Tuesday, February 1, 2011

ಕವಿ ಮತ್ತು ಕಾವ್ಯ

ಕವಿ ಯಾರು? ಕಾವ್ಯ ಹೇಗೆ ಜನಿಸುತ್ತದೆ? ಎಂತಹ ಕಾವ್ಯಪ್ರಯತ್ನದಿಂದ ಕಾವ್ಯ ಸಿದ್ಧಿಸುತ್ತದೆ? ಕಾವ್ಯವು ವ್ಯಕ್ತಿಯ ಶ್ರೇಷ್ಠ ಅಭಿವ್ಯಕ್ತಿಯೇ? ಎಂಬೆಲ್ಲ ಜಿಜ್ಞಾಸೆಗಳು ಏಳುವುದು ಸಹಜ. ಈ ಪ್ರಶ್ನೆಗಳ ಬಗ್ಗೆ ಆಲೋಚಿಸುತ್ತಾ ಮತ್ತು ಆ ಬಗ್ಗೆ ಅಭ್ಯಾಸ ಮಾಡುತ್ತಿರುವಾಗ ಕೆಲವು ವಿಚಾರಗಳು ತೋರಿದವು. ಅವು ಎಷ್ಟರಮಟ್ಟಿಗೆ ಮೇಲಿನ ಪ್ರಶ್ನೆಗಳಿಗೆ ಉತ್ತರ ನೀಡುತ್ತವೆ ಎಂದು ಹೇಳಲಾರೆ. ಆದರೆ ಈ ನಿಟ್ಟಿನಲ್ಲಿ ತೋರಿದ ವಿಷಯಗಳು ಆಸಕ್ತಿದಾಯಕವೆನಿಸಿ ಹಂಚಿಕೊಳ್ಳಲು ಯೋಗ್ಯವೆನಿಸಿದವು.

ಕವಿಯಾದವನಿಗೆ ಮೂರು ಮುಖ್ಯ ಗುಣಗಳು ಇರಲೇಬೇಕು ಎಂದು ನನಗೆ ಅನ್ನಿಸುತ್ತದೆ. ಅಥವಾ ಈ ಮೂರು ಗುಣಗಳಿದ್ದವನು ಕವಿಯಾಗುತ್ತನೆ ಎನ್ನಬಹುದು. ಒಂದು, ಸೂಕ್ಷ್ಮ ದೃಷ್ಟಿ, ಇನ್ನೊಂದು ತೀವ್ರ ಸ್ವರೂಪದ ಭಾವ ಸಂವೇದನೆ ಹಾಗೂ ಮತ್ತೊಂದು ಆ ಭಾವ ಮಗ್ನತೆಯಿಂದ ಬೇರೆಯಾಗಿ ನಿಲ್ಲುವ ಸಾಮರ್ಥ್ಯ. ಸಾಮಾನ್ಯರ ಕಣ್ಣಿಗೆ ಕಾಣದ ನೋಟವನ್ನು ಕವಿ ನೋಡುತ್ತಾನೆ. ಹಾಗೂ ಈ ಸೂಕ್ಷ್ಮ ದೃಷ್ಟಿಯ ಕಾರಣದಿಂದಲೇ ನಮಗೆಲ್ಲ ತೀರ ಸಾಧಾರಣ ಎಂದು ತೋರುವ ಘಟನೆಗಳು ಕವಿಯಾದವನಲ್ಲಿ ತೀವ್ರ ಸ್ವರೂಪದ ಭಾವ ಸಂವೇದನೆಯನ್ನು ಹುಟ್ಟಿಸುತ್ತವೆ. ತನ್ನ ಸಂಗಾತಿಯನ್ನು ಕಳೆದುಕೊಂಡ ಪಕ್ಷಿಯೊಂದರ ವೇದನೆಯ ಕೂಗು, ವಾಲ್ಮೀಕಿಯಲ್ಲಿ ರಾಮಾಯಣದಂತಹ ಮಹಾಕಾವ್ಯವನ್ನೇ ಹುಟ್ಟಿಸುತ್ತದೆ. ಅಂದರೆ ಕವಿಗೆ ಒಂದು ಘಟನೆಯನ್ನು ಸೂಕ್ಷ್ಮವಾಗಿ ನೋಡುವ ದೃಷ್ಟಿಯ ಜೊತೆಗೆ ನೋಡಿದ ಘಟನೆಗೆ ಸ್ಪಂದಿಸುವ ಮತ್ತು ಅನುಭವಿಸುವ ಗುಣವೂ ಬೇಕು. ಆದರೆ, ಭಾವನೆ ಕೆರಳಿದ ಮಾತ್ರಕ್ಕೆ ಕಾವ್ಯದ ಜನನವಾಗುವುದಿಲ್ಲ. ಆ ಭಾವ ಮಗ್ನತೆಯಿಂದ ಹೊರಬಂದು, ಅದನ್ನು ಸಾಕ್ಷಿಯಾಗಿ ನೋಡುವ ಗುಣ ಕೂಡ ಕವಿಯಲ್ಲಿರಬೇಕು. ಇಲ್ಲದಿದ್ದಲ್ಲಿ ಕವಿಯಲ್ಲಿ ಉದಯಿಸಿದ ಕಾವ್ಯ ಪ್ರಕಟಗೋಳ್ಳುವುದೇ ಇಲ್ಲ. ಕವಿಯ ಮನದಲ್ಲಿ ಉದಿಸಿದ ಭಾವವು ಅಭಿವ್ಯಕ್ತಿಗೊಂಡಾಗ ಮಾತ್ರ ಕಾವ್ಯದ ಸ್ವರೂಪ ಪಡೆದುಕೊಳ್ಳುತ್ತದೆ. ಅಂದರೆ ಕಾವ್ಯವು ತೀವ್ರ ಭಾವಸಂವೇದನೆ ಮತ್ತು ಆ ಭಾವ ನಿಮಗ್ನತೆಯಿಂದ ಹೊರಗೆ ಬರುವ ಗುಣಗಳ ಘರ್ಷಣೆಯಿಂದ ಜನಿಸುತ್ತದೆ. ಬೇಂದ್ರೆಯವರು, ಕವಿಯಲ್ಲಿ ಕಾವ್ಯ ಉದಿಸಿದಾಗ ಹೆರಿಗೆ ಬೇನೆಯಂತಹ ನೋವಿನ ಅನುಭವವಾಗುತ್ತದೆ ಎನ್ನುತ್ತಾರೆ. ಬಹುಶಃ ಆ ನೋವು ಕವಿಯಲ್ಲಿನ ಈ ಎರಡು ವಿರುದ್ಧ ಗುಣಗಳ ಘರ್ಷಣೆಯಿಂದ ಉಂಟಾಗುತ್ತದೆಯೇನೋ.

