Friday, September 24, 2010
ವಿಜ್ಞಾನ ಮತ್ತು ಆಧ್ಯಾತ್ಮ
ವಿಜ್ಞಾನ ನಮ್ಮ ಅಸ್ತಿತ್ವದ ಮೇಲೆ ತೀರ ಗಾಢವಾದ ಪ್ರಭಾವ ಬೀರಿದೆ. ಇದಕ್ಕೆ ಕಾರಣ ವಿಜ್ಞಾನ, ಮತ್ತು ತಂತ್ರಜ್ಞಾನಗಳು ನಮ್ಮ ಬದುಕನ್ನು ವಿವಿಧ ಸಾಧನ ಸೌಕರ್ಯಗಳಿಂದ ಸುಲಭ ಹಾಗೂ ವ್ಯವಸ್ಥಿತಗೊಳಿಸಿರುವುದು. ನಮ್ಮ ನಿತ್ಯ ಜೀವನದಲ್ಲಿ ತಂತ್ರಜ್ಞಾನಗಳ ವ್ಯಾಪಕ ಬಳಕೆಯಿಂದಾಗಿ, ವಿಜ್ಞಾನದ ಉದ್ದೇಶವೇ ನಿರಂತರ ಹೊಸ ಹೊಸ ತಂತ್ರಜ್ಞಾನಗಳ ಶೋಧನೆ, ಎಂಬ ಭಾವನೆ ಬಳೆದುಬಂದಿದೆ. ಆದರೆ ಆಧುನಿಕ ಭೌತಶಾಸ್ತ್ರದ ಬೆಳವಣಿಗೆಯು ಇಂತಹ ಅನೇಕ ತಿಳುವಳಿಕೆಗಳನ್ನು ಬದಲಾಯಿಸಿದೆ. ವಿಜ್ಞಾನ ಕೇವಲ ತಂತ್ರಜ್ಞಾನವಷ್ಟೇ ಅಲ್ಲ, ಅದಕ್ಕೂ ಮೀರಿದ್ದು. ಹಾಗೂ ವಿಜ್ಞಾನ ಒಬ್ಬ ವ್ಯಕ್ತಿಯಲ್ಲಿನ ಬ್ರಹ್ಮಾಂಡದ ಬಗೆಗಿನ ಆಳವಾದ ಪ್ರಜ್ಞ್ನೆ ಮತ್ತು ಅದರೊಡಗಿನ ತನ್ನ ಒಡನಾಟದ ಅರಿವಿಗೆ ಸಂಬಂಧಿಸಿದ್ದು ಎಂಬುದನ್ನು ಸ್ಪಷ್ಟ ಪಡಿಸಿದೆ. ವಿಜ್ಞಾನ ವ್ಯಕ್ತಿಯ, ಬಾಹ್ಯ ಜೀವನವನ್ನಷ್ಟೇ ಅಲ್ಲದೆ ಅವನ ಆಂತರಿಕ ಹರಿವನ್ನೂ ಪ್ರಭಾವಿಸುವಂಥದ್ದು ಎನ್ನುತ್ತದೆ ಆಧುನಿಕ ಭೌತಶಾಸ್ತ್ರ. ಹಾಗಿದ್ದರೆ ವಿಜ್ಞಾನ ಅಧ್ಯಾತ್ಮದ ಮಾರ್ಗದಂತೆ ಮಾನವ ಜೀವನವನವನ್ನು ಶ್ರೇಷ್ಠತೆಯತ್ತ ಕೊಂಡೊಯ್ಯುವ ದಾರಿಯೇ?
ಈ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನವೇ ’ದಿ ತಾವೋ ಆಫ್ ಫಿಸಿಕ್ಸ’. ಆಧುನಿಕ ಭೌತಶಾಸ್ತ್ರದ ಹುಟ್ಟು, ಹೈಸನ್ ಬರ್ಗ್ ಎಂಬ ವಿಜ್ಞಾನಿಯ ಅಣುವಿನ ಡ್ಯುಯೆಲ್ ಗುಣದ ಕುರಿತಾದ ಸಂಶೋಧನೆಯಿಂದಾಯಿತು. ಹೈಸನ್ ರ ಪ್ರಕಾರ ಅಣುವೊಂದಕ್ಕೆ ಎರಡು ಗುಣವಿದೆ. ಒಂದು ಸ್ಥಿರ, ಇನ್ನೊಂದು ಅಲೆಯ ಗುಣ. ಎಲ್ಲ ಪದಾರ್ಥಗಳೂ ಅಣುವಿನಿಂದ ಮಾಡಲ್ಪಟ್ಟಿರುವುದರಿಂದ, ಎಲ್ಲವೂ ಈ ಎರಡು ಗುಣಗಳಿಂದಲೇ ಕೂಡಿವೆ. ನಮಗೆ ವಸ್ತುಗಳು ಸ್ಥಿರವಾಗಿರುವುದಾಗಿ ಕಂಡುಬಂದರೂ, ಅವೆಲ್ಲವೂ ಅಲೆಯ ಸ್ಥಿತಿಯನ್ನೂ ಹೊಂದಿವೆ. ಈ ಸಂಶೋಧನೆಯು ಶಾಸ್ತ್ರೀಯ (Classical Physics) ಭೌತಶಾಸ್ತ್ರದ ದಿಕ್ಕನ್ನೇ ಬದಲಿಸಿತು. ಇದು ಭೌತಶಾಸ್ತ್ರದಲ್ಲಿನ ವಿಶ್ವ ಹಾಗು ಅದರ ರಚನೆ, ಸೃಷ್ಟಿಗೆ ಸಂಬಂಧಿಸಿದ ತಿಳುವಳಿಕೆಗಳ ಮೇಲೆ ಅಗಾಧ ಪರಿಣಾಮ ಬೀರಿತು. ಅಲ್ಲದೆ ಈ ಬದಲಾವಣೆಯಿಂದಾಗಿ ವಿಜ್ಞಾನ ಹಾಗೂ ಪೂರ್ವದ ಆಧ್ಯಾತ್ಮ ಜಗತ್ತಿನ ಸಾಮ್ಯತೆಗಳು ಗೋಚರಿಸಿದವು.
