Thursday, April 23, 2009

ಭಾವಗೀತ

ಭಾವಗೀತೆಗಳು ನಮ್ಮ ಕನ್ನಡ ಸಾಹಿತ್ಯದಲ್ಲಿ ವಿಶೇಷವಾದ ಸ್ಥಾನ ಪಡೆದಿವೆ. ಭಾವಗೀತೆಗಳ ಮೂಲ ಸ್ವರೂಪ ಹಾಡಿನದ್ದು. ಕಾವ್ಯವನ್ನು ಹಾಡುವುದು ನಮ್ಮಲ್ಲಿ ಮೊದಲಿನಿಂದ ಇದ್ದರೂ ಕಾವ್ಯ ಆ ಹಾಡಿಗಿಂತ ಭಿನ್ನವಾಗಿತ್ತು. ಹಿಂದೆ ಕಾವ್ಯರಚನೆಯ ಉದ್ದೇಶ ಕಾವ್ಯವನ್ನು ಹಾಡಲೂ ಸಾಧ್ಯವಾಗಿಸಬೆಕೆಂದೇನೂ ಆಗಿರಲಿಲ್ಲ . ದಾಸರ ಹಾಡುಗಳು, ಶಿವಶರಣರ ವಚನಗಳು ಇವುಗಳನ್ನು ಬಿಟ್ಟರೆ ಉಳಿದ ಕಾವ್ಯಗಳೆಲ್ಲ ಕಥನ ಕಾವ್ಯಗಳೇ. ಉದಾಹರಣೆಗೆ ಕುಮಾರವ್ಯಾಸ ಭಾರತ, ಹರಿಹರನ ರಗಳೆಗಳು, ಪಂಪನ ಕಾವ್ಯಗಳು , ಕುವೆಂಪು ರಾಮಾಯಣ, ಡಿವಿಜಿ ಅವರ ಮಂಕುತಿಮ್ಮನ ಕಗ್ಗ ಹೀಗೆ. ಅವುಗಳಲ್ಲಿರುವ ಪದ್ಯ ಕೂಡ ಗದ್ಯದ ಇನ್ನೊಂದು ರೂಪವಾಗಿಯೇ ಕಾಣಿಸಿಕೊಳ್ಳುತ್ತದೆ. ಈ ಕಥನ ಕಾವ್ಯಗಳು ಗದ್ಯಪದ್ಯಗಳೆರಡರ ತಾಂತ್ರಿಕತೆಯನ್ನು ಒಳಗೊಂಡಿವೆ.

ಭಾವಗೀತ ಎಂಬ ಶಬ್ದ ಮರಾಠಿಯಿಂದ ಬಂದದ್ದಿರಬೇಕು. ಆದರೆ ಇಂಗ್ಲಿಷ್ ನ Lyric (ಲಿರಿಕ್) ಶಬ್ದಕ್ಕೆ ಪ್ರತಿಯಾಗಿ ನಾವೀಗ ಅದನ್ನು ಬಳಸುತ್ತಿದ್ದೇವೆ. ನಮ್ಮ ಕನ್ನಡದ ಆಧುನಿಕ ಭಾವಗೀತೆಗೆ ಈ ಕಥನ ಮತ್ತು ಗದ್ಯ ಎರಡರ ಹಂಗೂ ಇಲ್ಲ. ಪಲ್ಲವಿ, ಅನುಪಲ್ಲವಿ ಮತ್ತು ಚರಣಗಳ ಬಂಧನವೂ ಇಲ್ಲದೆ ಹೆಚ್ಚು ಮುಕ್ತವಾಗಿದೆ.

