Thursday, September 24, 2009

ಕನ್ನಡ ಸಾಹಿತ್ಯದಲ್ಲಿ ಅನುಭಾವ-೧

ಅನುಭಾವ ಎಂಬ ಶಬ್ದಕ್ಕೆ ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟವಾದ ಅರ್ಥ ಬೆಳೆದು ಬಂದಿದೆ. ಸಂಸ್ಕೃತದ ಅಲಂಕಾರ ಗ್ರಂಥಗಳಲ್ಲಿ ಬರುವ 'ಭಾವ' , 'ವಿಭಾವ', 'ಅನುಭಾವ' ಮುಂತಾದ ಶಬ್ದಗಳು ಕನ್ನಡದ ಈ ಶಬ್ದಕ್ಕೆ ಮೂಲವಾದರೂ, ಕನ್ನಡದಲ್ಲಿ ಅನುಭಾವ ಶಬ್ದ ಇವೆಲ್ಲಕ್ಕಿಂತ ತೀರ ಭಿನ್ನವಾದ ಮತ್ತು ಮಹತ್ವಪೂರ್ಣ ಅರ್ಥ ಪಡೆದುಕೊಂಡಿದೆ. ಅನುಭಾವ ಶಬ್ದಕ್ಕೆ ಸಂಸ್ಕೃತದಲ್ಲಿ ಗ್ರಹಿಕೆ ಎಂಬ ಅರ್ಥವಿದೆ ಅಷ್ಟೇ. ಮತ್ತು ಆ ಶಬ್ದದ ಪ್ರಯೋಗವನ್ನು ಸಾಹಿತ್ಯದಲ್ಲಿ ವ್ಯಾಪಕವಾಗಿ ಎಲ್ಲೂ ಮಾಡಲಾಗಿಲ್ಲ ಕೂಡ. ಆದರೆ ಕನ್ನಡ ಸಾಹಿತ್ಯದಲ್ಲಿ ಅನುಭಾವ, ಸಾಹಿತ್ಯದ ಒಂದು ಪ್ರಾಕಾರವಾಗಿಯೇ ರೂಪುಗೊಂಡುಬಿಟ್ಟಿದೆ. ಸಾಮಾನ್ಯವಾಗಿ, ಯಾವುದೇ ಭಾಷೆಯಲ್ಲಿನ ಶಬ್ದಗಳು ಮತ್ತು ಅವುಗಳಿಂದ ಸ್ಫುರಣಗೊಳ್ಳುವ ಅರ್ಥ ಎರಡೂ ಆಡುಭಾಷೆಯಿಂದ ಆ ಭಾಷೆಯ ಗ್ರಂಥ ಲೇಖನ ಕ್ರಮ ಅಥವಾ ಸಾಹಿತ್ಯಕ್ಕೆ ಸೇರಿಹೋಗುತ್ತವೆ. ಆದರೆ ಕೆಲವೇ ಶಬ್ದಗಳು ಸಾಹಿತ್ಯದಿಂದ ದಿನನಿತ್ಯದ ಭಾಷೆಗೆ ಸೆರ್ಪಡೆಯಾಗುತ್ತವೆ. ಹೀಗೆ ಅನುಭಾವ ಶಬ್ದಕ್ಕೆ ಒಂದು ಮಹತ್ವಪೂರ್ಣವಾದ ಅರ್ಥವೊಂದು ಕನ್ನಡ ಸಾಹಿತ್ಯದಿಂದ ಬೆಳೆದುಬಂದಿದೆ. "ಅನುಭಾವವೆಂಬುದು ಆತ್ಮವಿದ್ಯೆ, ಅನುಭಾವವೆಂಬುದು ನಿಜನಿವಾಸದಲ್ಲಿರಿಸುವುದು." ಎಂಬ ಶಿವಶರಣರ ಮಾತುಗಳಿಂದ ಅನುಭಾವ ಶಬ್ದದ ಅರ್ಥ ಕಲ್ಪನೆಯನ್ನು ಮಾಡಿಕೊಳ್ಳಬಹುದು. ತಮ್ಮ ಅರಿವಿನಿಂದ ಮತ್ತು ಆಚರಣೆಯಿಂದ ಪಡೆದ ಅನುಭವವನ್ನು ಶಿವಶರಣರು ಅನುಭಾವ ಎಂದು ಕರೆದರು. ಹೀಗೆ ಅನುಭಾವ ಶಬ್ದವನ್ನು ತಮ್ಮ ನುಡಿಗಳಲ್ಲಿ ವಚನಗಳಲ್ಲಿ ವ್ಯಾಪಕವಾಗಿ ಬಳಸಿದ್ದು ಮಾನವ ಜೀವನದ ಮಹೋದ್ದೇಶವನ್ನೇ ಒಳಗೊಳ್ಳಬಲ್ಲ ವಿಶಾಲ ಅರ್ಥದಿಂದ ಅದನ್ನು ಶ್ರೀಮಂತಗೊಳಿಸಿದ್ದಾರೆ.


ಕನ್ನಡದ ಸಾಹಿತ್ಯದ ಇತಿಹಾಸವನ್ನು ಗಮನಿಸಿದಾಗ ಅನುಭಾವ ಸಾಹಿತ್ಯ ಕನ್ನಡದಲ್ಲಿ ಜೈನಸಾಹಿತ್ಯದೊಂದಿಗೆ ಆರಂಭವಾಯಿತು ಎನ್ನಬಹುದು. ಆದರೂ ಜೈನ ಸಾಹಿತ್ಯಕ್ಕೆ ರಾಜಾಶ್ರಯದೊರೆತ ಕಾರಣದಿಂದಾಗಿ ಅಲ್ಲಿ ಅನುಭಾವದ ಅಂಶ ಅಷ್ಟಾಗಿ ತೋರದೆ ಸಾಹಿತ್ಯಿಕ ಅಂಶಗಳೇ ಹೆಚ್ಚಾಗಿ ಕಾಣಬರುತ್ತವೆ ಎಂದು ನನಗನ್ನಿಸುತ್ತದೆ. ಏಕೆಂದರೆ ಸಾಹಿತ್ಯ ರಚನೆ ಮತ್ತು ಅನುಭಾವ ಸಾಹಿತ್ಯದ ಉದ್ದೇಶಗಳು ಬೇರೆ ಬೇರೆ. ಸಾಹಿತ್ಯವೆಂದರೆ, ಒಂದು ಸಾಮಾನ್ಯ ಅರ್ಥದಲ್ಲಿ, ಅದು ಭಾವನಿಷ್ಠವಾದ, ಮನೋಲ್ಲಾಸಗೊಳಿಸುವ ಮತ್ತು ಸ್ವಲ್ಪ ಮಟ್ಟಿಗೆ ನೀತಿ ಸಾರುವ ಬರವಣಿಗೆ. ಆದರೆ, ಅನುಭಾವ ಸಾಹಿತ್ಯದ ರಸ, ಕೇವಲ ಬುದ್ದಿ ಮತ್ತು ಮನಸ್ಸನ್ನು ಮಾತ್ರ ತೃಪ್ತಿ ಪಡಿಸುವುದಾಗಿ ಉಳಿಯುವುದಿಲ್ಲ. ಅದು ಹೃದಯವನ್ನು ಅರಳಿಸಿ ಸತ್ಯದ ಪ್ರತ್ಯಕ್ಷ ದರ್ಶನ ಪಡೆಯವ ಹಂಬಲವನ್ನೂ ಜಿಜ್ಜ್ನಾಸೆಯನ್ನೂ ತುಂಬಿಸುತ್ತದೆ. ಮತ್ತು ಅತೀ ಮುಖ್ಯವಾಗಿ ಅನುಭಾವ ಸಾಹಿತ್ಯ, ಅನುಭಾವಿಯ ಅನುಪಮ ಆನಂದದಿಂದ ಜನ್ಮ ಪಡೆದದ್ದು. ಮಾತು ಮನಗಳಿಗೆ ಮೀರಿದ್ದು. ಅದು, ನಾರದರು ತಮ್ಮ ಭಕ್ತಿಸೂತ್ರದಲ್ಲಿ ಹೇಳುವಂತೆ "ಮೂಕಂ ಸ್ವಾದನವತ್", ಮೂಕನು ರುಚಿ ನೋಡಿದಂತೆ (ಅಂದರೆ ರುಚಿಯ ಅನುಭವವನ್ನು ಅವನಿಗೆ ತಿಳಿಸಲು ಶಕ್ಯವಿಲ್ಲ). ಆದರೂ ಅನುಭಾವಿಗೆ, ತಾನು ನಡೆದ ಹಾದಿ, ತಾನು ಕಂಡ ಸತ್ಯ ಮತ್ತು ಪಡೆದ ಆ ಆನಂದವನ್ನು ಲೋಕಕಲ್ಯಾಣಕ್ಕಾಗಿ ತಿಳಿಸಲು ಅನಿವಾರ್ಯ ವಾಹಕವಾಗಿ ಸಾಹಿತ್ಯ ಅವತರಿಸುತ್ತದೆ. ಹೊರತೂ ಸಾಹಿತ್ಯರಚನೆಯೇ ಮುಖ್ಯ ಉದ್ದೇಶವಾಗಿರುವುದಿಲ್ಲ. ಆದ್ದರಿಂದ ಕನ್ನಡ ಸಾಹಿತ್ಯದಲ್ಲಿ, ಮುಖ್ಯವಾಗಿ ಹನ್ನೆರಡನೇ ಶತಮಾನದಲ್ಲಿ ಸೃಷ್ಟಿಯಾದ ಶರಣ ಸಾಹಿತ್ಯ ಮತ್ತು ಹದಿನೈದನೇ ಶತಮಾನದಲ್ಲಿ ದಾಸರು ಹಾಡಿದ ದಾಸಸಾಹಿತ್ಯ ಇವೆರಡೂ ಅನುಭಾವ ಸಾಹಿತ್ಯದಲ್ಲಿ ಪ್ರಮುಖವಾದ ಘಟ್ಟಗಳಾಗಿವೆ.

