರ್ಶೆ ಟೀಕಿಸುತ್ತದೆ. ಆದರೆ ಪ್ರಾಚೀನ ಕಾವ್ಯದಲ್ಲಿ ನವೋದಯದ ಲಕ್ಷಣಗಳನ್ನು ಕಂಡರೆ ಉತ್ಸಾಹದಿಂದ ಬೀಗುತ್ತದೆ. ಈ ರೀತಿ ಸಂಬಂಧವನ್ನು ನವೋದಯ ಕಾಲದ ವಿಮರ್ಶೆ ಕಾವ್ಯ ಮತ್ತು ಸಾಹಿತ್ಯದೊಡನೆ ಬೆಳೆಸಿಕೊಂಡಿತ್ತು .
ಅದರ ಜೊತೆಗೇ ಕಾವ್ಯವೂ ವಿಮರ್ಶೆಯನ್ನು ಹೇಗೆ ಸ್ವೀಕರಿಸುತ್ತದೆ ಎಂಬುವುದೂ ಮುಖ್ಯವಾಗುತ್ತದೆ. 'ತಿಳಿಬಾನಿನೆಡೆಯಲ್ಲಿ ಹುಣ್ಣಿಮೆ ಚಂದ್ರ ಮೂಡಿಯೇ ಮೂಡಿದನು, ಕೆಲಸವಿಲ್ಲದ ವಿಮರ್ಶಕ ವಿಮರ್ಶೆಯ ಮಾಡಿಯೇ ಮಾಡಿದನು'. ಕುವೆಂಪು ಅವರ ಈ ಪದ್ಯದಲ್ಲಿ ವಿಮರ್ಶೆಯ ಬಗ್ಗೆ ಕಾವ್ಯದ ನಿಲುವು ಏನಿರಬಹುದೆಂದು ಸ್ಪಷ್ಟವಾಗುತ್ತದೆ. ಬೇಂದ್ರೆಯವರ ದೃಷ್ಟಿಕೂನವೂ ಕೂಡ ವಿಮರ್ಷೆಯ ಬಗೆಗೆ ಅಷ್ಟೇನೂ ಹಿತವಾಗಿರುವಂತೆ ತೋರುವುದಿಲ್ಲ. ಅವರ ಒಂದು ಕವಿತೆಯಲ್ಲಿ ಕಾವ್ಯವೆಂದರೆ ಅಮೃತಕ್ಕೆ ಮೇಲೆ ಹಾರುವ ಗರುಡ, ಆದರೆ ವಿಮರ್ಶೆ ಹಾವಿನಂತೆ ಹೊಟ್ಟೆ ಹೊಸೆಯುವ ಜಂತು ಎಂಬರ್ಥಬರುವಂತೆ ಹೇಳುತ್ತಾರೆ. ಇಲ್ಲಿ ವಿಮರ್ಶೆ, ಕಾವ್ಯಕ್ಕೆ ವಿರುದ್ಧವಾದ ತತ್ವವಾಗಬಹುದು ಎಂಬುದನ್ನು ಸೂಕ್ಷ್ಮವಾಗಿ ಹೇಳಿದಂತಿದೆ. ಆದರೆ ಅವರ ಇನ್ನೊಂದು ಕವನದಲ್ಲಿ 'ನಿನ್ನ ಮುಖ ಸ್ಪರ್ಶವೊಂದೇ ಸಾಕು, ಹೊಸ ಸೃಷ್ಟಿಯೇ ಬರಬಹುದು' ಎನ್ನುತ್ತಾರೆ. ಅಂದರೆ ಎಲ್ಲ ಕಾವ್ಯಗಳೂ, ಕವಿಗಳೂ ಅಪೇಕ್ಷಿಸುವುದು ಸಹೃದಯರನ್ನು. ಆದರೆ ಅವನ ಮೌಲ್ಯನಿರ್ಣಯ ಬೇಡ ಎಂಬುವುದೂ ಸ್ಪಷ್ಟ.
ಕೆಲವು ನವೋದಯ ಕವಿಗಳ ವಿಮರ್ಶಾ ಗ್ರಂಥಗಳನ್ನು ಅವಲೋಕಿಸಿದರೆ ಅವುಗಳಿಗೆ ಪ್ರಬಂಧದ ಲಕ್ಷಣಗಳಿರುವುದು ಕಂಡು ಬರುತ್ತದೆ. ಪ್ರಬಂಧಕಾರ ಸಾಮಾನ್ಯವಾದ ಜೀವನಾನುಭವವನ್ನು ಪರೀಕ್ಷಿಸಿ, ಪ್ರಶ್ನಿಸುತ್ತ ಬೆಲೆಕಟ್ಟುವಂತೆ ವಿಮರ್ಶಕ ತನ್ನ ಸಾಹಿತ್ಯದ ಅನುಭವವನ್ನು ಪ್ರಶ್ನಿಸಿ ಬೆಲೆಕಟ್ಟುತ್ತಾನೆ . ಉದಾಹರಣೆಗೆ ಬಿ.ಎಂ.ಶ್ರೀ ಅವರ 'ಕುಮಾರವ್ಯಾಸ' ಎಂಬ ದೀರ್ಘವಾದ ಲೇಖನವನ್ನು ನೋಡಬಹುದು. ಇಲ್ಲಿ ಕುಮಾರವ್ಯಾಸ ಪಂಪನಿಗಿಂತ ದೊಡ್ಡ ಕವಿ ಎಂಬಂತೆ ಬಿಂಬಿಸುತ್ತಾರೆ. ಶ್ರೀಯವರ ಭಾಷೆಯ ಸೌಂದರ್ಯದಿಂದಲೇ ಆ ಲೇಖನ ವಿಶಿಷ್ಟವೆನಿಸುತ್ತದೆ. ಇಂಥದೇ ಇನ್ನೊದು ಉದಾಹರಣೆಯೆಂದರೆ ಬೇಂದ್ರೆಯವರ 'ನಾಗಚಂದ್ರನ ಮಲ್ಲಿನಾಥ ಪುರಾಣ' ಎಂಬ ಲೇಖನ. ನಾಗಚಂದ್ರನ ವಾಕ್ಯಗಳನ್ನು ಮತ್ತು ವರ್ಣನೆಗಳನ್ನು ನೇರವಾಗಿ ಉಪಯೋಗಿಸುತ್ತಾ ಇಡೀ ಕಾವ್ಯವನ್ನೇ ಮೌಲ್ಯಮಾಪನಮಾಡುತ್ತಾರೆ. ನಾಗಚಂದ್ರನ ದರ್ಶನ, ನಾಗಚಂದ್ರನದೇ ಕಥೆ, ಆದರೆ ವಿಮರ್ಶೆಯ ಕೃತಿ ಮಾತ್ರ ಬೇಂದ್ರೆಯವರದು. ನವೋದಯಕಾಲದ ವಿಮರ್ಶಾಸಾಹಿತ್ಯದಲ್ಲಿ ಇದೊಂದು ಅಪರೂಪದ ಲೇಖನ. ಹೀಗೆಯೇ ಮಾಸ್ತಿಯವರ 'ವಿಮರ್ಶೆ' ಮತ್ತು ಡಿ.ವಿ.ಜಿ ಯವರ 'ಜೀವನ ಸೌಂದರ್ಯ ಮತ್ತು ಸಾಹಿತ್ಯ' ಮೊದಲಾದ ಕೃತಿಗಳು ಕನ್ನಡದ ಆಧುನಿಕ ವಿಮರ್ಶೆಗೆ ಹೊಸ ಸ್ವರೂಪ ನೀಡಿದವು. ಮುಂದೆ ಮುಗಳಿಯವರ 'ಕನ್ನಡ ಸಾಹಿತ್ಯ ಚರಿತ್ರೆ' ಮತ್ತು 'ತವನಿಧಿ' ಯಂತಹ ವಿಮರ್ಶಾಗ್ರಂಥಗಳು ಬಂದವು. ಇವೆಲ್ಲ ವಿಮರ್ಶೆಯ ವೈವಿಧ್ಯ ಮತ್ತು ಬಹುರೂಪತೆ ದರ್ಶಿಸಿದವು. ಮತ್ತು ಇದರ ಜೊತೆಗೆ ಸಾಹಿತ್ಯ ಬೇರೆ ವಿಮರ್ಶೆ ಬೇರೆ, ಒಂದು ಕಲೆಯಾದರೆ ಇನ್ನೊದು ಶಾಸ್ತ್ರ ಎಂಬ ಸ್ಪಷ್ಟವಾದ ಅರಿವು ಮೂಡಿಸಿದವು.
ಒಂದು ಕೃತಿ ಜಗತ್ತಿನ ಐತಿಹಾಸಿಕತೆಯಿಂದ ಹುಟ್ಟಿಬರುತ್ತದೆ . ಇಲ್ಲಿ ಐತಿಹಾಸಿಕತೆ ಕೇವಲ ಇತಿಹಾಸವಲ್ಲದೆ ಆಯಾಕಾಲದ ರಾಜಕೀಯ ಮತ್ತು ಸಾಮಾಜಿಕ ಶಕ್ತಿಗಳ ಕೇಂದ್ರ. ಈ ಕೇಂದ್ರ ಆ ಕೃತಿಯ ಅರ್ಥವಂತಿಕೆ ನಿರ್ಧರಿಸುತ್ತದೆ. ಇದೆ ಕಾರಣಕ್ಕಾಗಿಯೇ ಸಾಹಿತ್ಯ ರಚನೆಯ ನಿಯಮಗಳು ಕೂಡ ಕಾಲಕಾಲಕ್ಕೆ ಬದಲಾಗುತ್ತವೆ. ಹೀಗೆ ಸಾಹಿತ್ಯದ ಮೌಲ್ಯ ಮಾಪನದಂತೆ ಅದರ ಕೇಂದ್ರಕ್ಕೂ ವಿಮರ್ಶಕ ವಿಮರ್ಶೆ ಕೊಡಬೇಕಾಗುತ್ತದೆ. ಆದ್ದರಿಂದ ವಿಮರ್ಶೆ ಸಾಹಿತ್ಯ ಚರಿತ್ರೆಯ ಕೆಲಸವನ್ನು ಕೂಡ ಮಾಡುತ್ತದೆ. ವಿಮರ್ಶೆ ತಾನು ವಿಶಿಶ್ಟವೆನಿಸಿಕೊಳ್ಳುವುದು ಮತ್ತೊಂದು ಕಾರಣದಿಂದ. ಅದು, ವಿಮರ್ಶೆ ಮತ್ತು ಸಾಹಿತ್ಯ ಎರಡೂ ಅವಲಂಬಿಸುವುದು ಭಾಷೆಯನ್ನೇ. ಆದ್ದರಿಂದ ವಿಮರ್ಶೆ ಕೇವಲ ಸಾಹಿತ್ಯದ ಅರ್ಥಗ್ರಹಣದ ಕೆಲಸವನ್ನು ಮಾತ್ರವಲ್ಲದೇ ಸಾಹಿತ್ಯ ಸ್ಫುರಿಸಬಹುದಾದ ವಾಚ್ಯಾರ್ಥವನ್ನೂ ಮೀರಿದ ಅರ್ಥವನ್ನು ನೀಡಬೇಕು. ಅದಕ್ಕೆ ವಿಮರ್ಶಕ ಕೃತಿಯ ಬಹಿರ್ಮುಖತೆಯನ್ನೂ ಮತ್ತು ಅಂತರ್ಮುಖತೆಯನ್ನೂ ಓದುಗನ ಮುಂದಿಡಬೇಕು.
ವಿಮರ್ಶಕ ತನಗೆ ಗೊತ್ತಿಲ್ಲದಂತೆ ಮಾಡುವ ಇನ್ನೊದು ಕೆಲಸವೆಂದರೆ ತನ್ನ ವಿಮರ್ಶೆಯ ಮೂಲಕ ಇನ್ನೊದು ಕೃತಿಯನ್ನೇ ಹುಟ್ಟಿಸುವುದು! ನಮ್ಮ ವೇದಾಂತದಲ್ಲಿ ಭ್ರಮರಕೀಟಾನ್ಯಾಯ ಎಂಬ ಮಾತು ಬರುತ್ತದೆ. ಒಂದು ಕಣಜದ ಹುಳುವಿಗೆ ಯಾವಾಗಲೂ ಭ್ರಮರದ ಚಿಂತೆಯಂತೆ. ಆ ಚಿಂತೆ ಹೆಚ್ಚಾಗಿ ಅದೂ ಕೊನೆಯಲ್ಲಿ ತಾನೂ ಭ್ರಮರವಾಗಿ ಹೋಗುತ್ತದಂತೆ. ಸಾಹಿತ್ಯ ಮತ್ತು ವಿಮರ್ಶೆಯ ನಂಟೂ ಅಂಥದ್ದೇ ಎಂದು ನನಗನ್ನಿಸುತ್ತದೆ. ವಿಮರ್ಶೆಗೆ ಯಾವತ್ತಿದ್ದರೂ ಸಾಹಿತ್ಯದ್ದೇ ಚಿಂತೆ. ಆ ಚಿಂತೆಯೇ ಹೆಚ್ಚಾಗಿ ವಿಮರ್ಶೆಯೇ ಸಾಹಿತ್ಯವಾಗಿ ಪರಿಣಮಿಸಿದರೆ ಆಶ್ಚರ್ಯವೇನೂ ಇಲ್ಲ.
