Thursday, May 14, 2009

ನಾಂದಿ

ಯಾ ಸೃಷ್ಟಿಃ ಸೃಷ್ಟುರಾದ್ಯಾ ವಹತಿ ವಿಧಿಹುತಂ ಯಾ ಹವಿರ್ಯಾ ಚ ಹೋತ್ರೀ


ಯೇ ಧ್ವೇ ಕಾಲಂ ವಿಧತ್ತಃ ಶ್ರುತಿ ವಿಷಯ ಗುಣಾ ಯಾ ಸ್ಥಿತಾ ವ್ಯಾಪ್ಯ ವಿಶ್ವಂ


ಯಾಮಾಹುಃ ಸರ್ವಬೀಜ ಪ್ರಕೃತಿರಿತಿ ಯಯಾ ಪ್ರಾಣಿನಃ ಪ್ರಾಣವಂತಃ


ಪ್ರತ್ಯಕ್ಷಾಭಿಃ ಪ್ರಪನ್ನಸ್ತನುಭಿರವತು ವಸ್ತಾಭಿರಷ್ಟಾಭಿರೀಶಃ


ಇದು ಕಾಳಿದಾಸನ 'ಅಭಿಜ್ಞಾನ ಶಾಕುಂತಲಂ' ನಾಟಕದ ನಾಂದಿ ಪದ್ಯ. ನಾಟಕದ ಆರಂಭದಲ್ಲಿ ಇಷ್ಟ ದೇವತೆಗೆ ಪ್ರಾರ್ಥನೆಯನ್ನು ಸಲ್ಲಿಸುವುದು ಸಂಸ್ಕೃತ ನಾಟಕದ ಒಂದು ನಿಯಮ. ಭರತ ಮುನಿಯ ನಾಟ್ಯ ಶಾಸ್ತ್ರದ ಸೂತ್ರಗಳಲ್ಲಿ ನಾಂದಿ ಹೇಗಿರಬೇಕು ಎಂಬುದರ ಕುರಿತು ದೀರ್ಘವಾದ ವಿವರಣೆಗಳಿವೆ. ನಾಂದಿ ನಾಟಕದ ಹೊರಗೆ ಇದ್ದರೂ ಅದು ನಾಟಕಕ್ಕೆ ಸ್ವರೂಪವನ್ನು ತಂದುಕೊಡುವ ಅಂಶ. ನಾಂದಿ ಪದ್ಯದ ಇನ್ನೊಂದು ವಿಶೇಷ ಗುಣವೆಂದರೆ ಅದು ಸೂಚ್ಯವಾಗಿ ನಾಟಕದ ವಸ್ತುವನ್ನು ಮೊದಲಲ್ಲೇ ಹೇಳಿಬಿಡುತ್ತದೆ. ಮತ್ತು ಅದು ಹಾಗೇ ಇರಬೇಕೆಂದು ನಿಯಮ. ನಾಟಕದ ಆರಂಭದಲ್ಲಿ ಸೂತ್ರಧಾರನು ತೆರೆಯಿಂದ ಹೊರ ಬಂದು ನಾಟಕದ ಕಥೆಗೆ ಇಂಬುಕೊಡುವ ನಾಂದಿ ಸ್ತುತಿಯನ್ನು ಹಾಡಿ ನಾಟಕದ ಪಾತ್ರಗಳು ರಂಗದಮೇಲೆ ಬರಲು ಅನುವುಮಾಡಿಕೊಡುತ್ತಾನೆ.


ದೇವತಾ ಸ್ತುತಿಯಲ್ಲಿ ನಾಟಕದ ವಸ್ತುವನ್ನು ಅಡಗಿಸಿ ಕವಿತೆ ನಿರ್ಮಿಸುವುದು ಬಹಳ ಕಷ್ಟ. ಅದರ ಸಂವೇದನೆಯೂ ತಡವಾಗಿ ತಾಗುತ್ತದೆ. ಉದಾಹರಣೆಗೆ ಈ ಮೇಲಿನ ನಾಂದಿ ಪದ್ಯವನ್ನೇ ತೆಗೆದುಕೊಂಡರೆ ಅದು ಕೇವಲ ಕಾಳಿದಾಸನ ಇಷ್ಟದೇವತೆಯಾದ ಶಿವನ ಸ್ತುತಿಯಾಗಿ ಕಾಣುತ್ತದೆ. 'ಈಶಃ' ಎಂಬ ಸರ್ವಸಾಮಾನ್ಯವಾದ ದೇವವಾಚಕವನ್ನು ಬಿಟ್ಟರೆ ಶಿವನ ಹೆಸರೂ ಇದರಲ್ಲಿಲ್ಲ. ಆದರೆ ಶಿವನ ಮಹಿಮೆ ಬಹಳ ಸೂಕ್ಹ್ಮವಾಗಿ ಹೇಳಲ್ಪಟ್ಟಿದೆ. ಈ ಪದ್ಯದ ಕೊನೆಯ ಸಾಲಿನಲ್ಲಿ, ಪ್ರತ್ಯಾಕ್ಷಾಭಿಃ ಪ್ರಪನ್ನಸ್ತನುಭಿರವತು ವಸ್ತಾಭಿರಷ್ಟಾಭಿರೀಶಃ ಅಂದರೆ 'ಪ್ರತ್ಯಕ್ಷವಾದ ಎಂಟು ಅವಯವಗಳಿಂದ ಕೂಡಿದ ಶಿವ ನಮ್ಮನ್ನು ಕಾಪಾಡಲಿ' ಎನ್ನುತ್ತಾನೆ ಕಾಳಿದಾಸ. ಈ ಪದ್ಯದ ಆಶಯವನ್ನೇ ಅನುಸರಿಸಿದರೆ ಶಿವನ ಆ ಅಷ್ಟ ತನುಗಳು ಯಾವವು ಮತ್ತು ಶಿವನ ಈ ಸ್ತುತಿಗೂ ಅಭಿಜ್ಞಾನ ಶಾಕುಂತಲದ ಕಥೆಗೂ ಎಲ್ಲಿಯ ನಂಟು ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.