ಶರಣ ಸಾಹಿತ್ಯ
ದರ್ಶನ, ಜೀವನದ ಗುರಿ ಮುಂತಾದ ಮಾತುಗಳಿಂದ ಸಾಹಿತ್ಯ ತನ್ನ ಸ್ವರೂಪವನ್ನು ಕಳೆದುಕೊಳ್ಳುತ್ತದೆ ಎಂಬ ಅಭಿಪ್ರಾಯ ಸಹಜ. ಸಾಹಿತ್ಯದ ಮುಖ್ಯ ಲಕ್ಷಣ ಭಾವ ಮತ್ತು ಆನಂದ. ಸೌಂದರ್ಯವನ್ನು ಕಂಡಾಗ ಸಾಹಿತಿಯ ಮನ ಭಾವದಿಂದ ತುಂಬಿ ಅದನ್ನು ತಾನೇ ಆಗಿ ಅನುಭವಿಸಿ, ಆ ರಸಾನುಭವದ ಆನಂದವನ್ನು ಕಾವ್ಯದ ಮೂಲಕ ಅಭಿವ್ಯಕ್ತಗೊಳಿಸುತ್ತಾನೆ. ’ಅದು ತಾನೇ ಆಗುವ’ ತಲ್ಲೀನತೆಯೇ ಸಾಹಿತಿ ಮತ್ತು ಅನುಭಾವಿಯಲ್ಲಿರುವ ಸಮಾನ ಧರ್ಮ. ಆದರೆ ಆ ’ಅದು’ ಯಾವುದು ಎಂಬುದರ ಮೇಲೆ ’ರಸಾನುಭವ’ ಅಥವಾ ’ಅನುಭಾವ’ ಸಿದ್ದವಾಗುತ್ತದೆ. ಆ ಬಾಹ್ಯ ಸೌಂದರ್ಯದ ಹಿಂದಿರುವ ಚಿರಂತನ ಸೌಂದರ್ಯವನ್ನು ಅನುಭಾವಿ ಕಾಣುತ್ತಾನೆ. ಮತ್ತು ಆನಂದ ಶಬ್ದವನ್ನು ವಿಶಾಲ ಅರ್ಥದಲ್ಲಿ ಪರಿಗಣಿಸಿದಾಗ ಅದು ಕೇವಲ ಮನಸನ್ನು ಉದ್ದೀಪನಗೊಳಿಸುವ ಭಾವ ಮಾತ್ರವಲ್ಲದೇ ಹೃದಯವನ್ನೂ ಧನ್ಯಗೊಳಿಸುವ ಭಾವ. ಅಂತಹ ಶಕ್ತಿಯನ್ನು ಒಳಗೊಂಡಾಗಲೇ ಸಾಹಿತ್ಯ ಸಾರ್ಥಕ. ಆ ಸಾರ್ಥಕತೆಯನ್ನೇ ಶರಣಸಾಹಿತ್ಯ ಪಡೆದಿದೆ.

ಶರಣಸಾಹಿತ್ಯ ಹುಟ್ಟಿದ್ದು ಉತ್ತರ ಕರ್ನಾಟಕದ ಭಾಗದಲ್ಲಿ. ಆದ್ದರಿಂದಲೇ ಶರಣರ ವಚನಗಳಲ್ಲಿ ಉತ್ತರ ಕರ್ನಾಟಕದ ಭಾಷೆಯ ಸೊಗಡೂ ಸೇರಿಹೊಗಿದೆ. ಬಸವಣ್ಣ, ಅಲ್ಲಮ ಪ್ರಭು, ಹಾವಿನಾಳ ಕಲ್ಲಯ್ಯ, ಅಕ್ಕಮಹಾದೇವಿ, ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ ಹೀಗೆ ನೂರಾರು ಶರಣರು ವಚನಗಳ ಮೂಲಕ ಸಾಮಾನ್ಯ ಜನತೆಯಲ್ಲೂ ಆಧ್ಯಾತ್ಮವನ್ನು ಬಿತ್ತಿದರು. ಬಸವಣ್ಣನವರ ಅನುಭವ ಮಂಟಪ ಶರಣರಿಗೆ ನೆಲೆಯಾಗಿ ಶರಣ ಸಾಹಿತ್ಯಕ್ಕೆ ಕೇಂದ್ರವಾಯಿತು.

ಶರಣರು ತೆರೆದ ಕಂಗಳಿಂದ ಜೀವನವನ್ನು ನೋಡಿದವರು. ಅವರ ಅಭಿವ್ಯಕ್ತಿಯ ಪ್ರಬಲವಾದ ಸಂವಹನ ವಚನಗಳ ಮೂಲಕವಾಗಿ ನಡೆದದ್ದು. ಮತ್ತು ಆ ಸಂವಹನವು ಯಶಸ್ವಿಯಾದದ್ದು ಅವರ ವಚನಗಳ ಮಾರ್ಮಿಕತೆಯಿಂದಾಗಿ. ಸಾಹಿತಿ ವಸ್ತುವಿನ ರೂಪವನ್ನು ವರ್ಣಿಸಿದರೆ, ಅನುಭಾವಿ ವಸ್ತುವಿನ ರಹಸ್ಯ ಸ್ವರೂಪವನ್ನು ಕುರಿತು ಯೋಚಿಸುತ್ತಾನೆ. ಶರಣರಲ್ಲಿ ಈ ಶಕ್ತಿಯನ್ನು ಕಾಣುತ್ತೇವೆ. ಲೋಕದ ಘಟನೆಗಳಿಂದ ಅವರ ಮನಸ್ಸು ಕವಿಯಂತೆ ಮಿಡಿಯುತ್ತದೆ. ಆದರೆ ಅಷ್ಟರಲ್ಲೇ ಕೊನೆಗೊಳ್ಳದೇ ಅವರ ಮುಂದಿನ ಸಾಧನೆಗೂ ಪ್ರೆರಣೆಯಾಗಿದೆ. ಆದ್ದರಿಂದಲೇ ಮೋಕ್ಷ, ಸೃಷ್ಟಿ ಮುಂತಾದ ವಿವೇಚನೆಯ ಭಾರವನ್ನು ಶರಣರ ವಚನಗಳು ಸುಲಭವಾಗಿ ಹೊರಬಲ್ಲವು ಮತ್ತು ಕಾವ್ಯಸೌಂದರ್ಯವನ್ನೂ ಬೀರಬಲ್ಲವು.

ಅನಿರ್ವಚನೀಯವಾದ ತಮ್ಮ ಅನುಭವವನ್ನು ಮಾತಿನಲ್ಲಿ ಹಿಡಿದಿಡುವ ಶರಣರ ಸಾಹಸ ಕನ್ನಡ ಭಾಷೆಗೇ ಆಶ್ಚರ್ಯಕರವಾದ ಶಕ್ತಿಯನ್ನು ತಂದು ಕೊಟ್ಟಿದೆ. ಉದಾಹರಣೆಗೆ ಅಲ್ಲಮ ಪ್ರಭುವಿನ ಈ ವಚನವನ್ನೇ ನೋಡಿ.
"ಆದಿ ಅನಾದಿಯಿಲ್ಲದಂದು, ಹಮ್ಮುಬಿಮ್ಮುಗಳಿಲ್ಲದಂದು,
ಸುರಾಳ ನಿರಾಳವಿಲ್ಲದಂದು, ಶೂನ್ಯ ನಿಶ್ಯೂನ್ಯವಿಲ್ಲದಂದು
ಸಚಾರಚರವೆಲ್ಲ ರಚನೆಗೆ ಬಾರದಂದು,
ಗುಹೇಶ್ವರನೊಬ್ಬನೇ ಇದ್ದೆಯಲ್ಲ, ಇಲ್ಲದಂತೆ."
ಎಂದು ಅಲ್ಲಮಪ್ರಭುವು ಅವ್ಯಕ್ತವನ್ನು ಅತ್ಯಂತ ಸುಂದರವಾಗಿ ವರ್ಣಿಸುತ್ತಾನೆ.

