Sunday, October 4, 2009

ಕನ್ನಡ ಸಾಹಿತ್ಯದಲ್ಲಿ ಅನುಭಾವ-೨

ದಾಸ ಸಾಹಿತ್ಯ

"ನಾಯಮಾತ್ಮಾ ಪ್ರವಚನೇನ ಅಭ್ಯೋ ನ ಮೇಧಯಾ ನ ಬಹುಧಾ ಶ್ರುತೇನ" ಅಂದರೆ, ಆತ್ಮಜ್ಞಾನವು ಪ್ರವಚನದಿಂದಾಗಲಿ, ಮೇಧಾಶಕ್ತಿಯಿಂದಾಗಲಿ ಅಥವಾ ಶ್ರವಣದಿಂದಾಗಲಿ ಲಭ್ಯವಾಗುವುಂಥದ್ದಲ್ಲ. ಆತ್ಮವು, ಕೇವಲ ಭೌತಿಕವಾದ ಇವೆಲ್ಲಕ್ಕೂ ಅತೀತವಾದದ್ದು. ಒಳಗಣ್ಣು ತೆರೆದಾಗ ಮಾತ್ರ ಆ ದಿವ್ಯ ಬೆಳಕು ಒಳಕ್ಕೆ ಹರಿಯುತ್ತದೆ, ಆ ಬಂಗಾರದ ಮುಚ್ಚಳ ತೆರೆದು ಸತ್ಯದ ದರ್ಶನವಾಗುತ್ತದೆ. ಜಗತ್ತಿನ ಇತಿಹಾಸದಲ್ಲಿ ಹಲವರು ಸತ್ಯಶೋಧನೆಯ ಈ ಮಾರ್ಗದಲ್ಲಿ ಸಾಗಿದ್ದಾರೆ. ಅವರಲ್ಲಿ ಅನೇಕರಿಗೆ ಸತ್ಯದರ್ಶನ ಸಾಧ್ಯವಾಗಿದೆ. ಆದರೆ ಅಂತಹ ಅನುಭಾವಿಗಳಲ್ಲಿ ಕೆಲವರು ಮಾತ್ರ ತಮಗಾದ ಆ ಅನುಭವವನ್ನು ಶಬ್ದಗಳಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ಇಂತಹ ಒಂದು ಮಹದ್ಪ್ರಯತ್ನವನ್ನು ಹದಿನೈದನೇ ಶತಮಾನದಲ್ಲಿ ದಾಸರು ಕನ್ನಡ ನೆಲದಲ್ಲಿ ವ್ಯಾಪಕವಾಗಿ ಮಾಡಿದರು. ಈ ದಾಸಸಾಹಿತ್ಯದಿಂದ ನಮ್ಮ ಕನ್ನಡ ಸಾಹಿತ್ಯವು ಇನ್ನಷ್ಟು ಶ್ರೀಮಂತವಾಯಿತು.