ಈ ಪ್ರಶ್ನೆಗೆ ಉತ್ತರ ಈ ಪದ್ಯದಲ್ಲಿ ಇದೆ. ಅಥವಾ ಅತಿಶಯವಾಗಿಯೇ ಇದೆ ಎನ್ನಬಹುದು ! ಒಂದು ಅವಯವದ ಉಲ್ಲೇಖ ಮೊದಲ ಸಾಲಿನಲ್ಲಿಯೇ ಇದೆ. ' ಯಾ ಸೃಷ್ಟಿಃ ಸೃಷ್ಟುರಾದ್ಯಾ' - ಯಾವದು ಬ್ರಹ್ಮನ ಮೊದಲ ಸೃಷ್ಟಿಯಾಗಿದೆಯೋ ಅದು. ಅಂದರೆ ನೀರು (ವೇದ ವಾಕ್ಯದಂತೆ). ಆದರೆ ನೀರಿಗೆ ತೋಯ, ಜಲ, ಅಂಬು ಎಂಬೆಲ್ಲ ಶಬ್ದಗಳಿದ್ದರೂ ಅವುಗಳನ್ನು ಎಲ್ಲೂ ನೇರವಾಗಿ ಬಳಸಿಲ್ಲ. ಮೊದಲ ಸೃಷ್ಟಿ ಎನ್ನುವುದಾಗಿ ಅಷ್ಟೇ ಹೇಳಿ ನೀರಿಗೆ ಪರಿಭಾಷೆಯನ್ನು ಕೊಡುತ್ತಾನೆ. ಮೊದಲ ಸಾಲಿನ ಎರಡನೇ ಭಾಗದಲ್ಲಿ 'ವಹತಿ ವಿಧಿಹುತಂ ಯಾ ಹವಿರ್ಯಾಚ ಹೋತ್ರೀ' ಅಂದರೆ 'ಯಾವುದು ವಿಧಿವತ್ತಾಗಿ ಹಾಕಿದ ಹವಿರ್ಭಾಗವನ್ನು ಒಯ್ಯುತ್ತದೋ ಅದು' ಎನ್ನುತ್ತಾನೆ. ಅಂದರೆ ಹವನ ದಲ್ಲಿ ಹಾಕಿದ ಹವಿಸ್ಸನ್ನು ಒಯ್ಯುವ 'ಅಗ್ನಿ' ಯ ವರ್ಣನೆ ಇದು. ಆದರೆ ಅಗ್ನಿ ಪದದ ಪ್ರಯೋಗವೂ ನೇರವಾಗಿ ಇಲ್ಲ. ಹೀಗೆ ಮುಂದೆ 'ಯೇ ಧ್ವೆ ಕಾಲಂ ವಿಧತ್ತಃ' ಅಂದರೆ ಕಾಲವನ್ನು ಎರಡಾಗಿ (ಹಗಲು, ರಾತ್ರಿಗಳಾಗಿ) ವಿಭಜಿಸುವ ಸೂರ್ಯ ಚಂದ್ರರ ಬಗ್ಗೆ ಹೇಳುತ್ತಾನೆ. ಇದೇ ರೀತಿ ಪ್ರಾಣವಾಯು (ಗಾಳಿ), ಭೂಮಿ, ಆಕಾಶ ಗಳ ವರ್ಣನೆಯನ್ನೂ ಮಾಡುತ್ತಾನೆ. ಆದರೆ ಎಲ್ಲಿಯೂ ಆ ಶಬ್ದಗಳನ್ನು ನೇರವಾಗಿ ಬಳಸದೆ ಕೇವಲ ಅವುಗಳ ಪರಿಭಾಷೆಯನ್ನು ಮಾತ್ರ ಕೊಡುತ್ತಾನೆ. ಈಶ್ವರನೂ ಬ್ರಹ್ಮನ ಸೃಷ್ಟಿ ಎಂಬ ವೇದಗಳ ತತ್ವವನ್ನು ಒಪ್ಪಿಕೊಂಡರೆ ಈ ಎಲ್ಲವೂ (ನೀರು, ಅಗ್ನಿ, ಕಾಲ, ಗಾಳಿ, ಭೂಮಿ ಮತ್ತು ಆಕಾಶ) ಅವನ ಅವಯವಗಳಾಗಿವೆ ಎಂಬ ಕಾಳಿದಾಸನ ಮಾತು ತರ್ಕಬದ್ದ ಎಂದು ನನಗೆ ಎನ್ನಿಸುತ್ತವೆ. ಜೊತೆಗೆ ನಿಸರ್ಗಕ್ಕೂ ದೇವರಿಗೂ ಇರುವ ಸಂಬಂಧ ಕೇವಲ ತೋರಿಕೆಯದಲ್ಲ ಅದೇ ನಿಜವಾದ ಸಂಬಂಧ ಎಂದು ಈ ಪದ್ಯ ಸುಂದರವಾಗಿ ವಿವರಿಸಿದಂತೆಯೂ ತೋರುತ್ತದೆ.


