Friday, September 24, 2010

ವಿಜ್ಞಾನ ಮತ್ತು ಆಧ್ಯಾತ್ಮ

(ಫ್ರಿತ್ಜೋಫ್ ಕಾಪ್ರಾನ ’ದಿ ತಾವೋ ಆಫ್ ಫಿಸಿಕ್ಸ’, ಪೂರ್ವದ ಆಧ್ಯಾತ್ಮ ಮತ್ತು ಆಧುನಿಕ ಭೌತ ಶಾಸ್ತ್ರದ ಬಗೆಗಿನ ಸಾಮ್ಯತೆಗಳ ಕುರಿತಾಗಿ ಬರೆದ ಆಸಕ್ತಿದಾಯಕ ಪ್ರಬಂಧ. ಸ್ವತಃ ಭೌತಶಾಸ್ತ್ರದ ಸಂಶೋಧಕನಾದ ಕಾಪ್ರಾನ ಪೂರ್ವದ ಆಧ್ಯಾತ್ಮಮಾರ್ಗಗಳ ಬಗೆಗಿನ ಆಳವಾದ ಜ್ಞಾನ ಆಶ್ಚರ್ಯ ಹುಟ್ಟಿಸುವಂಥದ್ದು. ಪೂರ್ವದ ಆಧ್ಯಾತ್ಮ ಮಾರ್ಗವನ್ನು ’ತಾವೋ’ ಎಂಬುದಾಗಿ ಕಾಪ್ರ ತನ್ನ ಪ್ರಬಂಧದ ತಲೆಬರಹದಲ್ಲಿ ಬಳಸಿದ್ದಾನೆ. ಭೌತ ಶಾಸ್ತ್ರದ ಬಗೆಗೆ ಸರಳವಾಗಿ ವಿಜ್ಞಾನದ ಅಧ್ಯಯನದ ಹಿನ್ನಲೆಯಿರದವರಿಗೂ ಅರ್ಥವಾಗುವ ಹಾಗೆ ಬರೆಯಲ್ಪಟ್ಟ ಪುಸ್ತಕಗಳಲ್ಲಿ ’ದಿ ತಾವೋ ಆಫ ಫಿಸಿಕ್ಸ್’ ಕೂಡ ಒಂದು ಎನ್ನಬಹುದು. ಈ ಪುಸ್ತಕ ಓದುಗರನ್ನು ಆಧ್ಯಾತ್ಮ ಮತ್ತು ವಿಜ್ಞಾನದ ಬಗೆಗೆ ಹೊಸ ದಿಶೆಯಲ್ಲಿ ಯೋಚಿಸುವಂತೆ ಮಾಡುತ್ತದೆ.)

ವಿಜ್ಞಾನ ನಮ್ಮ ಅಸ್ತಿತ್ವದ ಮೇಲೆ ತೀರ ಗಾಢವಾದ ಪ್ರಭಾವ ಬೀರಿದೆ. ಇದಕ್ಕೆ ಕಾರಣ ವಿಜ್ಞಾನ, ಮತ್ತು ತಂತ್ರಜ್ಞಾನಗಳು ನಮ್ಮ ಬದುಕನ್ನು ವಿವಿಧ ಸಾಧನ ಸೌಕರ್ಯಗಳಿಂದ ಸುಲಭ ಹಾಗೂ ವ್ಯವಸ್ಥಿತಗೊಳಿಸಿರುವುದು. ನಮ್ಮ ನಿತ್ಯ ಜೀವನದಲ್ಲಿ ತಂತ್ರಜ್ಞಾನಗಳ ವ್ಯಾಪಕ ಬಳಕೆಯಿಂದಾಗಿ, ವಿಜ್ಞಾನದ ಉದ್ದೇಶವೇ ನಿರಂತರ ಹೊಸ ಹೊಸ ತಂತ್ರಜ್ಞಾನಗಳ ಶೋಧನೆ, ಎಂಬ ಭಾವನೆ ಬಳೆದುಬಂದಿದೆ. ಆದರೆ ಆಧುನಿಕ ಭೌತಶಾಸ್ತ್ರದ ಬೆಳವಣಿಗೆಯು ಇಂತಹ ಅನೇಕ ತಿಳುವಳಿಕೆಗಳನ್ನು ಬದಲಾಯಿಸಿದೆ. ವಿಜ್ಞಾನ ಕೇವಲ ತಂತ್ರಜ್ಞಾನವಷ್ಟೇ ಅಲ್ಲ, ಅದಕ್ಕೂ ಮೀರಿದ್ದು. ಹಾಗೂ ವಿಜ್ಞಾನ ಒಬ್ಬ ವ್ಯಕ್ತಿಯಲ್ಲಿನ ಬ್ರಹ್ಮಾಂಡದ ಬಗೆಗಿನ ಆಳವಾದ ಪ್ರಜ್ಞ್ನೆ ಮತ್ತು ಅದರೊಡಗಿನ ತನ್ನ ಒಡನಾಟದ ಅರಿವಿಗೆ ಸಂಬಂಧಿಸಿದ್ದು ಎಂಬುದನ್ನು ಸ್ಪಷ್ಟ ಪಡಿಸಿದೆ. ವಿಜ್ಞಾನ ವ್ಯಕ್ತಿಯ, ಬಾಹ್ಯ ಜೀವನವನ್ನಷ್ಟೇ ಅಲ್ಲದೆ ಅವನ ಆಂತರಿಕ ಹರಿವನ್ನೂ ಪ್ರಭಾವಿಸುವಂಥದ್ದು ಎನ್ನುತ್ತದೆ ಆಧುನಿಕ ಭೌತಶಾಸ್ತ್ರ. ಹಾಗಿದ್ದರೆ ವಿಜ್ಞಾನ ಅಧ್ಯಾತ್ಮದ ಮಾರ್ಗದಂತೆ ಮಾನವ ಜೀವನವನವನ್ನು ಶ್ರ‍ೇಷ್ಠತೆಯತ್ತ ಕೊಂಡೊಯ್ಯುವ ದಾರಿಯೇ?

ಈ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನವೇ ’ದಿ ತಾವೋ ಆಫ್ ಫಿಸಿಕ್ಸ’. ಆಧುನಿಕ ಭೌತಶಾಸ್ತ್ರದ ಹುಟ್ಟು, ಹೈಸನ್ ಬರ್ಗ್ ಎಂಬ ವಿಜ್ಞಾನಿಯ ಅಣುವಿನ ಡ್ಯುಯೆಲ್ ಗುಣದ ಕುರಿತಾದ ಸಂಶೋಧನೆಯಿಂದಾಯಿತು. ಹೈಸನ್ ರ ಪ್ರಕಾರ ಅಣುವೊಂದಕ್ಕೆ ಎರಡು ಗುಣವಿದೆ. ಒಂದು ಸ್ಥಿರ, ಇನ್ನೊಂದು ಅಲೆಯ ಗುಣ. ಎಲ್ಲ ಪದಾರ್ಥಗಳೂ ಅಣುವಿನಿಂದ ಮಾಡಲ್ಪಟ್ಟಿರುವುದರಿಂದ, ಎಲ್ಲವೂ ಈ ಎರಡು ಗುಣಗಳಿಂದಲೇ ಕೂಡಿವೆ. ನಮಗೆ ವಸ್ತುಗಳು ಸ್ಥಿರವಾಗಿರುವುದಾಗಿ ಕಂಡುಬಂದರೂ, ಅವೆಲ್ಲವೂ ಅಲೆಯ ಸ್ಥಿತಿಯನ್ನೂ ಹೊಂದಿವೆ. ಈ ಸಂಶೋಧನೆಯು ಶಾಸ್ತ್ರೀಯ (Classical Physics) ಭೌತಶಾಸ್ತ್ರದ ದಿಕ್ಕನ್ನೇ ಬದಲಿಸಿತು. ಇದು ಭೌತಶಾಸ್ತ್ರದಲ್ಲಿನ ವಿಶ್ವ ಹಾಗು ಅದರ ರಚನೆ, ಸೃಷ್ಟಿಗೆ ಸಂಬಂಧಿಸಿದ ತಿಳುವಳಿಕೆಗಳ ಮೇಲೆ ಅಗಾಧ ಪರಿಣಾಮ ಬೀರಿತು. ಅಲ್ಲದೆ ಈ ಬದಲಾವಣೆಯಿಂದಾಗಿ ವಿಜ್ಞಾನ ಹಾಗೂ ಪೂರ್ವದ ಆಧ್ಯಾತ್ಮ ಜಗತ್ತಿನ ಸಾಮ್ಯತೆಗಳು ಗೋಚರಿಸಿದವು.

