Thursday, May 14, 2009

ನಾಂದಿ

ಯಾ ಸೃಷ್ಟಿಃ ಸೃಷ್ಟುರಾದ್ಯಾ ವಹತಿ ವಿಧಿಹುತಂ ಯಾ ಹವಿರ್ಯಾ ಚ ಹೋತ್ರೀ


ಯೇ ಧ್ವೇ ಕಾಲಂ ವಿಧತ್ತಃ ಶ್ರುತಿ ವಿಷಯ ಗುಣಾ ಯಾ ಸ್ಥಿತಾ ವ್ಯಾಪ್ಯ ವಿಶ್ವಂ


ಯಾಮಾಹುಃ ಸರ್ವಬೀಜ ಪ್ರಕೃತಿರಿತಿ ಯಯಾ ಪ್ರಾಣಿನಃ ಪ್ರಾಣವಂತಃ


ಪ್ರತ್ಯಕ್ಷಾಭಿಃ ಪ್ರಪನ್ನಸ್ತನುಭಿರವತು ವಸ್ತಾಭಿರಷ್ಟಾಭಿರೀಶಃ


ಇದು ಕಾಳಿದಾಸನ 'ಅಭಿಜ್ಞಾನ ಶಾಕುಂತಲಂ' ನಾಟಕದ ನಾಂದಿ ಪದ್ಯ. ನಾಟಕದ ಆರಂಭದಲ್ಲಿ ಇಷ್ಟ ದೇವತೆಗೆ ಪ್ರಾರ್ಥನೆಯನ್ನು ಸಲ್ಲಿಸುವುದು ಸಂಸ್ಕೃತ ನಾಟಕದ ಒಂದು ನಿಯಮ. ಭರತ ಮುನಿಯ ನಾಟ್ಯ ಶಾಸ್ತ್ರದ ಸೂತ್ರಗಳಲ್ಲಿ ನಾಂದಿ ಹೇಗಿರಬೇಕು ಎಂಬುದರ ಕುರಿತು ದೀರ್ಘವಾದ ವಿವರಣೆಗಳಿವೆ. ನಾಂದಿ ನಾಟಕದ ಹೊರಗೆ ಇದ್ದರೂ ಅದು ನಾಟಕಕ್ಕೆ ಸ್ವರೂಪವನ್ನು ತಂದುಕೊಡುವ ಅಂಶ. ನಾಂದಿ ಪದ್ಯದ ಇನ್ನೊಂದು ವಿಶೇಷ ಗುಣವೆಂದರೆ ಅದು ಸೂಚ್ಯವಾಗಿ ನಾಟಕದ ವಸ್ತುವನ್ನು ಮೊದಲಲ್ಲೇ ಹೇಳಿಬಿಡುತ್ತದೆ. ಮತ್ತು ಅದು ಹಾಗೇ ಇರಬೇಕೆಂದು ನಿಯಮ. ನಾಟಕದ ಆರಂಭದಲ್ಲಿ ಸೂತ್ರಧಾರನು ತೆರೆಯಿಂದ ಹೊರ ಬಂದು ನಾಟಕದ ಕಥೆಗೆ ಇಂಬುಕೊಡುವ ನಾಂದಿ ಸ್ತುತಿಯನ್ನು ಹಾಡಿ ನಾಟಕದ ಪಾತ್ರಗಳು ರಂಗದಮೇಲೆ ಬರಲು ಅನುವುಮಾಡಿಕೊಡುತ್ತಾನೆ.


ದೇವತಾ ಸ್ತುತಿಯಲ್ಲಿ ನಾಟಕದ ವಸ್ತುವನ್ನು ಅಡಗಿಸಿ ಕವಿತೆ ನಿರ್ಮಿಸುವುದು ಬಹಳ ಕಷ್ಟ. ಅದರ ಸಂವೇದನೆಯೂ ತಡವಾಗಿ ತಾಗುತ್ತದೆ. ಉದಾಹರಣೆಗೆ ಈ ಮೇಲಿನ ನಾಂದಿ ಪದ್ಯವನ್ನೇ ತೆಗೆದುಕೊಂಡರೆ ಅದು ಕೇವಲ ಕಾಳಿದಾಸನ ಇಷ್ಟದೇವತೆಯಾದ ಶಿವನ ಸ್ತುತಿಯಾಗಿ ಕಾಣುತ್ತದೆ. 'ಈಶಃ' ಎಂಬ ಸರ್ವಸಾಮಾನ್ಯವಾದ ದೇವವಾಚಕವನ್ನು ಬಿಟ್ಟರೆ ಶಿವನ ಹೆಸರೂ ಇದರಲ್ಲಿಲ್ಲ. ಆದರೆ ಶಿವನ ಮಹಿಮೆ ಬಹಳ ಸೂಕ್ಹ್ಮವಾಗಿ ಹೇಳಲ್ಪಟ್ಟಿದೆ. ಈ ಪದ್ಯದ ಕೊನೆಯ ಸಾಲಿನಲ್ಲಿ, ಪ್ರತ್ಯಾಕ್ಷಾಭಿಃ ಪ್ರಪನ್ನಸ್ತನುಭಿರವತು ವಸ್ತಾಭಿರಷ್ಟಾಭಿರೀಶಃ ಅಂದರೆ 'ಪ್ರತ್ಯಕ್ಷವಾದ ಎಂಟು ಅವಯವಗಳಿಂದ ಕೂಡಿದ ಶಿವ ನಮ್ಮನ್ನು ಕಾಪಾಡಲಿ' ಎನ್ನುತ್ತಾನೆ ಕಾಳಿದಾಸ. ಈ ಪದ್ಯದ ಆಶಯವನ್ನೇ ಅನುಸರಿಸಿದರೆ ಶಿವನ ಆ ಅಷ್ಟ ತನುಗಳು ಯಾವವು ಮತ್ತು ಶಿವನ ಈ ಸ್ತುತಿಗೂ ಅಭಿಜ್ಞಾನ ಶಾಕುಂತಲದ ಕಥೆಗೂ ಎಲ್ಲಿಯ ನಂಟು ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.