ಈ ವಿವರಣೆಯ ನಂತರ ಇನ್ನೊಂದು ಪ್ರಶ್ನೆ ಉಳಿಯುತ್ತದೆ. ಅದು ಈ ಪದ್ಯಕ್ಕೂ ನಾಟಕದ ವಸ್ತುವಿಗೂ ಇರುವ ಸಂಬಂಧ. ನಾಟಕ ಉಪಯೋಗಿಸುವುದು ಮಹಾಭಾರತದಲ್ಲಿಯ ಶಕುಂತಲೆಯ ಕಥೆ. ಆಕೆ ವಿಶ್ವಾಮಿತ್ರಮೇನಕೆಯರ ಮಗಳು. ಕಣ್ವರ ಸಾಕು ಮಗಳು, ಅನಸೂಯೆ ಪ್ರಿಯಂವದೆಯರ ಸಖಿ, ದುಷ್ಯಂತನ ಹೆಂಡತಿ ಮತ್ತು ಸರ್ವದಮನನ ತಾಯಿ. ಹೀಗೆ ಶಕುಂತಲೆ ಅನೇಕ ಪಾತ್ರಗಳಾಗಿ ಕಾಣಿಸುತ್ತಾಳೆ. ಆದರೆ ವಿಸ್ಮ್ರಿತಿಗೀಡಾದ ದುಷ್ಯಂತ ಇದನ್ನೆಲ್ಲಾ ಮರೆಯುತ್ತಾನೆ. ಅವನಿಗೆ ಅವಳ ಅಸ್ಪಷ್ಟ ರೂಪವೊಂದೇ ನೆನಪಲ್ಲುಳಿಯುವುದು. ದುಷ್ಯಂತ ಶಕುಂತಲೆಗೆ ನೆನಪಿಗೆಂದು ನೀಡಿದ್ದ ಉಂಗುರ ಶುಚಿತೀರ್ಥದಲ್ಲಿ ಕಳೆದು ಹೋಗುತ್ತದೆ. ಮುಂದೆ ಅದೇ ಮತ್ಸ್ಯವೊಂದರ ಉದರದಲ್ಲಿ ದೊರೆತು ಮುರಿದ ಸಂಬಂಧಗಳನ್ನು ಮತ್ತೆ ಕಟ್ಟುತ್ತದೆ. ಈ ನಾಂದಿ ಶ್ಲೋಕದಲ್ಲಿಯೂ ಹಾಗೆಯೇ ಅಲ್ಲವೇ? ಶಿವನ ಅಷ್ಟ ತನುಗಳನ್ನು ನೇರವಾಗಿ ಹೇಳದ ಕಾಳಿದಾಸ ಅವುಗಳ ಗುರುತನ್ನು ಮಾತ್ರ ಹೇಳುತ್ತಾ ನಾವೇ ಆ ಶಬ್ದಗಳನ್ನು ಗ್ರಹಿಸುವಂತೆ ಮಾಡುತ್ತಾನೆ. 'ಅಭಿಜ್ಞಾನ' ಶಬ್ದದ ಅರ್ಥವೂ ಇದೇ. ಗುರುತು. Recognition. ಮತ್ತು ದುಷ್ಯಂತನಿಗೆ ಶಕುಂತಲೆ ಹೇಗೆ ಸತ್ಯ ಮತ್ತು ವಾಸ್ತವವೂ ಅಂತೆಯೇ ನೀರು, ಅಗ್ನಿ, ವಾಯು, ಕಾಲ, ಭೂಮಿ, ಆಕಾಶಗಳು ಆ ಮಹಾದೇವನ ಸ್ವರೂಪಗಳು ಎಂಬ ಸತ್ಯದ ತಾತ್ವಿಕತೆಯನ್ನೂ ಈ ಸ್ತುತಿ ಎತ್ತಿ ಹಿಡಿದಿದೆ. ಹೀಗೆ ಈ ಪದ್ಯದಲ್ಲಿ ನಡೆಯುವ ತಿಳುವಳಿಕೆ ಪ್ರಕ್ರಿಯೆಯೇ ನಾಟಕದಲ್ಲಿ ಪ್ರತಿ ಹೆಜ್ಜೆಯಲ್ಲೂ ಇದೆ.

ಈ ನಾಂದಿ ಪದ್ಯವನ್ನು ಹೀಗೆ ಬಿಡಿಸಿ ನೋಡಿದಾಗ ಈ ಪದ್ಯದಲ್ಲಿ ನಾಟದಕ ವಸ್ತು- ಪ್ರತ್ಯಭಿಜ್ಞಾನ ಕ್ರಿಯೆ- ಸೂಚ್ಯವಾಗಿ ಅಡಗಿದೆಯೆಂದು ತಿಳಿಯುತ್ತದೆ. ಆ ಮೂಲಕ ಭರತಮುನಿಯ ನಾಂದಿ ಸೂತ್ರಕ್ಕೆ ಅಭಿಜ್ಞಾನ ಶಾಕುಂತಲದ ನಾಂದಿ ಪದ್ಯ ಎಲ್ಲೂ ಅಪಚಾರವೆಸಗಿಲ್ಲ ಎಂಬುದೂ ಸ್ಪಷ್ಟವಾಗುತ್ತದೆ. ಒಟ್ಟಿನಲ್ಲಿ ಈ ನಾಟಕದ ಸಾರ ಅದರ ನಾಂದಿ ಪದ್ಯದಲ್ಲಿ ಅಡಗಿದೆ ಎನ್ನುವುದಕ್ಕಿಂತ ಈ ನಾಂದಿ ಪದ್ಯಕ್ಕೆ ಅಭಿಜ್ಞಾನ ಶಾಕುಂತಲ ನಾಟಕವೇ ಅರ್ಥವಿವರಣೆ ಆಗಿದೆ ಎನ್ನಬಹುದಲ್ಲವೇ?

( ನನಗೆ ತುಂಬಾ ಇಷ್ಟವೆನಿಸಿದ ಮತ್ತು ಸ್ವಾರಸ್ಯಪೂರ್ಣವಾದ ನಾಂದಿ ಭಾಸನ ಪ್ರಸಿದ್ದ ನಾಟಕ ಸ್ವಪ್ನವಾಸವದತ್ತದ್ದು. ಈ ನಾಂದಿ ಪದ್ಯದ ಸಾರದ ಬಗ್ಗೆ ಮುಂದಿನ ಪೋಸ್ಟ್ ನಲ್ಲಿ ತಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. )

Monday, May 4, 2009

ಕಾವ್ಯದಲ್ಲಿ ರಸ ಮತ್ತು ನೀತಿಬೋಧೆ

ಸಂಸ್ಕೃತದಲ್ಲಿ ಕಾವ್ಯದ ಬಗ್ಗೆ ಒಂದು ಮಾತಿದೆ.

'ತದೇವ ರಮ್ಯಂ ರುಚಿರಂ ನವಂ ನವಂ

ತದೇವ ಶಶ್ವನ್ಮನಸೋ ಮಹೋತ್ಸವಂ

ತದೇವ ಶೋಕಾರ್ಣವ ಶೋಷಣಂ ನೃಣಾಂ

ಯದುತ್ತಮಶ್ಲೋಕಯಶೋನುಗೀಯತೆ '


' ಅದು ಸುಂದರ, ಅದು ರುಚಿರ, ಅದು ಹೊಚ್ಚ ಹೊಸದು. ಅದುವೇ ಮನಸ್ಸನ್ನು ಮಹೋತ್ಸವದಲ್ಲಿರಿಸತಕ್ಕದ್ದು, ಅದರಿಂದಲೇ ಮನುಷ್ಯ ಶೋಕಸಾಗರವನ್ನು ಹಿಂಗಿಸಲು ಸಮರ್ಥನಾಗುತ್ತಾನೆ. ಅದೇ ಉತ್ತಮಶ್ಲೋಕರ ಕೀರ್ತಿಕಥನ.'


