Monday, May 4, 2009

ಕಾವ್ಯದಲ್ಲಿ ರಸ ಮತ್ತು ನೀತಿಬೋಧೆ

ಸಂಸ್ಕೃತದಲ್ಲಿ ಕಾವ್ಯದ ಬಗ್ಗೆ ಒಂದು ಮಾತಿದೆ.

'ತದೇವ ರಮ್ಯಂ ರುಚಿರಂ ನವಂ ನವಂ

ತದೇವ ಶಶ್ವನ್ಮನಸೋ ಮಹೋತ್ಸವಂ

ತದೇವ ಶೋಕಾರ್ಣವ ಶೋಷಣಂ ನೃಣಾಂ

ಯದುತ್ತಮಶ್ಲೋಕಯಶೋನುಗೀಯತೆ '


' ಅದು ಸುಂದರ, ಅದು ರುಚಿರ, ಅದು ಹೊಚ್ಚ ಹೊಸದು. ಅದುವೇ ಮನಸ್ಸನ್ನು ಮಹೋತ್ಸವದಲ್ಲಿರಿಸತಕ್ಕದ್ದು, ಅದರಿಂದಲೇ ಮನುಷ್ಯ ಶೋಕಸಾಗರವನ್ನು ಹಿಂಗಿಸಲು ಸಮರ್ಥನಾಗುತ್ತಾನೆ. ಅದೇ ಉತ್ತಮಶ್ಲೋಕರ ಕೀರ್ತಿಕಥನ.'


ಒಂದು ಸಹೃದಯ ಜನಾಂಗ ಕಾವ್ಯದಿಂದ ಏನನ್ನು ಬಯಸುತ್ತದೆ? ಭವಸ್ತರದಲ್ಲಿ ಅಂದರೆ ತನ್ನ ನಿತ್ಯ ಜೀವನದಲ್ಲಿ ದುರ್ಲಭವಾದ ಅನುಭೂತಿಯನ್ನು. ಅದರ ಜೊತೆಯಲ್ಲಿಯೇ ವಾಸ್ತವ ಜಗತ್ತಿನ ನೀತಿ, ಧರ್ಮ, ಮೌಲ್ಯಗಳನ್ನೂ ಕಾವ್ಯಗಳಿಂದ ಪಡೆಯಲೆತ್ನಿಸುತ್ತದೆ. ಅಂದರೆ ಕಾವ್ಯದ ಉದ್ದೇಶ ಕೇವಲ ರಸ ಪ್ರಸಾರವಾಗಿರದೆ ನೀತಿ, ಧರ್ಮ ಪ್ರಸಾರಕವೂ ಆಗಿರಬೇಕು. ಮತ್ತು ಈ ಪ್ರಾಕಾರವಾಗಿ ಕಾವ್ಯಗಳನ್ನು ರಚಿಸುವವನೇ ಕವಿ.

ಆದರೆ ಇಲ್ಲಿ ಮತ್ತೊಂದು ಅಂಶ ಗಮನಿಸತಕ್ಕದ್ದು. ನಾವು ನೀತಿ ಧರ್ಮಗಳನ್ನೇ ಕುರಿತ ಕಾವ್ಯಗಳೆಂದು ರಾಮಾಯಣ, ಮಹಾಭಾರತ, ಹಿತೋಪದೇಶ, ಪಂಚತಂತ್ರಾದಿಗಳನ್ನು ಪರಿಗಣಿಸಿದರೂ ಅವು ಮಹಾಕಾವ್ಯಗಳ ಪಟ್ಟಿಯಲ್ಲೇ ಸೇರುತ್ತವೆ. ಆ ಗ್ರಂಥಗಳ ಕರ್ತರೂ ಮಹಾಕವಿಗಳ ಸಾಲಿನಲ್ಲೇ ನಿಲ್ಲುತ್ತಾರೆ. ಏಕೆಂದರೆ ಆ ಗ್ರಂಥಗಳು ನಮ್ಮ ಇರವಿನ ಎಲ್ಲ ಸ್ತರಗಳನ್ನು ಮೆಟ್ಟಿ ನಿಂತಿರುವ ಕಾವ್ಯಗಳು. ಎಲ್ಲ ಸ್ತರಗಳ ಎಲ್ಲ ಸ್ವರಗಳೂ ಅಲ್ಲಿ ಕೇಳಿ ಬರುತ್ತವೆ. ಅಲ್ಲಿ ಶ್ರೀ ರಾಮ, ಶ್ರೀ ಕೃಷ್ಣರಂತಹ ಮಹಾಪುರುಷರ ಚರಿತ್ರೆಗಳನ್ನು ಮತ್ತು ಅವರ ಬದುಕಿನ ತತ್ವಗಳನ್ನು ವರ್ಣಿಸುವುದು ಅವುಗಳ ಉದ್ದೇಶವೇ ಹೊರತು ಧರ್ಮೋಪದೇಶವೇ ಅವುಗಳ ಗುರಿಯಲ್ಲ. ಅವು ನಮ್ಮ ಮನಸ್ಸನ್ನು ಸೌಖ್ಯವಾಗಿರಿಸುವುದಷ್ಟೇ ಅಲ್ಲದೆ ನಮ್ಮಲ್ಲಿ ಆತ್ಮ ಪುಷ್ಟಿಯನ್ನೂ, ಶೋಧಕ ಮತ್ತು ಸಂಸ್ಕಾರಕ ಗುಣವನ್ನೂ ತರುತ್ತವೆ.