"ಸಮುದ್ರದೊಳಗೆ ನೆರೆತೊರೆಗಳು ನೆಗಳ್ದವೆಂದರೆ
ಸಮುದ್ರದಿಂದನ್ಯಎಪ್ಪವೇ?
ನಿರ್ವಿಕಾರ, ನಿತ್ಯ, ನಿರಂಜನ, ನಿರ್ಗುಣ, ಪರಿಪೂರ್ಣ, ನಿರ್ವಿಕಲ್ಪ
ಪರಬ್ರಹ್ಮ ಶಿವನಿಂದನ್ಯವೆನ್ನಬಹುದೇ?"
ಸಮುದ್ರದಿಂದ ತೆರೆಗಳು ಎದ್ದರೂ ಸಮುದ್ರದಿಂದ ಭಿನ್ನ, ಅನ್ಯ ಎನ್ನಬಹುದೇ? ಹೀಗೆಯೇ ಸೃಷ್ಟಿಕರ್ತ ಮತ್ತು ಸೃಷ್ಟಿಯ ಸಂಬಂಧ ಎನ್ನುತ್ತಾನೆ ಅಲ್ಲಮ.

"ಗಗನವೇ ಹುಂಡಿಗೆ , ಆಕಾಶವೇ ಅಗ್ಗವಣಿ,
ಚಂದ್ರ ಸೂರ್ಯರಿಬ್ಬರೂ ಪುಷ್ಪ,
ರುದ್ರನೋಗರ, ಸುಯಿಧಾನ ನೋಡಾ,
ಗುಹೇಶ್ವರಲಿಂಗಕ್ಕೆ ಪೂಜೆನೋಡಾ!"
ಗಗನವೇ ಹುಂಡಿ, ಆಕಾಶವೇ ಅರ್ಘ್ಯ, ಸೂರ್ಯಚಂದ್ರರು ಪುಷ್ಪದಂತೆ, ಈ ಸರ್ವ ಸೃಷ್ಟಿಯೇ ಶಿವಲಿಂಗಕ್ಕೆ ಪೂಜೆಯಂತೆ ತೋರುತ್ತದೆ ಅಲ್ಲಮನಿಗೆ. ಪ್ರಭುದೇವನ ಇಂತಹ ವಚನಗಳಲ್ಲಿನ ಭ್ಹವ್ಯವಾದ ಕಲ್ಪನೆ, ಅನುಭವ, ಎಲ್ಲವೂ ಕವೀತ್ವದ ಎಲ್ಲ ಸ್ತರಗಳನ್ನೂ ಮೀರಿಸುತ್ತವೆ. ಪ್ರಭುವೇ ಹೇಳುವಂತೆ ಮಾತೇ ಜ್ಯೋತಿರ್ಲಿಂಗವಾದಂತೆ ತೋರುತ್ತದೆ.

ಅದೃಶ್ಟವನ್ನೂ ದೃಶ್ಟವಾಗಿಸುವ ಕಾವ್ಯ ಶರಣರದ್ದು. ಸರ್ವ ವಸ್ತುಗಳಲ್ಲೂ ವ್ಯಾಪಿಸಿರುವ ಶಿವನನ್ನು ಕುರಿತು ಬಸವಣ್ಣನವರು ಹೀಗೆ ಹೇಳಿದ್ದಾರೆ.
"ಮರೀಚಿಕೆಯೊಳಗಣ ಬಿಸಿಲಿನಂತೆ ಇದ್ದಿತ್ತ,
ಕ್ಷೀರದೊಳಗಣ ತುಪ್ಪದಂತೆ ಇದ್ದಿತ್ತ,...
ನುಡಿಯೊಳಗಣ ಅರ್ಥದಂತೆ ಇದ್ದಿತ್ತ..."

ಬಸವೇಶ್ವರರ ವಚನಗಳಲ್ಲಿಯಂತೂ ಭಕ್ತಿಯ ಮಿಡಿತ ಎಲ್ಲರ ಚೈತನ್ಯಗಳಲ್ಲಿ ದಿವ್ಯತೆ ತುಂಬುವಂತೆ ಮಾಡುತ್ತದೆ. ಅವರ "ಎನ್ನ ಕಾಲೇ ಕಂಬ, ದೇಹವೇ ದೇಗುಲ, ಸಿರ ಹೊನ್ನ ಕಳಶವಯ್ಯ.. ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ.." ಎಂಬ ಮಾತುಗಳಲ್ಲಿ ಅವರ ಸರ್ವಾರ್ಪಣೆ, ಅಹಂಕಾರ ನಿರಸನ ಇವುಗಳನ್ನು ಕಾಣಬಹುದು. ಅನುಭಾವದ ಕುರಿತ ಬಸವಣ್ಣನವರ ನಿಲುವನ್ನು ಈ ವಚನದ ಕೆಲವು ಸಾಲುಗಳಲ್ಲಿ ನೋಡಬಹುದು.
"ಪೂಜೆಯುಳ್ಳನ್ನಬರ ಲಿಂಗವ ಹಾಡಿದೆ,
ಮಾಟವುಳ್ಳನ್ನಬರ ಜಂಗಮವ ಹಾಡಿದೆ,
ಜಿಹ್ವೆಯುಳ್ಳನ್ನಬರ ಪ್ರಸಾದವ ಹಾಡಿದೆ,
ಈ ತ್ರಿವಿಧ ನಾಸ್ತಿಯಾದ ಬಳಿಕ
ಎನ್ನ ನಾ ಹಾಡಿಕೊಂಡೆ ಕಾಣಾ ಕೂಡಲ ಸಂಗಮದೇವಾ."
ಮಾತಿನ ಅರ್ಥಕ್ಕೆ ಮೀರಿದ ಪರಿಶುದ್ದ ಭಾವನೆಯನ್ನ ಈ ವಚನದಲ್ಲಿ ಕಾಣಬಹುದು.

ತಮ್ಮ ಸಾಧನೆಯಲ್ಲಿ ಸಿದ್ದಿಯನ್ನು ಪಡೆದ ಶರಣರೆಲ್ಲಾ ಈ ಎತ್ತರಕ್ಕೇ ಏರಿದವರು. ಅನುಭಾವವನ್ನು ಹೇಳಿದ ಅವರ ಮಾತುಗಳಲ್ಲಿ ಒಂದೇ ಸತ್ಯವನ್ನೇ ಕಾಣಬಹುದು. ’ಸಾವ ಕೆಡುವ ಗಂಡನರೊಯ್ದು ಒಲೆಯೊಳಗೆ ಇಕ್ಕಿ, ಸಾವಿಲ್ಲದ ಕೇಡಿಲ್ಲದ ಚೆಲುವಂಗೊಲಿದೆನಯ್ಯಾ’ ಎಂದು ಹಾಡಿ, "ಚಿಲಿ ಮಿಲಿ ಎಂದೋದುವ ಗಿಳಿಗಳಿರಾ ನೀವು ಕಾಣೀರೇ’ ಎಂದು ತನ್ನ ಪತಿ ಮಲ್ಲಿಕಾರ್ಜುನನಿಗೆ ಪರಿತಪಿಸುವ ಅಕ್ಕಮಹಾದೇವಿಯೂ, ತನ್ನ ಸತಿಪತಿ ಭಾವದ ಸಾಧನೆಯ ಕೊನೆಯಲ್ಲಿ ತಾನೇ ಪತಿಯಾಗಿ ಪರಿಣಮಿಸಿ ಹೀಗೆ ಹಾಡುತ್ತಾಳೆ.
"ತನು ನಿಮ್ಮ ರೂಪಾದ ಬಳಿಕ ನಾನಾರಿಗೆ ಮಾಡುವೆ?
ಮನ ನಿಮ್ಮ ರೂಪಾದ ಬಳಿಕ ನಾನಾರಿಗೆ ನೆನೆವೆ?
ಪ್ರಾಣ ನಿಮ್ಮ ರೂಪಾದ ಬಳಿಕ ನಾನಾರನಾರಾಧಿಸುವೆ?
ಅರಿವು ನಿಮ್ಮಲ್ಲಿ ಸ್ವಯವಾದ ಬಳಿಕ ನಾನಾರನರಿವೆ?
ಚೆನ್ನಮಲ್ಲಿಕಾರ್ಜುನ ನಿಮ್ಮಲ್ಲಿ ನೀವಾಗಿ ನಿಮ್ಮಿಂದ ನಿಮ್ಮ ಮರೆದೆನಯ್ಯಾ."