Monday, June 1, 2009
ಸ್ವಪ್ನವಾಸವದತ್ತಂ
ಸ್ವಪ್ನ ವಾಸವದತ್ತ ಆರು ಅಂಕಗಳ ನಾಟಕ. ಭಾಸ ಇದನ್ನು ತಾನೇ ರಚಿಸಿದ 'ಪ್ರತಿಜ್ಞಾಯೌಗಂಧರಾಯಣ' ಎಂಬ ನಾಟಕದ ಮುಂದುವರಿದ (sequel) ಭಾಗದಂತೆ ನಿರೂಪಿಸಿದ್ದಾನೆ. ಭಾಸನು ಭರತ ಮುನಿಯ ನಾಟ್ಯಶಾಸ್ತ್ರದ ಯಾವ ನಿಯಮಗಳನ್ನೂ ತನ್ನ ನಾಟಕ ರಚನೆಯಲ್ಲಿ ಪಾಲಿಸುವುದಿಲ್ಲ ಎಂಬ ಆಪಾದನೆ ಇದೆ. ಆದರೆ ಸ್ವಪ್ನವಾಸವದತ್ತದ ಮಟ್ಟಿಗೆ ಹೇಳುವದಾದರೆ ಇದೊಂದು ನಾಟ್ಯಶಾಸ್ತ್ರದ ಬಹುಪಾಲು ಎಲ್ಲ ನಿಯಮಗಳನ್ನು ಪಾಲಿಸುವ ಪರಿಪೂರ್ಣ ನಾಟಕ. ನಿಯಮದಂತೆ ನಾಟಕದ ತಲೆಬರಹ, ಆ ಕಥೆಯ ಯಾವುದಾದರೂ ಮುಖ್ಯ ದೃಷ್ಯವನ್ನು ಅಥವಾ ಅಲ್ಲಿನ ಮುಖ್ಯ ಪಾತ್ರವೊಂದರ (ನಾಯಕನ ಅಥವಾ ನಾಯಿಕೆಯ) ಹೆಸರನ್ನು ಹೇಳಬೇಕು. 'ವಾಸವದತ್ತಾ' ಈ ನಾಟಕದ ನಾಯಿಕೆ. ಮತ್ತು ನಾಯಕ, ವತ್ಸ ದೇಶದ ಮಹಾರಾಜನಾದ ಉದಯನ, ತನ್ನ ಪತ್ನಿ ವಾಸವದತ್ತೆಯನ್ನು ಕನಸಿನಲ್ಲಿ ಕಾಣುವ ಸನ್ನಿವೇಶ (ಸ್ವಪ್ನಾಂಕ) ಕಥೆಗೆ ಹೊಸ ತಿರುವನ್ನು ಕೊಡುತ್ತದೆ. ಅದಕ್ಕನುಸಾರ ಭಾಸ ಈ ನಾಟಕದ ಹೆಸರನ್ನು ಇಡುತ್ತಾನೆ. 'ಸ್ವಪ್ನವಾಸವದತ್ತಂ'. Dream of Vasavadatta.
" ಉದಯನವೇಂದು ಸವರ್ಣಾ
ವಾಸವದತ್ತಾಬಲೌ ಬಲಸತ್ವಾ
ಪದ್ಮಾವತೀ ಪೂರ್ಣೌ
ವಸಂತಕಂ ಭುಜೌ ಪಾತಾ "
ಈ ನಾಂದಿ ಪದ್ಯದೊಂದಿಗೆ ಸ್ವಪ್ನವಾಸವದತ್ತ ಆರಂಭವಾಗುತ್ತದೆ. ಇದು ಬಲರಾಮನ ಸ್ತುತಿ. (ಆದರೆ ಕೃಷಿ ದೇವತೆಯಾದ ಬಲರಾಮನನ್ನು ಭಾಸ ತನ್ನ ನಾಟಕದ ಆರಂಭದಲ್ಲಿ ಏಕೆ ನಮಿಸುತ್ತಾನೆ ಎಂಬುವುದಕ್ಕೆ ಸ್ಪಷ್ಟವಾದ ಉತ್ತರ ದೊರಕುವುದಿಲ್ಲ.) ಈ ನಾಂದಿಯಲ್ಲಿ ಗಮನಿಸಬೇಕಾದ ಸುಂದರ ಅಂಶವೆಂದರೆ ಭಾಸ, ಶ್ಲೇಶಾಲಂಕಾರದ ಸಹಾಯದಿಂದ ನಾಟಕದಲ್ಲಿಯ ಉದಯನ, ವಾಸವದತ್ತೆ, ಪದ್ಮಾವತಿ, ವಸಂತಕ ಇಂತಹ ಪ್ರಮುಖ ಪಾತ್ರಗಳ ಹೆಸರನ್ನು ಚಮತ್ಕಾರವಾಗಿ ಅಡಗಿಸಿರುವುದು.
ಇಲ್ಲಿರುವುದು ಬಲಭದ್ರನ ತೋಳುಗಳ ವರ್ಣನೆ. 'ಉದಯನವೇಂದು' ಎಂದರೆ ಉದಯಿಸುತ್ತಿರುವ ಚಂದ್ರ (ಇಂದು). ಬಲರಾಮನ ತೋಳುಗಳು ಆಗತಾನೆ ಉದಯಿಸುತ್ತಿರುವ ಚಂದ್ರನ ಬಣ್ಣದವು. Spotless white. ಈ ಸಾಲಿನಲ್ಲಿ ಉದಯನವೇಂದು ಎನ್ನುತ್ತಲೇ ಭಾಸ ತನ್ನ ನಾಟಕದ ನಾಯಕ, 'ಉದಯನ' ನ ಹೆಸರನ್ನು ಹೇಳಿಬಿಡುತ್ತಾನೆ. 'ವಾಸವದತ್ತಾಬಲೌ ಬಲಸತ್ವಾ' ಇದು ಎರಡನೇ ಸಾಲು. ಬಲಭದ್ರನು ಮದಿರಾ ಪ್ರಿಯ. ಅದಕ್ಕೆ ಭಾಸ, ಅವನ ತೋಳುಗಳಿಗೆ ಆ ಸುರಾಪಾನದಿಂದ (ಸುರೆ=ಆಸವ) ಬಲ ದೊರೆತು ಅವು ತುಂಬಿಕೊಂಡಿವೆ ಎನ್ನುತ್ತಾನೆ. ಈ ಸಾಲಿನಲ್ಲಿ ನಾಯಿಕೆ 'ವಸವದತ್ತಾ' ಳ ಹೆಸರು ಉಲ್ಲೇಖಿಸಿದಂತಾಗುತ್ತದೆ. 'ಪದ್ಮಾವತೀ ಪೂರ್ಣೌ', ಪದ್ಮ ಅಂದರೆ ಕಮಲ, ಕಮಲದಂತೆ ಅರಳಿರುವ ತೋಳುಗಳು ಬಲರಾಮನದ್ದು. ಇಲ್ಲಿ 'ಪದ್ಮಾವತೀ' ಪದಪ್ರಯೋಗ ಉದಯನನ ಎರಡನೇ ಪತ್ನಿಯ ಹೆಸರನ್ನು ಹೇಳುತ್ತದೆ. ವಸಂತಕನದ್ದು ಈ ನಾಟಕದಲ್ಲಿ ವಿದೂಷಕನ (comedian) ಪಾತ್ರ. ಈತ ಉದಯನನ ಆಪ್ತ ಮಿತ್ರ. ಅವನ ಹೆಸರನ್ನೂ ಭಾಸ ನಾಂದಿಯಲ್ಲೇ ಹೇಳಿಬಿಡುತ್ತಾನೆ. ಹೀಗೆ ನಾಟಕದ ಪಾತ್ರಗಳ ಪರಿಚಯ ನಮಗೆ ನಾಟಕದ ಮೊದಲಲ್ಲೇ ಮಾಡಿಸುತ್ತದೆ ಈ ನಾಂದಿ. ಆದರೆ ಪಾತ್ರಗಳ ಪ್ರವೇಶವಾಗುವವರೆಗೂ ಈ ನಾಂದಿ ಶ್ಲೋಕದ ಚಮತ್ಕಾರದ ಅರಿವಾಗುವುದಿಲ್ಲ. ಅಲ್ಲಿಯವರೆಗೆ ನಮಗೆ ಈ ಪದ್ಯದಲ್ಲಿ ಕಾಣುವುದು ಬಲಯುತವೂ ಸುಂದರವೂ ಆದ ಬಲರಾಮನ ತೋಳುಗಳು ನಮ್ಮನ್ನು ರಕ್ಷಿಸಲಿ ಎಂಬ ಕೋರಿಕೆ ಮಾತ್ರ.
ಮೊದಲೇ ಹೇಳಿದಂತೆ ಸ್ವಪ್ನವಾಸವದತ್ತ ಪ್ರತಿಜ್ಜ್ನಾಯೌಗಂಧರಾಯಣ ಎಂಬ ನಾಟಕದ ಮುಂದುವರಿದ ಭಾಗ. ಪ್ರತಿಜ್ಜ್ನಾಯೌಗಂಧರಾಯಣ ನಾಟಕದ ಕೊನೆಯಲ್ಲಿ ಕುಶಲ ಮಂತ್ರಿಯಾದ ಯೌಗಂಧರಾಯಣನ ನೆರವಿನಿಂದ ಉದಯನ ಆವಂತಿ ದೇಶದ ರಾಜಕುವರಿ ವಾಸವದತ್ತೆಯನ್ನು ಅಪಹರಿಸಿ ವಿವಾಹವಾಗಿರುತ್ತಾನೆ. ಪ್ರತಿಜ್ಜ್ನಾಯೌಗಂಧರಾಯಣದ ನಾಯಕ ನಾಯಿಕೆಯರು ಉದಯನವಾಸವದತ್ತೆಯರಾದರೂ ಅಲ್ಲಿ ಇವರಿಬ್ಬರೂ ರಂಗದಮೇಲೆ ಬರುವುದೇ ಇಲ್ಲ! ಅಲ್ಲಿ ಯೌಗಂಧರಾಯಣನೇ ಮುಖ್ಯಪಾತ್ರವಹಿಸುತ್ತಾನೆ. ಆದರೆ ಸ್ವಪ್ನವಾಸವದತ್ತದಲ್ಲಿ ಮೊದಲ ದೃಷ್ಯದಲ್ಲೇ ವಾಸವದತ್ತೆಯ ಪ್ರವೇಶವಾಗುತ್ತದೆ.
ಈ ನಾಟಕದ ಹಿನ್ನಲೆ ಹೀಗಿದೆ. ಪ್ರಿಯಸಖಿ ಮತ್ತು ಲಲಿತ ಕಲೆಗಳಲ್ಲಿ ತನ್ನ ಶಿಷ್ಯೆಯಾದ ವಾಸವದತ್ತೆಯನ್ನು ವಿವಾಹವಾದ ಬಳಿಕ ಉದಯನನಿಗೆ ರಾಜ್ಯಭಾರದಲ್ಲಿ ಆಸಕ್ತಿ ಕಳೆದುಹೋಗಿರುತ್ತದೆ. ಇದರಿಂದ ಉದಯನನ ರಾಜಧಾನಿ ಕೌಶಾಂಬಿ ವೈರಿರಾಜರುಗಳ ಪಾಲಾಗಿ ಹೋಗುತ್ತದೆ. ಕುಶಲ ಮಂತ್ರಿಯಾದ ಯೌಗಂಧರಾಯಣನು ರಾಜ್ಯವನ್ನು ಮತ್ತೆ ತಮ್ಮದಾಗಿಸಿಕೊಳ್ಳಲು ಉಪಾಯವೊಂದನ್ನು ಮಾಡುತ್ತಾನೆ. ಉದಯನ ಇಲ್ಲದ ಸಮಯದಲ್ಲಿ, ವಾಸವದತ್ತೆ ಮತ್ತು ಯೌಗಂಧರಾಯಣನು ಆಕಸ್ಮಿಕವಾಗಿ ಘಟಿಸಿದ ಬೆಂಕಿ ಅನಾಹುತವೊಂದರಲ್ಲಿ ಮೃತರಾದರು ಎಂಬುವಂತೆ ನಾಟಕವಾಡುತ್ತಾನೆ. ಜೊತೆಯಲ್ಲಿ ಯೌಗಂಧರಾಯಣನಿಗೆ ರಾಜ್ಯಬಲವರ್ಧನೆಗಾಗಿ ಉದಯನನು ಮಗಧ ದೇಶದ ರಾಜಕುಮಾರಿಯಾದ ಪದ್ಮಾವತಿಯನ್ನು ವರಿಸಿ ಮಗಧ ದೇಶದೊಂದಿಗೆ ಸಂಬಂಧ ಬೆಳೆಯಲಿ ಎಂಬ ಆಶಯವೂ ಇರುತ್ತದೆ. ವಾಸವದತ್ತೆಯೂ ಪತಿಯ ಒಳಿತಿಗಾಗಿ ಈ ನಾಟಕವನ್ನು ಒಪ್ಪಿಕೊಳ್ಳುತ್ತಾಳೆ. ಆದರೆ ವಾಸವದತ್ತೆಯನ್ನು ಕಳೆದುಕೊಂಡ ಉದಯನ ತೀವ್ರ ಶೋಕದಲ್ಲಿರುತ್ತಾನೆ.
ಯೌಗಂಧರಾಯಣ ಓರ್ವ ಸನ್ಯಾಸಿಯಂತೆ ಮತ್ತು ವಾಸವದತ್ತೆ ಅವನ ತಂಗಿಯಾಗಿ ಆವಂತಿಕಾ ಎಂಬ ಹೆಸರಿನಲ್ಲಿ ಮಗಧ ರಾಜ್ಯಕ್ಕೆ ಬರುತ್ತಾರೆ ಎಂಬಲ್ಲಿಂದ ನಾಟಕದ ಮೊದಲ ಅಂಕ ಆರಂಭವಾಗುತ್ತದೆ. ಯೌಗಂಧರಾಯಣ ರಾಜಕುಮಾರಿ ಪದ್ಮಾವತಿಯನ್ನು ಭೇಟಿ ಮಾಡಿ ತನ್ನ ತಂಗಿಯ ಪತಿ ವ್ಯವಹಾರ ನಿಮಿತ್ತ ಹೊರ ಪ್ರದೇಶಕ್ಕೆ ಹೋಗಿರುವುದಾಗಿಯೂ ಆತ ಬಂದ ನಂತರದಲ್ಲಿ ಆಕೆಯನ್ನು ಕರೆದುಕೊಂಡು ಹೋಗುತ್ತೇನೆ ಮತ್ತು ಅಲ್ಲಿಯವರೆಗೆ ಪದ್ಮಾವತಿಯ ಸಖಿಯಂತೆ ವಾಸವದತ್ತೆಯನ್ನು ನೋಡಿಕೊಳ್ಳಬೇಕೆಂದು ಕೇಳಿಕೊಳ್ಳುತ್ತಾನೆ.