ಪುರಂದರ ದಾಸರು, ಕನಕದಾಸರು, ಮತ್ತು ವಾದಿರಾಜರದು ದಾಸಸಾಹಿತ್ಯದಲ್ಲಿ ಜನಪ್ರಿಯ ಹೆಸರುಗಳು. ಇವರೆಲ್ಲರೂ ಮಧ್ವಾಚಾರ್ಯರು ಪ್ರತಿಪಾದಿಸಿದ ದ್ವೈತ ಸಿದ್ದಾಂತವನ್ನು ಅನುಸರಿಸಿದವರಾದ್ದರಿಂದ ಆ ಮಾದರಿಯಲ್ಲೇ ಇವರ ಅನುಭಾವ ಮಾರ್ಗವೂ ಬೆಳೆದು ಬಂದಿತು. ಇವರೆಲ್ಲರೂ ಹರಿಯನ್ನೇ ಸರ್ವೋತ್ತಮನೆಂದು ಭಾವಿಸಿ ತಮ್ಮ ಜೀವನದ ಆ ಶ್ರ‍ೇಷ್ಠ ಸತ್ಯವನ್ನು ಕಂಡುಕೊಂಡವರು. ದಾಸರು ಹರಿಯನ್ನು ಸಾಕಾರ ಸಗುಣ ರೂಪದಲ್ಲಿ ಆರಾಧಿಸಿದವರು. ಆದುದರಿಂದಲೇ ದಾಸರದು ಭಕ್ತಿಪಂಥವಾಯಿತು. ಆ ದೈವೀ ಶಕ್ತಿಯೊಡನೆ ವಿವಿಧ ಮಾನವೀಯ ಸಂಬಧವನ್ನು ಭಾವಿಸಿ, ಪ್ರೇಮಿಸಿ, ಆ ಭಕ್ತಿಯ ಆನಂದವನ್ನು ಭಕ್ತರಾಗಿ ದೇವನಿಂದ ಬೇರೆಯಾಗಿಯೇ ನಿಂತು ಸವಿದರು. ಒಮ್ಮೆ ಮಗನಂತೆ, ಒಡೆಯನಂತೆ, ಸ್ನೇಹಿತನಂತೆ, ಪತಿಯಂತೆ ದೇವನನ್ನು ದಾಸರು ಕಂಡಿದ್ದಾರೆ. ಕೆಲವೊಮ್ಮೆ ಸೇವಕನಾಗಿ, ತಾಯಿಯಾಗಿ ವಾತ್ಸಲ್ಯ ಭಾವದಿಂದ ದೇವನನ್ನು ಉಪಾಸಿಸಿದ್ದಾರೆ.

"ದಾಸನ ಮಾಡಿಕೊ ಎನ್ನ ಸ್ವಾಮಿ,
ಸಾಸಿರ ನಾಮದ ವೇಂಕಟರಮಣ."

ಎನ್ನುವಲ್ಲಿ ಹನುಮಂತನ ದಾಸ್ಯಭಕ್ತಿ..

"ಪೋಗುವುದಿಚಿತವೇ ಮಾಧವ ಮಧುರೆಗೆ
ಬಾಗುವೆ ಎಲೋ ನಿನಗೆ"

ಎನ್ನುವಲ್ಲಿ ಪ್ರಿಯ ಸಖನಿಗಾಗಿ ಹಂಬಲಿಸುವ ರಾಧೆಯ ವಿರಹ...

"ಕರುಣಾಕರ ನೀನೆಂಬುವುದ್ಯಾತಕೋ
ಭರವಸೆಯಿಲ್ಲೆನೆಗೆ..."
ಇದು ನಿನಗೆ ಧರ್ಮವೇ ಇಂದಿರೇಶಾ,
ಬದಿಗ ನೀನಾಗಿದ್ದು ಭೀತಿಪಡಿಸುವುದು"

ಎನ್ನುವಾಗ ತೋರುವ ಅರ್ಜುನನ ಸಖ್ಯ ಭಕ್ತಿ....

"ಪೋಗದಿರೆಲೋ ರಂಗ, ಬಾಗಿಲಿಂದಾಚೆ
ಭಾಗವತರು ಬಂದು ಕರೆದೆತ್ತಿಕೊಂಡೊಯ್ಯುವರೋ"

ಎನ್ನುವಲ್ಲಿ ಯಶೋಧೆಯ ವಾತ್ಸಲ್ಯ ಭಾವ..

ಎಲ್ಲವೂ ದಾಸರ ಕಾವ್ಯದಲ್ಲಿ ವ್ಯಕ್ತವಾಗುತ್ತವೆ. ದಾಸರ ಪೂರ್ಣ ಸಮರ್ಪಣೆಯ ಭಾವದಿಂದಲೇ ಅವರ ಭಕ್ತಿ ಮಾರ್ಗದಲ್ಲಿನ ಸಾಧನೆ ಬೆಳೆದು ಪೂರ್ಣಗೊಳ್ಳುತ್ತದೆ. ಯಾರು ಹೇಗೆ ತಮ್ಮ ದೇವನನ್ನು ಆರಾಧಿಸುವರೋ ಅದೇ ರೂಪದಲ್ಲಿ ಅವನ ದರ್ಶನ ಲಭಿಸುತ್ತದೆ ಎನ್ನುತ್ತಾರೆ ದಾಸರು.