ಈ ಪ್ರಶ್ನೆಗೆ ಉತ್ತರ ಈ ಪದ್ಯದಲ್ಲಿ ಇದೆ. ಅಥವಾ ಅತಿಶಯವಾಗಿಯೇ ಇದೆ ಎನ್ನಬಹುದು ! ಒಂದು ಅವಯವದ ಉಲ್ಲೇಖ ಮೊದಲ ಸಾಲಿನಲ್ಲಿಯೇ ಇದೆ. ' ಯಾ ಸೃಷ್ಟಿಃ ಸೃಷ್ಟುರಾದ್ಯಾ' - ಯಾವದು ಬ್ರಹ್ಮನ ಮೊದಲ ಸೃಷ್ಟಿಯಾಗಿದೆಯೋ ಅದು. ಅಂದರೆ ನೀರು (ವೇದ ವಾಕ್ಯದಂತೆ). ಆದರೆ ನೀರಿಗೆ ತೋಯ, ಜಲ, ಅಂಬು ಎಂಬೆಲ್ಲ ಶಬ್ದಗಳಿದ್ದರೂ ಅವುಗಳನ್ನು ಎಲ್ಲೂ ನೇರವಾಗಿ ಬಳಸಿಲ್ಲ. ಮೊದಲ ಸೃಷ್ಟಿ ಎನ್ನುವುದಾಗಿ ಅಷ್ಟೇ ಹೇಳಿ ನೀರಿಗೆ ಪರಿಭಾಷೆಯನ್ನು ಕೊಡುತ್ತಾನೆ. ಮೊದಲ ಸಾಲಿನ ಎರಡನೇ ಭಾಗದಲ್ಲಿ 'ವಹತಿ ವಿಧಿಹುತಂ ಯಾ ಹವಿರ್ಯಾಚ ಹೋತ್ರೀ' ಅಂದರೆ 'ಯಾವುದು ವಿಧಿವತ್ತಾಗಿ ಹಾಕಿದ ಹವಿರ್ಭಾಗವನ್ನು ಒಯ್ಯುತ್ತದೋ ಅದು' ಎನ್ನುತ್ತಾನೆ. ಅಂದರೆ ಹವನ ದಲ್ಲಿ ಹಾಕಿದ ಹವಿಸ್ಸನ್ನು ಒಯ್ಯುವ 'ಅಗ್ನಿ' ಯ ವರ್ಣನೆ ಇದು. ಆದರೆ ಅಗ್ನಿ ಪದದ ಪ್ರಯೋಗವೂ ನೇರವಾಗಿ ಇಲ್ಲ. ಹೀಗೆ ಮುಂದೆ 'ಯೇ ಧ್ವೆ ಕಾಲಂ ವಿಧತ್ತಃ' ಅಂದರೆ ಕಾಲವನ್ನು ಎರಡಾಗಿ (ಹಗಲು, ರಾತ್ರಿಗಳಾಗಿ) ವಿಭಜಿಸುವ ಸೂರ್ಯ ಚಂದ್ರರ ಬಗ್ಗೆ ಹೇಳುತ್ತಾನೆ. ಇದೇ ರೀತಿ ಪ್ರಾಣವಾಯು (ಗಾಳಿ), ಭೂಮಿ, ಆಕಾಶ ಗಳ ವರ್ಣನೆಯನ್ನೂ ಮಾಡುತ್ತಾನೆ. ಆದರೆ ಎಲ್ಲಿಯೂ ಆ ಶಬ್ದಗಳನ್ನು ನೇರವಾಗಿ ಬಳಸದೆ ಕೇವಲ ಅವುಗಳ ಪರಿಭಾಷೆಯನ್ನು ಮಾತ್ರ ಕೊಡುತ್ತಾನೆ. ಈಶ್ವರನೂ ಬ್ರಹ್ಮನ ಸೃಷ್ಟಿ ಎಂಬ ವೇದಗಳ ತತ್ವವನ್ನು ಒಪ್ಪಿಕೊಂಡರೆ ಈ ಎಲ್ಲವೂ (ನೀರು, ಅಗ್ನಿ, ಕಾಲ, ಗಾಳಿ, ಭೂಮಿ ಮತ್ತು ಆಕಾಶ) ಅವನ ಅವಯವಗಳಾಗಿವೆ ಎಂಬ ಕಾಳಿದಾಸನ ಮಾತು ತರ್ಕಬದ್ದ ಎಂದು ನನಗೆ ಎನ್ನಿಸುತ್ತವೆ. ಜೊತೆಗೆ ನಿಸರ್ಗಕ್ಕೂ ದೇವರಿಗೂ ಇರುವ ಸಂಬಂಧ ಕೇವಲ ತೋರಿಕೆಯದಲ್ಲ ಅದೇ ನಿಜವಾದ ಸಂಬಂಧ ಎಂದು ಈ ಪದ್ಯ ಸುಂದರವಾಗಿ ವಿವರಿಸಿದಂತೆಯೂ ತೋರುತ್ತದೆ.