ಭೌತಶಾಸ್ತ್ರದ ಸಂಶೋಧಕನಾದ ಕಾಪ್ರಾನು ವೇದೋಪನಿಷತ್ತುಗಳ ಉಕ್ತಿಗಳನ್ನು ಕಂಡು ಬೆರಗಾಗುತ್ತಾನೆ. ಕಾಪ್ರಾ, ಒಬ್ಬ, ಆಧುನಿಕ ಭೌತಶಾಸ್ತ್ರದ ವಿಜ್ಞಾನಿ ಮತ್ತು ಒಬ್ಬ ಪೂರ್ವದ ಸಾಧಕ ಬ್ರಹ್ಮಾಂಡವನ್ನು ನೋಡುವ ಪರಿ ಎರಡೂ ಒಂದೇ ಎನ್ನುತ್ತಾನೆ. ನೀಲ್ಸ ಬೋರ್, ಹೈಸನ್ ಬರ್ಗ್ ರಂತಹ ವಿಜ್ಞಾನಿಗಳು ವಿಶ್ವದ ಬಗ್ಗೆ ಹೇಳಿದ ಮಾತುಗಳು ತದಾವತ್ತಾಗಿ ಉಪನಿಷತ್ತುಗಳ ಉಕ್ತಿಗಳನ್ನು ಹೋಲುತ್ತವೆ ಎನ್ನುತ್ತಾನೆ. ಆಧುನಿಕ ಭೌತಶಾಸ್ತ್ರದ ಆವಿಷ್ಕಾರಗಳು ಹೊಸದಲ್ಲ. ಸಾವಿರಾರು ವರ್ಷಗಳ ಹಿಂದೆಯೇ ಪೂರ್ವದ ನಾಗರೀಕತೆಗಳು ಈ ಸತ್ಯವನ್ನು ಅರಿತಿದ್ದವು ಎಂಬ ಅಭಿಪ್ರಾಯವನ್ನು ತನ್ನ ಪ್ರಬಂಧದಲ್ಲಿ ವ್ಯಕ್ತಪಡಿಸಿದ್ದಾನೆ. ಗ್ರೀಕ್, ರೋಮನ್ ನಂತಹ ಪಶ್ಚಿಮದ ಪ್ರಾಚೀನ ಸಂಸ್ಕೃತಿಗಳಲ್ಲಿಯೂ ಇಂತಹ ಸಾಮ್ಯತೆಗಳು ಇರುವುದಾಗಿ ಕಂಡುಬಂದರೂ ಅವು ಪೂರ್ವದ ಆಧ್ಯಾತ್ಮದಷ್ಟು ವಿಕಾಸವಾದಂತೆ ತೋರುವುದಿಲ್ಲ. ಪೂರ್ವದ ಗುರುಕುಲ ವ್ಯವಸ್ಥೆಯಿಂದಾಗಿ ಅಲ್ಲಿಯ ಆಧ್ಯಾತ್ಮ ಪರಂಪರೆ ಅತ್ಯಂತ ಪ್ರಬುದ್ಧತೆಯನ್ನು ಪಡೆಯಲು ಸಾಧ್ಯವಾಯಿತು, ಇದರಿಂದಾಗಿ ಪೂರ್ವದ ಸಂಸ್ಕೃತಿಯು ಜಗತ್ತಿನಲ್ಲಿಯ ಎಲ್ಲ ನಾಗರೀಕತೆಗಳಿಗಿಂತಲೂ ಅಪೂರ್ವವಾದದ್ದು ಎನ್ನುತ್ತಾನೆ.