ತಾವು ಕಂಡ ಆ ಸಾಕಾರ ಮೂರ್ತಿಯ ವರ್ಣನೆಯೂ ಅತ್ಯಂತ ಸೊಗಸಾಗಿ ದಾಸರು ಮಾಡುತ್ತಾರೆ.
"ಕೃಷ್ಣಮೂರ್ತಿ ಕಣ್ಣಮುಂದೆ ನಿಂತಿದೆ,
ಮಸ್ತಕದಲ್ಲಿ ಮಾಣಿಕದ ಕಿರೀಟ,
ಕಸ್ತೂರಿ ತಿಲಕದಿಂದೆಸೆವ ಲಲಾಟ,
ಹಸ್ತದಿಂದ ಕೊಳಲನೂದುವ ಓರೆನೋಟ,
ಕೌಸ್ತುಭ ಎಡಬಲದಲ್ಲಿ ಓಡ್ಯಾಣ..."

ದಾಸರು ತೋರಿಸುವ ದೇವ, ಪೀತಾಂಬರ ಉಟ್ಟ, ಮಾಣಿಕ್ಯ ಕಿರೀಟ ಧರಿಸಿದ, ಕೊರಳಲ್ಲಿ ತುಳಸೀಮಾಲೆಯಿಂದ ಶೋಭಿಸುವ, ಕಸ್ತೂರಿ ತಿಲಕವಿರುವ ಸಾಕಾರ ರೂಪ. ಆದರೆ ಆ ರೂಪವೂ ಹಾಗೂ ಆ ರೂಪದ ಜೊತೆಗಿನ ಅನುಬಂಧ ಕೂಡ ಪ್ರಾಪಂಚಿಕ ಎಲ್ಲ ಬಂಧನಗಳನ್ನೂ ಮೀರಿದ್ದು. ಮತ್ತು ಅವರ ಬಂಧ ಆ ಒಂದು ರೂಪದೊಂದಿಗೆ ಮಾತ್ರ. ದಾಸರ ಈ ಭಾವವನ್ನು ಸ್ಪಷ್ಟವಾಗಿ ಕಾಣಬಹುದು ಇಂತಹ ಕೀರ್ತನೆಗಳಲ್ಲಿ.

"ಯಾರು ಒಲಿದರೇನು ನಮಗಿನ್ನಾರು ಮುನಿದರೇನು,
ಕ್ಷೀರಸಾಗರಶಾಯಿಯಾದವನ ಸೇರಿದಂಥ ಹರಿದಾಸರಿಗೆ,
ಊರನಾಳುವ ದೊರೆಗಳು ನಮ್ಮನು ದೂರ ಅಟ್ಟಿದರೇನು?
ವಾರಿಜನಾಭನ ವಸುದೇವನ ಸುತನ ಸಾರಿದಂಥ ಹರಿದಾಸರಿಗೆ."

ದಾಸರ ಕಾವ್ಯಗಳಲ್ಲಿ ಸಾಕ್ಷಾತ್ಕಾರ ಅನುಭವದ ಕೊನೆಯ ಹಂತದಲ್ಲೂ ಸಾಕಾರ ಮೂರ್ತಿಯ ವರ್ಣನೆಯನ್ನೇ ಕಾಣುತ್ತೇವೆ. ಶರಣರಂತೆ "ಲೀಲೆಯಾದೊಡೆ ಉಮಾಪತಿ, ಲೀಲೆ ತಪ್ಪಿದೊಡೆ ಸ್ವಯಂಭು" ಎಂಬಂತಹ ನಿರಾಕಾರ ದೈವತ್ವದ ಕಲ್ಪನೆ ಕಾಣಬರುವುದಿಲ್ಲ. ದಾಸರು ಪಕ್ಷಿವಾಹನ, ಲಕ್ಷ್ಮೀರಮಣನಾದ, ಪನ್ನಗಶಯನನಾದ ಸರ್ವಾಲಂಕಾರ ಭೂಷಿತ ಹರಿಯನ್ನು ಮಾತ್ರ ಕಾಣಬಲ್ಲರು. ಹರಿಯು, ತುಳಸಿ ಕೌಸ್ತುಭ ಪೀತಾಂಬರ ಸಹಿತನಾಗಿಯೇ ತನ್ನ ಸಾತ್ವಿಕ ರೂಪದಿಂದ ದಾಸರ ಅಂತರಂಗವನ್ನು ಹೊಕ್ಕಿರುವಂತೆ ತೋರುತ್ತದೆ.