ವಚನ ಸಾಹಿತ್ಯದ ಸೌಂದರ್ಯವು ಉಳಿದ ಎಲ್ಲ ಸಾಹಿತ್ಯಗಳಿಗಿಂತ ಮಿಗಿಲಾದದ್ದು. ಅಲ್ಲಿಯವರೆಗೂ ಕನ್ನಡದಲ್ಲಿ ಬಳಕೆಯಲ್ಲಿದ್ದ ಚಂಪೂ ಶೈಲಿಯನ್ನು ಸಡಿಲಗೊಳಿಸಿ ಸರಳವಾದ ಮತ್ತು ಆಕರ್ಷಕವಾದ ಪರಿಣಾಮಕಾರಿಯಾದ ಭಾಷೆಯ ರೂಪವೊಂದನ್ನು ಕನ್ನಡ ಸಾಹಿತ್ಯದಲ್ಲಿ ಶರಣರು ತಂದರು. ತಮ್ಮ ಭಾವನೆಗಳನ್ನು ಮನಮುಟ್ಟುವಂತೆ ಹೇಳುವುದಕ್ಕಾಗಿ ಅವರು ಬಳಸಿಕೊಂಡ ಅಲಂಕಾರಗಳು, ಸಾದೃಶ್ಯಗಳೂ, ವಚನಗಳಿಗೆ ಅನೇಕ ಬಾರಿ ಭಾವಗೀತೆಗಳ ಸ್ವರೂಪವನ್ನು ತಂದು ಕೊಟ್ಟಿವೆ.
ಉದಾಹರಣೆಗೆ,
"ಚಕೋರಂಗೆ ಚಂದ್ರಮನ ಚಿಂತೆ,
ಅಂಬುಜಕೆ ಭಾನುವಿನ ಚಿಂತೆ,
ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ,
ಎನಗೆ ನಮ್ಮ ಕೂಡಲ ಸಂಗಮದೇವರ ನೆನೆವುದೇ ಚಿಂತೆ."

ಎಂಬ ವಚನಗಳಲ್ಲಿನ ಪ್ರಾಸಗಳ ಸೊಬಗು,

"ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ,
ಸುಳಿದು ಬೀಸುವ ವಾಯು ನಿಮ್ಮ ದಾನ,
ನಿಮ್ಮ ದಾನವನುಂಡು ಅನ್ಯರ ಹೊಗಳುವ
ಕುನ್ನಿಗಳನೇನೆಂಬೆ ರಾಮನಾಥ"

ಎನ್ನುವ ವಚನಗಳಲ್ಲಿರುವ ಶ್ಲೇಷೆಯನ್ನಾಗಲಿ ಗಮನಿಸಿದಾಗ ವಚನಕಾರರು ತಮ್ಮ ಭಾಷೆಯಲ್ಲಿ ಸಾಧಿಸಿರುಸುವ ಸಹಜತೆ ಕಾಣುತ್ತದೆ. ಅಲ್ಲದೆ ಅವರು ನೀಡುವ ಉಪಮಾನಗಳು, ರೂಪಕಗಳು ಓದುಗರ ಅನುಭವದ ಪರಿಧಿಯನ್ನೂ ಹೆಚ್ಚಿಸುತ್ತವೆ.

ಶರಣರ ಸ್ವತಂತ್ರ ಮನೋಭಾವ, ಆಚಾರ-ವಿಚಾರಗಳ ಸಮನ್ವಯ ಎಲ್ಲವೂ ಇಂದಿನ ವಿಚಾರವಂತ ಯುಗಕ್ಕೆ ಹೆಚ್ಚಾಗಿ ಹಿಡಿಸುತ್ತವೆ. ಸುಮಾರು ಒಂಭೈನೂರು ವರುಷಗಳ ಹಿಂದೆಯೇ ಶರಣರು ಕಾಯಕದ ಮಹತ್ವವನ್ನೂ ಆದರ್ಶವನ್ನೂ ಸಾರಿದ್ದಾರೆ. ಅವು ಇಂದಿಗೂ ಅಷ್ಟೇ ಪ್ರಸ್ತುತ. ಶರಣರು ತಾವು ಕಂಡ ಉಚ್ಚ ಆದರ್ಶಗಳು, ಎಲ್ಲರನ್ನೂ ಸಮಾನವಾಗಿ ಕಾಣುವ ಗುಣ, ಹೀಗೆ ಎಲ್ಲವನ್ನೂ ತಮ್ಮ ವಚನಗಳ ಮೂಲಕ ಸರಳವಾದ ಭಾಷೆಯಲ್ಲಿ ವ್ಯಕ್ತವಡಿಸಿದ್ದಾರೆ. ಅಲ್ಲದೇ ಕನ್ನಡ ಭಾಷೆಯನ್ನೂ ಶಕ್ತಿಯುತವನ್ನಾಗಿ ಮಾಡಿದ್ದಾರೆ. ಆದ್ದರಿಂದಲೇ ಶರಣ ಸಾಹಿತ್ಯ ವಿಶ್ವ ಸಾಹಿತ್ಯದಲ್ಲೇ ಶ್ರೇಷ್ಠ ಅನುಭಾವ ಸಾಹಿತ್ಯವಾಗಿ ಪರಿಣಮಿಸಿದೆ. ಮತ್ತು ಕನ್ನಡ ಸಾಹಿತ್ಯ ವಾಹಿನಿಯಲ್ಲಿ ಒಂದು ಉಜ್ವಲ ಘಟ್ಟವಾಗಿ ಇಂದಿಗೂ ಸಾಮಾನ್ಯ ಜನತೆಯಲ್ಲಿಯೂ ಆನುಭಾವದ ಆನಂದವನ್ನು ನೀಡಿ, ಆಧ್ಯಾತ್ಮದ ಜಾಗೃತಿಯನ್ನು ಮೂಡಿಸುವಲ್ಲಿ ಸಮರ್ಥವಾಗಿದೆ.

(ಅನುಭಾವ ಸಾಹಿತ್ಯದ ಇನ್ನೊಂದು ಪ್ರಮುಖ ಘಟ್ಟ ’ದಾಸ ಸಾಹಿತ್ಯ’. ಆ ಬಗ್ಗೆ ನನ್ನ ಮುಂದಿನ ಪೋಸ್ಟನಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.)

Wednesday, September 2, 2009

ಸಾವಿತ್ರಿ

(’ಸಾವಿತ್ರಿ’, ಶ್ರೀ ಅರಬಿಂದೋ ಅವರ ಮಹಾಕಾವ್ಯ. ಶ್ರೀ ಅರಬಿಂದೋ ಅವರ ಎಲ್ಲ ಮಹತ್ವದ ಕ್ರತಿಗಳೂ ಇಂಗ್ಲಿಷ್ ಭಾಷೆಯಲ್ಲಿಯೇ ರಚಿತವಾದವುಗಳಾಗಿದ್ದು ಸಾವಿತ್ರಿಯೂ ಸಹ ಅದೇ ಭಾಷೆಯಲ್ಲಿದೆ. ಅರಬಿಂದೋ ಯೋಗಿಗಳಂತೂ ಸತ್ಯ, ಆದರೆ ಮುಖ್ಯವಾಗಿ ಅವರು ಕವಿಗಳೂ ಹೌದು. ಬಾಲ್ಯದಿಂದಲೇ ಅವರ ಕಾವ್ಯ ಸೃಷ್ಟಿ ಮೂಡತೊಡಗಿತ್ತು. ’Early poems, Last poems' ಎಂಬ ಅವರ ಕವನ ಸಂಕಲನದ ಜೊತೆಗೆ ಗೀತ ನಾಟಕ, ಕಥನಕಾವ್ಯ ಮತ್ತು ಬಂಗಾಲಿಯಲ್ಲಿ ಅನೇಕ ಭಾವಗೀತಗಳು ಪ್ರಕಟವಾಗಿವೆ. ’ಸಾವಿತ್ರಿ’ ಅವರ ಕೃತಿಗಳಲ್ಲಿ ಮಹೋನ್ನತವಾದುದು. ’ಸಾವಿತ್ರಿ’ ಕೃತಿಯು ಅವರ ಜೀವನದ ಉತ್ತರಾರ್ಧದ ೨೫ ವರುಷಗಳ ಅವಧಿಯಲ್ಲಿ ರೂಪುಗೊಂಡಿತು. ಸುಮಾರು ೨೪ ಸಾವಿರ ದೀರ್ಘ್ ಪಾದಗಳನ್ನು ಒಳಗೊಂಡ ಮಹಾಕೃತಿ ’ಸಾವಿತ್ರಿ’. ಈ ಕಥನ ಕಾವ್ಯದಲ್ಲಿ ಬರುವ ’ಮರಣ’ ವನ್ನು ಕುರಿತ ಭಾಗ, ಶ್ರೀ ಅರಬಿಂದೋ ಅವರು ಕೊನೆಯುಸಿರೆಳೆಯುವ ಸ್ವಲ್ಪ ಪೂರ್ವದಲ್ಲಿ ರೂಪುಗೊಂಡಿತು. ತಾವು ಪಡೆದ ಸಾಕ್ಷಾತ್ಕಾರದ ಘಟನೆಯ ನಂತರದ ಅವಧಿಯಲ್ಲಿ ’ಸಾವಿತ್ರಿ’ ಕಾವ್ಯ ರಚನೆಗೊಂಡಿತೆಂದೂ ಹಾಗೂ ಅವರು ಹೊಂದಿದ ಪರಮಸತ್ಯದ ಸಂಪರ್ಕದಿಂದ ಮೂಡಿಬಂದಿತೆಂಬುದಾಗಿ ಅರಬಿಂದೋ ಅವರೇ ಕಾವ್ಯದ ಆರಂಭದಲ್ಲಿ ಹೇಳುತ್ತಾರೆ. ಅನುಭಾವ ಸಾಹಿತ್ಯ ಪ್ರಾಕಾರಗಳಲ್ಲಿ ’ಸಾವಿತ್ರಿ’ ಕೃತಿಯನ್ನು ಕಾವ್ಯರತ್ನವಾಗಿ ಪರಿಗಣಿಸಲಾಗುತ್ತದೆ. ಅರಬಿಂದೋ ಅವರೇ ತಮ್ಮ ’ಸಾವಿತ್ರಿ’ ಕಾವ್ಯದ ಬಗ್ಗೆ ಹೀಗೆನ್ನುತ್ತಾರೆ: " Savitri is an Experiment in Mystic Poetry, Spiritual poetry cast into a symbolic figure." )