ಆಧ್ಯಾತ್ಮ ಮನುಷ್ಯನನ್ನು ತನ್ನ ಆಂತರ್ಯದತ್ತ ಸೆಳೆಯುವಂತೆ, ವಿಜ್ಞಾನವೂ ಮನುಷ್ಯನನ್ನು ಪ್ರಭಾವಿಸಬಲ್ಲ ಸಾಧ್ಯತೆ ಹೊಂದಿದೆ. ಈ ವಿಶ್ವವೇ ಅಲೆಯ ರೂಪದಲ್ಲಿದೆ ಎಂಬ ಆಧುನಿಕ ವಿಜ್ಞಾನದ ತರ್ಕ, ಹಾಗೂ ನಮ್ಮ ಉಪನಿಷತ್ತುಗಳು ಹೇಳುವ ವಿಶ್ವವೇ ಒಂದು ಲಯಬದ್ಧವಾದ ವ್ಯವಸ್ಥೆ, ಎಂಬ ಮಾತುಗಳು ಒಂದೇ ಅಲ್ಲವೇ. ವ್ಯವಸ್ಥಿತವಾದ ಕಂಪನವೇ ವಿಶ್ವವನ್ನು ನಿಯಂತ್ರಿಸುತ್ತಿದೆ ಎಂದು ವಿಜ್ಞಾನ ಹೇಳಿದರೆ, ನಾವು ಪೂಜಿಸುವ ನೃತ್ಯ ದೇವತೆ ನಟರಾಜನೇ ವಿಶ್ವದ ಲಯಕರ್ತ ಎಂದು ನಮ್ಮ ಆಧ್ಯಾತ್ಮ ಹೇಳುತ್ತದೆ. ವಿಜ್ಞಾನ ಮತ್ತು ಆಧ್ಯಾತ್ಮಗಳು ಹೇಳುತ್ತಿರುವ ಸತ್ಯವೊಂದೇ, ಕೇವಲ ಅವುಗಳ ದೃಷ್ಟಿಕೋನಗಳು ಮಾತ್ರ ಬೇರೆ ಬೇರೆ. ಹಾಗಿದ್ದಲ್ಲಿ ವಿಜ್ಞಾನವೂ ಆಧ್ಯಾತ್ಮದಂತೆಯೇ ಹೃದಯವುಳ್ಳ ಹಾದಿ ಎಂಬುವಲ್ಲಿ ಸಂಶಯವಿಲ್ಲ.