ದಾಸರಿಗೆ ಇಹ ಲೋಕದ ಜೀವನ ನೀರ ಮೇಲಣ ಗುಳ್ಳೆಯಂತೆ ಕಾಣುತ್ತದೆ. ದೇವರ ಕೃಪೆಯನ್ನು ನಂಬಿ ಆತನಿಗೇ ಎಲ್ಲವನ್ನೂ ಒಪ್ಪಿಸಿ ಬದುಕಬೇಕೆನ್ನುತ್ತಾರೆ.
"ಕೆರೆಯ ನೀರನು ಕೆರೆಗೆ ಚಲ್ಲಿ,
ವರವ ಪಡೆದವರಂತೆ ಕಾಣಿರೋ..
ಹರಿಯ ಕರುಣದೊಳಾದ ಭಾಗ್ಯವ ಹರಿ ಸಮರ್ಪಣೆ ಮಾಡಿ ಬದುಕಿರೋ"
ಎನ್ನುವಂತೆ ಜೀವನ ಇರಬೇಕು. ಇಂತಹ ಉನ್ನತ ಜೀವನದ ಆದರ್ಶ, ಉದಾತ್ತ ಕಲ್ಪನೆ, ರೀತಿ ನೀತಿಗಳ ಉಪದೇಶಗಳನ್ನು ದಾಸರ ಕೀರ್ತನೆಗಳಲ್ಲಿ ಕಾಣಬಹುದು.

ಶರಣ ಸಾಹಿತ್ಯದಂತೆ ದಾಸ ಸಾಹಿತ್ಯವೂ ಕೂಡ ಸಮಾಜದ ಮೇಲೆ ಅಗಾಧವಾದ ಪ್ರಭಾವ ಬೀರಿತು. ಸರಳವಾದ ಸುಂದರವಾದ ಕೀರ್ತನೆಗಳು ಎಲ್ಲರ ಮನೆ ಮನೆಗಳಲ್ಲಿ ಇಂದಿಗೂ ಕೇಳಬರುತ್ತವೆ. ಸಾಹಿತ್ಯದ ಜೊತೆಗೆ ಸಂಗೀತದ ಪ್ರಭಾವವನ್ನೂ ಆಧ್ಯಾತ್ಮಿಕ ಸಾಧನೆಗೆ ಬಳಸಿಕೊಂಡರು ದಾಸರು. ದಾಸಸಾಹಿತ್ಯಕ್ಕೆ ಅದರಲ್ಲಿಯೂ ಮುಖ್ಯವಾಗಿ ಪುರಂದರದಾಸರು ಮತ್ತು ಕನಕ ದಾಸರಿಗೆ ಸಂಗೀತ ಕ್ಷೇತ್ರದಲ್ಲೂ ಬಹಳ ಪ್ರಾಮುಖ್ಯವಾದ ಸ್ಥಾನವಿದೆ. ಆದರೆ ಸಂಗೀತವಾಗಲೀ ಸಾಹಿತ್ಯವಾಗಲಿ ಶರಣರಂತೆಯೇ ದಾಸರಿಗೂ ತಮ್ಮ ಜೀವನವನ್ನು ಅಭಿವ್ಯಕ್ತಗೊಳಿಸಲು ಮಾತ್ರ ಬೇಕಾಗಿತ್ತು, ಹೊರತೂ ಸಾಹಿತ್ಯ ರಚನೆಯೇ ಅವರ ಉದ್ದೇಶವಾಗಿರಲಿಲ್ಲ. ತಮ್ಮ ಸಾಧನೆಯಲ್ಲಿ ತೋರಿದ ಸಮಸ್ಯೆಗಳು, ಪ್ರಾರಂಭದ ದಿನಗಳಲ್ಲಿ ತಮ್ಮಲ್ಲಿದ್ದ ತಳಮಳಗಳು ಮತ್ತು ಅವುಗಳನ್ನು ಮೆಟ್ಟಿ ನಿಂತು ತಾವು ಬದುಕಿದ ಸಾತ್ವಿಕ ಜೀವನ ಎಲ್ಲವನ್ನೂ ದಾಸರು ಕೀರ್ತನೆಗಳ ಮೂಲಕವೇ ಹೊರಹೊಮ್ಮಿಸಿದರು. "ಯಾರಿಗೆ ಯಾರುಂಟು ಎರವಿನ ಸಂಸಾರ, ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ" ಇಂತಹ ಕೀರ್ತನೆಗಳನ್ನು ಅರ್ಥವರಿತು ಹಾಡಿದಾಗ, ಹಾಡುವವರ ಮತ್ತು ಕೇಳುವವರ ಮನಸ್ಸು ಒಂದು ಕ್ಷಣ ಕಾಲವಾದರೂ ಅಂತರ್ಮುಖವಾಗದೆ ಇರಲಾರದು.