’ಸಾವಿತ್ರಿ’ ಕಥನ ಕಾವ್ಯದ ವಸ್ತು, ಮಹಾಭಾರತದ ಅರಣ್ಯಪರ್ವದಲ್ಲಿ ಹೇಳಲಾದ ’ಸಾವಿತ್ರಿ-ಸತ್ಯವಾನರ' ಉಪಾಖ್ಯಾನವನ್ನು ಆಧರಿಸಿದೆ. ಅರಣ್ಯ ಪರ್ವದಲ್ಲಿ, ವನವಾಸವನ್ನು ಅನುಭವಿಸಿತ್ತಿರುವ ಧರ್ಮರಾಜನ ದುಃಖವನ್ನು ಹಗುರಗೊಳಿಸಲು ಮಾರ್ಕಾಂಡೇಯ ಮುನಿಗಳು ಪರಮ ಪತಿವ್ರತೆಯಾದ ಸಾವಿತ್ರಿಯ ಕಥೆಯನ್ನು ಹೇಳುತ್ತಾರೆ. ಮಾದ್ರದೇಶದ ಅರಸುವಾದ ಅಶ್ವಪತಿ ಹದಿನೆಂಟು ವರ್ಷಗಳ ಕಠೋರ ವ್ರತವನ್ನು ಆಚರಿಸಿ, ಸಾವಿತ್ರಿ ದೇವಿಯ ಪ್ರೀತ್ಯರ್ಥವಾಗಿ ಒಂದು ಲಕ್ಷ್ಯ ಯಜ್ಞಗಳನ್ನು ಮಾಡಿ ತೇಜಸ್ವಿನಿಯಾದ ಕನ್ಯೆಯೊಬ್ಬಳನ್ನು ಪುತ್ರಿಯಾಗಿ ಪಡೆಯುತ್ತಾನೆ. ಸಾವಿತ್ರಿ ದೇವಿಯ ವರಪ್ರಸಾದದ ಸಂಕೇತವೆಂದು ಪುತ್ರಿಗೆ ’ಸಾವಿತ್ರಿ’ ಎಂದೇ ನಾಮಕರಣವಾಗುತ್ತದೆ. ಸಾವಿತ್ರಿ ಅತ್ಯಂತ ಸುಂದರಿಯೂ, ದಿವ್ಯ ತೇಜಸ್ವಿನಿಯಾಗಿ ಬೆಳೆದು ನಿಲ್ಲಲಾಗಿ ಅವಳನ್ನು ವರಿಸಲು ತರುಣರೆಲ್ಲ ಹಿಂಜರಿಯುತ್ತಾರೆ. ಇದರಿಂದ ಚಿಂತಿತನಾದ ಅಶ್ವಪತಿಯು ಮಗಳಿಗೆ ’ನಿನ್ನ ಪತಿಯನ್ನು ನೀನೇ ಶೋಧಿಸು’ ಎಂಬುದಾಗಿ ಹೇಳಿ ದೇಶಸಂಚಾರದ ಸಿದ್ಧತೆ ಮಾಡಿದನು. ಆಕೆ ಎರಡು ವರ್ಷಗಳ ಕಾಲ ದೇಶವನ್ನೆಲ್ಲ ಸಂಚರಿಸಿ ಮರಳಿ ಬಂದು, ಸಾಲ್ವದೇಶದ ಅರಸು ಕುವರನಾದ ಸತ್ಯವಾನನನ್ನು ವರಿಸುವುದಾಗಿ ಹೇಳುತ್ತಾಳೆ. ಸತ್ಯವಾನನು, ರಾಜ್ಯವನ್ನು ಕಳೆದುಕೊಂಡ ಮತ್ತು ಅಂಧನಾದ ತನ್ನ ತಂದೆಯೊಂದಿಗೆ ತಪೋವನದಲ್ಲಿ ವಾಸಿಸುತ್ತಿರುತ್ತಾನೆ. ಆಗ ಅಲ್ಲಿಗೆ ಬರುವ ನಾರದರು ಸತ್ಯವಾನನು ತೇಜಸ್ವಿ, ಶೂರ, ವಿನಯಶೀಲ ಹಾಗು ಶಾಂತನು. ಆದರೂ ಸತ್ಯವಾನನು ಅಲ್ಪಾಯುಶಿಯಾದ್ದರಿಂದ ಬೇರೊಬ್ಬ ವರನನ್ನು ವರಿಸುವಂತೆ ಸಾವಿತ್ರಿಯಲ್ಲಿ ಆಗ್ರಹಿಸುತ್ತಾರೆ. ಆದರೆ ಸಾವಿತ್ರಿಯು ಒಪ್ಪದೆ ಸತ್ಯವಾನನ್ನೇ ವರಿಸಿ ಅವನೊಂದಿಗೆ ಸಂತೋಶದಿಂದ ಜೀವನ ನಡೆಸುತ್ತಿರಲಾಗಿ ಸತ್ಯವಾನನು ಅಕಾಲ ಮರಣವನ್ನಪ್ಪುತ್ತಾನೆ. ಆದರೆ ಸಾವಿತ್ರಿಯು ತನ್ನ ಪತಿಯ ಜೀವವನ್ನು ಸೆಳೆದ ಯಮಧರ್ಮನನ್ನು, ಪತಿಯನ್ನು ಹಿಂದುರಿಗಿಸೆಂದು ಹಿಂಬಾಲಿಸುತ್ತಾಳೆ. ಅವಳ ಮನೋಧೈರ್ಯ ಮತ್ತು ವಾಕ್ಚಾತುರ್ಯಗಳನ್ನು ಮೆಚ್ಚಿದ ಧರ್ಮನು ಪತಿಯ ಜೀವವನ್ನೊಂದನ್ನು ಬಿಟ್ಟು ಬೇಕಾದ ಯಾವುದಾದರೂ ನಾಲ್ಕು ವರಗಳನ್ನು ಕೇಳು ಎನ್ನಲಾಗಿ ಸಾವಿತ್ರಿಯು ತನ್ನ ಮಾವನಿಗೆ ಕಣ್ಣು, ಮತ್ತು ರಾಜ್ಯವನ್ನು ಹಾಗೂ ತನ್ನ ತಂದೆಗೆ ಪುತ್ರಶತ ಭಾಗ್ಯವನ್ನೂ ಬೇಡುತ್ತಾಳೆ. ಹಾಗೂ ಕೊನೆಯದಾಗಿ ತನಗೂ ಸತ್ಯವಾನನಿಗೂ ಪುತ್ರಶತಲಾಭವಾಗಲೆಂದು ಕೇಳಿಕೊಳ್ಳುತ್ತಾಳೆ. ಎಲ್ಲವೂ ಸಿದ್ದಿಸಲೆಂದು ಆಶಿರ್ವದಿಸಿದ ಯಮಧರ್ಮನು ಇನ್ನು ಹೊರಡೆನ್ನುತ್ತಾನೆ. ಅದಕ್ಕೆ ಸಾವಿತ್ರಿಯು ಸತ್ಯವಾನನಿಲ್ಲದೇ ನಾಲ್ಕನೇ ವರದ ಸಿದ್ದಿಯು ಹೇಗೆ ಸಾಧ್ಯವೆನ್ನಲಾಗಿ ಅವಳ ಭಕ್ತಿಯನ್ನು ಮೆಚ್ಚಿದ ಧರ್ಮನು ಸತ್ಯವಾನನ್ನು ತನ್ನ ಪಾಶದಿಂದ ಮುಕ್ತಗೊಳಿಸಿ ಆಶೀರ್ವದಿಸಿ ಕಳಿಸುತ್ತಾನೆ. ಇದು ಮೂಲ ಮಹಾಭಾರತದಲ್ಲಿನ ಕಥೆ.