ಭೌತಶಾಸ್ತ್ರದ ಸಂಶೋಧಕನಾದ ಕಾಪ್ರಾನು ವೇದೋಪನಿಷತ್ತುಗಳ ಉಕ್ತಿಗಳನ್ನು ಕಂಡು ಬೆರಗಾಗುತ್ತಾನೆ. ಕಾಪ್ರಾ, ಒಬ್ಬ, ಆಧುನಿಕ ಭೌತಶಾಸ್ತ್ರದ ವಿಜ್ಞಾನಿ ಮತ್ತು ಒಬ್ಬ ಪೂರ್ವದ ಸಾಧಕ ಬ್ರಹ್ಮಾಂಡವನ್ನು ನೋಡುವ ಪರಿ ಎರಡೂ ಒಂದೇ ಎನ್ನುತ್ತಾನೆ. ನೀಲ್ಸ ಬೋರ್, ಹೈಸನ್ ಬರ್ಗ್ ರಂತಹ ವಿಜ್ಞಾನಿಗಳು ವಿಶ್ವದ ಬಗ್ಗೆ ಹೇಳಿದ ಮಾತುಗಳು ತದಾವತ್ತಾಗಿ ಉಪನಿಷತ್ತುಗಳ ಉಕ್ತಿಗಳನ್ನು ಹೋಲುತ್ತವೆ ಎನ್ನುತ್ತಾನೆ. ಆಧುನಿಕ ಭೌತಶಾಸ್ತ್ರದ ಆವಿಷ್ಕಾರಗಳು ಹೊಸದಲ್ಲ. ಸಾವಿರಾರು ವರ್ಷಗಳ ಹಿಂದೆಯೇ ಪೂರ್ವದ ನಾಗರೀಕತೆಗಳು ಈ ಸತ್ಯವನ್ನು ಅರಿತಿದ್ದವು ಎಂಬ ಅಭಿಪ್ರಾಯವನ್ನು ತನ್ನ ಪ್ರಬಂಧದಲ್ಲಿ ವ್ಯಕ್ತಪಡಿಸಿದ್ದಾನೆ. ಗ್ರೀಕ್, ರೋಮನ್ ನಂತಹ ಪಶ್ಚಿಮದ ಪ್ರಾಚೀನ ಸಂಸ್ಕೃತಿಗಳಲ್ಲಿಯೂ ಇಂತಹ ಸಾಮ್ಯತೆಗಳು ಇರುವುದಾಗಿ ಕಂಡುಬಂದರೂ ಅವು ಪೂರ್ವದ ಆಧ್ಯಾತ್ಮದಷ್ಟು ವಿಕಾಸವಾದಂತೆ ತೋರುವುದಿಲ್ಲ. ಪೂರ್ವದ ಗುರುಕುಲ ವ್ಯವಸ್ಥೆಯಿಂದಾಗಿ ಅಲ್ಲಿಯ ಆಧ್ಯಾತ್ಮ ಪರಂಪರೆ ಅತ್ಯಂತ ಪ್ರಬುದ್ಧತೆಯನ್ನು ಪಡೆಯಲು ಸಾಧ್ಯವಾಯಿತು, ಇದರಿಂದಾಗಿ ಪೂರ್ವದ ಸಂಸ್ಕೃತಿಯು ಜಗತ್ತಿನಲ್ಲಿಯ ಎಲ್ಲ ನಾಗರೀಕತೆಗಳಿಗಿಂತಲೂ ಅಪೂರ್ವವಾದದ್ದು ಎನ್ನುತ್ತಾನೆ.
ಆಧ್ಯಾತ್ಮ ಮನುಷ್ಯನನ್ನು ತನ್ನ ಆಂತರ್ಯದತ್ತ ಸೆಳೆಯುವಂತೆ, ವಿಜ್ಞಾನವೂ ಮನುಷ್ಯನನ್ನು ಪ್ರಭಾವಿಸಬಲ್ಲ ಸಾಧ್ಯತೆ ಹೊಂದಿದೆ. ಈ ವಿಶ್ವವೇ ಅಲೆಯ ರೂಪದಲ್ಲಿದೆ ಎಂಬ ಆಧುನಿಕ ವಿಜ್ಞಾನದ ತರ್ಕ, ಹಾಗೂ ನಮ್ಮ ಉಪನಿಷತ್ತುಗಳು ಹೇಳುವ ವಿಶ್ವವೇ ಒಂದು ಲಯಬದ್ಧವಾದ ವ್ಯವಸ್ಥೆ, ಎಂಬ ಮಾತುಗಳು ಒಂದೇ ಅಲ್ಲವೇ. ವ್ಯವಸ್ಥಿತವಾದ ಕಂಪನವೇ ವಿಶ್ವವನ್ನು ನಿಯಂತ್ರಿಸುತ್ತಿದೆ ಎಂದು ವಿಜ್ಞಾನ ಹೇಳಿದರೆ, ನಾವು ಪೂಜಿಸುವ ನೃತ್ಯ ದೇವತೆ ನಟರಾಜನೇ ವಿಶ್ವದ ಲಯಕರ್ತ ಎಂದು ನಮ್ಮ ಆಧ್ಯಾತ್ಮ ಹೇಳುತ್ತದೆ. ವಿಜ್ಞಾನ ಮತ್ತು ಆಧ್ಯಾತ್ಮಗಳು ಹೇಳುತ್ತಿರುವ ಸತ್ಯವೊಂದೇ, ಕೇವಲ ಅವುಗಳ ದೃಷ್ಟಿಕೋನಗಳು ಮಾತ್ರ ಬೇರೆ ಬೇರೆ. ಹಾಗಿದ್ದಲ್ಲಿ ವಿಜ್ಞಾನವೂ ಆಧ್ಯಾತ್ಮದಂತೆಯೇ ಹೃದಯವುಳ್ಳ ಹಾದಿ ಎಂಬುವಲ್ಲಿ ಸಂಶಯವಿಲ್ಲ.
ಆದರೆ ಕಾಪ್ರ ತನ್ನ ಪ್ರಬಂಧದಲ್ಲಿ ಒಂದು ಮುಖ್ಯವಾದ ವಿಷಯವೊಂದನ್ನು ಪ್ರಸ್ತಾಪಿಸಲಿಲ್ಲ ಎಂದು ನನಗೆ ಅನ್ನಿಸುತ್ತದೆ. ಯಾವ ಮಾರ್ಗವೂ, ತನ್ನಷ್ಟಕ್ಕೆ ತಾನೇ ನಡೆದು ಒಬ್ಬ ವ್ಯಕ್ತಿಯ ಅರಿವನ್ನೋ, ಬಾಳನ್ನೋ ಬೆಳಗಿಸುವುದಿಲ್ಲ. ಹಾದಿಯು ಕೇವಲ ಹಾದಿಯಷ್ಟೇ. ಪಯಣ ವ್ಯಕ್ತಿ ತಾನು ಸ್ವತಃ ಮಾಡಬೇಕು. ಆದರೂ ಹಾದಿಯೂ ತನ್ನಲ್ಲಿಯ ಪಯಣವನ್ನು ನಿರ್ಧರಿಸುವ ಮಾರ್ಗದರ್ಶಿ ಕೂಡ. ಹಾಗೆ ಭಾವಿಸಿದರೆ, ವಿಜ್ಞಾನ ಆಧ್ಯಾತ್ಮ ದಂತೆಯೇ ಮಾನವನ ಜೀವನವನ್ನು ಬೆಳಗಿಸುವ ದಾರಿಯಾಗಿದ್ದಲ್ಲಿ, ಆಧ್ಯಾತ್ಮ ಸಾವಿರಾರು ವರುಷಗಳ ಹಿಂದೆಯೇ ಅರಿತ ಸತ್ಯವನ್ನು ಇಷ್ಟು ವರುಷಗಳ ನಂತರವೂ ವಿಜ್ಞಾನದ ಮಾರ್ಗ ಅರಿಯುವಲ್ಲಿ ಯಾಕೆ ವಿಫಲವಾಗುತ್ತಿದೆ? ಎಂಬ ಪ್ರಶ್ನೆಯ ಬಗ್ಗೆ ಕಾಪ್ರಾ ಚರ್ಚಿಸುವುದಿಲ್ಲ. ಅದಕ್ಕೆ ಉತ್ತರರವನ್ನು ಆಧ್ಯಾತ್ಮ ನೀಡುತ್ತದೆ. ವಿಜ್ಞಾನ, ಸುವ್ಯವಸ್ಥಿತವಾದ ಜ್ಞಾನ. ವಿಜ್ಞಾನ ತನ್ನ ಪ್ರಶ್ನೆಗೆ ಉತ್ತರ ಹುಡುಕುವಲ್ಲಿ ಅನುಸರಿಸುವ ವಿಧಾನವಂದರೆ, ಆ ಪ್ರಶ್ನೆಯನ್ನು ಸಣ್ಣ ಪ್ರಶ್ನೆಗಳನ್ನಾಗಿ ಒಡೆದು,ಆ ಸಣ್ಣ ಪ್ರಶ್ನೆಗಳಿಗೆ ಉತ್ತರ ಹುಡುಕಿ, ಆ ಉತ್ತರಗಳಿಂದ ಮೂಲ ಪ್ರಶ್ನೆಯನ್ನು ಬಗೆಹರಿಸುವುದು. ಆದರೆ, ಈ ಒಡೆದು (Divide and Rule) ಸತ್ಯವನ್ನರಿಯುವ ಪ್ರಯತ್ನವು ಮೂಲ ಪ್ರಶ್ನೆಯನ್ನು ಬಗೆಹರಿಸುವುದಿಲ್ಲ ಎಂದು ಆಧ್ಯಾತ್ಮ ಹೇಳುತ್ತದೆ. ಏಕೆಂದರೆ ನಮ್ಮ ವಿಶ್ವವು ಸಂಯೋಜನೆಯಿಂದಾಗಿದೆ. ಈ ಅಸ್ತಿತ್ವವು ಪೂರ್ಣ ರೂಪದ್ದು, ಸಮನ್ವಯವಾದದ್ದು. ಆದುದರಿಂದ ಪದಾರ್ಥಗಳ ಅಸ್ತಿತ್ವವನ್ನು ಅವುಗಳ ಪೂರ್ಣರೂಪದಿಂದಲೇ ಅರಿಯಬೇಕು. ವಿಭಜನೆಯಿಂದ ಅರಿವು ಸಾಧ್ಯವಿಲ್ಲ ಎಂಬುದು ಆಧ್ಯಾತ್ಮ ಮಾರ್ಗದ ನಿಲುವು. ಆದುದರಿಂದಲೇ ವಿಜ್ಞಾನಕ್ಕೆ ವಿಶ್ವವನ್ನು ಅರಿಯುವ ಪ್ರಯತ್ನ, ಇನ್ನೂ ಪ್ರಯತ್ನವಾಗಿಯೇ ಉಳಿದಿದೆ.
Monday, February 1, 2010
ಒಂದು ಭಕ್ತಿಕಾವ್ಯವಾಗಿ ಗದುಗಿನಭಾರತ
ಕುಮಾರವ್ಯಾಸ ಲಿಖಿತ ಗದುಗಿನ ಭಾರತ ಅಥವಾ ’ಕರ್ಣಾಟಕ ಭಾರತ ಕಥಾಮಂಜರಿ’ ಸತ್ವದಲ್ಲಿಯೂ ಹಾಗೂ ಗಾತ್ರದಲ್ಲಿಯೂ ಅಸಾಮಾನ್ಯವಾದ ಕನ್ನಡ ಸಾಹಿತ್ಯ ಜಗತ್ತಿನ ಅಗ್ರಗಣ್ಯ ಕಥನಕಾವ್ಯ. ಕನ್ನಡದ ಸಾಹಿತ್ಯ ತಜ್ಞರಲ್ಲಿ ಕುಮಾರವ್ಯಾಸ ಭಾರತದ ಬಗ್ಗೆ ಎರಡು ಅಭಿಪ್ರಾಯಗಳಿವೆ. ಮೊದಲನೆಯದು, ಕುಮಾರವ್ಯಾಸ ಹೇಳುವ ಕಥೆಯು ವ್ಯಾಸರ ಸಂಸ್ಕೃತ ಮಹಾಭಾರತದ ಅನುವಾದ ಮತ್ತು ಎರಡನೆಯ ಅಭಿಪ್ರಾಯ ಇದು ಒಂದಿಷ್ಟು ಕಥೆಗಳ ಹೆಣಿಕೆ ಎಂಬುದಾಗಿ. ಅದೇನೇ ಇದ್ದರೂ ಗದುಗಿನಭಾರತವು ಒಂದು ಭಕ್ತಿಯ ಮಹಾಕಾವ್ಯ ಎಂಬ ಅಭಿಮತಕ್ಕೆ ತಜ್ಞರಲ್ಲಿ ಎರಡಭಿಪ್ರಾಯವಿಲ್ಲ. ಭಕ್ತಕವಿಗಳಲ್ಲಿ ಕುಮಾರವ್ಯಾಸನು ಶ್ರೇಷ್ರ‍್ಠನು. ಕುಮಾರವ್ಯಾಸ ಭಾರತವು ಭಾಮಿನೀ ಷಟ್ಪದಿಯಲ್ಲಿ ರಚಿಸಲ್ಪಟ್ಟಿದೆ. ಜನಸಾಮಾನ್ಯರ ಆಡು ಮಾತಿಗೆ ಹತ್ತಿರವಾದ ಭಾಷೆಯಲ್ಲಿ ವ್ಯಾಸರ ದಶಪರ್ವಗಳನ್ನೂ ಕನ್ನಡಕ್ಕೆ ಕುಮಾರವ್ಯಾಸನು ಅನುವಾದಿಸಿದ್ದಾನೆ. ಆದರೆ, ವ್ಯಾಸಭಾರತದ ರಾಜಮನೆತನಗಳ ದಾಯಾದಿ ಕಲಹದ, ಬಹುಪಾಲು ವೀರರಸದ ಈ ಕಥೆಯು, ಕನ್ನಡದಲ್ಲಿ ಒಂದು ಭಕ್ತಿ ಕಥನವಾಗಿಹೋಗಿದೆ.
ಕುಮಾರವ್ಯಾಸನು ತಾನು ಮಹಾಭಾರತದ ಕಥೆಯನ್ನೇ ಯಾಕೆ ಬರೆಯುತ್ತೇನೆ ಎಂದು ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಆಡಿದಮಾತು ತರ್ಕಬದ್ಧ. ’ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ; ರಾಶಿ ರಾಶಿಯಾದ ರಘುವರನ ಚರಿತೆಯಲಿ ಕಾಲಿಡಲು ತೆರಪಿಲ್ಲ.’ ಆದುದರಿಂದ ತಾನು ’ಮಗನೆಂದೊಲಿದ’ ವ್ಯಾಸರಿಗೆ ಕುಮಾರನೆನಿಸಿಕೊಂಡು, ’ಹರಿಕಥಾಮೃತವೆಂಬ ಭಾರತ ವರ ಕಥೆಯ’ ರಚಿಸತ್ತೇನೆ ಎನ್ನುತಾನೆ. ಅವನ ಈ ಮಾತಿನಲ್ಲಿ ಭಾರತವೆಂದರೆ ಕುಮಾರವ್ಯಾಸನಿಗೆ ಹರಿಕಥನವೇ ಎಂಬುದು ಸ್ಪಷ್ಟವಾಗುತ್ತದೆ. ಅತ್ಯಂತ ಪ್ರೌಢ ರಸವೆನಿಸಿದ ಭಕ್ತಿರಸ ಪ್ರಧಾನವಾದ ಕುಮಾರವ್ಯಾಸ ಕಾವ್ಯವು ’ಕಾವ್ಯಕ್ಕೆ ಗುರು’. ಭಾಷಾ ದೃಷ್ಟಿಯಿಂದ ಮತ್ತು ಇಲ್ಲಿ ಉಲ್ಲೇಖಿಸಲ್ಪಟ್ಟ ಉದಾತ್ತವಾದ ಜೀವನದರ್ಶನದಿಂದಲೂ ಗದುಗಿನ ಭಾರತವು ಚಮತ್ಕಾರಯುತವಾದದ್ದು. ಇಂತಹ ಅದ್ಭುತ ಕಾವ್ಯದಲ್ಲಿನ ಭಕ್ತಿಯ ಪರಿಯನ್ನು ಅರಿಯುವ ಹಾಗೂ ಪರಿಚಯಿಸುವ ಉದ್ದೇಶದಿಂದಾಗಿ ಈ ಸಂಕ್ಷಿಪ್ತ ಲೇಖನ.