ಈ ವಿವರಣೆಯ ನಂತರ ಇನ್ನೊಂದು ಪ್ರಶ್ನೆ ಉಳಿಯುತ್ತದೆ. ಅದು ಈ ಪದ್ಯಕ್ಕೂ ನಾಟಕದ ವಸ್ತುವಿಗೂ ಇರುವ ಸಂಬಂಧ. ನಾಟಕ ಉಪಯೋಗಿಸುವುದು ಮಹಾಭಾರತದಲ್ಲಿಯ ಶಕುಂತಲೆಯ ಕಥೆ. ಆಕೆ ವಿಶ್ವಾಮಿತ್ರಮೇನಕೆಯರ ಮಗಳು. ಕಣ್ವರ ಸಾಕು ಮಗಳು, ಅನಸೂಯೆ ಪ್ರಿಯಂವದೆಯರ ಸಖಿ, ದುಷ್ಯಂತನ ಹೆಂಡತಿ ಮತ್ತು ಸರ್ವದಮನನ ತಾಯಿ. ಹೀಗೆ ಶಕುಂತಲೆ ಅನೇಕ ಪಾತ್ರಗಳಾಗಿ ಕಾಣಿಸುತ್ತಾಳೆ. ಆದರೆ ವಿಸ್ಮ್ರಿತಿಗೀಡಾದ ದುಷ್ಯಂತ ಇದನ್ನೆಲ್ಲಾ ಮರೆಯುತ್ತಾನೆ. ಅವನಿಗೆ ಅವಳ ಅಸ್ಪಷ್ಟ ರೂಪವೊಂದೇ ನೆನಪಲ್ಲುಳಿಯುವುದು. ದುಷ್ಯಂತ ಶಕುಂತಲೆಗೆ ನೆನಪಿಗೆಂದು ನೀಡಿದ್ದ ಉಂಗುರ ಶುಚಿತೀರ್ಥದಲ್ಲಿ ಕಳೆದು ಹೋಗುತ್ತದೆ. ಮುಂದೆ ಅದೇ ಮತ್ಸ್ಯವೊಂದರ ಉದರದಲ್ಲಿ ದೊರೆತು ಮುರಿದ ಸಂಬಂಧಗಳನ್ನು ಮತ್ತೆ ಕಟ್ಟುತ್ತದೆ. ಈ ನಾಂದಿ ಶ್ಲೋಕದಲ್ಲಿಯೂ ಹಾಗೆಯೇ ಅಲ್ಲವೇ? ಶಿವನ ಅಷ್ಟ ತನುಗಳನ್ನು ನೇರವಾಗಿ ಹೇಳದ ಕಾಳಿದಾಸ ಅವುಗಳ ಗುರುತನ್ನು ಮಾತ್ರ ಹೇಳುತ್ತಾ ನಾವೇ ಆ ಶಬ್ದಗಳನ್ನು ಗ್ರಹಿಸುವಂತೆ ಮಾಡುತ್ತಾನೆ. 'ಅಭಿಜ್ಞಾನ' ಶಬ್ದದ ಅರ್ಥವೂ ಇದೇ. ಗುರುತು. Recognition. ಮತ್ತು ದುಷ್ಯಂತನಿಗೆ ಶಕುಂತಲೆ ಹೇಗೆ ಸತ್ಯ ಮತ್ತು ವಾಸ್ತವವೂ ಅಂತೆಯೇ ನೀರು, ಅಗ್ನಿ, ವಾಯು, ಕಾಲ, ಭೂಮಿ, ಆಕಾಶಗಳು ಆ ಮಹಾದೇವನ ಸ್ವರೂಪಗಳು ಎಂಬ ಸತ್ಯದ ತಾತ್ವಿಕತೆಯನ್ನೂ ಈ ಸ್ತುತಿ ಎತ್ತಿ ಹಿಡಿದಿದೆ. ಹೀಗೆ ಈ ಪದ್ಯದಲ್ಲಿ ನಡೆಯುವ ತಿಳುವಳಿಕೆ ಪ್ರಕ್ರಿಯೆಯೇ ನಾಟಕದಲ್ಲಿ ಪ್ರತಿ ಹೆಜ್ಜೆಯಲ್ಲೂ ಇದೆ.

ಈ ನಾಂದಿ ಪದ್ಯವನ್ನು ಹೀಗೆ ಬಿಡಿಸಿ ನೋಡಿದಾಗ ಈ ಪದ್ಯದಲ್ಲಿ ನಾಟದಕ ವಸ್ತು- ಪ್ರತ್ಯಭಿಜ್ಞಾನ ಕ್ರಿಯೆ- ಸೂಚ್ಯವಾಗಿ ಅಡಗಿದೆಯೆಂದು ತಿಳಿಯುತ್ತದೆ. ಆ ಮೂಲಕ ಭರತಮುನಿಯ ನಾಂದಿ ಸೂತ್ರಕ್ಕೆ ಅಭಿಜ್ಞಾನ ಶಾಕುಂತಲದ ನಾಂದಿ ಪದ್ಯ ಎಲ್ಲೂ ಅಪಚಾರವೆಸಗಿಲ್ಲ ಎಂಬುದೂ ಸ್ಪಷ್ಟವಾಗುತ್ತದೆ. ಒಟ್ಟಿನಲ್ಲಿ ಈ ನಾಟಕದ ಸಾರ ಅದರ ನಾಂದಿ ಪದ್ಯದಲ್ಲಿ ಅಡಗಿದೆ ಎನ್ನುವುದಕ್ಕಿಂತ ಈ ನಾಂದಿ ಪದ್ಯಕ್ಕೆ ಅಭಿಜ್ಞಾನ ಶಾಕುಂತಲ ನಾಟಕವೇ ಅರ್ಥವಿವರಣೆ ಆಗಿದೆ ಎನ್ನಬಹುದಲ್ಲವೇ?