ಒಂದು ಸಹೃದಯ ಜನಾಂಗ ಕಾವ್ಯದಿಂದ ಏನನ್ನು ಬಯಸುತ್ತದೆ? ಭವಸ್ತರದಲ್ಲಿ ಅಂದರೆ ತನ್ನ ನಿತ್ಯ ಜೀವನದಲ್ಲಿ ದುರ್ಲಭವಾದ ಅನುಭೂತಿಯನ್ನು. ಅದರ ಜೊತೆಯಲ್ಲಿಯೇ ವಾಸ್ತವ ಜಗತ್ತಿನ ನೀತಿ, ಧರ್ಮ, ಮೌಲ್ಯಗಳನ್ನೂ ಕಾವ್ಯಗಳಿಂದ ಪಡೆಯಲೆತ್ನಿಸುತ್ತದೆ. ಅಂದರೆ ಕಾವ್ಯದ ಉದ್ದೇಶ ಕೇವಲ ರಸ ಪ್ರಸಾರವಾಗಿರದೆ ನೀತಿ, ಧರ್ಮ ಪ್ರಸಾರಕವೂ ಆಗಿರಬೇಕು. ಮತ್ತು ಈ ಪ್ರಾಕಾರವಾಗಿ ಕಾವ್ಯಗಳನ್ನು ರಚಿಸುವವನೇ ಕವಿ.

ಆದರೆ ಇಲ್ಲಿ ಮತ್ತೊಂದು ಅಂಶ ಗಮನಿಸತಕ್ಕದ್ದು. ನಾವು ನೀತಿ ಧರ್ಮಗಳನ್ನೇ ಕುರಿತ ಕಾವ್ಯಗಳೆಂದು ರಾಮಾಯಣ, ಮಹಾಭಾರತ, ಹಿತೋಪದೇಶ, ಪಂಚತಂತ್ರಾದಿಗಳನ್ನು ಪರಿಗಣಿಸಿದರೂ ಅವು ಮಹಾಕಾವ್ಯಗಳ ಪಟ್ಟಿಯಲ್ಲೇ ಸೇರುತ್ತವೆ. ಆ ಗ್ರಂಥಗಳ ಕರ್ತರೂ ಮಹಾಕವಿಗಳ ಸಾಲಿನಲ್ಲೇ ನಿಲ್ಲುತ್ತಾರೆ. ಏಕೆಂದರೆ ಆ ಗ್ರಂಥಗಳು ನಮ್ಮ ಇರವಿನ ಎಲ್ಲ ಸ್ತರಗಳನ್ನು ಮೆಟ್ಟಿ ನಿಂತಿರುವ ಕಾವ್ಯಗಳು. ಎಲ್ಲ ಸ್ತರಗಳ ಎಲ್ಲ ಸ್ವರಗಳೂ ಅಲ್ಲಿ ಕೇಳಿ ಬರುತ್ತವೆ. ಅಲ್ಲಿ ಶ್ರೀ ರಾಮ, ಶ್ರೀ ಕೃಷ್ಣರಂತಹ ಮಹಾಪುರುಷರ ಚರಿತ್ರೆಗಳನ್ನು ಮತ್ತು ಅವರ ಬದುಕಿನ ತತ್ವಗಳನ್ನು ವರ್ಣಿಸುವುದು ಅವುಗಳ ಉದ್ದೇಶವೇ ಹೊರತು ಧರ್ಮೋಪದೇಶವೇ ಅವುಗಳ ಗುರಿಯಲ್ಲ. ಅವು ನಮ್ಮ ಮನಸ್ಸನ್ನು ಸೌಖ್ಯವಾಗಿರಿಸುವುದಷ್ಟೇ ಅಲ್ಲದೆ ನಮ್ಮಲ್ಲಿ ಆತ್ಮ ಪುಷ್ಟಿಯನ್ನೂ, ಶೋಧಕ ಮತ್ತು ಸಂಸ್ಕಾರಕ ಗುಣವನ್ನೂ ತರುತ್ತವೆ.

ಆದರೆ ಕಾವ್ಯದ ಮೂಲ ಉದ್ದೇಶ ರಸಜಾಗರಣೆಯೇ. ಮನುಷ್ಯನ ಮನಸ್ಸು ಸೌಂದರ್ಯದ ಮೋಹಕತೆಗೆ ಬೇಗ ಮರಳಾಗುತ್ತದೆ. ಆ ಸೌಂದರ್ಯವನ್ನು ಕಾವ್ಯ ಸೆರೆ ಹಿಡಿಯಬೇಕು. ಬೇಂದ್ರೆ ತಮ್ಮ ಸಖಿಗೀತದಲ್ಲಿ ಆ ಬಗ್ಗೆ ಒಂದು ಮಾತು ಹೇಳುತ್ತಾರೆ. 'ಸೌಂದರ್ಯವೆಂಬುದು ಕಣ್ಣಿನ ತುತ್ತಲ್ಲ, ಕಣ್ಣಿಗೂ ಕಣ್ಣಾಗಿ ಒಳಗಿಹುದು '. ಇಲ್ಲಿ ಬೇಂದ್ರೆಯವರು ಹೇಳುತ್ತಿರುವುದು ಕೇವಲ ಬಾಹ್ಯ ಸೌಂದರ್ಯವಲ್ಲ. ಕಣ್ಣಿಗೂ ಕಣ್ಣಾಗಿರುವ ಸೌಂದರ್ಯವನ್ನು ಸ್ರಷ್ಟಿಸುವ ಪ್ರತಿಭೆ. ಆ ಪ್ರತಿಭೆ ಕವಿಗಿರಬೇಕು. ಕೆಲವೊಮ್ಮೆ ಕೇವಲ ಸೌಂದರ್ಯವನ್ನಷ್ಟೇ ಅಲ್ಲ ಆ ಸೌಂದರ್ಯ ರಸವನ್ನು ಆಸ್ವಾದಿಸುವ ಕಣ್ಣನ್ನೂ ಕವಿ ತನ್ನ ಕಾವ್ಯದಲ್ಲಿಡಬೇಕು.