ಶ್ರೀ ಅವರ 'ಇಂಗ್ಲಿಷ್ ಗೀತಗಳು' ಪ್ರಕಟವಾದ ಮೇಲೆ ಕನ್ನಡದಲ್ಲಿ ಈ ಹೊಸ ಭಾವಗೀತ ಪ್ರಾಕಾರ ಜನ್ಮತಾಳಿತು ಅಥವಾ ಹೊಸ ಕವಿತೆಯ ಹುಡುಕಾಟ ಆರಂಭವಾಯಿತು ಎನ್ನಬಹುದು. ನಮ್ಮ ಆಧುನಿಕ ಭಾವಗೀತ ಹೆಚ್ಚು Wordsworth ನ ಕಾವ್ಯಗಳಿಂದ ಪ್ರಭಾವಿತವಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ. Wordswoth ನ ಕಾವ್ಯಶಾಸ್ತ್ರದಲ್ಲಿ emotion ಮತ್ತು feeling ಎಂಬ ಶಬ್ದಗಳಿಗೆ ಪ್ರಾಶಸ್ತ್ಯವಿದೆ. ನಮ್ಮ ಭಾವಗೀತೆಯಲ್ಲಿನ 'ಭಾವ' ಶಬ್ದವಿದೆಯಲ್ಲ ಅದು ಬಹುಷಃ ಈ ಇಂಗ್ಲಿಷ್ ಪದಗಳನ್ನು ಕನ್ನಡಿಸಲಿಕ್ಕೆಂದೇ ಬಂದಿರಬೇಕು. ಬೇಂದ್ರೆಯವರು ತಮ್ಮದೊಂದು ಹೇಳಿಕೆಯಲ್ಲಿ ಹಳೆಯ ಕಾವ್ಯ ಅರ್ಥಪ್ರಧಾನವಾಗಿದ್ದರೆ ಹೊಸ ಕವಿತೆ ಭಾವ ಪ್ರಧಾನವಾಗಿದೆ ಎಂಬ ಮಾತನ್ನು ಹೇಳುತ್ತಾರೆ. Wordsworth ಕೂಡ ಜೀವನದ ಕೆಲವು ಸನ್ನಿವೇಶಗಳು ಅನೇಕ ಭಾವಗಳನ್ನು ಹುಟ್ಟಿಸುತ್ತವೆ ಎಂದು ಹೇಳುತ್ತಾ ಆ ಭಾವಗಳಿಂದಲೇ ಕಾವ್ಯ ಜನಿಸುತ್ತದೆ ಮತ್ತು ಆ ಸನ್ನಿವೇಶಗಳಿಗಿಂತ ಆ ಭಾವಗಳೇ ಮುಖ್ಯವಾಗಿಹೊಗುತ್ತವೆ ಎನ್ನುತ್ತಾನೆ.

ಈ ಭಾವಗೀತದ ಪ್ರಯತ್ನ ,ತಾನು ಸಮಾಜದ ರಕ್ಷಣೆ ಪೋಷಣೆಗಳಿಂದ, ಅದು ಹೇರುವ ನಿರ್ಬಂಧಗಳಿಂದ, ನೀತಿ ನಿಯಮಗಳಿಂದ ಧಾರ್ಮಿಕತೆಯನ್ನು ಬಿಡಿಸಿಕೊಂಡು ಸ್ವತಂತ್ರವಾದ ವೈಯಕ್ತಿಕತೆಯನ್ನು ಪಡೆದ ನಂತರ ಕವಿಯಲ್ಲಿ ಆರಂಭವಾಗುತ್ತದೆ. ಆ ಕವಿಯ ಸಂವೇದನೆ ಸಮಾಜದ ಒಂದು ಜೀವಂತ ಅಂಗವಾಗಿದ್ದಾಗಿನ ಸಂವೆದನೆಗಿಂತ ತೀರ ಭಿನ್ನವಾಗುತ್ತ ಹೋಗುತ್ತದೆ. ಆಗ ಕಾವ್ಯದ ಸಂಗತಿಯಲ್ಲಿ ಕಥೆಯೂ ಕಾವ್ಯವಾಗುತ್ತದೆ. ಅದಕ್ಕೆಂದೇ ಈ ಕಾವ್ಯ ಉಪಮಾನದ ಬಗ್ಗೆ ಇರುವ ಅದಮ್ಯವಾದ ಹಂಬಲ ಎನ್ನುತ್ತಾನೆ Wordswoth. ಕಾವ್ಯ ಯಾವತ್ತೂ ತನಗಿಂತ ಭಿನ್ನವಾದದ್ದನು, ಭಿನ್ನವಾಗಿದ್ದರೂ ಸಾಮಾನಧರ್ಮವುಳ್ಳ ಉಪಮಾನವನ್ನು ಜಗತ್ತಿನಲ್ಲಿ ಹುಡುಕುತ್ತಿರಬೇಕು ( ಉಪಮಾನಿಷ್ಟಾಃ ಕವಯಃ ). ಈ ಭಿನ್ನವಾದದ್ದನ್ನು ಹುಡುಕುವ ಸ್ರಜನಶೀಲತೆ ಸಾಮಾನ್ಯ ಭಾಷೆಯಲ್ಲಿ ಅಸಾಮಾನ್ಯವಾದ ಅರ್ಥವನ್ನು ಒಡಮೂಡಿಸಿಸುವ ಕವಿತೆಯ ಆಕಾಂಕ್ಷೆ ಆಯಿತು. ಇದೇ ಭಾವಗೀತದ ಸ್ವರೂಪವಾದ ಅನುಭಾವಕ್ಕೆ ಇಂಬು ಕೊಡುವುದು.