ಕೆಲವೇ ಸಾಲುಗಳಲ್ಲಿ ವ್ಯಾಸರು ಉಲ್ಲೇಖಿಸಿದ ಈ ಸುಂದರ ಕಥೆಯನ್ನು ಶ್ರೀ ಅರಬಿಂದರು ಹನ್ನೆರಡು ಅಧ್ಯಾಯಗಳಲ್ಲಿ ಹೇಳುತ್ತಾರೆ. ಮೊದಲ ಅಧ್ಯಾಯ ’The Book of Beginnings'. ಅದರ ಪ್ರಥಮ ಸರ್ಗದಲ್ಲಿ ಸಾಂಕೇತಿಕ ಅರುಣೋದಯದ ಚಿತ್ರವಿದೆ. ಸಾವಿತ್ರಿ ಎಚ್ಚರಗೊಳ್ಳುತ್ತಾಳೆ. ಸತ್ಯವಾನನು ಸಾಯುವ ದಿನವದು. ವಿಧಿಲಿಖಿತವನ್ನು ಬದಲಿಸಲು ಯಾರಿಗೆ ಸಾಧ್ಯ ಎಂದು ಹೇಳುತ್ತಲೇ ಸಾವಿತ್ರಿಯ ತಂದೆಯಾದ ಅಶ್ವಪತಿ ಮಹಾರಾಜನು ಹೇಗೆ ತನ್ನ ಯೋಗಸಾಧನೆಯಿಂದ ಸಾವಿತ್ರಿಯನ್ನು ಪುತ್ರಿಯಾಗಿ ಪಡೆದನೆಂಬ ವಿವರಣೆಯೊಂದಿಗೆ flash-back ಹೇಳುತ್ತ ಹೋಗುತ್ತಾರೆ. "A world's desire compelled her birth- ವಿಶ್ವದ ಹಿರಿ ಹಂಬಲವೇ ಸಾವಿತ್ರಿ ಜನ್ಮ ತಾಳಲು ಒತ್ತಾಯಪಡಿಸಿತು" ಎಂಬ ಮಾತನ್ನಾಡುತ್ತಾರೆ. ಹೀಗೆ ಸಾವಿತ್ರಿಯ ಜನನದ ಹಾಗೂ ಬೆಳವಣಿಗೆಯ ಕಥೆಯನ್ನು ’The book of Traveller of the worlds', 'The book of Divine Mother' ಮತ್ತು 'The book of Birth and Quest' ಎಂಬ ಮೂರು ಅಧ್ಯಾಯಗಳಲ್ಲಿ ಶ್ರೀ ಅರಬಿಂದೋ ವರ್ಣಿಸುತ್ತಾರೆ.

ಐದನೇಯ ಅಧ್ಯಾಯ ’The Book of Love'. ಈ ಅಧ್ಯಾಯದಲ್ಲಿ ಸಾವಿತ್ರಿಯು ತನ್ನ ವರನನ್ನು ಶೋಧಿಸಲು ಸಂಚರಿಸಿದ ವರ್ಣನೆ ಇದೆ. ಕೊನೆಯದಾಗಿ ಆಕೆ ಸತ್ಯವಾನನು ತನ್ನ ತಂದೆಯಾದ ದ್ಯುಮತ್ ಸೇನನ ಜೊತೆಗೆ ವಾಸಿಸುತ್ತಿರುವ ಅಶ್ರಮವನ್ನು ಪ್ರವೇಶಿಸುತ್ತಾಳೆ. ಅಲ್ಲಿನ ಪ್ರಕೃತಿಯ ವರ್ಣನೆಯನ್ನು ಕವಿ ಅತೀ ಸುಂದರವಾಗಿ ಮಾಡುತ್ತಾರೆ. ಅದು ’World of free and green delight' ಆಗಿತ್ತು ಎನ್ನುತ್ತಾರೆ. ಅಲ್ಲಿನ ವಾತಾವರಣದಲ್ಲಿ ಮೃದುತ್ವವಿತ್ತು, ಸೂಕ್ಶ್ಮ್ತೆತೆಯಿತ್ತು. ಆ ಆಶ್ರಮದಲ್ಲಿ ಸತ್ಯವಾನನ್ನು ಸಾವಿತ್ರಿ ನೊಡುತ್ತಾಳೆ. "her vision settled, caught and all was changed" - "ಆಕೆಯ ಕಣ್ಣು ಸ್ಥಿರವಾಗಿ ಅಲ್ಲಿಯೇ ನಿಂತಿತು, ಮತ್ತು ಎಲ್ಲವೂ ಪಲ್ಲಟವಾಯಿತು." ಎಂದು ಸಾವಿತ್ರಿಯ ಮನ ಸತ್ಯವಾನನಲ್ಲಿ ಸೇರಿದ್ದನ್ನು ಸುಂದರವಾಗಿ ಬಣ್ಣಿಸುತ್ತಾರೆ. "A mystic tumult from her depths arose"- "ಒಂದು ಅವಿದಿತ ಹರ್ಷ ಅವಳ ಆಂತರ್ಯದಿಂದ ಹೊರಹೊಮ್ಮಿತು." ಹೀಗೆ ಸತ್ಯವಾನನೊಂದಿಗೆ ಪರಸ್ಪರ ಸಂದರ್ಶನ-ಸಂಭಾಷಣೆಗಳಾದ ನಂತರ ವಿವಾಹದ ನಿರ್ಧಾರವಾಗುತ್ತದೆ. "The united Two began a greater age."-"ಅವರ ಮಿಲನವು ಅದೊಂದು ಉನ್ನತ ಯುಗವನ್ನೇ ನಿರ್ಮಿಸಿತು."

ಆರನೇ ಅಧ್ಯಾಯ ’The book of Fate'. ಸಾವಿತ್ರಿಯು ತನ್ನ ಸಂಚಾರವನ್ನು ಮುಗಿಸಿ ತನ್ನ ತಂದೆಯ ಮನೆಗೆ ಮರಳುತ್ತಾಳೆ. ಆ ಸಮಯದಲ್ಲಿ ಅಲ್ಲಿಯೇ ಇರುವ ನಾರದ ಮಹರ್ಷಿಗಳು ಸಾವಿತ್ರಿಯ ಅಪ್ರತಿಮ ಸೌಂದರ್ಯವನ್ನು ನೋಡಿ ಮಾಡಿದ ಭಾಷಣವು ವಿಶ್ವಸಾಹಿತ್ಯದಲ್ಲೇ ಒಂದು ಅಪೂರ್ವ ಕಾವ್ಯಭಾಗವೆಂದು ಹೇಳಲಾಗುತ್ತದೆ. ನಂತರ ಸಾವಿತ್ರಿಯು ತನ್ನ ಸಂಚಾರವನ್ನು ಕುರಿತು ವಿವರಿಸುತ್ತಾಳೆ. ಮತ್ತು ತಾನು ಸತ್ಯವಾನನನ್ನು ವರಿಸುವುದಾಗಿ ಹೇಳುತ್ತಾಳೆ. ಆಗ ನಾರದರು ಪ್ರಮಾದವಾಯಿತೆಂಬಂತೆ ಗಾಬರಿಯಾಗಿ ಸತ್ಯವಾನನು ಅಲ್ಪಾಯುಶಿಯೆಂದೂ ಇವತ್ತಿಗೆ ಸರಿಯಾಗಿ ಒಂದು ವರ್ಷಕ್ಕೆ ಮೃತ್ಯುಯೋಗವಿದೆಯೆಂದೂ ಹೇಳುತ್ತಾರೆ. ಆಗ ಚಿಂತೆಗೊಳಗಾಗುವ ಸಾವಿತ್ರಿಯ ತಂದೆಯು ಬೇರೊಬ್ಬ ವರನನ್ನು ಆರಿಸಲು ಕೇಳಿಕೊಳ್ಳುತ್ತಾನೆ. ಆಗ ಸಾವಿತ್ರಿಯು "ಪೂಜ್ಯ ಪಿತನೇ, ಏನೇ ಇರಲಿ, ಕೆಲವು ಸಂಗತಿಗಳನ್ನು ಒಮ್ಮೆಮಾತ್ರ ನಿರ್ಧರಿಸಲು ಸಾಧ್ಯ", " My father I have chosen. This is done." ಎಂದು ತನ್ನ ಅಚಲ ನಿರ್ಧಾರವನ್ನು ಹೇಳುತ್ತಾಳೆ. ಮೆಚ್ಚಿದ ನಾರದರು "The soul that can live alone with itself meets God" - "ಏಕಾಂಗಿಯಾಗಿ (ಸ್ವತಂತ್ರವಾಗಿ) ಇರಬಲ್ಲ ಜೀವಾತ್ಮ ಮಾತ್ರ ದೇವರ ದರ್ಶನ ಪಡೆಯುತ್ತದೆ" ಎಂದು ಹೇಳುತ್ತಾ ಆಕೆಯನ್ನು ಆಶೀರ್ವದಿಸಿ ಅವಳ ತಂದೆಯನ್ನು ಉದ್ದೇಶಿಸಿ "Alone she is equal to her mighty task" ಅವಳನ್ನು ಅವಳ ಮಟ್ಟಿಗೆ ಬಿಟ್ಟು ಬಿಡಿ ಎನ್ನುತ್ತಾರೆ. ಸಾವಿತ್ರಿ ಸತ್ಯವಾನರ ಮದುವೆಯು ಸೌಖ್ಯವಾಗಿ ನೆರವೇರಿ ಸಾವಿತ್ರಿಯು ಸತ್ಯವಾನನೊಂದಿಗೆ ತಪೋವನದಲ್ಲಿ ಸುಖದಿಂದ ಬದುಕುತ್ತಿರುತ್ತಾಳೆ.