ಒಟ್ಟಿನಲ್ಲಿ ದಾಸಸಾಹಿತ್ಯ ವಿಸ್ತಾರದಿಂದಲೂ ಗುಣದಿಂದಲೂ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟವಾದ ಸ್ಥಾನವನ್ನು ಪಡೆಯಲು ಅರ್ಹವಾಗಿದೆ. ದಾಸಸಾಹಿತ್ಯದಲ್ಲಿ ಬಂದಿರುವ ಅನೇಕ ಮಾತುಗಳು, "ಆಕಳು ಡೊಂಕಾದರೆ ಹಾಲು ಡೊಂಕೇ", "ಕತ್ತೆ ಬಲ್ಲುದೇ ಕಸ್ತೂರಿಯ ಪರಿಮಳವ", "ಕೈಮೀರಿ ಹೋದದ್ದೇ ಕೃಷ್ಣಾರ್ಪಣ", ಸುಭಾಷಿತಗಳಾಗಿ ಜನಜೀವನದಲ್ಲಿ ಸೇರಿಕೊಂಡುಹೋಗಿವೆ. ಹೀಗೆ ಮಾನವನ ಜೀವನದ ಮಹೋದ್ದೇಶವನ್ನು ಸರಳವಾದ ಸುಂದರವಾದ ಮತ್ತು ಸಂಗೀತಮಯವಾದ ಕೀರ್ತನೆಗಳನ್ನು ಹಾಡಿದ ದಾಸರು ಕನ್ನಡದ ಜನರ ಹೃದಯದಲ್ಲಿ ನಿರಂತರವಾಗಿ ನೆಲಸಿದ್ದಾರೆ.