ಕಾವ್ಯ ಮುಖ್ಯವಾಗಿ ಭಾಷೆಯಲ್ಲಿ ಮೂಡಿಬರುವ ಕಲೆಯಾದದ್ದರಿಂದ ಶಬ್ದ ಕ್ರೀಡೆ ಕವಿಯ ವಿಶೀಷ ಅಧಿಕಾರವಾಗಿದೆ. ಅವನು ಶಬ್ದಗಳನ್ನು ವಿಶೇಷವಾಗಿ ಉಪಯೋಗಿಸಿ ಅನಿರೀಕ್ಷಿತವಾದ ಅರ್ಥವನ್ನೂ ರಸವನ್ನೂ ಶಬ್ದಗಳಿಂದ ಹೊರಡಿಸಬಲ್ಲ. ಉದಾಹರಣೆಗೆ ಕಾಳಿದಾಸನ ಶಾಕುಂತಲ ನಾಟಕದಲ್ಲಿ ' ಅನ್ಯೆಃ ದ್ವಿಜೈಃ ಪರಭೃತಾಃ ಬಲು ಪೋಷಯಂತಿ' ಎಂಬ ಒಂದು ಮಾತು ಬರುತ್ತದೆ. ಒಮ್ಮೆ ಓದಿದರೆ ಅರ್ಥ ಕೋಗಿಲೆಗಳು (ಪರಭೃತ), ಬೇರೆ ಪಕ್ಷಿಗಳ (ದ್ವಿಜ) ಮೂಲಕ ತಮ್ಮ ಮರಿಗಳನ್ನು ಪೋಷಿಸುತ್ತವೆ ಎಂದಾಗುತ್ತದೆ. ಆದರೆ ಇನ್ನೂ ಸ್ವಲ್ಪ ಸೂಕ್ಷ್ಮವಾಗಿ ಗ್ರಹಿಸಿದರೆ ದ್ವಿಜ ಎಂಬ ಶಬ್ದಕ್ಕೆ ಬ್ರಾಹ್ಮಣ ಅಂತಲೂ ಅರ್ಥವಿದೆ. ಹಾಗೆಯೇ ಪರಭೃತ ಎಂದರೆ ವೇಶ್ಯೆ ಎಂಬ ಅರ್ಥವೂ ಇದೆ. ಅಂದರೆ ಈ ಮಾತಿನ ಅರ್ಥ ದೇವ ವೆಶ್ಯೆಯಾದ ಮೇನಕೆ ಶಾಕುಂತಲೆಯನ್ನು ಬ್ರಾಹ್ಮಣನಾದ ಕಣ್ವನ ಆಶ್ರಯದಲ್ಲಿ ಬೆಳಸಿದಳು ಅಂತಲೂ ಆಗುತ್ತದೆ. ಇಂತಹ ಒಂದೇ ಶಬ್ದದಲ್ಲಿ ಅನೇಕ ಅರ್ಥಗಳನ್ನು ಅಪ್ಪಿಕೊಳ್ಳುವ (ಶ್ಲೇಷ ) ಪದಗಳ ಬಳಕೆ ಕಾವ್ಯದ ರಸಾಸ್ವಾದವನ್ನು ಹೆಚ್ಚಿಸುತ್ತದೆ.

ಹೀಗೆ ಕಾವ್ಯದಲ್ಲಿನ ರಸಭಾವಗಳು ಮನಸ್ಸಿಗೆ ಆಹ್ಲಾದವನ್ನುಂಟುಮಾಡುತ್ತದೆ. ಕವಿಯೂ ಕೂಡ ಇಂತಹ ರಸಪ್ರೇಷಿತವಾದ ಭಾವನೆಗಳ ವ್ಯುತ್ಪತ್ತಿಯಲ್ಲೇ ಹೆಚ್ಚು ಆನಂದವನ್ನು ಪಡೆಯುತ್ತಾನೆ ಮತ್ತು ಉತ್ಸಾಹಿಯಾಗಿರುತ್ತಾನೆ. ಆದರೆ ಅದರ ಜೊತೆಯಲ್ಲಿಯೇ ಅವನು ತನ್ನ ಕಾವ್ಯ ಯಾವ ನೀತಿಯನ್ನು ಸಾರುತ್ತಿದೆ ಎನ್ನುವ ಬಗ್ಗೆಯೂ ಗಮನ ಹರಿಸುವುದು ಅನಿವಾರ್ಯ. ಏಕೆಂದರೆ ಕಾವ್ಯದಲ್ಲಿನ ಧರ್ಮ ಮತ್ತು ನೀತಿ ಉಪದೇಶಗಳು ನಗರ ಪೇಟೆಗಳಲ್ಲಿನ ಗ್ರಂದಿಗೆ ಅಂಗಡಿಗಳಂತೆ. ಅಲ್ಲಿ ದೊರಕುವುದು ರೋಗನಿವಾರಕ ಮೂಲಿಕೆಗಳಾದರೂ ಅವು ನಾಗರಿಕ ಜೀವನಕ್ಕೆ ಅತ್ಯಗತ್ಯ. ಅವು ಮುಚ್ಚಿ ಹೋದರೆ ನಗರಕ್ಕೆ ನಗರವೇ ತಲ್ಲಣಿಸಿಹೊದೀತು. ಅಂತೆಯೇ ಕಾವ್ಯದಲ್ಲಿ ಕೇವಲ ಲೌಕಿಕ ಭಾವ ರಸಾದಿಗಳು ತುಂಬಿಹೋದರೂ ಇದೇ ಸ್ಥಿತಿಯಾಗುವುದರಲ್ಲಿ ಸಂಶಯವಿಲ್ಲ. ಆದರೆ ನಗರದ ಐಶ್ವರ್ಯ ವಿಲಾಸಗಳನ್ನು ಕೇವಲ ಗ್ರಂದಿಗೆ ಅಂಗಡಿಗಳ ಸಂಖ್ಯೆಗಳಿಂದ ಮತ್ತು ಅವುಗಳ ಪ್ರಾಬಲ್ಯತೆಯಿಂದ ಮಾತ್ರ ಅಳೆಯುವುದಿಲ್ಲ ಎಂಬುದನ್ನೂ ನೆನಪಲ್ಲಿಡಬೇಕು. ಆದುದರಿಂದ ಕವಿಯು ಆ ಎಲ್ಲ ಭಾವಗಳನ್ನು ಹೇಳುತ್ತಲೇ ಅವುಗಳನ್ನು ಮೀರುವ ಪ್ರಯತ್ನವನ್ನೂ ಮಾಡಬೇಕು. ಅಂದರೆ ಮಾತ್ರ ಕಾವ್ಯ ಪರಿಪೂರ್ಣವಾಗುತ್ತದೆ.