'The Book of Yoga' ಏಳನೇ ಅಧ್ಯಾಯ. ಈ ಅಧ್ಯಾಯದಲ್ಲಿ ಸಾವಿತ್ರಿ ಸತ್ಯವಾನರ ಸುಖದ ದಾಂಪತ್ಯ ಜೀವನದ ವರ್ಣನೆ ಇದೆ. ಅವಳು ಆಶ್ರಮದ ಎಲ್ಲ ಕೆಲಸಗಳನ್ನು ಅತ್ಯಂತ ಪ್ರೇಮದಿಂದ ಗೈಯುತ್ತಿದ್ದಳು. ಅವುಗಳಲ್ಲೆಲ್ಲಾ 'A strange divinity shone- ಒಂದು ವಿಚಿತ್ರ ದೈವಿಕತೆ ಹೊಳೆಯತೊಡಗಿತು' ಎನ್ನುತ್ತಾರೆ ಅರಬಿಂದೋ. ಆದರೆ ವರ್ಷದ ಕೊನೆಯಾಗುತ್ತಿದ್ದಂತೆ ಸಾವಿತ್ರಿಗೆ ಸತ್ಯವಾನನ ವಿಧಿಲಿಖಿತ ನೆನಪಾಗತೊಡಗುತ್ತದೆ. "The grief of all the world came near to her- ಜಗತ್ತಿನ ದುಃಖವೆಲ್ಲವೂ ಆಕೆಯ ಬಳಿಗೆ ಬಂತು." ಆದರೂ ಆಕೆ ದುಃಖವನ್ನು ಯಾರಿಗೂ ತೋರಗೊಡಲಿಲ್ಲ. ಅವಳಿಗೆ ಇರುಇರುತ್ತಲೇ ಉತ್ಕಟ ಧ್ವನಿಯೊಂದು ಕೇಳತೊಡಗುತ್ತದೆ. "Find your soul, recover thy hid self- ನಿನ್ನ ಅಂತರಾತ್ಮವನ್ನು ಹುಡುಕು. ನಿನ್ನ ಆಳದಲ್ಲಿ ಅಡಗಿದ್ದನ್ನು ಹೊರತೆಗೆ". ಆಕೆ ತನ್ನನ್ನು ತಾನು ದೇಹಭಾವದಿಂದ ಬಿಡಿಸಿಕೊಂಡು ತನ್ನ ಆಂತರ್ಯದತ್ತ ನೋಡತೊದಗುತ್ತಾಳೆ. ಅಂತರಿಕ ಅಗ್ನಿ (Occult Fire) ಬಳಿ ಆಕೆ ಬರುತ್ತಾಳೆ. ಈ ಧ್ಯಾನದ ಸಮಯದಲ್ಲಿ ಆಕೆಗೆ ಆಂತರ್ಯದಲ್ಲಿ ಅನೇಕ ಅಡಚಣೆಗಳ ಅರಿವಾಗುತ್ತದೆ. ಅವನ್ನೆಲ್ಲವನ್ನು ಶ್ರೀ ಅರಬಿಂದೋ ವ್ಯಕ್ತಿಯಾಗಿಸುತ್ತಾರೆ (Personification). ಅವುಗಳನ್ನು 'The Mother of Seven Sorrows' ಎಂದು ಕರೆಯುತ್ತಾರೆ. ಆದರೆ ಸಾವಿತ್ರಿಯು ತನ್ನ ಆತ್ಮದ ತತ್ವದ ಅಂಶ (Part of The Soul) ಗಳೇ ಎಂದು ಭಾವಿಸಿ ಅವುಗಳಿಂದಲೂ ಆಧ್ಯಾತ್ಮದ ನೆರವು ಪಡೆಯುತ್ತಾಳೆ. ಅಧ್ಯಾಯದ ಕೊನೆಯಲ್ಲಿ ಅವಳು "She was no more herself but all the World- ಆಕೆ ಕೇವಲ ಅವಳು ಮಾತ್ರವಾಗಿರದೆ ಸಮಸ್ತ ವಿಶ್ವವೇ ಆಗಿದ್ದಳು." ಎನ್ನುತ್ತಾರೆ.

"The book of Death" ಎಂಟನೆಯ ಅಧ್ಯಾಯ. ಇಲ್ಲಿಂದ ಮತ್ತೆ ಕಥೆಯು 'flash back' ಮುಗಿದ ನಂತರದಲ್ಲಿ ಮುಂದುವರೆಯುತ್ತದೆ. ಆಕೆ ಬೆಳಗಿನಲ್ಲೆದ್ದು ಸತ್ಯವಾನನು ಶಿಲೆಯೊಂದರಲ್ಲಿ ಕಡೆದ ಮೂರ್ತಿಯೊಂದಕ್ಕೆ ನಮಿಸಿ ನಿತ್ಯದ ಕಾರ್ಯಗಳಲ್ಲಿ ತೊಡಗುತ್ತಾಳೆ. ಸತ್ಯವಾನ ಕಟ್ಟಿಗೆಗಾಗಿ ಕಾಡಿಗೆ ಹೊರಡಲಾಗಿ ತಾನೂ ಅವನ ಜೊತೆಗೆ ಹೋಗಿಬರುತ್ತೇನೆಂದು ಅತ್ತೆ ಮಾವಂದಿರ ಅಪ್ಪಣೆ ಪಡೆದು ಹೊರಡುತ್ತಾಳೆ. ಮುಂದಿನ ಕ್ಷಣ ಕ್ಷಣವೂ ಆಕೆಯನ್ನು ವಿಹ್ವಲ ಗೊಳಿಸುತ್ತದೆ. ಆದರೆ ಇದರ ಅರಿವಿಲ್ಲದ ಸತ್ಯವಾನನು ಮರವೊಂದನ್ನು ಕಡಿಯುತ್ತಿರುವಾಗ ಒಮ್ಮೆಲೇ ಕಡಿದ ಆ ಮರದ ವೇದನೆ ತನಗೆ ಆದಂತೆ ಭಾಸವಾಯಿತೆಂದು ಹೇಳತೊಡಗುತ್ತಾನೆ. ಸಾವಿತ್ರಿ ತಕ್ಷಣವೇ ಅವನನ್ನು ಮಲಗಿಸಿ ಅವನ ಶಿರವನ್ನು ತನ್ನ ಮಡಿಲಲ್ಲಿರಿಸಿಕೊಳ್ಳುತ್ತಾಳೆ. ಆಗ ಸತ್ಯವಾನನು "Savitri, Oh savitri, Lean down, my soul, and kiss me while I die - ನನ್ನ ಪ್ರಾಣಸ್ವರೂಪಳಾದ ಸಾವಿತ್ರಿಯೇ ಬಾಗಿ ಒಂದು ಮುದ್ದು ಕೊಡು ನಾನು ಸಾಯುತ್ತಿರುವೆ" ಎಂದು ನರಳುತ್ತಾನೆ. ಅವಳು ಸತ್ಯವಾನನ್ನು ಅಪ್ಪಿ ಹಿಡಿದು ಕೊನೆಯ ಮುದ್ದನ್ನು ಸಲ್ಲಿಸುತ್ತಾಳೆ. ಸತ್ಯವಂತನ ಜೀವವು ಆಕೆಯ ಅಪ್ಪುಗೆಯಿಂದ ಜಾರಿ ಹೋಗುತ್ತದೆ.