ಮುಂದೆ ಉದಯನ ಮಗಧ ರಾಜ್ಯಕ್ಕೆ ಅತಿಥಿಯಾಗಿ ಬಂದಾಗ ಮಗಧ ದೇಶದ ರಾಜ ಉದಯನನ ರಾಜಧಾನಿ ಕೌಶಾಂಬಿಯನ್ನು ಮರಳಿ ಪಡೆಯಲು ಸಹಾಯ ಮಾಡಲು ಒಪ್ಪಿಕೊಳ್ಳುತ್ತಾನೆ. ಅದಕ್ಕೆ ಬದಲಾಗಿ ತನ್ನ ತಂಗಿ ಪದ್ಮಾವತಿಯನ್ನು ವಿವಾಹವಾಗುವಂತೆ ಉದಯನನನ್ನು ಕೇಳಿಕೊಳ್ಳುತ್ತಾನೆ. ಆದರೆ ಉದಯನನಿಗೆ ವಾಸವದತ್ತೆಯನ್ನು ಕಳೆದುಕೊಂಡ ದುಃಖ ಇನ್ನೂ ಮರೆಯಾಗಿರುವುದಿಲ್ಲ. ಆತನ ದುಃಖವನ್ನು ಭಾಸ, ಸೀತೆಯನ್ನು ಕಾಡಿನಲ್ಲಿ ಕಳೆದುಕೊಂಡ ರಾಮನ ಶೋಕಕ್ಕೆ ಹೋಲಿಸುತ್ತಾನೆ. ಆದರೂ ರಾಜ್ಯವನ್ನು ಉಳಿಸಿಕೊಳ್ಳುವ ಅನಿವಾರ್ಯ ಕಾರಣಗಳಿಂದ ಈ ವಿವಾಹಕ್ಕೆ ಒಪ್ಪಿಕೊಳ್ಳುತ್ತಾನೆ. ಇದರಿಂದ ಸಂತಸಗೊಂಡ ಪದ್ಮಾವತಿ ಈ ವಿಷಯವನ್ನು ತನ್ನ ಸಖಿ ಆವಂತಿಕಾಳಿಗೆ (ವಾಸವದತ್ತೆಗೆ) ತಿಳಿಸುತ್ತಾಳೆ. ವಾಸವದತ್ತೆಗೆ ತನ್ನ ಪತಿಯನ್ನು ತನ್ನ ಕಣ್ಣೆದುರಿಗೇ ಕಳೆದುಕೊಳ್ಳುವ ಬಗ್ಗೆ ಸಂಕಟವಾಗುತ್ತದೆ. ಆದರೆ ಭಾಸ ಆ ನೊಂದ ಮನಕ್ಕೆ ಸಾಂತ್ವನ ನೀಡಲೋ ಎಂಬಂತೆ ಒಂದು ಸುಂದರ ದೃಶ್ಯವನ್ನು ನಿರ್ಮಿಸುತ್ತಾನೆ. ಉದಯನ ಮತ್ತು ಆತನ ಮಿತ್ರ, ವಸಂತಕ ಮಗಧ ರಾಜನ ಅರಮನೆಯ ಲತಾಮಂಟಪದಲ್ಲಿ ಕುಳಿತಿರುವ ಸಂದರ್ಭದಲ್ಲಿ ವಾಸವದತ್ತೆಯೂ ಆ ಉದ್ಯಾನದ ಇನ್ನೊಂದು ಭಾಗದಲ್ಲಿರುತ್ತಾಳೆ. ಆಕೆ ಲತೆಗಳ ಸಮೂಹ ಮರೆಯಾದ ಕಾರಣದಿಂದ ಉದಯನ ಮತ್ತು ವಸಂತಕನಿಗೆ ಕಾಣುವುದಿಲ್ಲ. ಆದರೆ ವಾಸವದತ್ತೆ ಇವರು ಮಾತನಾಡುವುದನ್ನು ಕೇಳಿಸಿಕೊಳ್ಳುತ್ತಾಳೆ. ಆಗ ವಸಂತಕ ಉದಯನನನ್ನು ನಿನಗೆ ಪದ್ಮಾವತಿ ಮತ್ತು ವಾಸವದತ್ತೆಯರಲ್ಲಿ ಯಾರು ಹೆಚ್ಚು ಪ್ರಿಯರು ಎಂಬುದಾಗಿ ಕೇಳುತ್ತಾನೆ. ಅದಕ್ಕೆ ಉದಯನ ಪದ್ಮಾವತಿ ಗುಣವಂತೆ ಮತ್ತು ತನಗೆ ನೆಚ್ಚಿನವಳಾದರೂ, ವಾಸವದತ್ತೆ ತನ್ನ ಮೊದಲ ಪ್ರೇಮ ಮತ್ತು ಆಪ್ತ ಸಖಿ. ಅವಳ ಸ್ಥಾನ ತನ್ನ ಹೃದಯದಲ್ಲಿ ಮತ್ತೆ ಯಾರಿಂದಲೂ ತುಂಬಲು ಅಸಾಧ್ಯ ಎನ್ನುತ್ತಾನೆ. ಮನಸ್ಸಿಗೆ ಮುದ ನೀಡುವ ಇಂತಹ ಪ್ರಯೋಗಗಳನ್ನು ಭಾಸ ತನ್ನ ನಾಟಕಗಳಲ್ಲಿ ಹೇರಳವಾಗಿ ಮಾಡುತ್ತಾನೆ. ಸಂಸ್ಕೃತದ ಅನೇಕ ನಾಟಕಗಳಲ್ಲಿ ಮತ್ತು ಕಾವ್ಯಗಳಲ್ಲಿ ಉದಯನ ಎಂಬ ಹೆಸರಿನ ಪಾತ್ರವನ್ನು ಕಾಣಬಹುದು. ಆ ಎಲ್ಲ ನಾಟಕಗಳಲ್ಲಿ ಉದಯನನನ್ನು ಸ್ತ್ರೀಲೋಲುಪ ಮತ್ತು ಅತ್ಯಂತ ಚಂಚಲ ಪಾತ್ರವನ್ನಾಗಿ ಚಿತ್ರಿಸುತ್ತಾರೆ. ಆದರೆ ಸ್ವಪ್ನವಾಸವದತ್ತದಲ್ಲಿನ ಉದಯನ ಅತ್ಯಂತ ಸೌಮ್ಯವಾದ ಪಾತ್ರ. ಕಳೆದುಕೊಂಡ ಪತ್ನಿಗಾಗಿ ಪರಿತಪಿಸುತ್ತಿರುತ್ತಾನೆ.
ಮುಂದೆ ಪದ್ಮಾವತಿ ಮತ್ತು ಉದಯನರ ಮದುವೆಯ ಸಂದರ್ಭದಲ್ಲಿ ವಾಸವದತ್ತೆಗೇ ವರಮಾಲೆಯನ್ನು ಸಿದ್ದಪಡಿಸುವಂತೆ ಪದ್ಮಾವತಿ ಕೇಳಿಕೊಳ್ಳುತ್ತಾಳೆ. ಆಗ ವಾಸವದತ್ತೆ ಆ ಮಾಲೆಯಲ್ಲಿ ಪತಿಯ ಆಯಸ್ಸು ಹೆಚ್ಚುವಂತೆ ಪ್ರಭಾವಿಸುವ ಮೂಲಿಕೆಯೊಂದನ್ನು ಹೆಚ್ಚು ಹೆಚ್ಚಾಗಿ ಸೇರಿಸಿ ವರಮಾಲೆಯನ್ನು ಸುಂದರವಾಗಿ ಸಿದ್ದಪಡಿಸುತ್ತಾಳೆ. ವಾಸವದತ್ತೆ ಮತ್ತು ಪದ್ಮಾವತಿಯರ ನಡುವೆ ಸಹಜವಾಗಿ ಇರಬಹುದಾಗಿದ್ದ ಸವತಿ ಅಸೂಯೆಯನ್ನು ಯಾವ ಸನ್ನಿವೇಶವನ್ನೂ ಭಾಸ ತೋರಿಸುವುದಿಲ್ಲ. ಬದಲಿಗೆ ಇವರಿಬ್ಬರಲ್ಲಿನ ಸ್ನೇಹವನ್ನು ಅಲ್ಲಲ್ಲಿ ತೋರಿಸುತ್ತಾನೆ.
ಐದನೇ ಅಂಕ ಸ್ವಪ್ನಾಂಕ. ಈ ಅಂಕವನ್ನು ಅತ್ಯಂತ ಸುಂದರವಾಗಿ ಭಾಸ ನಿರೂಪಿಸಿದ್ದಾನೆ. ಪದ್ಮಾವತಿ ಮತ್ತು ಉದಯನರ ವಿವಾಹದ ಒಂದೆರಡು ದಿನಗಳ ನಂತರದಲ್ಲಿ ಪದ್ಮಾವತಿ ತಲೆಶೂಲೆಯಿಂದ ಬಳಲುತ್ತಿರುತ್ತಾಳೆ. ಅವಳನ್ನು ಬೇರೊಂದು ಅಂತಃಪುರದಲ್ಲಿ ವಿಶ್ರಾಂತಿಗಾಗಿ ಕರೆದುಕೊಂಡು ಹೋಗಿರುತ್ತಾರೆ. ಇದನ್ನು ಅರಿಯದ ಉದಯನ ಅವಳನ್ನು ಕಾಣಲು ಅವಳ ಅಂತಃಪುರಕ್ಕೆ ಬರುತ್ತಾನೆ. ಆದರೆ ಅವಳು ಅಲ್ಲಿ ಇರದಿದ್ದನ್ನು ನೋಡಿ ಕಾಯುತ್ತ ಕುಳಿತುಕೊಳ್ಳುವ ಅವನು ಮಧ್ಯಾಹ್ನದ ಸಮಯವಾದ್ದರಿಂದ ಅರಿವಿಲ್ಲದೆ ಅಲ್ಲಿಯೇ ನಿದ್ರೆಹೋಗುತ್ತಾನೆ. ಆ ಸಮಯದಲ್ಲಿ ಅಲ್ಲಿಗೆ ಬಂದ ವಸಂತಕ ಹೊದಿಕೆ ಹೊದಿಸಿ ಹೋಗುತ್ತಾನೆ. ಆ ಸಮಯದಲ್ಲಿ ವಾಸವದತ್ತೆ ಪದ್ಮಾವತಿಯನ್ನು ಭೇಟಿ ಮಾಡಲು ಅಲ್ಲಿಗೆ ಬರುತ್ತಾಳೆ. ಅವಳಿಗೆ ಉದಯನ ಅಲ್ಲಿ ಮಲಗಿರುವುದು ತಿಳಿಯದೆ ಪದ್ಮಾವತಿಯೇ ಮಲಗಿದ್ದಾಳೆಂದು ಭಾವಿಸಿ ಉದಯನನ ಹಣೆಯನ್ನು ಸ್ಪರ್ಶಿಸುತ್ತಾಳೆ. ತಕ್ಷಣವೇ ಆಕೆಗೆ ಮಲಗಿರುವುದು ಉದಯನ ಎಂಬ ಅರಿವಾಗಿ ಅವಸರದಿಂದ ಹೊರಟು ಹೋಗುತ್ತಾಳೆ. ಆದರೆ ಉದಯನನಿಗೆ ವಾಸವದತ್ತೆಯ ಜೊತೆಯಲ್ಲಿದ್ದಂತೆ ಸ್ವಪ್ನದಲ್ಲಿ ಅನುಭವವಾಗುತ್ತಿರುತ್ತದೆ. ಅಷ್ಟರಲ್ಲೇ ವಾಸವದತ್ತೆಯ ಸ್ಪರ್ಶ ಅವನನ್ನು ಎಚ್ಚರಿಸುತ್ತದೆ. ಆ ಸ್ಪರ್ಶ ವಾಸವದತ್ತೆಯದೇ ಎಂದು ಖಚಿತವಾಗಿ ಭಾವಿಸುವ ಉದಯನ ವಸಂತಕನನ್ನು ಕರೆದು ವಾಸವದತ್ತೆ ಇನ್ನೂ ಜೀವಿಸಿದ್ದಾಳೆ ಎಂದೆಲ್ಲ ಹೇಳುತ್ತಾನೆ. ಅದಕ್ಕೆ ವಸಂತಕ ನಿಮಗೆ ಕೇವಲ ಸ್ವಪ್ನವಾಗಿದೆ. ಇನ್ನೆಲ್ಲಿ ವಾಸವದತ್ತೆ ಬರಲು ಸಾಧ್ಯ. ಇನ್ನು ತಾವು ಪದ್ಮಾವತಿಯ ಬಗ್ಗೆ ಯೋಚಿಸಬೇಕಾಗಿ ಹೇಳುತ್ತಾನೆ. ಆದರೂ ಉದಯನನಲ್ಲಿ ವಾಸವದತ್ತೆ ನಿಸ್ಸಂಶಯವಾಗಿ ಬದುಕಿದ್ದಾಳೆ ಎಂಬ ಭಾವನೆ ಉಳಿದುಬಿಡುತ್ತದೆ.