ಒಟ್ಟಿನಲ್ಲಿ ಸಹೃದಯರು ಅಪೇಕ್ಷಿಸುವುದು ತಮ್ಮನ್ನು ಭವದತ್ತ ಮತ್ತು ವ್ಯಾವಹಾರಿಕ ಲೋಕದತ್ತಲೂ ಸೆಳೆಯುವ ಕಾವ್ಯವನ್ನು. ಆದುದರಿಂದ ಅಂತಹ ಕಾವ್ಯಗಳೇ ಜನಪ್ರಿಯತೆಯನ್ನು ಪಡೆಯುವಲ್ಲಿ ಶಕ್ಯವಾಗುತ್ತವೆ. ದೇಶಕಾಲಾದಿಗಳ ಪರಿಧಿಯನ್ನೂ ಮೀರಿ ಓದುಗರ ಮನದಲ್ಲಿ ಸ್ಥಾಯಿಯಾಗಿ ಉಳಿಯುತ್ತವೆ.

Sunday, May 3, 2009

ಬೇಂದ್ರೆ ಕಾವ್ಯದಲ್ಲಿ ಒಲವು

(ಮೊನ್ನೆ ಕುರ್ತುಕೋಟಿಯವರು ಬೇಂದ್ರೆ ಕಾವ್ಯಗಳ ಬಗ್ಗೆ ಬರೆದ ಲೇಖನವೊಂದನ್ನು ಓದುತ್ತಿದ್ದೆ. ಬೇಂದ್ರೆ ಅವರ ಕಾವ್ಯ ಅಷ್ಟೇ ಅಲ್ಲ, ಅವರ ಕಾವ್ಯದ ಬಗ್ಗೆ ಓದುವುದೂ ಕೂಡ ಅಷ್ಟೇ ಆನಂದವನ್ನು ತರುತ್ತದೆ. ಆ ಆನಂದವನ್ನು ತಮ್ಮೊಂದಿಗೆ ಹಂಚಿಕೊಳ್ಳಬೇಕು ಎಂಬ ಆಸೆ ಆಯಿತು. ಜೊತೆಗೆ ಈ ಕಾಡಬೆಳದಿಂಗಳ ವಿಹಾರಕ್ಕೆ ಬೇಂದ್ರೆ ಕಾವ್ಯದ ಕುರಿತಾದ ಮಾತುಗಳು ಇನ್ನಷ್ಟು ತಂಪನ್ನು ನೀಡಲಿ ಎಂಬ ಆಶಯವೂ ಸೇರಿಕೊಂಡದ್ದರಿಂದ ಈ ಲೇಖನ ಬರೆಯೋಣವೆನ್ನಿಸಿತು. )

ಕಾಲಕ್ಕೂ ಕಾವ್ಯಕ್ಕೂ ಇರುವ ಸಂಬಂಧ ವಿಚಿತ್ರವಾದದ್ದು. ಒಂದು ಯುಗ ತನಗೆ ಬೇಕಾದ ಕವಿಯನ್ನು ಆರಿಸಿಕೊಳ್ಳುವಂತೆ ಆ ಕವಿ ಕೂಡ ತನಗೆ ಅನುಕೂಲವಾದ ಕಾವ್ಯವನ್ನು ಸೃಷ್ಟಿಸಬಲ್ಲ . ಆ ಕಾವ್ಯ ಹೊಸ ಯುಗಕ್ಕೇ ಜೀವಕೊಡುತ್ತದೆ. ಅಂತೆಯೇ ಬೇಂದ್ರೆಯವರ ಕಾವ್ಯ ನವೋದಯದ ಕಾಲದ ಉತ್ಕೃಷ್ಟ ಫಲವಾಗಿರುವಂತೆ ಬೇಂದ್ರೆಯವರ ಕಾವ್ಯ ಕನ್ನಡದಲ್ಲಿ ನವೂದಯವನ್ನೇ ಸೃಷ್ಟಿಸಿತು ಎಂದೂ ಹೇಳಬಹುದು. ಈ ನವೋದಯಕಾಲದ ಬಹುಪಾಲು ಕಾವ್ಯಗಳ ವಸ್ತುವಾಗಿದ್ದು ಪೌರಾಣಿಕ ಕಾವ್ಯಗಳಿಗಿಂತ ತೀರ ಭಿನ್ನವಾದ ಸಾಮಾನ್ಯಜನರ ಜೀವನದಲ್ಲಿನ 'ಒಲವು'. ಬೇಂದ್ರೆಯವರು ತಮ್ಮ ಕಾವ್ಯಗಳಲ್ಲಿ ಒಲವನ್ನು ವಸ್ತುವಾಗಿ ಬಳಸಿದಷ್ಟು ಸುಂದರವಾಗಿ ಮತ್ತು ಸಹಜವಾಗಿ ಮತ್ತೆ ಯಾವ ಕವಿಯೂ ಬಳಸಿರಲಾರ. ಅವರು ತಮ್ಮ ಕಾವ್ಯಗಳಲ್ಲಿ ತುಂಬಿದ ಒಲವು, ಅತ್ಯಂತ ಸಾಮಾನ್ಯವಾಗಿರುವುದನ್ನೇ ಹೇಳುತ್ತಾ ದೈವಿಕತೆಯನ್ನು ಪಡೆದುಕೊಂಡುಬಿಡುವುದು ತುಂಬಾ ವಿಶೇಷವಾದದ್ದು.