ಕುಮಾರವ್ಯಾಸನ ನಿಜವಾದ ಹೆಸರು ನಾರಣಪ್ಪ. ಈತನು ಗದುಗಿನ ಕೋಳಿವಾಡದ ಪ್ರದೇಶದವನು ಎಂಬುದಾಗಿ ಇತಿಹಾಸಕಾರರು ಹೇಳುತ್ತಾರೆ. ಆದರೆ ಕವಿಯು, ತಾನು ಗದುಗಿನ ವೀರನಾರಾಯಣನ ಪರಮ ಭಕ್ತನೆಂಬುದೊಂದನ್ನು ಬಿಟ್ಟರೆ, ತನ್ನ ಬಗ್ಗೆ ಹೆಚ್ಚಿನದಾಗಿ ಎನನ್ನೂ ತನ್ನ ಕೃತಿಯಲ್ಲಿ ಹೇಳಿಕೊಂಡಿಲ್ಲ. ಮತ್ತು ವೀರನಾರಯಣನೇ ಕವಿ ಎಂತಲೂ ತಾನು ಕೇವಲ ಲಿಪಿಗಾರ ಮಾತ್ರನು ಎಂಬುದಾಗಿ ಹೇಳಿಕೊಳ್ಳುತ್ತಾನೆ.
ಕುಮಾರವ್ಯಾಸನಿಗೆ ಮಹಾಭಾರತವೆಂಬುದೇ ಒಂದು ’ಕೃಷ್ಣ ಕಥೆ’.
"ತಿಳಿಯಹೇಳುವೆ ಕೃಷ್ಣಕಥೆಯನು,
ಇಳೆಯ ಜಾಣರು ಮೆಚ್ಚುವಂತಿರೆ
ನೆಲೆಗೆ ಪಂಚಮಶ್ರುತಿಯನೊರೆವೆನು ಕೃಷ್ಣ ಮೆಚ್ಚಲಿಕೆ. "
ಕುಮಾರವ್ಯಾಸ ಕಾವ್ಯ ಪ್ರಯತ್ನವೂ ಶ್ರೀ ಕೃಷ್ಣನ ಮೆಚ್ಚುಗೆಗಾಗಿಯೇ. ಅದಕ್ಕೇ ಹೇಳುತ್ತಾನೆ ’ತುಳಸಿಯ ಉದಕ’ ಬರೆಯ ನೀರು ಎಂದು ತೋರಿದರೂ ಅದು ಪಾವನ. ಅಂತೆಯೇ ಶ್ರೀ ಕೃಷ್ಣನ ಕಥೆಯಿಂದಾಗಿಯೇ ಕುಮಾರವ್ಯಾಸನ ಕಾವ್ಯ ಪಾವನ. ಪದುಮನಾಭನ ಮಹಿಮೆಯ ಹೊರತಾಗಿ ಮಹಾಭಾರತದಲ್ಲಿ ಮತ್ತ್ಯಾವುದೂ ಕವಿಗೆ ಹೆಚ್ಚಿನದಲ್ಲ. ಶ್ರೀ ಕೃಷ್ಣನೇ ಈ ಕಥೆಯ ಸೂತ್ರಧಾರ. ಆ ದೃಷ್ಟಿಯಿಂದಲೇ ಕವಿ ಭಾರತವನ್ನು ರಚಿಸಿದ್ದಾನೆ. ಭಾರತವಾದರೋ ಪಾಂಡವರ ಕಥೆ. ಪಾಂಡವರು ಕೃಷ್ಣನಿಗೆ ಪ್ರಿಯರು. ಅವರ ಪತ್ನಿ ದ್ರೌಪದಿ ಕೃಷ್ಣನಿಗೆ ತಂಗಿ. ಕುಂತಿ ಅತ್ತೆ. ಭೀಷ್ಮ ದ್ರೋಣಾದಿ ವಿದುರರು ಪರಮ ಭಕ್ತರು. ಕರ್ಣ ದುರ್ಯೋಧನರು ಅಂತ್ಯಕಾಲದಲ್ಲಿ ಕೃಷ್ಣನಿಗೇ ಶರಣಾಗುತ್ತರೆ. ಹೀಗೆ ಭಾರತದ ಎಲ್ಲಾ ಪಾತ್ರಗಳೂ ಶ್ರೀ ಕೃಷ್ಣನ ಸುತ್ತಲೂ ಭ್ರಮಿಸುತ್ತವೆ. ಕುಮಾರವ್ಯಾಸನು ಭಕ್ತಿಯ ಬೇರೆ ಬೇರೆ ಮಾದರಿಗಳೆನಿಸುವಂತೆ ದ್ರೌಪದಿ, ಪಾರ್ಥ, ಭೀಷ್ಮ, ವಿದುರ, ದ್ರೋಣ, ಧರ್ಮರಾಯ ಹೀಗೆ ಎಲ್ಲರ ಪಾತ್ರಗಳನ್ನು ಚಿತ್ರಿಸಿದ್ದಾನೆ. ಮತ್ತು ತನ್ನ ಭಕ್ತಿಯನ್ನು ಎಲ್ಲ ಪರಿಗಳನ್ನು ಈ ಪಾತ್ರಗಳಲ್ಲಿ ಹೊರಹೊಮ್ಮಿಸಿದ್ದಾನೆ.