ಆದರೆ ಕಾಪ್ರ ತನ್ನ ಪ್ರಬಂಧದಲ್ಲಿ ಒಂದು ಮುಖ್ಯವಾದ ವಿಷಯವೊಂದನ್ನು ಪ್ರಸ್ತಾಪಿಸಲಿಲ್ಲ ಎಂದು ನನಗೆ ಅನ್ನಿಸುತ್ತದೆ. ಯಾವ ಮಾರ್ಗವೂ, ತನ್ನಷ್ಟಕ್ಕೆ ತಾನೇ ನಡೆದು ಒಬ್ಬ ವ್ಯಕ್ತಿಯ ಅರಿವನ್ನೋ, ಬಾಳನ್ನೋ ಬೆಳಗಿಸುವುದಿಲ್ಲ. ಹಾದಿಯು ಕೇವಲ ಹಾದಿಯಷ್ಟೇ. ಪಯಣ ವ್ಯಕ್ತಿ ತಾನು ಸ್ವತಃ ಮಾಡಬೇಕು. ಆದರೂ ಹಾದಿಯೂ ತನ್ನಲ್ಲಿಯ ಪಯಣವನ್ನು ನಿರ್ಧರಿಸುವ ಮಾರ್ಗದರ್ಶಿ ಕೂಡ. ಹಾಗೆ ಭಾವಿಸಿದರೆ, ವಿಜ್ಞಾನ ಆಧ್ಯಾತ್ಮ ದಂತೆಯೇ ಮಾನವನ ಜೀವನವನ್ನು ಬೆಳಗಿಸುವ ದಾರಿಯಾಗಿದ್ದಲ್ಲಿ, ಆಧ್ಯಾತ್ಮ ಸಾವಿರಾರು ವರುಷಗಳ ಹಿಂದೆಯೇ ಅರಿತ ಸತ್ಯವನ್ನು ಇಷ್ಟು ವರುಷಗಳ ನಂತರವೂ ವಿಜ್ಞಾನದ ಮಾರ್ಗ ಅರಿಯುವಲ್ಲಿ ಯಾಕೆ ವಿಫಲವಾಗುತ್ತಿದೆ? ಎಂಬ ಪ್ರಶ್ನೆಯ ಬಗ್ಗೆ ಕಾಪ್ರಾ ಚರ್ಚಿಸುವುದಿಲ್ಲ. ಅದಕ್ಕೆ ಉತ್ತರರವನ್ನು ಆಧ್ಯಾತ್ಮ ನೀಡುತ್ತದೆ. ವಿಜ್ಞಾನ, ಸುವ್ಯವಸ್ಥಿತವಾದ ಜ್ಞಾನ. ವಿಜ್ಞಾನ ತನ್ನ ಪ್ರಶ್ನೆಗೆ ಉತ್ತರ ಹುಡುಕುವಲ್ಲಿ ಅನುಸರಿಸುವ ವಿಧಾನವಂದರೆ, ಆ ಪ್ರಶ್ನೆಯನ್ನು ಸಣ್ಣ ಪ್ರಶ್ನೆಗಳನ್ನಾಗಿ ಒಡೆದು,ಆ ಸಣ್ಣ ಪ್ರಶ್ನೆಗಳಿಗೆ ಉತ್ತರ ಹುಡುಕಿ, ಆ ಉತ್ತರಗಳಿಂದ ಮೂಲ ಪ್ರಶ್ನೆಯನ್ನು ಬಗೆಹರಿಸುವುದು. ಆದರೆ, ಈ ಒಡೆದು (Divide and Rule) ಸತ್ಯವನ್ನರಿಯುವ ಪ್ರಯತ್ನವು ಮೂಲ ಪ್ರಶ್ನೆಯನ್ನು ಬಗೆಹರಿಸುವುದಿಲ್ಲ ಎಂದು ಆಧ್ಯಾತ್ಮ ಹೇಳುತ್ತದೆ. ಏಕೆಂದರೆ ನಮ್ಮ ವಿಶ್ವವು ಸಂಯೋಜನೆಯಿಂದಾಗಿದೆ. ಈ ಅಸ್ತಿತ್ವವು ಪೂರ್ಣ ರೂಪದ್ದು, ಸಮನ್ವಯವಾದದ್ದು. ಆದುದರಿಂದ ಪದಾರ್ಥಗಳ ಅಸ್ತಿತ್ವವನ್ನು ಅವುಗಳ ಪೂರ್ಣರೂಪದಿಂದಲೇ ಅರಿಯಬೇಕು. ವಿಭಜನೆಯಿಂದ ಅರಿವು ಸಾಧ್ಯವಿಲ್ಲ ಎಂಬುದು ಆಧ್ಯಾತ್ಮ ಮಾರ್ಗದ ನಿಲುವು. ಆದುದರಿಂದಲೇ ವಿಜ್ಞಾನಕ್ಕೆ ವಿಶ್ವವನ್ನು ಅರಿಯುವ ಪ್ರಯತ್ನ, ಇನ್ನೂ ಪ್ರಯತ್ನವಾಗಿಯೇ ಉಳಿದಿದೆ.