(ಈ ಲೇಖನಗಳಿಗೆ ’ಕನ್ನಡ ಸಾಹಿತ್ಯದಲ್ಲಿ ಅನುಭಾವ’ ಎಂಬ ಶೀರ್ಷಿಕೆ ನೀಡಿದ್ದು ಅಷ್ಟು ಸಮಂಜಸವಾಗಿಲ್ಲವೇನೋ ಅನ್ನಿಸುತ್ತಿದೆ. ಎಕೆಂದರೆ ಕನ್ನಡದಲ್ಲಿನ ಅನುಭಾವ ಸಾಹಿತ್ಯ ಅತ್ಯಂತ ವಿಶಾಲವಾದದ್ದು. ದಾಸ ಸಾಹಿತ್ಯ ಮತ್ತು ಶರಣಸಾಹಿತ್ಯ ಎರಡು ಪ್ರಮುಖ ಘಟ್ಟಗಳಷ್ಟೆ. ಇವಲ್ಲದೇ ಹದಿನೈದನೇ ಶತಮಾನದಲ್ಲಿಯೇ ನಿಜಗುಣ ಶಿವಯೋಗಿಗಳು ಎಂಬ ಮಹಾ ಅನುಭಾವಿಯೊಬ್ಬರು ಆಗಿಹೊಗಿದ್ದಾರೆ. ಅವರಿಂದ ’ತತ್ವಸಾಹಿತ್ಯ’ ಎಂಬ ಹೊಸ ಪ್ರಾಕಾರ ಹುಟ್ಟಿಕೊಂಡಿತು. ತತ್ವ ಸಾಹಿತ್ಯದ ಬಗೆಗೆ ನನ್ನ ತಿಳುವಳಿಕೆ ಅತ್ಯಂತ ಅಲ್ಪ. ಶಿಶುನಾಳ ಷರೀಫರು ತೀರ ಇತ್ತಿಚೆಗೆ ಆಗಿಹೋದ ಅನುಭಾವಿಗಳು. ಶರೀಫರ ಗೀತೆಗಳೂ ಅನುಭಾವ ಸಾಹಿತ್ಯದಲ್ಲಿ ಅತ್ಯಂತ ಪ್ರಮುಖ ಸ್ಥಾನ ಪಡೆದಿವೆ. ಮತ್ತು ಬೇಂದ್ರೆ, ಡಿ.ವಿ.ಜಿ, ಪು.ತಿ.ನ ಅವರಂತಹ ನವೋದಯ ಕವಿಗಳ ಕಾವ್ಯದಲ್ಲಿ ಅನುಭಾವದ ಹೊಳಹನ್ನು ಹೇರಳವಾಗಿ ಕಾಣಬಹುದಾಗಿದೆ. ಇವರೆಲ್ಲರ ಕಾವ್ಯಗಳ ಬಗ್ಗೆ ಈ ಶೀರ್ಷಿಕೆಯಡಿ ನನ್ನಿಂದ ಎನನ್ನೂ ಬರೆಯಲು ಸಾಧ್ಯವಾಗಿಲ್ಲ. ಅಲ್ಲದೆ ದಾಸಸಾಹಿತ್ಯ ಹಾಗೂ ಶರಣ ಸಾಹಿತ್ಯದ ಕುರಿತಾಗಿಯೂ ಕೂಡ ಅತ್ಯಂತ ಸಂಕ್ಷೇಪವಾಗಿ ಬರೆದಿದ್ದೇನೆ. ಆದುದರಿಂದ ಈ ಎರಡು ಲೇಖನಗಳಿಗೆ ’ಕನ್ನಡ ಸಾಹಿತ್ಯದಲ್ಲಿ ಅನುಭಾವ’ ಎಂಬ ಶೀರ್ಷಿಕೆಯು ಅಷ್ಟು ಸರಿಯಾದುದ್ದಲ್ಲ. ಮತ್ತು ಈ ಲೇಖನಗಳು ಕೇವಲ ಶರಣ ಮತ್ತು ದಾಸ ಸಾಹಿತ್ಯಗಳತ್ತ ವಿಹಂಗಮ ನೋಟವಷ್ಟೇ.