ಕೊನೆಯ ಅಂಕದಲ್ಲಿ ಮಗಧ ರಾಜನ ಸಹಾಯದಿಂದ ಉದಯನ ತನ್ನ ರಾಜ್ಯವನ್ನು ಮರಳಿ ಪಡೆಯುತ್ತಾನೆ. ತದನಂತರ ಪದ್ಮಾವತಿಯ ಆಶಯದಂತೆ ಅವರಿಬ್ಬರೂ ಆವಂತಿ ರಾಜ್ಯಕ್ಕೆ, ವಾಸವದತ್ತೆಯ ತಂದೆಯ ಮನೆಗೆ ಹೋಗುತ್ತಾರೆ. ಅಲ್ಲಿ ವಾಸವದತ್ತೆಯ ಭಾವ ಚಿತ್ರವನ್ನು ನೋಡುವ ಪದ್ಮಾವತಿ ಚಕಿತಗೊಳ್ಳುತ್ತಾಳೆ. ವಾಸವದತ್ತಾ ಮತ್ತು ತನ್ನ ಪ್ರಿಯ ಸಖಿ ಆವಂತಿಕೆಗೆ ಅತ್ಯಂತ ಹೋಲಿಕೆ ಇದೆ ಎಂಬುದಾಗಿ ಉದಯನನಿಗೆ ಹೇಳುತ್ತಾಳೆ. ಉದಯನ ತಕ್ಷಣ ಆವಂತಿಕೆಯನ್ನು ಬರಲು ಹೇಳುತ್ತಾನೆ. ಆದರೆ ಆವಂತಿಕೆ ಉದಯನನಿದ್ದಲ್ಲಿಗೆ ಬರಲು ಒಪ್ಪದೇ ಪರಪುರುಷನ ದರ್ಶನ ಪತಿಯಿಂದ ದೂರ ಇರುವ ತನಗೆ ತಕ್ಕದ್ದಲ್ಲ ಎಂದು ಪದ್ಮಾವತಿಗೆ ತಿಳಿಸುತ್ತಾಳೆ. ಅಲ್ಲಿಗೆ ಅದೇ ಸಮಯದಲ್ಲಿ ಯೌಗಂಧರಾಯಣ ಸನ್ಯಾಸಿ ವೇಷದಲ್ಲಿ ಬಂದು ಪದ್ಮಾವತಿಯ ಬಳಿ ತನ್ನ ತಂಗಿಯ ಪತಿ ಮರಳಿ ಬಂದಿದ್ದಾನೆ ಆದ್ದರಿಂದ ಕರೆದುಕೊಂಡು ಹೋಗಲು ಬಂದಿದ್ದೇನೆ ಎನ್ನುತ್ತಾನೆ. ಆದರೆ ಉದಯನನು ಯೌಗಂಧರಾಯಣನನ್ನು ಸುಲಭವಾಗಿ ಗುರುತಿಸಿ ಅಪ್ಪಿಕೊಂಡು ಸ್ವಾಗತಿಸುತ್ತಾನೆ. ವಾಸವದತ್ತೆ ಎಲ್ಲಿಯೆಂದು ಕೇಳಿದಾಗ ಆವಂತಿಕಾ ವೇಷದಲ್ಲಿದ್ದ ವಾಸವದತ್ತೆ ಎದುರಿಗೆ ಬರುತ್ತಾಳೆ. ಮತ್ತು ಯೌಗಂಧರಾಯಣ ವಾಸವದತ್ತೆಯನ್ನು ಉದಯನನಿಂದ ದೂರವಿಟ್ಟ ಉದ್ದೆಶವನ್ನೆಲ್ಲ ತಿಳಿಸಿ ಕ್ಷಮೆ ಯಾಚಿಸುತ್ತಾನೆ. ಮತ್ತು ವಾಸವದತ್ತೆ ಇಷ್ಟು ದಿನ ಪದ್ಮಾವತಿಯ ಜೊತೆಯಲ್ಲಿಯೇ ಇದ್ದುದಾಗಿಯೂ ಅವಳು ಪರಿಶುದ್ದಳಾಗಿರುವುದರಿಂದ ಒಪ್ಪಿಕೊಳ್ಳಬೇಕೆಂದೂ ಕೇಳಿಕೊಳ್ಳುತ್ತಾನೆ. ಉದಯನ ಸಂತಸದಿಂದ ವಾಸವದತ್ತೆಯನ್ನು ಸ್ವೀಕರಿಸುತ್ತಾನೆ. ಹೀಗೆ ಸ್ವಪ್ನವಾಸವದತ್ತ ನಾಟಕ ಸುಖಾಂತ್ಯ ಕಾಣುತ್ತದೆ.
ಭಾಸ ಅದ್ಭುತ ನಾಟಕಕಾರ . ಅವನ ನಾಟಕಗಳಲ್ಲಿಯ ಭಾಷೆಯ ಸರಳತೆ ಮತ್ಯಾವ ಸಂಸ್ಕೃತ ನಾಟಕಕಾರರುಗಳಲ್ಲಿ ಕಾಣಬರುವುದಿಲ್ಲ. ಈ ಸಂಬಂಧ ಭಾಸ, ಕಾಳಿದಾಸನನ್ನೂ ಮೀರಿ ನಿಲ್ಲುತ್ತಾನೆ. ಮತ್ತು ಭಾಸನ ಹಾಸ್ಯಪ್ರಜ್ಞೆಯೂ ಅಷ್ಟೇ ಸುಂದರ. ಅದಕ್ಕೇ 'ಭಾಸೋ ಹಾಸಃ' ಎಂಬ ಮಾತು ಪ್ರಸಿದ್ದ. ಭಾಸನೆಂದರೇ ಹಾಸ್ಯ. ಈ ನಾಟಕದಲ್ಲಿ ವಸಂತಕನ ಮೂಲಕ ಅನೇಕ ಹಾಸ್ಯ ಸನ್ನಿವೇಶಗಳನ್ನು ಭಾಸ ಸೃಷ್ಟಿಸಿ ಓದುಗರಲ್ಲಿ ಮುದವನ್ನು ಉಂಟುಮಾಡುತ್ತಾನೆ. ಉದಯನ ವಾಸವದತ್ತೆಯ ವಿರಹದಿಂದ ದುಃಖಗೊಂಡು ಕುಳಿತಾಗ ವಸಂತಕ ಕಥೆಯೊಂದನ್ನು ಹೇಳುತ್ತೇನೆ ಎಂದು ಬರುತ್ತಾನೆ. ಹೀಗೆ ಕಥೆ ಪ್ರಾರಂಭಿಸುತ್ತಾನೆ. ಬ್ರಹ್ಮದತ್ತ ಎಂಬ ನಗರಿಯಲ್ಲಿ ಕೌಶಾಂಬಿ ಎಂಬ ರಾಜನಿದ್ದನು. ತಕ್ಷಣ ದುಃಖತಪ್ತನಾದ ಉದಯನ ತಲೆಯೆತ್ತಿ ನಗಲು ಆರಂಭಿಸುತ್ತಾನೆ. ಮತ್ತು ವಸಂತಕನನ್ನು ಕುರಿತು 'ಮೂರ್ಖ, ಅದು ಕೌಶಾಂಬಿ ನಗರಿ, ಅಲ್ಲಿನ ರಾಜ ಬ್ರಹ್ಮದತ್ತ ! ' ಎಂದು ಹೇಳುತ್ತಾನೆ. ಹೀಗೆ ಭಾಸ ಬೇಸರದ ಮತ್ತು ಶುಷ್ಕವೆನಿಸುವ ಸನ್ನಿವೇಶಗಳನ್ನು ತನ್ನ ಹಾಸ್ಯ ಪ್ರಜ್ಞೆಯಿಂದ ತಕ್ಷಣ ರಂಜನೀಯವಾಗಿ ಮಾಡಿಬಿಡುತ್ತಾನೆ.
ಭಾಸನ ಕಾವ್ಯಭಾಷೆಗೆ ತನ್ನದೇ ಆದ ಒಂದು ವಿಶಿಷ್ಟ ಸ್ವಂತಿಕೆ ಇದೆ. ಅವನು ಕಾವ್ಯದಲ್ಲಿ ತನ್ನ ಹಿಂದಿನ ಕವಿಗಳ ಯಾರ ಮಾತುಗಳನ್ನೂ ಉದ್ದರಿಸುವುದಿಲ್ಲ.ಅವನ ಕಥೆ ಹೇಳುವಲ್ಲಿನ ಚಾಕಚಕ್ಯತೆಯೂ ಅಸಾಧಾರಣವಾದುದು. ಈ ಪ್ರಸ್ತುತ ನಾಟಕದಲ್ಲಿಯೇ ನೋಡಿದರೆ ಅವನು ತನ್ನ ನಾಟಕದಲ್ಲಿ ಮಾಡಿದ ಆಧುನಿಕ ಪ್ರಯೋಗಗಳು ಅಚ್ಚರಿಯನ್ನುಂಟುಮಾಡುತ್ತವೆ. ನೇರ ಸಂಭಾಷಣೆ ಮತ್ತು ಸನ್ನಿವೇಶಗಳನ್ನು ವಿವರವಾಗಿ ಬಣ್ಣಿಸುವ ಭಾಸನ ಶೈಲಿ ಎಲ್ಲಿಯೂ ನಿಸ್ಸಾರ ಅನ್ನಿಸುವುದಿಲ್ಲ. ಈ ಕಾರಣದಿಂದಾಗಿಯೇ ಭಾಸನ ನಾಟಕಗಳು ರಂಗದ ಮೇಲೆ ರಂಜನೀಯವಾಗಿ ಮೂಡಿಬರುತ್ತವೆ. ಕೇರಳದಲ್ಲಿ ಇತ್ತೀಚಿನ ಭಾಸನ ನಾಟಕಗಳ ರಂಗಪ್ರಯೋಗ ಅತ್ಯಂತ ಜನಪ್ರಿಯ ಮತ್ತು ಸಫಲಗೊಂಡಿವೆ. ಹೀಗೆ ಇಂದಿಗೂ ಭಾಸ ಸಹೃದಯರನ್ನು ತನ್ನ ಕಾವ್ಯಗಳತ್ತ ಸೆಳೆಯುತ್ತಿದ್ದಾನೆ.
Thursday, May 14, 2009
ನಾಂದಿ
ಯಾ ಸೃಷ್ಟಿಃ ಸೃಷ್ಟುರಾದ್ಯಾ ವಹತಿ ವಿಧಿಹುತಂ ಯಾ ಹವಿರ್ಯಾ ಚ ಹೋತ್ರೀ
ಯೇ ಧ್ವೇ ಕಾಲಂ ವಿಧತ್ತಃ ಶ್ರುತಿ ವಿಷಯ ಗುಣಾ ಯಾ ಸ್ಥಿತಾ ವ್ಯಾಪ್ಯ ವಿಶ್ವಂ
ಯಾಮಾಹುಃ ಸರ್ವಬೀಜ ಪ್ರಕೃತಿರಿತಿ ಯಯಾ ಪ್ರಾಣಿನಃ ಪ್ರಾಣವಂತಃ
ಪ್ರತ್ಯಕ್ಷಾಭಿಃ ಪ್ರಪನ್ನಸ್ತನುಭಿರವತು ವಸ್ತಾಭಿರಷ್ಟಾಭಿರೀಶಃ
ಇದು ಕಾಳಿದಾಸನ 'ಅಭಿಜ್ಞಾನ ಶಾಕುಂತಲಂ' ನಾಟಕದ ನಾಂದಿ ಪದ್ಯ. ನಾಟಕದ ಆರಂಭದಲ್ಲಿ ಇಷ್ಟ ದೇವತೆಗೆ ಪ್ರಾರ್ಥನೆಯನ್ನು ಸಲ್ಲಿಸುವುದು ಸಂಸ್ಕೃತ ನಾಟಕದ ಒಂದು ನಿಯಮ. ಭರತ ಮುನಿಯ ನಾಟ್ಯ ಶಾಸ್ತ್ರದ ಸೂತ್ರಗಳಲ್ಲಿ ನಾಂದಿ ಹೇಗಿರಬೇಕು ಎಂಬುದರ ಕುರಿತು ದೀರ್ಘವಾದ ವಿವರಣೆಗಳಿವೆ. ನಾಂದಿ ನಾಟಕದ ಹೊರಗೆ ಇದ್ದರೂ ಅದು ನಾಟಕಕ್ಕೆ ಸ್ವರೂಪವನ್ನು ತಂದುಕೊಡುವ ಅಂಶ. ನಾಂದಿ ಪದ್ಯದ ಇನ್ನೊಂದು ವಿಶೇಷ ಗುಣವೆಂದರೆ ಅದು ಸೂಚ್ಯವಾಗಿ ನಾಟಕದ ವಸ್ತುವನ್ನು ಮೊದಲಲ್ಲೇ ಹೇಳಿಬಿಡುತ್ತದೆ. ಮತ್ತು ಅದು ಹಾಗೇ ಇರಬೇಕೆಂದು ನಿಯಮ. ನಾಟಕದ ಆರಂಭದಲ್ಲಿ ಸೂತ್ರಧಾರನು ತೆರೆಯಿಂದ ಹೊರ ಬಂದು ನಾಟಕದ ಕಥೆಗೆ ಇಂಬುಕೊಡುವ ನಾಂದಿ ಸ್ತುತಿಯನ್ನು ಹಾಡಿ ನಾಟಕದ ಪಾತ್ರಗಳು ರಂಗದಮೇಲೆ ಬರಲು ಅನುವುಮಾಡಿಕೊಡುತ್ತಾನೆ.