ಬೇಂದ್ರೆ ಅವರ ಪ್ರಾರಂಭದ ಪ್ರಣಯ ಕಾವ್ಯ ಸಂಕಲನಗಳಲ್ಲಿ ಕಾಮ ಪ್ರಧಾನವಾದ ಕವಿತೆಗಳೇ ಹೆಚ್ಚು. ಅಂತಹ ಒಂದು ಕವನ ಸಂಕಲನ 'ಕಾಮ ಕಸ್ತೂರಿ'. ಅದರ ಮುನ್ನುಡಿಯಲ್ಲೇ 'ಕಾಮ ಕಸ್ತೂರಿಯಂತೆ ಒಕ್ಕಾಲು ಮದ ಮುಕ್ಕಾಲು ಮಣ್ಣು, ಆದರೂ ಗಮಗಮಿಸುವ ಸವಿಗಂಪು ! ' ಎನ್ನುತ್ತಾರೆ. ಅದರಲ್ಲಿನ ಒಂದು ಕವನದ ಸಾಲು ' ಕವಳ ಮೆಲ್ಲುವ ಬಾಯ ಹವಳ ತುಟಿಯ ಹಿಂಡುತ್ತ ನಿವಳ ನಿಂತಾಳ ನಿಳವೀಲೆ ಗಿಣಿ ಹೇಳ ಇವಳ ಮನವೆಲ್ಲಿ ಇರಬಹುದೆಂದು ' . ಇದು ಹಳ್ಳಿ ಯುವಕನೊಬ್ಬ ತನ್ನ ಮನದನ್ನೆಯ ನಿಲವನ್ನು ಬಣ್ಣಿಸುವ ರೀತಿ. ಇಲ್ಲಿಯ ಪದ, ಪ್ರತಿಮೆ ಮತ್ತು ಧಾಟಿ ಎಲ್ಲ ಜಾನಪದ. ಆದರೂ ಇದು ಕಟ್ಟಿಕೊಡುವ ಅನುಭಾವ ಇದೆಯಲ್ಲ ಅದು ಮಾತ್ರ ಎಷ್ಟು ಪರಿಷ್ಕೃತ ನೋಡಿ. 'ಇವಳ ಮನವೆಲ್ಲಿ ಇರಬಹುದು?' ಎಂಬ ಸಾಲಿನಲ್ಲಿನ ಅಂತರ್ಮುಖತೆ ಅದು ಸಂಪೂರ್ಣ ನಾಗರಿಕ ಅಲ್ಲವೇ?? ಇದೇ ಹೊತ್ತಿನ ಅವರ ಇನ್ನೊಂದು ಕವನ, ' ಕಲ್ಪವೃಕ್ಷ ಬೃಂದಾವನಂಗಳಲಿ ' . ಅಲ್ಲಿ ಅವರು ಪ್ರಣಯಾನುಭವವನ್ನು ಬೆಳಕು ಕತ್ತಲೆ, ಅಮೃತ ವಿಷಗಳಿಗೆ ಹೋಲಿಸುತ್ತಾರೆ. (ಒಂದೊಂದು ಸಾಲಿನಲ್ಲೂ contrast ನಿರೂಪಿಸುತ್ತ ಸಾಗುವ ಈ ಕವಿತೆ ತುಂಬಾ ಜಟಿಲವಾಗಿ ತೋರುತ್ತದೆ.) ' ಬಾಲ ಸುತ್ತಿ ಹೆಡೆಯೆತ್ತಿ ತೂಗುತಿರೆ ಭೊಗಸುಪ್ತಕಾಲ ಈ ತೋಳಿನಲಿ ಹೋಳು ಮೈ ಇರಲು ಬೀಸಿತಿಂದ್ರಜಾಲ ' ಇಂತಹ ಸಾಲುಗಳಲ್ಲಿ ಕಾಮದ ಅಂತರ್ಮುಖತೆಯಲ್ಲಿಯೇ ಸಾಂಸ್ಕೃತಿಕ ಮೌಲ್ಯಗಳಾದ ಸೌಂದರ್ಯ ಮತ್ತು ಆಧ್ಯಾತ್ಮಿಕತೆಯೆರಡೂ ಸೇರಿಬಿಡುತ್ತವೆ.

ಆದರೆ ಅವರ ನಂತರದ ಪ್ರಣಯ ಕವಿತೆಗಳನ್ನು ನೋಡಿದರೆ ಅಲ್ಲಿನ ಅನುಭವ ತಂತಾನೇ ಅನುಭಾವವಾಗುವುದು ತೋರುತ್ತದೆ. ನಾದಲೀಲೆಯಲ್ಲಿನ ಕವನಗಳಲ್ಲಿ ಇಂಥದ್ದನ್ನು ಹೇರಳವಾಗಿ ಕಾಣಬಹುದು. ಅವರು ತೋರಿಸುವ ವಿರಹದ ಉತ್ಕಟತೆ ಅದ್ಭುತ. ಈ ಸಾಲುಗಳನ್ನೇ ನೋಡಿ ' ಕಾಣದ ವಸ್ತುವಿನ ಕಾಣಬೇಕೆಂಬಾಸೆ, ಮಿತಿಯ ಮೀರಿದೆ ಜೀವಾ '. ಆ ಕಾಣದ ವಸ್ತು ಪ್ರಿಯಕರನಾಗಿರಬಹುದು ಅಥವಾ ದೇವರು?? ಹೀಗೆ ಅದೃಶ್ಯದೊಡನೆ ನೋಡಬಯಸುವ ದೃಷ್ಟದ ಹಂಬಲವಿರಬಹುದೇ ಎಂದು ಪ್ರಶ್ನಿಸಿದಂತೆ ಅನ್ನಿಸುವ ಕವಿತೆಗಳು ನಾದಲೀಲೆಯಲ್ಲಿ ಇವೆ. ಅವರ ಒಲವಿನ ಕಾವ್ಯಗಳಲ್ಲಿನ ಇನ್ನೊಂದು ಮಗ್ಗುಲು ಅಂದರೆ ಮುಗ್ಧತೆ ಮತ್ತು ಪ್ರೌಢತೆಯನ್ನು ಒಟ್ಟೊಟ್ಟಿಗೇ ಅವರು ಹೇಳುವ ರೀತಿ. 'ನಾನು ಬಡವಿ, ಆತ ಬಡವ, ಒಲವೆ ನಮ್ಮ ಬದುಕು' ಎಂಬ ಅವರ ಕಾವ್ಯನಾಯಿಕೆಯೊಬ್ಬಳ ಮಾತಿನಲ್ಲಿರುವ ಮುಗ್ಧತೆ ಮತ್ತು ಆ ಪ್ರೌಢತೆ ಅದ್ಭುತವಾದದ್ದು.