ಕುಮಾರವ್ಯಾಸನು ತನ್ನ ನಾರಾಯಣನು ಭಗವಂತನಾದರೂ ಮಾನವ ಸಹಜರಲ್ಲಿ ಒಂದು ಗೂಡಿ ತಾನೂ ಒಂದು ಪಾತ್ರವಹಿಸಿರುವಂತೆ ಚಿತ್ರಿಸುತ್ತಾನೆ. ಸೋದರತ್ತೆಯಾದ ಕುಂತಿಗೆ ತಾನು ಕಿರಿಯನೆಂಬುವಂತೆ ನಮಸ್ಕರಿಸುತ್ತಾನೆ. ಪಾರ್ಥನನ್ನು ತನ್ನ ಅತ್ಯಾಪ್ತ ಸ್ನೇಹಿತನಂತೆ ಕಾಣುತ್ತಾನೆ. ಆತನಿಗೆ ದ್ರೌಪದಿಯಲ್ಲಿ ತಂಗಿಯೆಂಬ ಮಮತೆ. ಪಾಂಡವರೈವರು ತನ್ನ ಪ್ರಾಣಸಮಾಸರು ಎನ್ನುತ್ತಾನೆ. ವಿದುರ ಭೀಷ್ಮರನ್ನು ಹಿರಿಯರಂತೆ ಗೌರವದಿಂದ ಕಾಣುತ್ತಾನೆ. ’ಈಸು ಮಹಿಮೆಯ ಮರೆಸಿ ಲೋಕವಿಳಾಸ ಚೇಷ್ಟೆಯನನುಸರಿಸಿ ನರವೇಷವನು ನಟಿಸಿದ ಹರಿ’, ಎಂದರೆ ತನ್ನ ಮಹಿಮೆಯನ್ನು ಮರೆಯಿಸಿ ಇಹ ಲೋಕದ ಬಗೆಯನ್ನನುಸರಿಸಿ ತಾನೂ ನರನೆಂಬುವಂತೆ ನಟಿಸಿದನು ಎಂಬುದನ್ನು ಕುಮಾರವ್ಯಾಸ ಕಾವ್ಯದುದ್ದಕ್ಕೂ ಎತ್ತಿತೋರಿಸಿದ್ದಾನೆ. ಆದರೆ ನರಹರಿಯು ’ಕೊಂದು ಹಗೆಯಲ್ಲ, ಸಲಹಿದನೆಂದು ಮೋಹಿತನಲ್ಲ’. ಎಂಬುದನ್ನೂ ಕುಮಾರವ್ಯಾಸ ಹೇಳುತ್ತಾನೆ. ಶ್ರೀ ಕೃಷ್ಣನು ಪಾಂಡವರಿಗೆ ಆಪ್ತನಾದರೂ ಅವರಲ್ಲಿ ಮೋಹವಿಲ್ಲ ಅವನಿಗೆ. ಕೌರವರನ್ನು ಪಾಂಡವರಿಂದ ಸೆದೆಬಡಿಸಿದರೂ ಆತನಿಗೆ ಕೌರವರಲ್ಲಿ ದ್ವೇಷವಿಲ್ಲ. ನಾರಾಯಣನು ತಾನೇ ಸಕಲವೂ (ಸೃಷ್ಟಿಕರ್ತನೂ ಮತ್ತು ಸೃಷ್ಟಿಯೂ)ಆಗುತ್ತಾನೆ. ಮತ್ತು ಅದರಿಂದ ತಾನು ಅಲಿಪ್ತನಾಗಿ ಉಳಿಯುವುದೇ ಅವನ ಲೀಲೆ.
ಆದಿಪರ್ವದಲ್ಲಿ ಪಾಂಡವರ ಮತ್ತು ಶ್ರೀ ಕೃಷ್ಣನ ಭೇಟಿ ದ್ರೌಪದಿ ಸ್ವಯಂವರದಲ್ಲಿ ಆಗುತ್ತದೆ. ಪಾಂಡವರು ಬ್ರಾಹ್ಮಣರ ವೇಷಧರಿಸಿದ್ದರೂ ಕೃಷ್ಣನಿಗೆ ಅವರನ್ನು ನೋಡಿದ ತಕ್ಷಣದಲ್ಲೇ ತನ್ನ ಸೋದರತ್ತೆ ಕುಂತಿಯ ಮಕ್ಕಳಾದ ಪಾಂಡವರು ಎಂಬುದಾಗಿ ತಿಳಿದುಹೋಗುತ್ತದೆ. ಪಾಂಡವರೈವರೂ ದ್ರೌಪದಿಯನ್ನು ವರಿಸಿದ ವಿಷಯ ತಿಳಿದು, ಆತಂಕದಿಂದಿದ್ದ ದ್ರೌಪದಿಯ ತಂದೆಯನ್ನು ಆಕೆಯ ಪೂರ್ವಜನ್ಮದ ಕಥೆಯನ್ನು ಹೇಳಿ ಸಮಾಧಾನ ಮಾಡುತ್ತಾನೆ. ಹೀಗೆ ಪಾಂಡವರು ಮತ್ತು ಕೃಷ್ಣನ ಸ್ನೇಹ ಬೆಳೆಯುತ್ತದೆ. ಮತ್ತು ಉಪಾಯದಿಂದ ತನ್ನ ತಂಗಿಯಾದ ಸುಬಧ್ರೆಯನ್ನು ಅರ್ಜುನನಿಗೆ ಮದುವೆ ಮಾಡಿಸುತ್ತಾನೆ. ಪಾರ್ಥನಿಗೆ ಆಪ್ತಮಿತ್ರನಾಗುತ್ತಾನೆ. ಮತ್ತು ನ್ಯಾಯಯುತವಾಗಿ ಪಾಂಡವರಿಗೆ ಇಂದ್ರಪ್ರಸ್ಥವೆಂಬ ಪುರವನ್ನು ಆಳಲು ಅನುವು ಮಾಡಿಕೊಡುತ್ತಾನೆ. ಹೀಗೆ ಪಾಂಡವರ ಮತ್ತು ಶ್ರಿ ಕೃಷ್ಣನ ಸಂಬಂಧ ನಿಕಟವಾಗುತ್ತದೆ.