ದೇವತಾ ಸ್ತುತಿಯಲ್ಲಿ ನಾಟಕದ ವಸ್ತುವನ್ನು ಅಡಗಿಸಿ ಕವಿತೆ ನಿರ್ಮಿಸುವುದು ಬಹಳ ಕಷ್ಟ. ಅದರ ಸಂವೇದನೆಯೂ ತಡವಾಗಿ ತಾಗುತ್ತದೆ. ಉದಾಹರಣೆಗೆ ಈ ಮೇಲಿನ ನಾಂದಿ ಪದ್ಯವನ್ನೇ ತೆಗೆದುಕೊಂಡರೆ ಅದು ಕೇವಲ ಕಾಳಿದಾಸನ ಇಷ್ಟದೇವತೆಯಾದ ಶಿವನ ಸ್ತುತಿಯಾಗಿ ಕಾಣುತ್ತದೆ. 'ಈಶಃ' ಎಂಬ ಸರ್ವಸಾಮಾನ್ಯವಾದ ದೇವವಾಚಕವನ್ನು ಬಿಟ್ಟರೆ ಶಿವನ ಹೆಸರೂ ಇದರಲ್ಲಿಲ್ಲ. ಆದರೆ ಶಿವನ ಮಹಿಮೆ ಬಹಳ ಸೂಕ್ಹ್ಮವಾಗಿ ಹೇಳಲ್ಪಟ್ಟಿದೆ. ಈ ಪದ್ಯದ ಕೊನೆಯ ಸಾಲಿನಲ್ಲಿ, ಪ್ರತ್ಯಾಕ್ಷಾಭಿಃ ಪ್ರಪನ್ನಸ್ತನುಭಿರವತು ವಸ್ತಾಭಿರಷ್ಟಾಭಿರೀಶಃ ಅಂದರೆ 'ಪ್ರತ್ಯಕ್ಷವಾದ ಎಂಟು ಅವಯವಗಳಿಂದ ಕೂಡಿದ ಶಿವ ನಮ್ಮನ್ನು ಕಾಪಾಡಲಿ' ಎನ್ನುತ್ತಾನೆ ಕಾಳಿದಾಸ. ಈ ಪದ್ಯದ ಆಶಯವನ್ನೇ ಅನುಸರಿಸಿದರೆ ಶಿವನ ಆ ಅಷ್ಟ ತನುಗಳು ಯಾವವು ಮತ್ತು ಶಿವನ ಈ ಸ್ತುತಿಗೂ ಅಭಿಜ್ಞಾನ ಶಾಕುಂತಲದ ಕಥೆಗೂ ಎಲ್ಲಿಯ ನಂಟು ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.
ಈ ಪ್ರಶ್ನೆಗೆ ಉತ್ತರ ಈ ಪದ್ಯದಲ್ಲಿ ಇದೆ. ಅಥವಾ ಅತಿಶಯವಾಗಿಯೇ ಇದೆ ಎನ್ನಬಹುದು ! ಒಂದು ಅವಯವದ ಉಲ್ಲೇಖ ಮೊದಲ ಸಾಲಿನಲ್ಲಿಯೇ ಇದೆ. ' ಯಾ ಸೃಷ್ಟಿಃ ಸೃಷ್ಟುರಾದ್ಯಾ' - ಯಾವದು ಬ್ರಹ್ಮನ ಮೊದಲ ಸೃಷ್ಟಿಯಾಗಿದೆಯೋ ಅದು. ಅಂದರೆ ನೀರು (ವೇದ ವಾಕ್ಯದಂತೆ). ಆದರೆ ನೀರಿಗೆ ತೋಯ, ಜಲ, ಅಂಬು ಎಂಬೆಲ್ಲ ಶಬ್ದಗಳಿದ್ದರೂ ಅವುಗಳನ್ನು ಎಲ್ಲೂ ನೇರವಾಗಿ ಬಳಸಿಲ್ಲ. ಮೊದಲ ಸೃಷ್ಟಿ ಎನ್ನುವುದಾಗಿ ಅಷ್ಟೇ ಹೇಳಿ ನೀರಿಗೆ ಪರಿಭಾಷೆಯನ್ನು ಕೊಡುತ್ತಾನೆ. ಮೊದಲ ಸಾಲಿನ ಎರಡನೇ ಭಾಗದಲ್ಲಿ 'ವಹತಿ ವಿಧಿಹುತಂ ಯಾ ಹವಿರ್ಯಾಚ ಹೋತ್ರೀ' ಅಂದರೆ 'ಯಾವುದು ವಿಧಿವತ್ತಾಗಿ ಹಾಕಿದ ಹವಿರ್ಭಾಗವನ್ನು ಒಯ್ಯುತ್ತದೋ ಅದು' ಎನ್ನುತ್ತಾನೆ. ಅಂದರೆ ಹವನ ದಲ್ಲಿ ಹಾಕಿದ ಹವಿಸ್ಸನ್ನು ಒಯ್ಯುವ 'ಅಗ್ನಿ' ಯ ವರ್ಣನೆ ಇದು. ಆದರೆ ಅಗ್ನಿ ಪದದ ಪ್ರಯೋಗವೂ ನೇರವಾಗಿ ಇಲ್ಲ. ಹೀಗೆ ಮುಂದೆ 'ಯೇ ಧ್ವೆ ಕಾಲಂ ವಿಧತ್ತಃ' ಅಂದರೆ ಕಾಲವನ್ನು ಎರಡಾಗಿ (ಹಗಲು, ರಾತ್ರಿಗಳಾಗಿ) ವಿಭಜಿಸುವ ಸೂರ್ಯ ಚಂದ್ರರ ಬಗ್ಗೆ ಹೇಳುತ್ತಾನೆ. ಇದೇ ರೀತಿ ಪ್ರಾಣವಾಯು (ಗಾಳಿ), ಭೂಮಿ, ಆಕಾಶ ಗಳ ವರ್ಣನೆಯನ್ನೂ ಮಾಡುತ್ತಾನೆ. ಆದರೆ ಎಲ್ಲಿಯೂ ಆ ಶಬ್ದಗಳನ್ನು ನೇರವಾಗಿ ಬಳಸದೆ ಕೇವಲ ಅವುಗಳ ಪರಿಭಾಷೆಯನ್ನು ಮಾತ್ರ ಕೊಡುತ್ತಾನೆ. ಈಶ್ವರನೂ ಬ್ರಹ್ಮನ ಸೃಷ್ಟಿ ಎಂಬ ವೇದಗಳ ತತ್ವವನ್ನು ಒಪ್ಪಿಕೊಂಡರೆ ಈ ಎಲ್ಲವೂ (ನೀರು, ಅಗ್ನಿ, ಕಾಲ, ಗಾಳಿ, ಭೂಮಿ ಮತ್ತು ಆಕಾಶ) ಅವನ ಅವಯವಗಳಾಗಿವೆ ಎಂಬ ಕಾಳಿದಾಸನ ಮಾತು ತರ್ಕಬದ್ದ ಎಂದು ನನಗೆ ಎನ್ನಿಸುತ್ತವೆ. ಜೊತೆಗೆ ನಿಸರ್ಗಕ್ಕೂ ದೇವರಿಗೂ ಇರುವ ಸಂಬಂಧ ಕೇವಲ ತೋರಿಕೆಯದಲ್ಲ ಅದೇ ನಿಜವಾದ ಸಂಬಂಧ ಎಂದು ಈ ಪದ್ಯ ಸುಂದರವಾಗಿ ವಿವರಿಸಿದಂತೆಯೂ ತೋರುತ್ತದೆ.
ಈ ವಿವರಣೆಯ ನಂತರ ಇನ್ನೊಂದು ಪ್ರಶ್ನೆ ಉಳಿಯುತ್ತದೆ. ಅದು ಈ ಪದ್ಯಕ್ಕೂ ನಾಟಕದ ವಸ್ತುವಿಗೂ ಇರುವ ಸಂಬಂಧ. ನಾಟಕ ಉಪಯೋಗಿಸುವುದು ಮಹಾಭಾರತದಲ್ಲಿಯ ಶಕುಂತಲೆಯ ಕಥೆ. ಆಕೆ ವಿಶ್ವಾಮಿತ್ರಮೇನಕೆಯರ ಮಗಳು. ಕಣ್ವರ ಸಾಕು ಮಗಳು, ಅನಸೂಯೆ ಪ್ರಿಯಂವದೆಯರ ಸಖಿ, ದುಷ್ಯಂತನ ಹೆಂಡತಿ ಮತ್ತು ಸರ್ವದಮನನ ತಾಯಿ. ಹೀಗೆ ಶಕುಂತಲೆ ಅನೇಕ ಪಾತ್ರಗಳಾಗಿ ಕಾಣಿಸುತ್ತಾಳೆ. ಆದರೆ ವಿಸ್ಮ್ರಿತಿಗೀಡಾದ ದುಷ್ಯಂತ ಇದನ್ನೆಲ್ಲಾ ಮರೆಯುತ್ತಾನೆ. ಅವನಿಗೆ ಅವಳ ಅಸ್ಪಷ್ಟ ರೂಪವೊಂದೇ ನೆನಪಲ್ಲುಳಿಯುವುದು. ದುಷ್ಯಂತ ಶಕುಂತಲೆಗೆ ನೆನಪಿಗೆಂದು ನೀಡಿದ್ದ ಉಂಗುರ ಶುಚಿತೀರ್ಥದಲ್ಲಿ ಕಳೆದು ಹೋಗುತ್ತದೆ. ಮುಂದೆ ಅದೇ ಮತ್ಸ್ಯವೊಂದರ ಉದರದಲ್ಲಿ ದೊರೆತು ಮುರಿದ ಸಂಬಂಧಗಳನ್ನು ಮತ್ತೆ ಕಟ್ಟುತ್ತದೆ. ಈ ನಾಂದಿ ಶ್ಲೋಕದಲ್ಲಿಯೂ ಹಾಗೆಯೇ ಅಲ್ಲವೇ? ಶಿವನ ಅಷ್ಟ ತನುಗಳನ್ನು ನೇರವಾಗಿ ಹೇಳದ ಕಾಳಿದಾಸ ಅವುಗಳ ಗುರುತನ್ನು ಮಾತ್ರ ಹೇಳುತ್ತಾ ನಾವೇ ಆ ಶಬ್ದಗಳನ್ನು ಗ್ರಹಿಸುವಂತೆ ಮಾಡುತ್ತಾನೆ. 'ಅಭಿಜ್ಞಾನ' ಶಬ್ದದ ಅರ್ಥವೂ ಇದೇ. ಗುರುತು. Recognition. ಮತ್ತು ದುಷ್ಯಂತನಿಗೆ ಶಕುಂತಲೆ ಹೇಗೆ ಸತ್ಯ ಮತ್ತು ವಾಸ್ತವವೂ ಅಂತೆಯೇ ನೀರು, ಅಗ್ನಿ, ವಾಯು, ಕಾಲ, ಭೂಮಿ, ಆಕಾಶಗಳು ಆ ಮಹಾದೇವನ ಸ್ವರೂಪಗಳು ಎಂಬ ಸತ್ಯದ ತಾತ್ವಿಕತೆಯನ್ನೂ ಈ ಸ್ತುತಿ ಎತ್ತಿ ಹಿಡಿದಿದೆ. ಹೀಗೆ ಈ ಪದ್ಯದಲ್ಲಿ ನಡೆಯುವ ತಿಳುವಳಿಕೆ ಪ್ರಕ್ರಿಯೆಯೇ ನಾಟಕದಲ್ಲಿ ಪ್ರತಿ ಹೆಜ್ಜೆಯಲ್ಲೂ ಇದೆ.
ಈ ನಾಂದಿ ಪದ್ಯವನ್ನು ಹೀಗೆ ಬಿಡಿಸಿ ನೋಡಿದಾಗ ಈ ಪದ್ಯದಲ್ಲಿ ನಾಟದಕ ವಸ್ತು- ಪ್ರತ್ಯಭಿಜ್ಞಾನ ಕ್ರಿಯೆ- ಸೂಚ್ಯವಾಗಿ ಅಡಗಿದೆಯೆಂದು ತಿಳಿಯುತ್ತದೆ. ಆ ಮೂಲಕ ಭರತಮುನಿಯ ನಾಂದಿ ಸೂತ್ರಕ್ಕೆ ಅಭಿಜ್ಞಾನ ಶಾಕುಂತಲದ ನಾಂದಿ ಪದ್ಯ ಎಲ್ಲೂ ಅಪಚಾರವೆಸಗಿಲ್ಲ ಎಂಬುದೂ ಸ್ಪಷ್ಟವಾಗುತ್ತದೆ. ಒಟ್ಟಿನಲ್ಲಿ ಈ ನಾಟಕದ ಸಾರ ಅದರ ನಾಂದಿ ಪದ್ಯದಲ್ಲಿ ಅಡಗಿದೆ ಎನ್ನುವುದಕ್ಕಿಂತ ಈ ನಾಂದಿ ಪದ್ಯಕ್ಕೆ ಅಭಿಜ್ಞಾನ ಶಾಕುಂತಲ ನಾಟಕವೇ ಅರ್ಥವಿವರಣೆ ಆಗಿದೆ ಎನ್ನಬಹುದಲ್ಲವೇ?