( ನನಗೆ ತುಂಬಾ ಇಷ್ಟವೆನಿಸಿದ ಮತ್ತು ಸ್ವಾರಸ್ಯಪೂರ್ಣವಾದ ನಾಂದಿ ಭಾಸನ ಪ್ರಸಿದ್ದ ನಾಟಕ ಸ್ವಪ್ನವಾಸವದತ್ತದ್ದು. ಈ ನಾಂದಿ ಪದ್ಯದ ಸಾರದ ಬಗ್ಗೆ ಮುಂದಿನ ಪೋಸ್ಟ್ ನಲ್ಲಿ ತಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. )

10 comments:

  1. ನಿಮ್ಮ ಬರಹ ಪ್ರೌಢವೂ, ಉತ್ತಮವು ಆಗಿದೆ.

    ReplyDelete
  2. ಗೋದಾವರಿ,
    ಸಂಸ್ಕೃತದ ಹಾಗೂ ಸಂಸ್ಕೃತಸಾಹಿತ್ಯದ ಅತ್ಯಲ್ಪ ತಿಳಿವಳಿಕೆ ಇರುವ ನನಗೆ ನಿಮ್ಮ ಲೇಖನದಿಂದ ತುಂಬಾ ಖುಶಿಯಾಯಿತು. ದಯವಿಟ್ಟು ಇತರ ಸಂಸ್ಕೃತ ಕವಿಗಳ ಸಾಹಿತ್ಯದ
    ವಿಶಿಷ್ಟ ಗುಣರೂಪಗಳ ಬಗೆಗೆ ಬರೆದು ನಮ್ಮ ಕೊರತೆಯನ್ನು ತುಂಬಿರಿ.
    ಧನ್ಯವಾದಗಳು.

    ReplyDelete
  3. ಧನ್ಯವಾದಗಳು ಪರಾಂಜಪೆಯವರೇ.. ಕಾಡಬೆಳದಿಂಗಳಿಗೆ ನಿಮಗೆ ಸ್ವಾಗತ..

    ಸುನಾಥ್ ಅವರೇ,
    ತುಂಬಾ ಧನ್ಯವಾದಗಳು.. ಖಂಡಿತವಾಗಿ ಆ ಬಗ್ಗೆ ಬರೆಯಲು ಪ್ರಯತ್ನಿಸುತ್ತೇನೆ..

    ReplyDelete
  4. ಗೋದಾವರಿಯವರೆ,
    ಈಗ ತಾನೆ ನಿಮ್ಮ ಬ್ಲಾಗಿನಲ್ಲಿರುವ ಪೋಸ್ಟಿಂಗ್ ಗಳನ್ನು ಓದಿ ಮುಗಿಸಿದೆ. ಒಂದಕ್ಕಿಂತ ಒಂದು ಚನ್ನಾಗಿವೆ. ಬೇಂದ್ರೇಯವರ ಕಾವ್ಯವಾಗಲಿ, ಭಾವಗೀತವಾಗಲಿ, ನಾಂದಿಯಾಗಲಿ ಎಲ್ಲವೂ ಸುಂದರ ಸುಮುಧುರ. ನಾಂದಿ ಬಗ್ಗೆ ತುಂಬಾ ಚನ್ನಾಗಿ ವಿವರಣೆ ಕೊಟಿದ್ದೀರಿ. ಆದರೆ ನಾಂದಿ ಮುಂದೆ ಬೇರೆ ಬೇರೆ ರೂಪಗಳನ್ನು ಪಡೆದುಕೊಂಡು ಬೆಳೆಯಿತಲ್ಲವೆ?
    ನಿಮ್ಮ ಬರವಣಿಗೆ ಶೈಲಿ ತುಂಬಾ ಹಿಡಿಸಿತು. ಹಾಗೆಯೆ ನಿಮಗೆ ಭಾಷೆಯ ಮೇಲೆ ತುಂಬಾ ಹಿಡಿತವಿದೆ. ನೀವೇನಾದರು ಕನ್ನಡ ಎಮ್.ಎ ಮಾಡಿದ್ದೀರಾ? Keep it up. ಇನ್ನುಮುಂದೆ ನಿಮ್ಮ ಬ್ಲಾಗ್ update ಆದಾಗಲೆಲ್ಲಾ ಓದುತ್ತೇನೆ.

    ReplyDelete
  5. ಉದಯ್ ಅವರೇ ನಿಮ್ಮ ಪ್ರೋತ್ಸಾಹದ ಮಾತುಗಳಿಗೆ ಧನ್ಯವಾದಗಳು.. ಕಾಡಬೆಳದಿಂಗಳಿಗೆ ನಿಮಗೆ ಸ್ವಾಗತ..