ಕುಮಾರವ್ಯಾಸನು ಕಥೆಯ ಉದ್ದಕ್ಕೂ ನಾರಾಯಣನ ಮಹಿಮೆಯನ್ನು ಅಲ್ಲಲ್ಲಿ ಹೇಳುತ್ತಾನೆ. ಉದಾಹರಣೆಗೆ ಸಭಾಪರ್ವದಲ್ಲಿ ಪಾಂಡವರು ರಾಜಸೂಯಯಾಗವನ್ನು ಮಾಡಲು ನಿರ್ಧರಿಸಿರಲಾಗಿ ಯಾರಿಗೆ ಅಗ್ರಪೂಜೆಯನ್ನು ಸಲ್ಲಿಸಬೇಕೆಂದು ಯೋಚಿಸಲು ಭೀಷ್ಮರು ಶ್ರೀ ಕೃಷ್ಣನ ಹೆಸರನ್ನು ಸೂಚಿಸುತ್ತಾರೆ. ಅದಕ್ಕೆ ಕುಮಾರವ್ಯಾಸನು ಹೇಳುವುದೇನೆಂದರೆ,
"ನಿರವಯವ ತತ್ವಕ್ಕೆ ಪದವಿದೆ,
ನರಮನೋಹರ ರೂಪಿಸಲಿ ವ್ಯವ-
ಹರಣ ಸಂಜ್ಞಾರಹಿತವಿದೆ ಕೃಷ್ಣಾಭಿಧಾನದಲಿ
ಭರತ ಬಹಳ ಬ್ರಹ್ಮವಿಲ್ಲಿಯೆ,
ಧರಣಿಯಲಿ ಸಂಚರಿಸುತಿದೆ ಮುರ
ಹರನ ತತ್ವರಹಸ್ಯ ಮುದ್ರೆಯನರಿವರಾರೆಂದ"
ಭಗವಂತನು ನಿರಾಕಾರ (ನಿರವಯವ). ಆದರೆ ದೇವನಾದ ಕೃಷ್ಣನಿಗೆ ಆಕಾರವಿದೆ. ಅಂದರೆ ಕೃಷ್ಣನ ಮನೋಹರ ರೂಪವು ಆ ನಿರಾಕಾರತತ್ವಕ್ಕೆ ಆಕಾರ. ಅದೇ ರೀತಿ ಇಡೀ ಬ್ರಹ್ಮವೇ ಅವನಲ್ಲಿ ಅಡಗಿದ್ದರೂ ಭುವಿಯ ಮೇಲೆ ಸಂಚರಿಸುವ ಮುರಹರನ ಲೀಲೆಯ ರಹಸ್ಯವನ್ನು ಅರಿಯುವರಾರು ಎನ್ನುತ್ತಾನೆ. ’ವ್ಯವಹರಣ ಸಂಜ್ಞಾರಹಿತವಿದೆ ಕೃಷ್ಣಾಭಿದಾನದಲಿ’ ಎಂಬ ಮಾತಿನ ಅರ್ಥ ವಿಶಿಷ್ಟ ಪೂರ್ಣ. ಕೃಷ್ಣ ಎಂಬುದು ಒಂದು ಅಂಕಿತನಾಮ. ಅದು ಒಂದು ವ್ಯಕ್ತಿತ್ವವನ್ನು ಸೂಚಿಸುತ್ತದೆ. ಆದರೆ ಕುಮಾರವ್ಯಾಸನು ಹಾಗೆ ಹೇಳುವುದಿಲ್ಲ. ಕೃಷ್ಣ ಎಂಬ ಹೆಸರು ಸಾಮಾನ್ಯ ಅಂಕಿತ ನಾಮದಂತಲ್ಲ. ಅದು ಸಂಜ್ಞೆ ರಹಿತವಾದದ್ದು. ಅಂದರೆ ಜಗತ್ತನ್ನು ವ್ಯಾವಹಾರಿಕತೆಯಿಂದ ಬೇರ್ಪಡಿಸುವುದು ’ಕೃಷ್ಣ’ ಎಂಬ ಹೆಸರು. ಮತ್ತು ಅದನ್ನು ಜೋಡಿಸುವುದೂ ಕೂಡ ಅದೇ ಹೆಸರೇ ಅನ್ನುತ್ತಾನೆ.
ಕೃಷ್ಣನ ನಯನ ಮನೋಹರ ರೂಪದ ಬಗ್ಗೆ ಕುಮಾರವ್ಯಾಸನು ಅನೇಕ ಕಡೆ ಸುಂದರವಾಗಿ ವರ್ಣಿಸುತ್ತಾನೆ. ಉದ್ಯೋಗ ಪರ್ವದಲ್ಲಿ ಕೌರವ ಪಾಂಡವರ ನಡುವೆ ಸಂಧಾನಕ್ಕೆ ಕೃಷ್ಣನು ಹಸ್ತಿನಾಪುರಕ್ಕೆ ಬಂದಾಗ ಯಾರ ರಾಜಾತಿಥ್ಯವನ್ನೂ ಮನ್ನಿಸದೇ, ತಾನು ಬಡವನಾದ ಕಾರಣದಿಂದ ತನ್ನ ಮನೆಗೆ ಆವ್ಹಾನಿಸಲೂ ಸಂಕೋಚದಿಂದಿದ್ದ ಭಕ್ತನಾದ ವಿದುರನ ಮನೆಗೆ ಹೋಗುತ್ತಾನೆ. ತನ್ನ ಗುಡಿಸಲಿಗೆ ನಡೆದು ಬರುತ್ತಿರುವ ಶ್ರೀ ಕೃಷ್ಣನ ದರ್ಶನದಿಂದ ವಿದುರನು ’ತನುವ ಮರೆದನು ಪುಳಕಜಲದಲಿ ನನೆದು ನಾರಾಯಣನ ಪದದರುಶನದ ಹರುಶಾರಣ್ಯದಲಿ ಮನ ಹೊಲಬುದಪ್ಪಿದನು’ ಎನ್ನುವ ಕುಮಾರವ್ಯಾಸನ ಶಬ್ದಗಳಲ್ಲಿ ತಾನೇ ನಾರಾಯಣನ ದರ್ಶನವನ್ನು ಪಡೆದಂತೆ ಬಣ್ಣಿಸುತ್ತಾನೆ. ಹಾಗೆ ವಿದುರನ ಮನೆಗೆ ಬಂದ ಕೃಷ್ಣನ ’ಸಿರಿ ಮೊಗದ ಕಿರುಬೆವರು’, ’ಕೆಂಪಡರ್ದ ರೇಣುಗಳ ಕೊನೆಮೀಸೆ, ತಂಬುಲ ಸೂಸುವಂತೆ ನಗುವ ಅವನ ಠೀವಿ ಆಪ್ತರೊಡನೆ ತೊಡೆಸೋಕಿನೊಳು ನಡೆಸುವ ಸರಸ’, ಇಂತಹ ಚೇಷ್ಟೆಗಳ ವರ್ಣನೆ ಇದೆ.
ಶ್ರೀ ಕೃಷ್ಣನೇ ಹೇಳಿದಂತೆ ಅವನು ’ಭಂಟರಾಂ ಭಕ್ತರ್ಗೆ’. ಅಂದರೆ ದೇವನು ಭಕ್ತರಾದವರ ಬಂಟನು. ಅಂತೆಯೇ ಭಕ್ತನಾದ ವಿದುರನ ಮನೆಗೆ ಕೃಷ್ಣನೇ ಕರೆಯದಿದ್ದರೂ ಅತಿಥಿಯಾಗಿ ಹೋಗುತ್ತಾನೆ. ’ವೇದದ ಅರಿಕೆಗಳಿಗೆ ಅಳವಡದ, ಉಪನಿಷದಾದಿ ದಿವ್ಯಸ್ತುತಿಯ ಗಡಣೆಗೆ ಅಳವಡದ ಮಹಿಮಾವಲಂಬನು, ಮುನಿಗಳ ಮನಕೆ ಮೈಗುಡದ, ಕಾದಿ ಕಡಗುವ ತಾರ್ಕಿಕರು ಬೆಂಡಾದರಲ್ಲದೇ ನಿಜವ ತಿಳಿಯಲಿಲ್ಲ’ ಎನ್ನುತ್ತಾನೆ ಕುಮಾರವ್ಯಾಸ. ದೇವನನ್ನು ಒಲಿಸುವ ಒಂದೇ ಮಾರ್ಗ ಭಕ್ತನಾಗುವುದು. ವೇದ ಉಪನಿಷಾದಿಗಳ ಜ್ಞಾನ ಯಾವವೂ ಅವನನ್ನು ಬಳಿಗೆ ತರುವುದಿಲ್ಲ. ಭಕ್ತನಾದೊಡೆ ದೇವನೇ ಮನೆಯ ಬಾಗಿಲಿಗೆ ಬರುವನು ಎನ್ನುವಲ್ಲಿ ಕುಮಾರವ್ಯಾಸನು ಭಕ್ತಿಯ ಚಮತ್ಕಾರವನ್ನು ಹೇಳುತ್ತಾನೆ. ಅಲ್ಲದೇ ಮನೆಯ ಬಾಗಿಲಿಗೆ ಬಂದ ಕೃಷ್ಣನನ್ನು ನೋಡಿದ ವಿದುರನು ಭ್ರಮೆಯಾದಂತೆ ಕುಣಿದಾಡಿದನು. ಇದನ್ನು ಕಂಡ ಕೃಷ್ಣನು "ನಾವು ಹಸಿದುಬಂದಾಗ ನೀನು ಈ ಪರಿ ಕುಣಿದಾಡುವುದೆ?" ಎಂದು ತಾನೇ ವಿದುರನನ್ನು ಒಳಗೆ ಕರೆದೊಯ್ಯುತ್ತಾನೆ. ಅಲ್ಲದೇ ಪಾಲ್ಗಡಲೊಳಗೆ ಮಲಗುವ ಕೃಷ್ಣ, ವಿದುರನ ಮನೆಯಲ್ಲಿ ಹಾಲಿನ ಶರಧಿಯನ್ನೇ ಹರಿಸಿದ. ಹೀಗೆ ಇಂತಹ ಸನ್ನಿವೇಶಗಳ ವರ್ಣನೆಗಳಲ್ಲಿ ಕುಮಾರವ್ಯಾಸನ ಭಕ್ತಿಯ ಪರವಶತೆಯನ್ನು ಹೇರಳವಾಗಿ ಕಾಣಬಹುದು.