ಆದರೆ ಕಾವ್ಯದ ಮೂಲ ಉದ್ದೇಶ ರಸಜಾಗರಣೆಯೇ. ಮನುಷ್ಯನ ಮನಸ್ಸು ಸೌಂದರ್ಯದ ಮೋಹಕತೆಗೆ ಬೇಗ ಮರಳಾಗುತ್ತದೆ. ಆ ಸೌಂದರ್ಯವನ್ನು ಕಾವ್ಯ ಸೆರೆ ಹಿಡಿಯಬೇಕು. ಬೇಂದ್ರೆ ತಮ್ಮ ಸಖಿಗೀತದಲ್ಲಿ ಆ ಬಗ್ಗೆ ಒಂದು ಮಾತು ಹೇಳುತ್ತಾರೆ. 'ಸೌಂದರ್ಯವೆಂಬುದು ಕಣ್ಣಿನ ತುತ್ತಲ್ಲ, ಕಣ್ಣಿಗೂ ಕಣ್ಣಾಗಿ ಒಳಗಿಹುದು '. ಇಲ್ಲಿ ಬೇಂದ್ರೆಯವರು ಹೇಳುತ್ತಿರುವುದು ಕೇವಲ ಬಾಹ್ಯ ಸೌಂದರ್ಯವಲ್ಲ. ಕಣ್ಣಿಗೂ ಕಣ್ಣಾಗಿರುವ ಸೌಂದರ್ಯವನ್ನು ಸ್ರಷ್ಟಿಸುವ ಪ್ರತಿಭೆ. ಆ ಪ್ರತಿಭೆ ಕವಿಗಿರಬೇಕು. ಕೆಲವೊಮ್ಮೆ ಕೇವಲ ಸೌಂದರ್ಯವನ್ನಷ್ಟೇ ಅಲ್ಲ ಆ ಸೌಂದರ್ಯ ರಸವನ್ನು ಆಸ್ವಾದಿಸುವ ಕಣ್ಣನ್ನೂ ಕವಿ ತನ್ನ ಕಾವ್ಯದಲ್ಲಿಡಬೇಕು.

ಕಾವ್ಯ ಮುಖ್ಯವಾಗಿ ಭಾಷೆಯಲ್ಲಿ ಮೂಡಿಬರುವ ಕಲೆಯಾದದ್ದರಿಂದ ಶಬ್ದ ಕ್ರೀಡೆ ಕವಿಯ ವಿಶೀಷ ಅಧಿಕಾರವಾಗಿದೆ. ಅವನು ಶಬ್ದಗಳನ್ನು ವಿಶೇಷವಾಗಿ ಉಪಯೋಗಿಸಿ ಅನಿರೀಕ್ಷಿತವಾದ ಅರ್ಥವನ್ನೂ ರಸವನ್ನೂ ಶಬ್ದಗಳಿಂದ ಹೊರಡಿಸಬಲ್ಲ. ಉದಾಹರಣೆಗೆ ಕಾಳಿದಾಸನ ಶಾಕುಂತಲ ನಾಟಕದಲ್ಲಿ ' ಅನ್ಯೆಃ ದ್ವಿಜೈಃ ಪರಭೃತಾಃ ಬಲು ಪೋಷಯಂತಿ' ಎಂಬ ಒಂದು ಮಾತು ಬರುತ್ತದೆ. ಒಮ್ಮೆ ಓದಿದರೆ ಅರ್ಥ ಕೋಗಿಲೆಗಳು (ಪರಭೃತ), ಬೇರೆ ಪಕ್ಷಿಗಳ (ದ್ವಿಜ) ಮೂಲಕ ತಮ್ಮ ಮರಿಗಳನ್ನು ಪೋಷಿಸುತ್ತವೆ ಎಂದಾಗುತ್ತದೆ. ಆದರೆ ಇನ್ನೂ ಸ್ವಲ್ಪ ಸೂಕ್ಷ್ಮವಾಗಿ ಗ್ರಹಿಸಿದರೆ ದ್ವಿಜ ಎಂಬ ಶಬ್ದಕ್ಕೆ ಬ್ರಾಹ್ಮಣ ಅಂತಲೂ ಅರ್ಥವಿದೆ. ಹಾಗೆಯೇ ಪರಭೃತ ಎಂದರೆ ವೇಶ್ಯೆ ಎಂಬ ಅರ್ಥವೂ ಇದೆ. ಅಂದರೆ ಈ ಮಾತಿನ ಅರ್ಥ ದೇವ ವೆಶ್ಯೆಯಾದ ಮೇನಕೆ ಶಾಕುಂತಲೆಯನ್ನು ಬ್ರಾಹ್ಮಣನಾದ ಕಣ್ವನ ಆಶ್ರಯದಲ್ಲಿ ಬೆಳಸಿದಳು ಅಂತಲೂ ಆಗುತ್ತದೆ. ಇಂತಹ ಒಂದೇ ಶಬ್ದದಲ್ಲಿ ಅನೇಕ ಅರ್ಥಗಳನ್ನು ಅಪ್ಪಿಕೊಳ್ಳುವ (ಶ್ಲೇಷ ) ಪದಗಳ ಬಳಕೆ ಕಾವ್ಯದ ರಸಾಸ್ವಾದವನ್ನು ಹೆಚ್ಚಿಸುತ್ತದೆ.