    ReplyDelete
  6. ಗೋದಾವರಿಯವರೇ..
    ಈ ಕಾವ್ಯ, ವಿಮರ್ಶೆ, ಸಾಹಿತ್ಯ ಇದಕ್ಕೆಲ್ಲ ನಾನು ಸುನಾಥ್ ಅಂಕಲ್ ಬ್ಲಾಗ ಗೆ ಹೋಗ್ತಿದ್ದೆ...ಅವರ ಬ್ಲಾಗ್ ಇದಕ್ಕೆಲ್ಲ ಒಂಥರಾ ಲೈಬ್ರೆರಿ ಇದ್ದಂಗೆ. ಈವಾಗ ನೀವೂನು ಬರೆತೀರಿ.ತುಂಬಾ ತಿಳ್ಕೊಂಡ ಹಂಗೆ ಆಗುತ್ತೆ. ಧನ್ಯವಾದಗಳು.
    -ಧರಿತ್ರಿ

    ReplyDelete
  7. ಗೋದಾವರಿ
    ತುಂಬ ಚೆನ್ನಾಗಿ ಬರಿತಿರ ನಿಮ್ಮ ಬ್ಲಾಗಿಂದ ಅನೇಕ ವಿಷಯಗಳು ತಿಳಿಯುತ್ತವೆ....ನಿಮ್ಮ ಬರಹದ ಶೈಲಿಯು ತುಂಬ ಪ್ರಬುದ್ದವಾಗಿ ಇದೆ....
    ಗುರು

    ReplyDelete
  8. ಧರಿತ್ರಿ, ಧನ್ಯವಾದಗಳು. ಹೌದು.. ಸುನಾಥ್ ಅವರ 'ಸಲ್ಲಾಪ' ಬ್ಲಾಗ್ ಒಂದು ಲೈಬ್ರರಿ ಇದ್ದಂತೆ.ನಾನೂ ಅಲ್ಲಿ ಕಾವ್ಯ ಮತ್ತು ವಿಮರ್ಶೆಗಳನ್ನು ಕುರಿತ ಅವರ ಲೇಖನಗಳನ್ನು ಓದಿ ಅನೇಕ ವಿಚಾರಗಳನ್ನು ತಿಳಿದುಕೊಂಡು ಆನಂದಿಸಿದ್ದೇನೆ..

    ಗುರು, ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು..

    ReplyDelete
  9. ಗೋದಾವರಿಯವರೇ, ಸಂಸ್ಕೃತ ನಾಟಕಗಳ ಬಗ್ಗೆ ಅದ್ರಲ್ಲೂ ಶಾಕುಂತಲಾ ಬಗ್ಗೆ ಚನ್ನಾಗಿ ತಿಲಿಸಿದ್ದೀರಿ. ಕಾಳಿದಾಸ ಸಂಸ್ಕೃತ ನಾಟಕಕ್ಕೆ ಏಕೆ..ನಾಟಕ ಸಾಹಿತ್ಯ ಪ್ರಾಕಾರಕ್ಕೇ ಒಂದು ಪರ್ಯಾಯ..ಅಲ್ಲವೇ...ನಮ್ಮ ಕೈಲಾಸಂ ಬಗ್ಗೆ ತಿಳಿಸಿ ನಿಮ್ಮ ಮುಂದಿನ ಪೋಸ್ಟ್ ಮೂಲಕ.

    ReplyDelete
  10. ಜಲನಯನ,

    ನಿಮಗೆ ಕಾಡಬೆಳದಿಂಗಳಿಗೆ ಸ್ವಾಗತ...
    ನಾಟಕಗಳ ಮಾತು ಬಂದಾಗ ನಮ್ಮ ಕೈಲಾಸಂ ಅವರನ್ನು ಬಿಡಲಾದೀತೆ.. ಕನ್ನಡಕ್ಕೊಬ್ಬರೇ ಕೈಲಾಸಂ ಅಲ್ಲವೇ? ಖಂಡಿತ, ಮುಂದೆ ಅವರ ನಾಟಕಗಳ ಬಗ್ಗೆ ಬರೆಯುತ್ತೇನೆ..

    ReplyDelete