ಸಭಾಪರ್ವದಲ್ಲಿ ಧರ್ಮರಾಯನು ದ್ರೌಪದಿಯನ್ನು ಸೋತ ನಂತರ ದುಷ್ಯಾಸನನು ಆಕೆಯನ್ನು ನಿಷ್ಕಾರುಣ್ಯವಾಗಿ ಸಭೆಗೆ ಎಳೆತಂದು ಆಕೆಯ ವಸ್ತ್ರಾಪಹರಣಕ್ಕೆ ಯತ್ನಿಸಿತ್ತಿರುವಾಗ, ಆ ಸಂಕಷ್ಟದಲ್ಲಿ ದ್ರೌಪದಿಯು ತನ್ನ ಪತಿಗಳ, ಸಭೆಯ ಹಿರಿಯರ ಮೊರೆಹೋಗುತ್ತಾಳೆ. ಆದರೆ ಎಲ್ಲರೂ ಅಸಾಹಾಯಕರಾದಾಗ, ಆಕೆ ಕೃಷ್ಣನೊಬ್ಬನೆ ತನಗೆ ಅನನ್ಯ ಶರಣೆಂದು ಬಗೆದು ’ ಕೃಷ್ಣಾ, ನಿನ್ನ ಮೈದುನರ ಮರುಳಾಟಕೆ ಬೈದು ಫಲವೇನು?, ನನ್ನನ್ನು ಕಾಯ್ದುಕೊಳ್ಳು’ ಎಂದು ಮೊರೆಹೋಗುತ್ತಾಳೆ. ’ಮರೆವೆನಭ್ಯುದಯದಲಿ, ನೆನೆವೆನಾಪತ್ತಿನಲಿ’ ಎಂದು ಮಾನವ ಸಹಜ ದೌರ್ಬಲ್ಯವನ್ನು ನುಡಿಯುತ್ತಾಳೆ. ’ಗತಿ ಹೀನರೆಗೆ ನೀನೇ ಗತಿ’ ಎಂದು ಮೊರೆಯಿಡುತ್ತಾಳೆ. ಆಕೆ ಕರೆದ ತಕ್ಷಣ ಕೃಷ್ಣನು ತನ್ನ ಯೋಗಶಕ್ತಿಯಿಂದ ’ಆಕೆಯುಟ್ಟ ಸೀರೆಯು ಸೆಳೆಯಲು ಅಕ್ಷಯದ ಸೀರೆಯಾಗಲಿ’ ಎಂದು ಹರಸುತ್ತಾನೆ. ತಕ್ಷಣವೇ ಆಕೆಯುಟ್ಟ ಸೀರೆ ಅಕ್ಷಯವಾಗುತ್ತದೆ. ಹೀಗೆ ದೇವಕೀಸುತನ ಕಾರುಣ್ಯವು ಅಸಾಮಾನ್ಯವಾದದು ಎಂದು ಕುಮಾರವ್ಯಾಸ ಹೇಳುತ್ತಾನೆ.
ವೀರರಸದಿಂದ ಕೂಡಿದ ಭಕ್ತಿಯ ಇನ್ನೊಂದು ಪರಿ ಭೀಷ್ಮರದ್ದು. ಕಾಳಗದಲ್ಲಿ ಆಯುಧವನ್ನು ಹಿಡಿಯುವುದಿಲ್ಲವೆಂಬುದಾಗಿ ಶಪಥ ಮಾಡಿದ ಶ್ರೀ ಕೃಷ್ಣನನ್ನು ಆಯುಧ ಪಿಡಿಯುವಂತೆ ಮಾಡುತ್ತೇನೆಂದು ಭೀಷ್ಮರು ಪ್ರತಿಜ್ಞೆ ಮಾಡಿರುತ್ತಾರೆ. ಯುದ್ದದಲ್ಲಿ ಭೀಷ್ಮರು ತನ್ನ ಶೌರ್ಯದಿಂದ ಪಾಂಡವ ಸೇನೆಯನ್ನು ಸೆದೆಬಡೆಯುತ್ತಾ ಮುಂದುವರಿಯಲು, ಅರ್ಜುನನೂ ಕೂಡ ಅಸಹಾಯಕನಾಗುತ್ತಾನೆ. ಆಗ ಯುದ್ದದ ಆವೇಶದಲ್ಲಿ ಭೀಷ್ಮನನ್ನು ತಾನೇ ಎದುರಿಸುತ್ತೇನೆ ಎಂದು ಕೃಷ್ಣನು ತನ್ನ ಚಕ್ರವನ್ನು ಹಿಡಿದಾಗ, ಭೀಷ್ಮನು ’ಕೊಲುವ ಮನವೇ ಬಿಸುಡು, ಚಕ್ರವನ್ನೆನ್ನ ಕಾಯದಲಿ’ ಎಂದು ತನ್ನ ಆಯುಧಗಳನ್ನು ತ್ಯಜಿಸುತ್ತಾನೆ. ಹೀಗೆ ಕೃಷ್ಣನು ತನ್ನ ಶಪಥವನ್ನೇ ಮರೆತು ಭಕ್ತನಾದ ಭೀಷ್ಮರ ವಚನವನ್ನು ಕಾಯುತ್ತಾನೆ ಎಂದು ಕುಮಾರವ್ಯಾಸ ಕೃಷ್ಣನನ್ನು ಕೊಂಡಾಡುತ್ತಾನೆ.