( ನನಗೆ ತುಂಬಾ ಇಷ್ಟವೆನಿಸಿದ ಮತ್ತು ಸ್ವಾರಸ್ಯಪೂರ್ಣವಾದ ನಾಂದಿ ಭಾಸನ ಪ್ರಸಿದ್ದ ನಾಟಕ ಸ್ವಪ್ನವಾಸವದತ್ತದ್ದು. ಈ ನಾಂದಿ ಪದ್ಯದ ಸಾರದ ಬಗ್ಗೆ ಮುಂದಿನ ಪೋಸ್ಟ್ ನಲ್ಲಿ ತಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. )
Monday, May 4, 2009
ಕಾವ್ಯದಲ್ಲಿ ರಸ ಮತ್ತು ನೀತಿಬೋಧೆ
'ತದೇವ ರಮ್ಯಂ ರುಚಿರಂ ನವಂ ನವಂ
ತದೇವ ಶಶ್ವನ್ಮನಸೋ ಮಹೋತ್ಸವಂ
ತದೇವ ಶೋಕಾರ್ಣವ ಶೋಷಣಂ ನೃಣಾಂ
ಯದುತ್ತಮಶ್ಲೋಕಯಶೋನುಗೀಯತೆ '
' ಅದು ಸುಂದರ, ಅದು ರುಚಿರ, ಅದು ಹೊಚ್ಚ ಹೊಸದು. ಅದುವೇ ಮನಸ್ಸನ್ನು ಮಹೋತ್ಸವದಲ್ಲಿರಿಸತಕ್ಕದ್ದು, ಅದರಿಂದಲೇ ಮನುಷ್ಯ ಶೋಕಸಾಗರವನ್ನು ಹಿಂಗಿಸಲು ಸಮರ್ಥನಾಗುತ್ತಾನೆ. ಅದೇ ಉತ್ತಮಶ್ಲೋಕರ ಕೀರ್ತಿಕಥನ.'
ಒಂದು ಸಹೃದಯ ಜನಾಂಗ ಕಾವ್ಯದಿಂದ ಏನನ್ನು ಬಯಸುತ್ತದೆ? ಭವಸ್ತರದಲ್ಲಿ ಅಂದರೆ ತನ್ನ ನಿತ್ಯ ಜೀವನದಲ್ಲಿ ದುರ್ಲಭವಾದ ಅನುಭೂತಿಯನ್ನು. ಅದರ ಜೊತೆಯಲ್ಲಿಯೇ ವಾಸ್ತವ ಜಗತ್ತಿನ ನೀತಿ, ಧರ್ಮ, ಮೌಲ್ಯಗಳನ್ನೂ ಕಾವ್ಯಗಳಿಂದ ಪಡೆಯಲೆತ್ನಿಸುತ್ತದೆ. ಅಂದರೆ ಕಾವ್ಯದ ಉದ್ದೇಶ ಕೇವಲ ರಸ ಪ್ರಸಾರವಾಗಿರದೆ ನೀತಿ, ಧರ್ಮ ಪ್ರಸಾರಕವೂ ಆಗಿರಬೇಕು. ಮತ್ತು ಈ ಪ್ರಾಕಾರವಾಗಿ ಕಾವ್ಯಗಳನ್ನು ರಚಿಸುವವನೇ ಕವಿ.
ಆದರೆ ಇಲ್ಲಿ ಮತ್ತೊಂದು ಅಂಶ ಗಮನಿಸತಕ್ಕದ್ದು. ನಾವು ನೀತಿ ಧರ್ಮಗಳನ್ನೇ ಕುರಿತ ಕಾವ್ಯಗಳೆಂದು ರಾಮಾಯಣ, ಮಹಾಭಾರತ, ಹಿತೋಪದೇಶ, ಪಂಚತಂತ್ರಾದಿಗಳನ್ನು ಪರಿಗಣಿಸಿದರೂ ಅವು ಮಹಾಕಾವ್ಯಗಳ ಪಟ್ಟಿಯಲ್ಲೇ ಸೇರುತ್ತವೆ. ಆ ಗ್ರಂಥಗಳ ಕರ್ತರೂ ಮಹಾಕವಿಗಳ ಸಾಲಿನಲ್ಲೇ ನಿಲ್ಲುತ್ತಾರೆ. ಏಕೆಂದರೆ ಆ ಗ್ರಂಥಗಳು ನಮ್ಮ ಇರವಿನ ಎಲ್ಲ ಸ್ತರಗಳನ್ನು ಮೆಟ್ಟಿ ನಿಂತಿರುವ ಕಾವ್ಯಗಳು. ಎಲ್ಲ ಸ್ತರಗಳ ಎಲ್ಲ ಸ್ವರಗಳೂ ಅಲ್ಲಿ ಕೇಳಿ ಬರುತ್ತವೆ. ಅಲ್ಲಿ ಶ್ರೀ ರಾಮ, ಶ್ರೀ ಕೃಷ್ಣರಂತಹ ಮಹಾಪುರುಷರ ಚರಿತ್ರೆಗಳನ್ನು ಮತ್ತು ಅವರ ಬದುಕಿನ ತತ್ವಗಳನ್ನು ವರ್ಣಿಸುವುದು ಅವುಗಳ ಉದ್ದೇಶವೇ ಹೊರತು ಧರ್ಮೋಪದೇಶವೇ ಅವುಗಳ ಗುರಿಯಲ್ಲ. ಅವು ನಮ್ಮ ಮನಸ್ಸನ್ನು ಸೌಖ್ಯವಾಗಿರಿಸುವುದಷ್ಟೇ ಅಲ್ಲದೆ ನಮ್ಮಲ್ಲಿ ಆತ್ಮ ಪುಷ್ಟಿಯನ್ನೂ, ಶೋಧಕ ಮತ್ತು ಸಂಸ್ಕಾರಕ ಗುಣವನ್ನೂ ತರುತ್ತವೆ.
ಆದರೆ ಕಾವ್ಯದ ಮೂಲ ಉದ್ದೇಶ ರಸಜಾಗರಣೆಯೇ. ಮನುಷ್ಯನ ಮನಸ್ಸು ಸೌಂದರ್ಯದ ಮೋಹಕತೆಗೆ ಬೇಗ ಮರಳಾಗುತ್ತದೆ. ಆ ಸೌಂದರ್ಯವನ್ನು ಕಾವ್ಯ ಸೆರೆ ಹಿಡಿಯಬೇಕು. ಬೇಂದ್ರೆ ತಮ್ಮ ಸಖಿಗೀತದಲ್ಲಿ ಆ ಬಗ್ಗೆ ಒಂದು ಮಾತು ಹೇಳುತ್ತಾರೆ. 'ಸೌಂದರ್ಯವೆಂಬುದು ಕಣ್ಣಿನ ತುತ್ತಲ್ಲ, ಕಣ್ಣಿಗೂ ಕಣ್ಣಾಗಿ ಒಳಗಿಹುದು '. ಇಲ್ಲಿ ಬೇಂದ್ರೆಯವರು ಹೇಳುತ್ತಿರುವುದು ಕೇವಲ ಬಾಹ್ಯ ಸೌಂದರ್ಯವಲ್ಲ. ಕಣ್ಣಿಗೂ ಕಣ್ಣಾಗಿರುವ ಸೌಂದರ್ಯವನ್ನು ಸ್ರಷ್ಟಿಸುವ ಪ್ರತಿಭೆ. ಆ ಪ್ರತಿಭೆ ಕವಿಗಿರಬೇಕು. ಕೆಲವೊಮ್ಮೆ ಕೇವಲ ಸೌಂದರ್ಯವನ್ನಷ್ಟೇ ಅಲ್ಲ ಆ ಸೌಂದರ್ಯ ರಸವನ್ನು ಆಸ್ವಾದಿಸುವ ಕಣ್ಣನ್ನೂ ಕವಿ ತನ್ನ ಕಾವ್ಯದಲ್ಲಿಡಬೇಕು.
ಕಾವ್ಯ ಮುಖ್ಯವಾಗಿ ಭಾಷೆಯಲ್ಲಿ ಮೂಡಿಬರುವ ಕಲೆಯಾದದ್ದರಿಂದ ಶಬ್ದ ಕ್ರೀಡೆ ಕವಿಯ ವಿಶೀಷ ಅಧಿಕಾರವಾಗಿದೆ. ಅವನು ಶಬ್ದಗಳನ್ನು ವಿಶೇಷವಾಗಿ ಉಪಯೋಗಿಸಿ ಅನಿರೀಕ್ಷಿತವಾದ ಅರ್ಥವನ್ನೂ ರಸವನ್ನೂ ಶಬ್ದಗಳಿಂದ ಹೊರಡಿಸಬಲ್ಲ. ಉದಾಹರಣೆಗೆ ಕಾಳಿದಾಸನ ಶಾಕುಂತಲ ನಾಟಕದಲ್ಲಿ ' ಅನ್ಯೆಃ ದ್ವಿಜೈಃ ಪರಭೃತಾಃ ಬಲು ಪೋಷಯಂತಿ' ಎಂಬ ಒಂದು ಮಾತು ಬರುತ್ತದೆ. ಒಮ್ಮೆ ಓದಿದರೆ ಅರ್ಥ ಕೋಗಿಲೆಗಳು (ಪರಭೃತ), ಬೇರೆ ಪಕ್ಷಿಗಳ (ದ್ವಿಜ) ಮೂಲಕ ತಮ್ಮ ಮರಿಗಳನ್ನು ಪೋಷಿಸುತ್ತವೆ ಎಂದಾಗುತ್ತದೆ. ಆದರೆ ಇನ್ನೂ ಸ್ವಲ್ಪ ಸೂಕ್ಷ್ಮವಾಗಿ ಗ್ರಹಿಸಿದರೆ ದ್ವಿಜ ಎಂಬ ಶಬ್ದಕ್ಕೆ ಬ್ರಾಹ್ಮಣ ಅಂತಲೂ ಅರ್ಥವಿದೆ. ಹಾಗೆಯೇ ಪರಭೃತ ಎಂದರೆ ವೇಶ್ಯೆ ಎಂಬ ಅರ್ಥವೂ ಇದೆ. ಅಂದರೆ ಈ ಮಾತಿನ ಅರ್ಥ ದೇವ ವೆಶ್ಯೆಯಾದ ಮೇನಕೆ ಶಾಕುಂತಲೆಯನ್ನು ಬ್ರಾಹ್ಮಣನಾದ ಕಣ್ವನ ಆಶ್ರಯದಲ್ಲಿ ಬೆಳಸಿದಳು ಅಂತಲೂ ಆಗುತ್ತದೆ. ಇಂತಹ ಒಂದೇ ಶಬ್ದದಲ್ಲಿ ಅನೇಕ ಅರ್ಥಗಳನ್ನು ಅಪ್ಪಿಕೊಳ್ಳುವ (ಶ್ಲೇಷ ) ಪದಗಳ ಬಳಕೆ ಕಾವ್ಯದ ರಸಾಸ್ವಾದವನ್ನು ಹೆಚ್ಚಿಸುತ್ತದೆ.
ಹೀಗೆ ಕಾವ್ಯದಲ್ಲಿನ ರಸಭಾವಗಳು ಮನಸ್ಸಿಗೆ ಆಹ್ಲಾದವನ್ನುಂಟುಮಾಡುತ್ತದೆ. ಕವಿಯೂ ಕೂಡ ಇಂತಹ ರಸಪ್ರೇಷಿತವಾದ ಭಾವನೆಗಳ ವ್ಯುತ್ಪತ್ತಿಯಲ್ಲೇ ಹೆಚ್ಚು ಆನಂದವನ್ನು ಪಡೆಯುತ್ತಾನೆ ಮತ್ತು ಉತ್ಸಾಹಿಯಾಗಿರುತ್ತಾನೆ. ಆದರೆ ಅದರ ಜೊತೆಯಲ್ಲಿಯೇ ಅವನು ತನ್ನ ಕಾವ್ಯ ಯಾವ ನೀತಿಯನ್ನು ಸಾರುತ್ತಿದೆ ಎನ್ನುವ ಬಗ್ಗೆಯೂ ಗಮನ ಹರಿಸುವುದು ಅನಿವಾರ್ಯ. ಏಕೆಂದರೆ ಕಾವ್ಯದಲ್ಲಿನ ಧರ್ಮ ಮತ್ತು ನೀತಿ ಉಪದೇಶಗಳು ನಗರ ಪೇಟೆಗಳಲ್ಲಿನ ಗ್ರಂದಿಗೆ ಅಂಗಡಿಗಳಂತೆ. ಅಲ್ಲಿ ದೊರಕುವುದು ರೋಗನಿವಾರಕ ಮೂಲಿಕೆಗಳಾದರೂ ಅವು ನಾಗರಿಕ ಜೀವನಕ್ಕೆ ಅತ್ಯಗತ್ಯ. ಅವು ಮುಚ್ಚಿ ಹೋದರೆ ನಗರಕ್ಕೆ ನಗರವೇ ತಲ್ಲಣಿಸಿಹೊದೀತು. ಅಂತೆಯೇ ಕಾವ್ಯದಲ್ಲಿ ಕೇವಲ ಲೌಕಿಕ ಭಾವ ರಸಾದಿಗಳು ತುಂಬಿಹೋದರೂ ಇದೇ ಸ್ಥಿತಿಯಾಗುವುದರಲ್ಲಿ ಸಂಶಯವಿಲ್ಲ. ಆದರೆ ನಗರದ ಐಶ್ವರ್ಯ ವಿಲಾಸಗಳನ್ನು ಕೇವಲ ಗ್ರಂದಿಗೆ ಅಂಗಡಿಗಳ ಸಂಖ್ಯೆಗಳಿಂದ ಮತ್ತು ಅವುಗಳ ಪ್ರಾಬಲ್ಯತೆಯಿಂದ ಮಾತ್ರ ಅಳೆಯುವುದಿಲ್ಲ ಎಂಬುದನ್ನೂ ನೆನಪಲ್ಲಿಡಬೇಕು. ಆದುದರಿಂದ ಕವಿಯು ಆ ಎಲ್ಲ ಭಾವಗಳನ್ನು ಹೇಳುತ್ತಲೇ ಅವುಗಳನ್ನು ಮೀರುವ ಪ್ರಯತ್ನವನ್ನೂ ಮಾಡಬೇಕು. ಅಂದರೆ ಮಾತ್ರ ಕಾವ್ಯ ಪರಿಪೂರ್ಣವಾಗುತ್ತದೆ.