ಮತ್ತೊಂದು ವಿಷಯವೇನೆಂದರೆ ಹಿಂದಿನ ಲೇಖನದಲ್ಲಿ ಕನ್ನಡದ ಜೈನಸಾಹಿತ್ಯದಲ್ಲಿ ಅನುಭಾವದ ಅಂಶಗಳು ಅಷ್ಟಾಗಿ ತೋರುವುದಿಲ್ಲ ಎಂಬ ಮಾತನ್ನು ಹೇಳಿದ್ದೆ. ಆದರೆ ನಿನ್ನೆ ಜೈನ ಸಾಹಿತ್ಯವನ್ನು ತಿಳಿದುಕೊಂಡ ಆತ್ಮೀಯರೊಬ್ಬರಲ್ಲಿ ಮಾತನಾಡುತ್ತ ಜೈನ ಸಾಹಿತ್ಯದಲ್ಲಿ ಕಂಡುಬರುವ ವೈರಾಗ್ಯದ ವರ್ಣನೆ, ತೀರ್ಥಂಕರರನ್ನು ಕುರಿತ ಪ್ರಾರ್ಥನೆಗಳು ಅನುಭಾವದ ಶ್ರ‍ೇಷ್ಠ ಅಭಿವ್ಯಕ್ತಿಗಳು ಎಂಬುದಾಗಿ ಅವರಿಂದ ತಿಳಿಯಿತು. ಜೈನ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡದೆ ಜೈನ ಸಾಹಿತ್ಯವು ಅನುಭಾವದ ಗುಣಗಳನ್ನು ಹೊಂದಿಲ್ಲ ಎಂಬ ಅಭಿಪ್ರಾಯವನ್ನು ಹೇಳಿದ್ದಕ್ಕಾಗಿ ಕ್ಷಮೆ ಕೇಳುತ್ತೇನೆ. ಓದುಗರಲ್ಲಿ ಯಾರಾದರೂ ಜೈನ ಸಾಹಿತ್ಯವನ್ನು ಅಭ್ಯಾಸ ಮಾಡಿದವರಿದ್ದರೆ, ದಯವಿಟ್ಟು ಅಲ್ಲಿ ಕಂಡುಬರುವ ಅನುಭಾವದ ಅಂಶಗಳ ಬಗ್ಗೆ ನಮ್ಮೆಲ್ಲರೊಂದಿಗೆ ಹಂಚಿಕೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ.)

6 comments:

  1. ದಾಸ ಸಾಹಿತ್ಯದ ಬಗೆಗಿನ ನಿಮ್ಮ ವಿವರಣೆ ಅತ್ಯಧ್ಬುತ,

    ಪ್ರತಿ ದಾಸ ವಾಣಿಗಳ ಉಲ್ಲೇಖ ಬರಹದ
    ಸೌಂದರ್ಯಕ್ಕೆ ಕಳಶ ಇಟ್ಟಿದೆ,

    ತುಂಬಾ ಒಳ್ಳೆಯ ವಿವರಣೆ

    ReplyDelete
  2. ದಾಸಸಾಹಿತ್ಯದ ಬಗೆಗೆ ಒಳ್ಳೆಯ ಒಳನೋಟಗಳನ್ನು ಕೊಟ್ಟಿದ್ದೀರಿ.
    ಅಭಿನಂದನೆಗಳು.

    ReplyDelete
  3. ದಾಸ ಸಾಹಿತ್ಯದ ಬಗೆಗಿನ ವಿವರಣೆ ತುಂಬಾ ಚೆನ್ನಾಗಿದೆ.

    ಶ್ಯಾಮಲ

    ReplyDelete
  4. ಮೇಡಮ್,

    ದಾಸ ಸಾಹಿತ್ಯವನ್ನು ಎಷ್ಟು ಚೆನ್ನಾಗಿ ವಿವರಿಸಿದ್ದೀರಿ...ನನಗೆ ಇದೆಲ್ಲಾ ಗೊತ್ತಿರಲೇ ಇಲ್ಲ. ಅನೇಕ ವಿಚಾರಗಳನ್ನು ಹೇಳಿದ್ದೀರಿ...ಧನ್ಯವಾದಗಳು

    ReplyDelete
  5. ಶ್ಯಾಮಲಾ ಅವರೆ,

    ಕಾಡಬೆಳದಿಂಗಳಿಗೆ ನಿಮಗೆ ಸ್ವಾಗತ..


    ಶಿವೂ ಅವರೆ,

    ಧನ್ಯವಾದಗಳು..

    ReplyDelete
  6. ದಾಸ ಸಾಹಿತ್ಯದ ಬಗ್ಗೆ ಹೆಚ್ಚು ಪ್ರಕಟಗೊಳ್ಲಬೇಕು ..ಅದರಲ್ಲೂ ದಾಸ ಪರಂಪರೆಯ ವೈಚಾರಿಕತೆ ಕುರಿತು...ಈ ನಿಟ್ಟಿನಲ್ಲಿದೆ ನಿಮ್ಮ ಈ ಲೇಖನ ..ಮಾಹಿತಿಪೂರ್ಣ

    ReplyDelete