ಕುಮಾರವ್ಯಾಸನು ಚಿತ್ರಿಸಿರುವಂತೆ ಕೃಷ್ಣನು ತನ್ನ ಮಾಯೆಯಿಂದ ಜಗತ್ತನ್ನು ಸೃಷ್ಟಿಸಿ ರಕ್ಷಿಸುವಂತೆ ಅವನಿಗೆ ಈ ಜಗತ್ತಿನ ಬಗ್ಗೆ ಗೌರವವೂ ಇದೆ. ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸಿ ಯುದ್ದವನ್ನು ಮಾಡುವಂತೆ ಪ್ರೇರೇಪಿಸಿಸುತ್ತಾನೆ. ಆದರೆ ಕೆಲವೊಮ್ಮೆ ಮನುಷ್ಯತ್ವದ ಸಮಸ್ಯೆಗಳನ್ನು ಬಿಡಿಸುವಾಗ ದೇವನಾಗಿ ತಾನೇ ಸೋಲುತ್ತಾನೆ. ಉದಾಹರಣೆಗೆ ಕರ್ಣನನ್ನು ಅರ್ಜುನನು ಕೊಲ್ಲುವ ಸನ್ನಿವೇಶ. ಅರ್ಜುನನು ಅಸಾಹಾಯಕನಾದ ಕರ್ಣನನ್ನು ಕೊಲ್ಲುವುದಿಲ್ಲವೆಂದು ಹಟ ಹಿಡಿಯುತ್ತಾನೆ. ಆದರೆ ಕರ್ಣನ ಸಾವು ನಿಶ್ತಿತವೆಂದು ತಿಳಿದ ಕೃಷ್ಣನು ಅರ್ಜುನನನ್ನು ಒತ್ತಾಯಿಸುತ್ತಾನೆ. ಕೃಷ್ಣನು ’ಬಹುರಾಜಕಾರ್ಯವನೀಗಲೇ ತಿದ್ದುವೆನು ತೊಲಗಿಸು ಸೂತಜನ ಶಿರವ’, ಎನ್ನುತ್ತಾನೆ. ಅಸಹಾಯಕನಾದವನನ್ನು ಕೊಲ್ಲುವುದು ಮನುಷ್ಯಧರ್ಮವಲ್ಲ. ಆದರೆ ಕರ್ಣನ ಸಾವು ಅನಿವಾರ್ಯವೆಂಬುದು ಕೃಷ್ಣನಿಗೆ ತಿಳಿದುದು. ಅದರ ಕಾರಣಾರ್ಥಗಳನ್ನು ಅರ್ಜುನನಿಗೆ ಅರ್ಥೈಸಲು ಕೃಷ್ಣನು ಸೋಲುತ್ತಾನೆ. ಬದಲಿಗೆ ರಾಜನೀತಿಯನ್ನೇ ಬದಲಿಸುತ್ತೇನೆ ಎನ್ನುತ್ತಾನೆ. ಆದರೆ ಕೃಷ್ಣನೂ ಮರುಗುತ್ತಿದ್ದಾನೆ ಮನದಲ್ಲಿ. ಅರ್ಜುನನ ಮಾತುಗಳನ್ನು ಕೇಳಿ ’ವಾಗ್ವಿಸ್ತರಕೆ ಮನದೊಳು ಮರುಗಿದನು ಮುರವೈರಿ ಕೆರಳಿದನು ಬಾಹಿರದಲಿ’, ಎನ್ನುತ್ತಾನೆ ಕುಮಾರವ್ಯಾಸ.
ಕೃಷ್ಣನು ಮಾನವರ ಸುಖದುಃಖಗಳಲ್ಲಿ ಪಾಲ್ಗೊಂಡರೂ ಅವನು ದೈವನೇ. ಯುದ್ಧ ಮುಗಿದ ಮೇಲೆ ತನ್ನೆಲ್ಲ ಪುತ್ರರನ್ನೂ ಕಳೆದುಕೊಂಡ ಗಾಂಧಾರಿಯ ದುಃಖಕ್ಕೆ ಸಮಾಧಾನದ ಮಾತಾಗಿ ’ಬ್ರಹ್ಮಾದಿಗಳಿಗಿದು ದಾಯವೇ ಸಂಸಾರವೆಂದನು ನಗುತ ಮುರವೈರಿ.’ ಎಂದರೆ ಸಂಸಾರದ ಸುಖದುಃಖಗಳನ್ನು ಮನುಷ್ಯನು ಮಾತ್ರ ಪೂರ್ಣವಾಗಿ ಅನುಭವಿಸಬಲ್ಲ. ಆ ಶಕ್ತಿ ದೇವತೆಗಳಿಗಿಲ್ಲ. ಕೃಷ್ಣ ವ್ಯಕ್ತಿಯಾಗಿ ಅವರ ಸುಖ ದುಃಖಗಳಲ್ಲಿ ಪಾಲ್ಗೊಂಡರೂ ಅವರಂತೆ ಅವರ ಇಹ ಬದುಕನ್ನು ಸಂಪುರ್ಣವಾಗಿ ಅನುಭವಿಸಲು ಸೋಲುತ್ತಾನೆ.
ಹೀಗೆ ಗದುಗಿನ ಭಾರತವು ಶ್ರೀ ಕೃಷ್ಣನ ಕಥೆಯಾಗಿದೆ. ಕುಮಾರವ್ಯಾಸನ ಭಕ್ತಿರಸದಿಂದ ತುಂಬಿದ ಭಾರತವು ಅತ್ಯದ್ಭುತ ಭಕ್ತಿ ಕಾವ್ಯವಾಗಿದೆ. ಪ್ರತ್ಯಕ್ಷವಾಗಿ ಮಹಾಭಾರತವು ಕೃಷ್ಣನ ಕಥೆಯಲ್ಲದಿದ್ದರೂ ಅವನು ಕಥೆಯಲ್ಲಿನ ಒಂದು ಪಾತ್ರ. ಆದರೂ ಅವನು ಕಥೆಯಿಂದ ಬೇರೆ. ಅವನು ಕಥೆಯೊಳಗೆ ಪ್ರವೇಶಿಸುವುದರಿಂದಾಗಿ, ಕಥೆಯನ್ನು ನಡೆಸುವುದರಿಂದಾಗಿ ಕಥೆ ಅವನದಾಗುತ್ತದೆ. ’ಇದು ಮುರಾರಿಯ ಲೀಲೆಗೋಸುಗ ಉದಯಿಸಿದ ಜಗ’. ಎಂದು ಕುಮಾರವ್ಯಾಸ ಎನ್ನುತ್ತಾನೆ. ಜಗತ್ತೇ ಆ ದೇವನ ಲೀಲೆ. ಆರಂಭದಲ್ಲಿಯೇ ಹೇಳಿದಂತೆ ತುಳಸಿಯ ಉದಕ ಕೇವಲ ನೀರೆನಂತೆ ಕಂಡರೂ ಅದು ತುಳಸಿಯ ಸ್ಪರ್ಷದಿಂದ ಪಾವನ. ಅಂತೆಯೇ ಪದುಮನಾಭನ ಸ್ಪರ್ಷ ಪಡೆದ ಕುಮಾರವ್ಯಾಸನ ಈ ಭಾರತದ ಕಥೆಯೂ ಪಾವನ. ಹಾಗೆಯೇ ಈ ದೃಷ್ಟಿಯಿಂದ ಭಾವಿಸಿದರೆ ಸಕಲವೂ ಆ ದೇವನದೇ ಆದಾಗ, ಯಾವ ಕಥೆಯೂ, ಯಾವ ಕಾವ್ಯವೂ ಕೃಷ್ಣ ಕಥೆಯಾಗುವುದೂ ಅಷ್ಟೇ ಸತ್ಯ.