ಒಟ್ಟಿನಲ್ಲಿ ಸಹೃದಯರು ಅಪೇಕ್ಷಿಸುವುದು ತಮ್ಮನ್ನು ಭವದತ್ತ ಮತ್ತು ವ್ಯಾವಹಾರಿಕ ಲೋಕದತ್ತಲೂ ಸೆಳೆಯುವ ಕಾವ್ಯವನ್ನು. ಆದುದರಿಂದ ಅಂತಹ ಕಾವ್ಯಗಳೇ ಜನಪ್ರಿಯತೆಯನ್ನು ಪಡೆಯುವಲ್ಲಿ ಶಕ್ಯವಾಗುತ್ತವೆ. ದೇಶಕಾಲಾದಿಗಳ ಪರಿಧಿಯನ್ನೂ ಮೀರಿ ಓದುಗರ ಮನದಲ್ಲಿ ಸ್ಥಾಯಿಯಾಗಿ ಉಳಿಯುತ್ತವೆ.
Sunday, May 3, 2009
ಬೇಂದ್ರೆ ಕಾವ್ಯದಲ್ಲಿ ಒಲವು
ಕಾಲಕ್ಕೂ ಕಾವ್ಯಕ್ಕೂ ಇರುವ ಸಂಬಂಧ ವಿಚಿತ್ರವಾದದ್ದು. ಒಂದು ಯುಗ ತನಗೆ ಬೇಕಾದ ಕವಿಯನ್ನು ಆರಿಸಿಕೊಳ್ಳುವಂತೆ ಆ ಕವಿ ಕೂಡ ತನಗೆ ಅನುಕೂಲವಾದ ಕಾವ್ಯವನ್ನು ಸೃಷ್ಟಿಸಬಲ್ಲ . ಆ ಕಾವ್ಯ ಹೊಸ ಯುಗಕ್ಕೇ ಜೀವಕೊಡುತ್ತದೆ. ಅಂತೆಯೇ ಬೇಂದ್ರೆಯವರ ಕಾವ್ಯ ನವೋದಯದ ಕಾಲದ ಉತ್ಕೃಷ್ಟ ಫಲವಾಗಿರುವಂತೆ ಬೇಂದ್ರೆಯವರ ಕಾವ್ಯ ಕನ್ನಡದಲ್ಲಿ ನವೂದಯವನ್ನೇ ಸೃಷ್ಟಿಸಿತು ಎಂದೂ ಹೇಳಬಹುದು. ಈ ನವೋದಯಕಾಲದ ಬಹುಪಾಲು ಕಾವ್ಯಗಳ ವಸ್ತುವಾಗಿದ್ದು ಪೌರಾಣಿಕ ಕಾವ್ಯಗಳಿಗಿಂತ ತೀರ ಭಿನ್ನವಾದ ಸಾಮಾನ್ಯಜನರ ಜೀವನದಲ್ಲಿನ 'ಒಲವು'. ಬೇಂದ್ರೆಯವರು ತಮ್ಮ ಕಾವ್ಯಗಳಲ್ಲಿ ಒಲವನ್ನು ವಸ್ತುವಾಗಿ ಬಳಸಿದಷ್ಟು ಸುಂದರವಾಗಿ ಮತ್ತು ಸಹಜವಾಗಿ ಮತ್ತೆ ಯಾವ ಕವಿಯೂ ಬಳಸಿರಲಾರ. ಅವರು ತಮ್ಮ ಕಾವ್ಯಗಳಲ್ಲಿ ತುಂಬಿದ ಒಲವು, ಅತ್ಯಂತ ಸಾಮಾನ್ಯವಾಗಿರುವುದನ್ನೇ ಹೇಳುತ್ತಾ ದೈವಿಕತೆಯನ್ನು ಪಡೆದುಕೊಂಡುಬಿಡುವುದು ತುಂಬಾ ವಿಶೇಷವಾದದ್ದು.
ಬೇಂದ್ರೆ ಅವರ ಪ್ರಾರಂಭದ ಪ್ರಣಯ ಕಾವ್ಯ ಸಂಕಲನಗಳಲ್ಲಿ ಕಾಮ ಪ್ರಧಾನವಾದ ಕವಿತೆಗಳೇ ಹೆಚ್ಚು. ಅಂತಹ ಒಂದು ಕವನ ಸಂಕಲನ 'ಕಾಮ ಕಸ್ತೂರಿ'. ಅದರ ಮುನ್ನುಡಿಯಲ್ಲೇ 'ಕಾಮ ಕಸ್ತೂರಿಯಂತೆ ಒಕ್ಕಾಲು ಮದ ಮುಕ್ಕಾಲು ಮಣ್ಣು, ಆದರೂ ಗಮಗಮಿಸುವ ಸವಿಗಂಪು ! ' ಎನ್ನುತ್ತಾರೆ. ಅದರಲ್ಲಿನ ಒಂದು ಕವನದ ಸಾಲು ' ಕವಳ ಮೆಲ್ಲುವ ಬಾಯ ಹವಳ ತುಟಿಯ ಹಿಂಡುತ್ತ ನಿವಳ ನಿಂತಾಳ ನಿಳವೀಲೆ ಗಿಣಿ ಹೇಳ ಇವಳ ಮನವೆಲ್ಲಿ ಇರಬಹುದೆಂದು ' . ಇದು ಹಳ್ಳಿ ಯುವಕನೊಬ್ಬ ತನ್ನ ಮನದನ್ನೆಯ ನಿಲವನ್ನು ಬಣ್ಣಿಸುವ ರೀತಿ. ಇಲ್ಲಿಯ ಪದ, ಪ್ರತಿಮೆ ಮತ್ತು ಧಾಟಿ ಎಲ್ಲ ಜಾನಪದ. ಆದರೂ ಇದು ಕಟ್ಟಿಕೊಡುವ ಅನುಭಾವ ಇದೆಯಲ್ಲ ಅದು ಮಾತ್ರ ಎಷ್ಟು ಪರಿಷ್ಕೃತ ನೋಡಿ. 'ಇವಳ ಮನವೆಲ್ಲಿ ಇರಬಹುದು?' ಎಂಬ ಸಾಲಿನಲ್ಲಿನ ಅಂತರ್ಮುಖತೆ ಅದು ಸಂಪೂರ್ಣ ನಾಗರಿಕ ಅಲ್ಲವೇ?? ಇದೇ ಹೊತ್ತಿನ ಅವರ ಇನ್ನೊಂದು ಕವನ, ' ಕಲ್ಪವೃಕ್ಷ ಬೃಂದಾವನಂಗಳಲಿ ' . ಅಲ್ಲಿ ಅವರು ಪ್ರಣಯಾನುಭವವನ್ನು ಬೆಳಕು ಕತ್ತಲೆ, ಅಮೃತ ವಿಷಗಳಿಗೆ ಹೋಲಿಸುತ್ತಾರೆ. (ಒಂದೊಂದು ಸಾಲಿನಲ್ಲೂ contrast ನಿರೂಪಿಸುತ್ತ ಸಾಗುವ ಈ ಕವಿತೆ ತುಂಬಾ ಜಟಿಲವಾಗಿ ತೋರುತ್ತದೆ.) ' ಬಾಲ ಸುತ್ತಿ ಹೆಡೆಯೆತ್ತಿ ತೂಗುತಿರೆ ಭೊಗಸುಪ್ತಕಾಲ ಈ ತೋಳಿನಲಿ ಹೋಳು ಮೈ ಇರಲು ಬೀಸಿತಿಂದ್ರಜಾಲ ' ಇಂತಹ ಸಾಲುಗಳಲ್ಲಿ ಕಾಮದ ಅಂತರ್ಮುಖತೆಯಲ್ಲಿಯೇ ಸಾಂಸ್ಕೃತಿಕ ಮೌಲ್ಯಗಳಾದ ಸೌಂದರ್ಯ ಮತ್ತು ಆಧ್ಯಾತ್ಮಿಕತೆಯೆರಡೂ ಸೇರಿಬಿಡುತ್ತವೆ.
ಆದರೆ ಅವರ ನಂತರದ ಪ್ರಣಯ ಕವಿತೆಗಳನ್ನು ನೋಡಿದರೆ ಅಲ್ಲಿನ ಅನುಭವ ತಂತಾನೇ ಅನುಭಾವವಾಗುವುದು ತೋರುತ್ತದೆ. ನಾದಲೀಲೆಯಲ್ಲಿನ ಕವನಗಳಲ್ಲಿ ಇಂಥದ್ದನ್ನು ಹೇರಳವಾಗಿ ಕಾಣಬಹುದು. ಅವರು ತೋರಿಸುವ ವಿರಹದ ಉತ್ಕಟತೆ ಅದ್ಭುತ. ಈ ಸಾಲುಗಳನ್ನೇ ನೋಡಿ ' ಕಾಣದ ವಸ್ತುವಿನ ಕಾಣಬೇಕೆಂಬಾಸೆ, ಮಿತಿಯ ಮೀರಿದೆ ಜೀವಾ '. ಆ ಕಾಣದ ವಸ್ತು ಪ್ರಿಯಕರನಾಗಿರಬಹುದು ಅಥವಾ ದೇವರು?? ಹೀಗೆ ಅದೃಶ್ಯದೊಡನೆ ನೋಡಬಯಸುವ ದೃಷ್ಟದ ಹಂಬಲವಿರಬಹುದೇ ಎಂದು ಪ್ರಶ್ನಿಸಿದಂತೆ ಅನ್ನಿಸುವ ಕವಿತೆಗಳು ನಾದಲೀಲೆಯಲ್ಲಿ ಇವೆ. ಅವರ ಒಲವಿನ ಕಾವ್ಯಗಳಲ್ಲಿನ ಇನ್ನೊಂದು ಮಗ್ಗುಲು ಅಂದರೆ ಮುಗ್ಧತೆ ಮತ್ತು ಪ್ರೌಢತೆಯನ್ನು ಒಟ್ಟೊಟ್ಟಿಗೇ ಅವರು ಹೇಳುವ ರೀತಿ. 'ನಾನು ಬಡವಿ, ಆತ ಬಡವ, ಒಲವೆ ನಮ್ಮ ಬದುಕು' ಎಂಬ ಅವರ ಕಾವ್ಯನಾಯಿಕೆಯೊಬ್ಬಳ ಮಾತಿನಲ್ಲಿರುವ ಮುಗ್ಧತೆ ಮತ್ತು ಆ ಪ್ರೌಢತೆ ಅದ್ಭುತವಾದದ್ದು.
ಅವರ ಇನ್ನೊಂದು ವಿಶಿಷ್ಟ ಒಲವಿನ ಕವಿತೆ 'ಹುಬ್ಬಳ್ಳಿಯಾಂವಾ'. ಆ ಕವಿತೆಯಲ್ಲಿನ ನಾಯಿಕೆಯ ಸುಖದುಃಖ ಉನ್ಮಾದಗಳು ಐಂದ್ರಿಕತೆಯಿಂದ ತುಂಬಿ ತುಳುಕುತ್ತವೆ. 'ಬಂಗಾರ ಹುಡಿಲೆ ಭಂಡಾರನ ಬೆಳೆಸೆಂದಾವ' , ' ಜೋಗತೇರಿಗೆ ಮೂಗುತಿ ಅಂತ ನನಗ ಅಂದಾವಾ'. ಇಲ್ಲಿನ ಅತಿಶಯೋಕ್ತಿ ಅನುಭವವನ್ನು ಅನುಭಾವವಾಗಿಸುವ ಅವರ ಕಾವ್ಯದ ಒಂದು ಉಪಾಯ! ಕಳೆದುಹೋದ (ಸೆಟಕೊಂಡು ಹೋದ) ಸೆಟ್ಟರ ಹುಡುಗನನ್ನು ಕಾಯುತ್ತ ಹಾದಿ ಬೀದಿ ಹುಡುಕುವ ಈ ನಾಯಿಕೆಯ ವಿರಹ ಚೆನ್ನಮಲ್ಲಿಕಾರ್ಜುನನನ್ನು ಹುಡುಕುವ ಅಕ್ಕನನ್ನು ನೆನಪಿಸುವುದು ಇದೇ ಕಾರಣಕ್ಕೆ. ಒಮ್ಮೆ ಕಂಡು ಮರೆಯಾದ ಆ ಸೆಟ್ಟರ ಹುಡುಗನ ಚೆಲುವು ಮನಸ್ಸಿಗೆ ಇಂತಹ ಉನ್ಮಾದ ತಂದಿರಬೇಕಿದ್ದರೆ ಆ ಪ್ರಣಯದ ಅನುಭವದ ಶಕ್ತಿ ಹೇಗಿರಬೇಡ?!
ಕೊನೆಯಲ್ಲಿ ಅವರ ಇನ್ನೊಂದು ಕವಿತೆಯ ಬಗ್ಗೆ ಗಮನ ಕೊಡಬೇಕು. ಅದು 'ಸಂಗೀತ'. ಬೇಂದ್ರೆಯವರು ತನ್ನ ಆತ್ಮಚರಿತ್ರೆಯನ್ನು ಅದರಲ್ಲಿ ನಿರೂಪಿಸಿದ್ದಾರೆ. ಅಲ್ಲಿನ ಅವರ ಪ್ರಣಯಾನುಭವ ವಿಶೇಷ. ಏಕೆಂದರೆ ಅವರ ಪತ್ನಿಯೇ ಇಲ್ಲಿ ಅವರ ಪ್ರಣಯಿನಿ. ಜಗತ್ತಿನ ಬಹುಪಾಲು ಎಲ್ಲ ಪ್ರಣಯ ಕಾವ್ಯಗಳಲ್ಲಿ ವಿವಾಹ ಪೂರ್ವ ಅಥವಾ ವಿವಾಹ ಬಾಹಿರ ಪ್ರಣಯವನ್ನು ನಿರೂಪಿಸಿದರೆ, ಬೇಂದ್ರೆ ವಿವಾಹೋತ್ತರ ಪ್ರಣಯವನ್ನು ನಿರೂಪಿಸುತ್ತಾರೆ. ( ಭಾಸನ ಸ್ವಪ್ನವಾಸವದತ್ತದ ನೆನಪು ತರುತ್ತದೆ ಇದು. ಅಲ್ಲಿ ವಾಸವದತ್ತೆ ಉದಯನನ ಸಖಿ, ಗ್ರಹಿಣಿ ಮತ್ತು ಪ್ರಿಯಶಿಷ್ಯೆ ಕೂಡ. ) ಬೇಂದ್ರೆಯವರ ಸಖಿಗೀತದ ಆದರ್ಶವೂ ಇದೇ. ಈ ಕವನಸಂಕಲನದ ಮೊದಲಿಗೆ ಐಂದ್ರಿಕ ಅನುಭವಗಳ ಕವಿತೆಗಳು ಇದ್ದರೂ ನಂತರದಲ್ಲಿ ಸಾವುನೋವುಗಳ ಆತಂಕ ಮತ್ತು ಬಡತನ ಸಿರಿವಂತಿಕೆಗಳ ನಿತ್ಯ ಅನುಭವಗಳೂ ಇವೆ.