ಹೀಗೆ ಕಾವ್ಯದಲ್ಲಿನ ರಸಭಾವಗಳು ಮನಸ್ಸಿಗೆ ಆಹ್ಲಾದವನ್ನುಂಟುಮಾಡುತ್ತದೆ. ಕವಿಯೂ ಕೂಡ ಇಂತಹ ರಸಪ್ರೇಷಿತವಾದ ಭಾವನೆಗಳ ವ್ಯುತ್ಪತ್ತಿಯಲ್ಲೇ ಹೆಚ್ಚು ಆನಂದವನ್ನು ಪಡೆಯುತ್ತಾನೆ ಮತ್ತು ಉತ್ಸಾಹಿಯಾಗಿರುತ್ತಾನೆ. ಆದರೆ ಅದರ ಜೊತೆಯಲ್ಲಿಯೇ ಅವನು ತನ್ನ ಕಾವ್ಯ ಯಾವ ನೀತಿಯನ್ನು ಸಾರುತ್ತಿದೆ ಎನ್ನುವ ಬಗ್ಗೆಯೂ ಗಮನ ಹರಿಸುವುದು ಅನಿವಾರ್ಯ. ಏಕೆಂದರೆ ಕಾವ್ಯದಲ್ಲಿನ ಧರ್ಮ ಮತ್ತು ನೀತಿ ಉಪದೇಶಗಳು ನಗರ ಪೇಟೆಗಳಲ್ಲಿನ ಗ್ರಂದಿಗೆ ಅಂಗಡಿಗಳಂತೆ. ಅಲ್ಲಿ ದೊರಕುವುದು ರೋಗನಿವಾರಕ ಮೂಲಿಕೆಗಳಾದರೂ ಅವು ನಾಗರಿಕ ಜೀವನಕ್ಕೆ ಅತ್ಯಗತ್ಯ. ಅವು ಮುಚ್ಚಿ ಹೋದರೆ ನಗರಕ್ಕೆ ನಗರವೇ ತಲ್ಲಣಿಸಿಹೊದೀತು. ಅಂತೆಯೇ ಕಾವ್ಯದಲ್ಲಿ ಕೇವಲ ಲೌಕಿಕ ಭಾವ ರಸಾದಿಗಳು ತುಂಬಿಹೋದರೂ ಇದೇ ಸ್ಥಿತಿಯಾಗುವುದರಲ್ಲಿ ಸಂಶಯವಿಲ್ಲ. ಆದರೆ ನಗರದ ಐಶ್ವರ್ಯ ವಿಲಾಸಗಳನ್ನು ಕೇವಲ ಗ್ರಂದಿಗೆ ಅಂಗಡಿಗಳ ಸಂಖ್ಯೆಗಳಿಂದ ಮತ್ತು ಅವುಗಳ ಪ್ರಾಬಲ್ಯತೆಯಿಂದ ಮಾತ್ರ ಅಳೆಯುವುದಿಲ್ಲ ಎಂಬುದನ್ನೂ ನೆನಪಲ್ಲಿಡಬೇಕು. ಆದುದರಿಂದ ಕವಿಯು ಆ ಎಲ್ಲ ಭಾವಗಳನ್ನು ಹೇಳುತ್ತಲೇ ಅವುಗಳನ್ನು ಮೀರುವ ಪ್ರಯತ್ನವನ್ನೂ ಮಾಡಬೇಕು. ಅಂದರೆ ಮಾತ್ರ ಕಾವ್ಯ ಪರಿಪೂರ್ಣವಾಗುತ್ತದೆ.