ಹೊಸ ಭಾವಗೀತಗಳಲ್ಲಿ ಬಹಳಷ್ಟು ನಿಸರ್ಗದ ಚೆಲುವನ್ನು ಕುರಿತು ಬರೆದವುಗಳಾಗಿವೆ. ನಿಸರ್ಗದ ಚೆಲುವನ್ನು ಅದ್ಭುತವಾಗಿ ಹಿಂದಿನ ಕವಿಗಳು ವರ್ಣಿಸಿದ್ದರೂ ನಿಸರ್ಗಕ್ಕೆ ಒಂದು ವ್ಯಕ್ತಿತ್ವ ಬಂದಿದ್ದು ಹೊಸಕವಿತೆಗಳಿಂದಾಗಿಯೇ. ಇಂಗ್ಲಿಷ್ ನ ರೊಮ್ಯಾಂಟಿಕ್ ಅಥವಾ ರಮ್ಯ ಕಾವ್ಯಗಳು ಕನ್ನಡದ ಆಧುನಿಕ ನಿಸರ್ಗ ಕವಿತೆಗಳಮೇಲೆ ಪ್ರಭಾವ ಬೀರಿವೆ. ಆದರೂ ನಾವು ಪ್ರೃಕ್ರೃತಿಯನ್ನು ಪುಸ್ತಕವಾಗಿಸಲಿಲ್ಲ. ಅದನ್ನು ನಮ್ಮ ಕವಿಗಳು ಪ್ರತಿಮೆಗಳಾಗಿಸಿದರು. ಹೀಗೆ ಕನ್ನಡ ಸಾಹಿತ್ಯದ ಭಾವಗೀತೆಗಳು ತಮ್ಮದೇ ಆದ ಸ್ವಂತಿಕೆ ಮತ್ತು ಚೆಲುವನ್ನು ಪಡೆದುಕೊಂಡಿವೆ.

ಕಾವ್ಯ ಕೃಷಿ ಹೇಗಿರಬೇಕುಂಬುದಕ್ಕೆ ಬೇಂದ್ರೆ ಅವರ ಒಂದು ಮಾತು ಮಹಾನೀಯವಾದದ್ದು "ಬಿತ್ತಿದರೆ ಬಿತ್ತುವುದು ಮುಕ್ಕು ಚಿಕ್ಕೆಯ ಕಾಳು, ಮುತ್ತು ರತುನವ ಬಿತ್ತಿ ಮಾಡದಿರು ಹೊಲ ಹಾಳು " ಅಂದರೆ ಕಾವ್ಯದಲ್ಲಿನ ಭಾಷೆ ಸಾಮಾನ್ಯವಾಗಿದ್ದು ವಿಶೇಷವಾದದ್ದನ್ನು ಹೇಳಬೇಕು. ಕವಿತೆ ಪ್ರಶ್ನೆ ಉತ್ತರ ಎರಡೂ ಆಗಬೇಕು. ಕವಿತೆ ತನ್ನ ಇರವನ್ನು ತೋರ್ಪಡಿಸಲು ಸದ್ದು ಮಾಡಬೇಕು. ಶಬ್ದಾರ್ಥಗಳ ನಡುವಿನ ಸಂಬಂಧದ ಮೇಲೆ ಕವಿಯ ಪ್ರಯತ್ನ ಇರಬೇಕು. ಪ್ರತಿಯೊಬ್ಬ ಕವಿಯೂ ಈ ಪರಿಸ್ಥಿತಿಯ ಆಹ್ವಾನವನ್ನು ಸ್ವೀಕರಿಸದೆ ವಿಧಿಯಿಲ್ಲ. ಭಾವಗೀತೆ ಚಿಕ್ಕದಾದರೂ ಇಂಥ ಮಹತ್ವದ ಪ್ರಶ್ನೆಗಳನ್ನು ಎದುರಿಸಲು ಸಿದ್ದವಾಗಿದೆ. ಭಾವಗೀತೆಯ ಕಾವ್ಯವೇ ಕಾವ್ಯದ ವಸ್ತುವಾಗುತ್ತ ಸಾಗುತ್ತಿದೆ.

11 comments:

 1. ಗೋದಾವರಿ,
  ಭಾವಗೀತಗಳ ಬಗ್ಗೆ ಸುಂದರವಾಗಿ ತಿಳಿಸಿದ್ದಿರಿ, ತುಂಬಾ ಚೆನ್ನಾಗಿದೆ ಬರಹ

  ReplyDelete
 2. ಗುರುಮೂರ್ತಿಯವರೇ,

  ಕಾಡಬೆಳದಿಂಗಳಿಗೆ ನಿಮಗೆ ಸ್ವಾಗತ.. ಹೀಗೇ ಬರುತ್ತಿರಿ..

  ಧನ್ಯವಾದಗಳು..