ಬೇಂದ್ರೆಯವರ ಜೀವನದ ತುಂಬಾ ಹೃದಯ ಒಡೆದು ಚೂರಾಗುವ ಸನ್ನಿವೇಶಗಳು ತುಂಬಿದ್ದವು. ಚೊಚ್ಚಲ ಹಸುಗೂಸು ಹುಟ್ಟಿದೊಡನೆ ತೀರಿಹೋಯಿತು. ಜೊತೆಯಲ್ಲಿ ಆರ್ಥಿಕ ಸಂಕಷ್ಟ. ಹೀಗಿರುವಾಗ ಅವರ ದೀರ್ಘದಾಂಪತ್ಯದಲ್ಲಿ ಪರಸ್ಪರ ವಿಮುಖತೆ ಬಂದಿರಬಹುದು. ಇವೆಲ್ಲವನ್ನೂ ಅವರ ಒಲವಿನ ಕವನಗಳಲ್ಲಿ ಹೇರಳವಾಗಿ ಕಾಣಬಹುದು. ಅಂತೆಯೇ ಒಡೆದ ಹೃದಯದ ಕನ್ನಡಿಯನ್ನು ಜೋಡಿಸುವ ದಾಂಪತ್ಯದ ಕುಶಲತೆಗೇನೂ ಕಡಿಮೆ ಇಲ್ಲ ಅವರ ಕವನಗಳು. ಇದೇ ಅವರ ಕಾವ್ಯದ ಕುಶಲಕರ್ಮ ಮತ್ತು ಅವರ ಜೀವನದ ಕುಶಲಕರ್ಮವೂ ಆಗಿರುವುದು ದೊಡ್ಡ ಗುಣ. ಹೀಗೆ ಅವರ ಕವಿತೆಗಳಲ್ಲಿನ ಅತೀ ಉದ್ದದ ಪಲ್ಲವಿಯಾದ, ' ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರಾರು ಕಾಮಾಕ್ಷಿಯೇ? ' ಕೊನೆಯಲ್ಲೂ ಪ್ರಶ್ನೆಯಾಗಿ ಉಳಿದು ಒಲವಿನಂತೆ ನಿರಂತರ ಕಾಡುತ್ತದೆ.
Thursday, April 23, 2009
ಭಾವಗೀತ
ಭಾವಗೀತ ಎಂಬ ಶಬ್ದ ಮರಾಠಿಯಿಂದ ಬಂದದ್ದಿರಬೇಕು. ಆದರೆ ಇಂಗ್ಲಿಷ್ ನ Lyric (ಲಿರಿಕ್) ಶಬ್ದಕ್ಕೆ ಪ್ರತಿಯಾಗಿ ನಾವೀಗ ಅದನ್ನು ಬಳಸುತ್ತಿದ್ದೇವೆ. ನಮ್ಮ ಕನ್ನಡದ ಆಧುನಿಕ ಭಾವಗೀತೆಗೆ ಈ ಕಥನ ಮತ್ತು ಗದ್ಯ ಎರಡರ ಹಂಗೂ ಇಲ್ಲ. ಪಲ್ಲವಿ, ಅನುಪಲ್ಲವಿ ಮತ್ತು ಚರಣಗಳ ಬಂಧನವೂ ಇಲ್ಲದೆ ಹೆಚ್ಚು ಮುಕ್ತವಾಗಿದೆ.
ಶ್ರೀ ಅವರ 'ಇಂಗ್ಲಿಷ್ ಗೀತಗಳು' ಪ್ರಕಟವಾದ ಮೇಲೆ ಕನ್ನಡದಲ್ಲಿ ಈ ಹೊಸ ಭಾವಗೀತ ಪ್ರಾಕಾರ ಜನ್ಮತಾಳಿತು ಅಥವಾ ಹೊಸ ಕವಿತೆಯ ಹುಡುಕಾಟ ಆರಂಭವಾಯಿತು ಎನ್ನಬಹುದು. ನಮ್ಮ ಆಧುನಿಕ ಭಾವಗೀತ ಹೆಚ್ಚು Wordsworth ನ ಕಾವ್ಯಗಳಿಂದ ಪ್ರಭಾವಿತವಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ. Wordswoth ನ ಕಾವ್ಯಶಾಸ್ತ್ರದಲ್ಲಿ emotion ಮತ್ತು feeling ಎಂಬ ಶಬ್ದಗಳಿಗೆ ಪ್ರಾಶಸ್ತ್ಯವಿದೆ. ನಮ್ಮ ಭಾವಗೀತೆಯಲ್ಲಿನ 'ಭಾವ' ಶಬ್ದವಿದೆಯಲ್ಲ ಅದು ಬಹುಷಃ ಈ ಇಂಗ್ಲಿಷ್ ಪದಗಳನ್ನು ಕನ್ನಡಿಸಲಿಕ್ಕೆಂದೇ ಬಂದಿರಬೇಕು. ಬೇಂದ್ರೆಯವರು ತಮ್ಮದೊಂದು ಹೇಳಿಕೆಯಲ್ಲಿ ಹಳೆಯ ಕಾವ್ಯ ಅರ್ಥಪ್ರಧಾನವಾಗಿದ್ದರೆ ಹೊಸ ಕವಿತೆ ಭಾವ ಪ್ರಧಾನವಾಗಿದೆ ಎಂಬ ಮಾತನ್ನು ಹೇಳುತ್ತಾರೆ. Wordsworth ಕೂಡ ಜೀವನದ ಕೆಲವು ಸನ್ನಿವೇಶಗಳು ಅನೇಕ ಭಾವಗಳನ್ನು ಹುಟ್ಟಿಸುತ್ತವೆ ಎಂದು ಹೇಳುತ್ತಾ ಆ ಭಾವಗಳಿಂದಲೇ ಕಾವ್ಯ ಜನಿಸುತ್ತದೆ ಮತ್ತು ಆ ಸನ್ನಿವೇಶಗಳಿಗಿಂತ ಆ ಭಾವಗಳೇ ಮುಖ್ಯವಾಗಿಹೊಗುತ್ತವೆ ಎನ್ನುತ್ತಾನೆ.
ಈ ಭಾವಗೀತದ ಪ್ರಯತ್ನ ,ತಾನು ಸಮಾಜದ ರಕ್ಷಣೆ ಪೋಷಣೆಗಳಿಂದ, ಅದು ಹೇರುವ ನಿರ್ಬಂಧಗಳಿಂದ, ನೀತಿ ನಿಯಮಗಳಿಂದ ಧಾರ್ಮಿಕತೆಯನ್ನು ಬಿಡಿಸಿಕೊಂಡು ಸ್ವತಂತ್ರವಾದ ವೈಯಕ್ತಿಕತೆಯನ್ನು ಪಡೆದ ನಂತರ ಕವಿಯಲ್ಲಿ ಆರಂಭವಾಗುತ್ತದೆ. ಆ ಕವಿಯ ಸಂವೇದನೆ ಸಮಾಜದ ಒಂದು ಜೀವಂತ ಅಂಗವಾಗಿದ್ದಾಗಿನ ಸಂವೆದನೆಗಿಂತ ತೀರ ಭಿನ್ನವಾಗುತ್ತ ಹೋಗುತ್ತದೆ. ಆಗ ಕಾವ್ಯದ ಸಂಗತಿಯಲ್ಲಿ ಕಥೆಯೂ ಕಾವ್ಯವಾಗುತ್ತದೆ. ಅದಕ್ಕೆಂದೇ ಈ ಕಾವ್ಯ ಉಪಮಾನದ ಬಗ್ಗೆ ಇರುವ ಅದಮ್ಯವಾದ ಹಂಬಲ ಎನ್ನುತ್ತಾನೆ Wordswoth. ಕಾವ್ಯ ಯಾವತ್ತೂ ತನಗಿಂತ ಭಿನ್ನವಾದದ್ದನು, ಭಿನ್ನವಾಗಿದ್ದರೂ ಸಾಮಾನಧರ್ಮವುಳ್ಳ ಉಪಮಾನವನ್ನು ಜಗತ್ತಿನಲ್ಲಿ ಹುಡುಕುತ್ತಿರಬೇಕು ( ಉಪಮಾನಿಷ್ಟಾಃ ಕವಯಃ ). ಈ ಭಿನ್ನವಾದದ್ದನ್ನು ಹುಡುಕುವ ಸ್ರಜನಶೀಲತೆ ಸಾಮಾನ್ಯ ಭಾಷೆಯಲ್ಲಿ ಅಸಾಮಾನ್ಯವಾದ ಅರ್ಥವನ್ನು ಒಡಮೂಡಿಸಿಸುವ ಕವಿತೆಯ ಆಕಾಂಕ್ಷೆ ಆಯಿತು. ಇದೇ ಭಾವಗೀತದ ಸ್ವರೂಪವಾದ ಅನುಭಾವಕ್ಕೆ ಇಂಬು ಕೊಡುವುದು.
ಹೊಸ ಭಾವಗೀತಗಳಲ್ಲಿ ಬಹಳಷ್ಟು ನಿಸರ್ಗದ ಚೆಲುವನ್ನು ಕುರಿತು ಬರೆದವುಗಳಾಗಿವೆ. ನಿಸರ್ಗದ ಚೆಲುವನ್ನು ಅದ್ಭುತವಾಗಿ ಹಿಂದಿನ ಕವಿಗಳು ವರ್ಣಿಸಿದ್ದರೂ ನಿಸರ್ಗಕ್ಕೆ ಒಂದು ವ್ಯಕ್ತಿತ್ವ ಬಂದಿದ್ದು ಹೊಸಕವಿತೆಗಳಿಂದಾಗಿಯೇ. ಇಂಗ್ಲಿಷ್ ನ ರೊಮ್ಯಾಂಟಿಕ್ ಅಥವಾ ರಮ್ಯ ಕಾವ್ಯಗಳು ಕನ್ನಡದ ಆಧುನಿಕ ನಿಸರ್ಗ ಕವಿತೆಗಳಮೇಲೆ ಪ್ರಭಾವ ಬೀರಿವೆ. ಆದರೂ ನಾವು ಪ್ರೃಕ್ರೃತಿಯನ್ನು ಪುಸ್ತಕವಾಗಿಸಲಿಲ್ಲ. ಅದನ್ನು ನಮ್ಮ ಕವಿಗಳು ಪ್ರತಿಮೆಗಳಾಗಿಸಿದರು. ಹೀಗೆ ಕನ್ನಡ ಸಾಹಿತ್ಯದ ಭಾವಗೀತೆಗಳು ತಮ್ಮದೇ ಆದ ಸ್ವಂತಿಕೆ ಮತ್ತು ಚೆಲುವನ್ನು ಪಡೆದುಕೊಂಡಿವೆ.
ಕಾವ್ಯ ಕೃಷಿ ಹೇಗಿರಬೇಕುಂಬುದಕ್ಕೆ ಬೇಂದ್ರೆ ಅವರ ಒಂದು ಮಾತು ಮಹಾನೀಯವಾದದ್ದು "ಬಿತ್ತಿದರೆ ಬಿತ್ತುವುದು ಮುಕ್ಕು ಚಿಕ್ಕೆಯ ಕಾಳು, ಮುತ್ತು ರತುನವ ಬಿತ್ತಿ ಮಾಡದಿರು ಹೊಲ ಹಾಳು " ಅಂದರೆ ಕಾವ್ಯದಲ್ಲಿನ ಭಾಷೆ ಸಾಮಾನ್ಯವಾಗಿದ್ದು ವಿಶೇಷವಾದದ್ದನ್ನು ಹೇಳಬೇಕು. ಕವಿತೆ ಪ್ರಶ್ನೆ ಉತ್ತರ ಎರಡೂ ಆಗಬೇಕು. ಕವಿತೆ ತನ್ನ ಇರವನ್ನು ತೋರ್ಪಡಿಸಲು ಸದ್ದು ಮಾಡಬೇಕು. ಶಬ್ದಾರ್ಥಗಳ ನಡುವಿನ ಸಂಬಂಧದ ಮೇಲೆ ಕವಿಯ ಪ್ರಯತ್ನ ಇರಬೇಕು. ಪ್ರತಿಯೊಬ್ಬ ಕವಿಯೂ ಈ ಪರಿಸ್ಥಿತಿಯ ಆಹ್ವಾನವನ್ನು ಸ್ವೀಕರಿಸದೆ ವಿಧಿಯಿಲ್ಲ. ಭಾವಗೀತೆ ಚಿಕ್ಕದಾದರೂ ಇಂಥ ಮಹತ್ವದ ಪ್ರಶ್ನೆಗಳನ್ನು ಎದುರಿಸಲು ಸಿದ್ದವಾಗಿದೆ. ಭಾವಗೀತೆಯ ಕಾವ್ಯವೇ ಕಾವ್ಯದ ವಸ್ತುವಾಗುತ್ತ ಸಾಗುತ್ತಿದೆ.