ಒಟ್ಟಿನಲ್ಲಿ ಸಹೃದಯರು ಅಪೇಕ್ಷಿಸುವುದು ತಮ್ಮನ್ನು ಭವದತ್ತ ಮತ್ತು ವ್ಯಾವಹಾರಿಕ ಲೋಕದತ್ತಲೂ ಸೆಳೆಯುವ ಕಾವ್ಯವನ್ನು. ಆದುದರಿಂದ ಅಂತಹ ಕಾವ್ಯಗಳೇ ಜನಪ್ರಿಯತೆಯನ್ನು ಪಡೆಯುವಲ್ಲಿ ಶಕ್ಯವಾಗುತ್ತವೆ. ದೇಶಕಾಲಾದಿಗಳ ಪರಿಧಿಯನ್ನೂ ಮೀರಿ ಓದುಗರ ಮನದಲ್ಲಿ ಸ್ಥಾಯಿಯಾಗಿ ಉಳಿಯುತ್ತವೆ.

5 comments:

 1. ರಸಾನುಭವದ ಜೊತೆಗೇ, ಮನಸ್ಸಂಸ್ಕರಣವೂ ಸಹ ಕಾವ್ಯೊದ್ದೇಶವಾಗಿರಬೇಕೆನ್ನುವ ನಿಮ್ಮ ಮಾತು ತುಂಬಾ ಸರಿಯಾಗಿದೆ. ಕಾಳಿದಾಸನ ಶ್ಲೇಷರಚನೆಯನ್ನು ಉಣಬಡಿಸಿದ್ದಕ್ಕೆ ಧನ್ಯವಾದಗಳು.

  ReplyDelete
 2. ಕಾವ್ಯೇ ಕಾವ್ಯೋತ್ಪತ್ತಿಹಿ...

  ReplyDelete
 3. ಕಾವ್ಯದ ರಸಾನುಭವವನ್ನು ತುಂಬ ರಸವತ್ತಾಗೆ ವಿವರಿಸಿದ್ದೀರಿ.... ತುಂಬ ಚೆನ್ನಾಗಿ ಇದೆ ವಿವರಣೆಗಳು....
  ಕಾವ್ಯ ಕವನ, ಕಥೆ ಇವುಗಳ ಸ್ವಾದ ಅನುಭವಿಸುವವರಿಗೆ ಗೊತ್ತು ..... ಕಾವ್ಯದ ಬಗ್ಗೆ ಸಂಸ್ಕೃತದ ಮಾತು. ಹಾಗು ಅದರ ವಿವರಣೆ, ಇಷ್ಟ ಆಯಿತು...
  nice article... ಹೀಗೆ ಬರೆಯುತ್ತಾ ಇರಿ..
  ಗುರು

  ReplyDelete
 4. ಕಾವ್ಯದ ಪರಿ, ಅದರ ಇಷ್ಟ-ಕಷ್ಟಗಳನ್ನೆಲ್ಲಾ ಚೆನ್ನಾಗಿ ವಿವರಿಸಿದ್ದೀರಿ...ಅವುಗಳ ಉದ್ದೇಶ...ಅದರ ರಸಾನುಭವವನ್ನು ಚೆನ್ನಾಗಿ ಬರೆದಿದ್ದೀರಿ..ಸಂಸ್ಕೃತ ಮಾತು ಶ್ಲೋಕ ಇತ್ಯಾದಿಗಳನ್ನೆಲ್ಲಾ ಹೇಳಿದ್ದೀರಿ...ಸುಂದರ ಲೇಖನ...

  ಧನ್ಯವಾದಗಳೂ.

  ReplyDelete
 5. ``ಒಟ್ಟಿನಲ್ಲಿ ಸಹೃದಯರು ಅಪೇಕ್ಷಿಸುವುದು ತಮ್ಮನ್ನು ಭವದತ್ತ ಮತ್ತು ವ್ಯಾವಹಾರಿಕ ಲೋಕದತ್ತಲೂ ಸೆಳೆಯುವ ಕಾವ್ಯವನ್ನು''

  ಮಧುರವಾಗಿ ಬರೆದಿದ್ದೀರಿ..

  ReplyDelete