  ReplyDelete
 3. ಗೋದಾವರಿಯವರೆ,
  ಬರೀ ಭಾವನೆ ಹೊಮ್ಮಿಸಿದರೆ ಅದು ಭಾವಗೀತೆ ಎಂದು ತಿಳಿದಿದ್ದೆ. ಭಾವಗೀತೆಯ ಬಗ್ಗೆ ಎಷ್ಟೊಂದು ವಿಷಯ ತಿಳಿಸಿಕೊಟ್ಟಿದ್ದೀರಿ. ಧನ್ಯವಾದಗಳು.

  ReplyDelete
 4. ಗೋದಾವರೀ,
  ತುಂಬ ಚೆನ್ನಾಗಿ ಬರೆದಿದ್ದೀರಿ. ಕಾವ್ಯದ ಸನ್ನಿವೇಶ ಮತ್ತು ಭಾವ, ಅವೆರಡರ ಮಿಳಿತದ ಕುರಿತು ಹೊಸ ಹೊಳವು ದೊರೆಯುವಂತೆ.

  ಮತ್ತೆ ಶಬ್ದಾರ್ಥಗಳ ಸಂಬಂಧದ ಕುರಿತು ಯೋಚಿಸುವಂತೆಯೂ ಮಾಡಿದಿರಿ.

  ವಂದನೆಗಳು..

  ReplyDelete
 5. ಗೋದಾವರಿ,
  ಬೆಳದಿಂಗಳಿನ ವಿಹಾರವನ್ನು ಭಾವಗೀತೆಯೊಂದಿಗೆ ಮಾಡಿದ್ದೀರಿ. ಲೇಖನ ತುಂಬಾ ಇಷ್ಟವಾಯಿತು.
  ಸಾಹಿತ್ಯದ ವೈವಿಧ್ಯಗಳ ಬಗೆಗೆ ಇದರಂತೆಯೇ ತಿಳಿಸುತ್ತಿರಿ.

  ReplyDelete
 6. ಮಲ್ಲಿಕಾರ್ಜುನ ಅವರೇ ಧನ್ಯವಾದಗಳು.. ಕಾಡಬೆಳದಿಂಗಳಿಗೆ ನಿಮಗೆ ಸ್ವಾಗತ..

  ರಾಘವೇಂದ್ರ thankyou..

  ಸುನಾಥ್ ಅವರೇ ನೀವು ಇಲ್ಲಿಗೆ ಬಂದಿದ್ದು ತುಂಬಾ ಸಂತಸ ತಂದಿತು.. ಹೀಗೇ ಬರುತ್ತಿರಿ..

  ReplyDelete
 7. ನಮಸ್ತೆ ಗೋದಾವರಿ. ಭಾವಗೀತೆಗಳೊಂದಿಗೆ ಕಾಡಬೆಳದಿಂಗಳಿಗೆ ಮುನ್ನುಡಿ ಬರೆದಿರಿ. ಇನ್ನಷ್ಟು ಭಾವಗಳು, ಅನುಭವಗಳ ಕಾವ್ಯ ಕೃಷಿ ಕಾಡಬೆಂದಿಂಗಳಲ್ಲಿ ಕಾಣುವಂತಾಗಲಿ. ಶುಭವಾಗಲೀ..

  -ಧರಿತ್ರಿ

  ReplyDelete
 8. ಧನ್ಯವಾದಗಳು ಧರಿತ್ರಿ..

  ನಿಮಗೆ ಕಾಡಬೆಳದಿಂಗಳಿಗೆ ಸ್ವಾಗತ..

  ReplyDelete
 9. >> ಭಾವಗೀತ ಎಂಬ ಶಬ್ದ ಮರಾಠಿಯಿಂದ ಬಂದದ್ದಿರಬೇಕು.
  ಹೌದಾ ? ನನಗೇನೋ ಹಾಗೆನಿಸುವುದಿಲ್ಲ. "ಹೊಸಗನ್ನಡದ ಅರುಣೋದಯ"ದಲ್ಲಿ ಡಾ| ಶ್ರೀನಿವಾಸ್ ಹಾವನೂರ್ ಈ ಬಗ್ಗೆ ಏನು ಹೇಳಿದ್ದಾರೆ ? ನನ್ನ ಹತ್ತಿರ ಆ ಪುಸ್ತಕ ಈಗ ಇಲ್ಲ..

  ReplyDelete
 10. ತುಂಬಾ ಹೊಸ ವಿಷಯಗಳನ್ನು ತಿಳ್ಕೊಂಡೆ ಮೇಡಮ್, ಧನ್ಯವಾದ ಬರಹಗಳಿಗೆ.

  -ರಂಜಿತ್.

  ReplyDelete
 11. ನಿಮ್ಮ ಭಾವನೆ ಗೀತೆ ಯಾಗಬೇಕಾಗಿತ್ತು , ಗದ್ಯದಲ್ಲಿಯೂ ಚನ್ನಾಗಿ ಮೂಡಿದೆ

  ReplyDelete