ಅವರ ಇನ್ನೊಂದು ವಿಶಿಷ್ಟ ಒಲವಿನ ಕವಿತೆ 'ಹುಬ್ಬಳ್ಳಿಯಾಂವಾ'. ಆ ಕವಿತೆಯಲ್ಲಿನ ನಾಯಿಕೆಯ ಸುಖದುಃಖ ಉನ್ಮಾದಗಳು ಐಂದ್ರಿಕತೆಯಿಂದ ತುಂಬಿ ತುಳುಕುತ್ತವೆ. 'ಬಂಗಾರ ಹುಡಿಲೆ ಭಂಡಾರನ ಬೆಳೆಸೆಂದಾವ' , ' ಜೋಗತೇರಿಗೆ ಮೂಗುತಿ ಅಂತ ನನಗ ಅಂದಾವಾ'. ಇಲ್ಲಿನ ಅತಿಶಯೋಕ್ತಿ ಅನುಭವವನ್ನು ಅನುಭಾವವಾಗಿಸುವ ಅವರ ಕಾವ್ಯದ ಒಂದು ಉಪಾಯ! ಕಳೆದುಹೋದ (ಸೆಟಕೊಂಡು ಹೋದ) ಸೆಟ್ಟರ ಹುಡುಗನನ್ನು ಕಾಯುತ್ತ ಹಾದಿ ಬೀದಿ ಹುಡುಕುವ ಈ ನಾಯಿಕೆಯ ವಿರಹ ಚೆನ್ನಮಲ್ಲಿಕಾರ್ಜುನನನ್ನು ಹುಡುಕುವ ಅಕ್ಕನನ್ನು ನೆನಪಿಸುವುದು ಇದೇ ಕಾರಣಕ್ಕೆ. ಒಮ್ಮೆ ಕಂಡು ಮರೆಯಾದ ಆ ಸೆಟ್ಟರ ಹುಡುಗನ ಚೆಲುವು ಮನಸ್ಸಿಗೆ ಇಂತಹ ಉನ್ಮಾದ ತಂದಿರಬೇಕಿದ್ದರೆ ಆ ಪ್ರಣಯದ ಅನುಭವದ ಶಕ್ತಿ ಹೇಗಿರಬೇಡ?!

ಕೊನೆಯಲ್ಲಿ ಅವರ ಇನ್ನೊಂದು ಕವಿತೆಯ ಬಗ್ಗೆ ಗಮನ ಕೊಡಬೇಕು. ಅದು 'ಸಂಗೀತ'. ಬೇಂದ್ರೆಯವರು ತನ್ನ ಆತ್ಮಚರಿತ್ರೆಯನ್ನು ಅದರಲ್ಲಿ ನಿರೂಪಿಸಿದ್ದಾರೆ. ಅಲ್ಲಿನ ಅವರ ಪ್ರಣಯಾನುಭವ ವಿಶೇಷ. ಏಕೆಂದರೆ ಅವರ ಪತ್ನಿಯೇ ಇಲ್ಲಿ ಅವರ ಪ್ರಣಯಿನಿ. ಜಗತ್ತಿನ ಬಹುಪಾಲು ಎಲ್ಲ ಪ್ರಣಯ ಕಾವ್ಯಗಳಲ್ಲಿ ವಿವಾಹ ಪೂರ್ವ ಅಥವಾ ವಿವಾಹ ಬಾಹಿರ ಪ್ರಣಯವನ್ನು ನಿರೂಪಿಸಿದರೆ, ಬೇಂದ್ರೆ ವಿವಾಹೋತ್ತರ ಪ್ರಣಯವನ್ನು ನಿರೂಪಿಸುತ್ತಾರೆ. ( ಭಾಸನ ಸ್ವಪ್ನವಾಸವದತ್ತದ ನೆನಪು ತರುತ್ತದೆ ಇದು. ಅಲ್ಲಿ ವಾಸವದತ್ತೆ ಉದಯನನ ಸಖಿ, ಗ್ರಹಿಣಿ ಮತ್ತು ಪ್ರಿಯಶಿಷ್ಯೆ ಕೂಡ. ) ಬೇಂದ್ರೆಯವರ ಸಖಿಗೀತದ ಆದರ್ಶವೂ ಇದೇ. ಈ ಕವನಸಂಕಲನದ ಮೊದಲಿಗೆ ಐಂದ್ರಿಕ ಅನುಭವಗಳ ಕವಿತೆಗಳು ಇದ್ದರೂ ನಂತರದಲ್ಲಿ ಸಾವುನೋವುಗಳ ಆತಂಕ ಮತ್ತು ಬಡತನ ಸಿರಿವಂತಿಕೆಗಳ ನಿತ್ಯ ಅನುಭವಗಳೂ ಇವೆ.

ಬೇಂದ್ರೆಯವರ ಜೀವನದ ತುಂಬಾ ಹೃದಯ ಒಡೆದು ಚೂರಾಗುವ ಸನ್ನಿವೇಶಗಳು ತುಂಬಿದ್ದವು. ಚೊಚ್ಚಲ ಹಸುಗೂಸು ಹುಟ್ಟಿದೊಡನೆ ತೀರಿಹೋಯಿತು. ಜೊತೆಯಲ್ಲಿ ಆರ್ಥಿಕ ಸಂಕಷ್ಟ. ಹೀಗಿರುವಾಗ ಅವರ ದೀರ್ಘದಾಂಪತ್ಯದಲ್ಲಿ ಪರಸ್ಪರ ವಿಮುಖತೆ ಬಂದಿರಬಹುದು. ಇವೆಲ್ಲವನ್ನೂ ಅವರ ಒಲವಿನ ಕವನಗಳಲ್ಲಿ ಹೇರಳವಾಗಿ ಕಾಣಬಹುದು. ಅಂತೆಯೇ ಒಡೆದ ಹೃದಯದ ಕನ್ನಡಿಯನ್ನು ಜೋಡಿಸುವ ದಾಂಪತ್ಯದ ಕುಶಲತೆಗೇನೂ ಕಡಿಮೆ ಇಲ್ಲ ಅವರ ಕವನಗಳು. ಇದೇ ಅವರ ಕಾವ್ಯದ ಕುಶಲಕರ್ಮ ಮತ್ತು ಅವರ ಜೀವನದ ಕುಶಲಕರ್ಮವೂ ಆಗಿರುವುದು ದೊಡ್ಡ ಗುಣ. ಹೀಗೆ ಅವರ ಕವಿತೆಗಳಲ್ಲಿನ ಅತೀ ಉದ್ದದ ಪಲ್ಲವಿಯಾದ, ' ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರಾರು ಕಾಮಾಕ್ಷಿಯೇ? ' ಕೊನೆಯಲ್ಲೂ ಪ್ರಶ್ನೆಯಾಗಿ ಉಳಿದು ಒಲವಿನಂತೆ ನಿರಂತರ ಕಾಡುತ್ತದೆ.