ಒಂಬತ್ತನೇ ಅಧ್ಯಾಯವಾದ "The Book of Eternal Night" ಮೃತ್ಯುವು ಸತ್ಯವಾನನ ಪ್ರಾಣವನ್ನು ಸೆಳೆದುಕೊಂದು ಹೊರಡುತ್ತಾನೆ. ಸಾವಿತ್ರಿಯು ಸೂಕ್ಷ್ಮಶರೀರದಲ್ಲಿ ಆತನನ್ನು ಹಿಂಬಾಲಿಸುತ್ತಾಳೆ. ಇಲ್ಲಿಯ ವರೆಗೆ ನಡೆದುದ್ದೆಲ್ಲ ಪೃಥ್ವಿಯ ವಾತಾವರಣದಲ್ಲಿ. ಮುಂದಿನ ಘಟನೆಗಳು ಸಾವಿತ್ರಿಯ ಆಂತರ್ಯದಲ್ಲಿ ನಡೆದಂತೆ ಅರಬಿಂದೋ ನಿರೂಪಿಸುತ್ತಾರೆ. ಯಮನನ್ನು ಹಿಂಬಾಲಿಸುತ್ತಾ ಅವಳು ಗಾಢಾಂಧಕಾರದಲ್ಲಿ ಇಳಿದಳು. ಅಲ್ಲಿನ ತಮಸ್ಸು ಆಕೆಯನ್ನು "ಇಲ್ಲಿಗೂ ಬರಬಲ್ಲೆಯ? ಇಲ್ಲಿಯೂ ಜೀವಿಸಬಲ್ಲೆಯ?" ಎಂದು ಪ್ರಶ್ನಿಸಿತು. ಅದಕ್ಕೆ ಸಾವಿತ್ರಿಯ ಮೌನವೇ ಉತ್ತರವಾಯಿತು. ಆಗ ಧರ್ಮನು "ಸತ್ಯವಾನನನ್ನು ಬಿಟ್ಟು ಕೆಲವೊಂದು ವರಗಳನ್ನು ಕೊಡುವೆ, ನಿನ್ನ ಗಾಯಗೊಂಡ ಬದುಕಿಗೆ." ಎನ್ನಲಾಗಿ ಸಾವಿತ್ರಿಯು "I bow not to thee, O huge mask of death... Conscious of immortality I walk. My god is love and sweetly suffers all- ಓ ಸಾವಿನ ಮುಸುಕೆ, ನಿನಗೆ ನಾನು ತಲೆಬಾಗುವುದಿಲ್ಲ. ಆ ಅಮೃತತ್ವದ ಅರಿವಿಂದಲೇ ನಾನು ಮುನ್ನಡೆಯುತ್ತೇನೆ. ಪ್ರೇಮವೇ ನನ್ನ ದೇವರು. ಆ ದೇವರೇ ಮಧುರವಾಗಿ ಸಕಲವನ್ನು ತಾಳಿಕೊಳ್ಳುವವ" ಎಂದು ನುಡಿಯುತ್ತಾಳೆ.

ಹತ್ತನೇ ಅಧ್ಯಾಯ "The Book of the Double Twilight". ಮೃತ್ಯುವು ಸಾವಿತ್ರಿಯನ್ನು ಕುರಿತು " ಸಾವಿತ್ರಿಯೇ, ಭೂಲೋಕದ ಮಾನವೀಯ ಹಂಬಲಗಳನ್ನು ತೊರೆದು ಬಿಡು." ಎನ್ನುತ್ತಾನೆ. " My love is not a craving of the flesh.. It came to me from God, go God it returns. I cherish God the Fire- ನನ್ನ ಪ್ರೇಮವು ಭಗವಂತನಿಂದ ಬಂದದ್ದು. ಅವನೆಡೆಗೇ ಹೊರಟಿದೆ. ನನ್ನ ಅಭೀಪ್ಸೆ ಆ ಅಗ್ನಿ ಸ್ವರುಉಪನಾದ ದೇವನದ್ದು" ಎನ್ನುತ್ತಾಳೆ ಸಾವಿತ್ರಿ. ಹೀಗೆ ಮೃತ್ಯು ಮತ್ತು ಸಾವಿತ್ರಿಯರಲ್ಲಿ ದೀರ್ಘವಾದ ವಾದ - ವಿವಾದಗಳು ನಡೆಯುತ್ತವೆ. ಕೊನೆಯಲ್ಲಿ ಸಾವಿತ್ರಿಯು ತನ್ನ ತೆಜೋಮಯವಾದ ದಿವ್ಯ ರೂಪದನ್ನು (ಸಾವಿತ್ರಿ ದೇವಿಯ) ಮೃತ್ಯುವನ್ನು ಉದ್ದೇಶಿಸಿ "I am a deputy of the aspiring world, my siprits liberty I ask for all" - "ತಾನು ಜಗತ್ತಿನ ಅಭೀಪ್ಸೆಯ ಪ್ರತಿನಿಧಿಯೆಂದೂ, ತನಗಿದ್ದ ಆತ್ಮದ ಸ್ವಾತಂತ್ಯ್ರ ಸಕಲರಿಗೆ ಇರಲಿ" ಎಂದು ಉದ್ದರಿಸುತ್ತಾಳೆ. ""Release the soul of the world called Satyavan"- ಜಗದಾತ್ಮನಾದ ಸತ್ಯವಾನನ್ನು ಬಿಡುಗಡೆಗೊಳಿಸು." ಎನ್ನುತ್ತ್ತಾಳೆ. ಮೃತ್ಯುವು ಅವಳ ದಿವ್ಯ ಸ್ವರೂಪಕ್ಕೆ ಬೆರಗಾಗಿ ತತ್ತರಿಸುತ್ತಾನೆ. ಆಕೆಯ ಆಜ್ಞೆಯನ್ನು ಪಾಲಿಸದಿರಲು ಅವನಲ್ಲಿ ಯಾವ ಬಲವೂ ಉಳಿಯುವುದಿಲ್ಲ. "His body was eaten by the light- ಅವನ ದೇಹವನ್ನು ಬೆಳಕು (ದೇವಪ್ರಕಾಶವು) ನುಂಗಿಬಿಟ್ಟಿತು" ಎನ್ನುತ್ತಾರೆ ಕವಿ. ಸಾವಿನ ನೆರಳು ಕರಗಿಹೋಯಿತು. ನಂತರ ಆ ದಂಪತಿಗಳು ತೆಜೋರೂಪದಲ್ಲಿ ಪರಮಪುರುಷನಾದ ಭಗವಂತನಲ್ಲಿಗೆ ತಲುಪುತ್ತಾರೆ.

"The Book of Ever Lasting Day" ಹನ್ನೊಂದನೆಯ ಅಧ್ಯಾಯ. ಅಲ್ಲಿ ಪರಮಪುರುಷನು ದಂಪತಿಗಳನ್ನು ಭುವಿಗೆ ಮರಳದೆ ಸತ್ಯಲೋಕದಲ್ಲಿಯೇ ಇರಲು ಕೇಳುತ್ತಾನೆ. ಅದಕ್ಕೆ ಸಾವಿತ್ರಿಯು ನಿನ್ನ ಮಾಧುರ್ಯವನ್ನು ಭೂಲೋಕಕ್ಕೆ ಹಂಚಲು ತನಗೆ ಅನುಗ್ರಹಿಸು ಎಂದು ಕೇಳಿಕೊಳ್ಳುತ್ತಾಳೆ. ಅಂತೆಯೇ ಸಾವಿತ್ರಿ ಸತ್ಯವಾನರು ಭುವಿಗೆ ಮರಳುತ್ತಾರೆ. ಕೊನೆಯ ಅಧ್ಯಾಯ "Epilogue- ಮುಕ್ತಾಯ" . ತಪೋವನಕ್ಕೆ ಮರಳಿದ ಸಾವಿತ್ರಿ ಸತ್ಯವಾನರು ಸುಖದಿಂದ ಜೀವನ ನಡೆಸುತ್ತಾರೆ. ಸಾವಿತ್ರಿಯು ತನ್ನ ಜೀವನದ ಉದ್ದೇಶವನ್ನು ಹೀಗೆ ಹೇಳುತ್ತಾಳೆ: "That to feel love and oneness is to live.. Is all the truth I know or Seek.- ಪ್ರೇಮವನ್ನೂ ಏಕತೆಯನ್ನೂ ಅನುಭವಿಸುವುದೇ ಜೀವನ. ಅದೊಂದೇ ಸತ್ಯ. ಅದನ್ನೇ ನಾನು ಬಲ್ಲೆ ಮತ್ತು ಅದನ್ನೇ ನಾನು ಅರಸುತ್ತೇನೆ."

ಈ ಮಹಾಕಾವ್ಯದ ಉದ್ದೇಶವೂ ಅದೇ. ಪ್ರೇಮವನ್ನೂ ಏಕತೆಯನ್ನು ಅನುಭವಿಸುವುದೇ ಜೀವನ ಎಂಬ ಪರಮ ಸತ್ಯವನ್ನು ಜಗತ್ತಿಗೆ ತಿಳಿಸುವುದು. ಈ ಕಾವ್ಯದ ಯಾವ ಅಂಶವೂ ಮನೋಮಯ ಸ್ತರದಿಂದ ಹೊರಬಂದಿಲ್ಲ. ಈ ಕಾವ್ಯದಲ್ಲಿನ ಪ್ರತಿಯೊಂದು ಶಬ್ದವೂ, ಛಂದ, ತಾಳ, ಕಲ್ಪನೆ ಎಲ್ಲವೂ ಕವಿಯ ಆ ಉಚ್ಚಪ್ರಜ್ಞೆಯ ಪ್ರತೀಕವೆಂಬಂತೆಯೇ ಇವೆ. ಶ್ರೀ ಅರಬಿಂದೋ ಅವರೇ ಉದ್ದರಿಸಿರುವಂತೆ "ಭಗವತ್ ಸ್ಪರ್ಶವೊಂದಿದ್ದರೆ ಸಕಲವನ್ನೂ ಮಾಡಲು ಸಾಧ್ಯ" ಎಂಬ ಮಾತು ಈ ಸುಂದರ ಅನುಭಾವ ಕಾವ್ಯದ ಮೂಲಮಂತ್ರ.