ಕಾವ್ಯವು ಭಾಷೆಯ ಮೂಲಕ ಮಾತ್ರ ಮೂಡಿಬರುವ ಕಲೆ. ಆದುದರಿಂದ ಕವಿಗೆ ಭಾಷೆಯ ಮೇಲೆ ಆಳವಾದ ಜ್ಞಾನವಿರಲೇಬೇಕು. ಕಾವ್ಯದಲ್ಲಿ ಪದ ಮತ್ತು ಅರ್ಥಗಳಿಗೆ ಸಮಾನ ಪ್ರಾಮುಖ್ಯತೆ ಇದೆ. ಕಾಳಿದಾಸನು ಹೇಳುವಂತೆ, ’ವಾಗರ್ಥಾವಿವ ಸಂಪ್ರಕ್ತೌ ವಾಗರ್ಥಪ್ರತಿಪತ್ತಯೇ| ಜಗತಃ ಪಿತರೌ ವಂದೇ ಪಾರ್ವತೀ ಪರಮೇಶ್ವರೌ|| ಅಂದರೆ ಮಾತು ಮತ್ತು ಅರ್ಥಗಳು ಪಾರ್ವತಿ ಪರಮೇಶ್ವರಂತೆ ಬೇರ್ಪಡಿಸಲು ಸಾಧ್ಯವಾಗದ ಹಾಗೆ ಸೇರಿಕೊಂಡಿವೆ. ಆದುದರಿಂದ ಕವಿಯು ತನ್ನ ಪದಪ್ರಯೋಗಗಳಲ್ಲಿ ಅತ್ಯಂತ ಜಾಣ್ಮೆಯನ್ನು ಹಾಗೂ ಸಮಯೋಚಿತತೆಯನ್ನೂ ತೋರಿಸಬೇಕು. ತನ್ನ ನಿರಂತರ ಕಾವ್ಯ ಪ್ರಯತ್ನದಿಂದ ಲಭಿಸಿದ ಶೈಲಿಯಿಂದ ಓದುಗನಿಗೆ ಕಾವ್ಯ ರುಚಿಸುವಂತೆ ಮಾಡಬೇಕು. ಅಲ್ಲದೇ ಕವಿಗೆ, ತನ್ನಲ್ಲಿ ಹುಟ್ಟಿದ ಭಾವ ಮತ್ತು ತಾನು ಅದರಿಂದ ಅನುಭವಿಸಿದ ಆನಂದವನ್ನು ಸಹೃದಯನಾದವನಿಗೂ ಅನುಭವವಾಗುವಂತೆ ಕಾವ್ಯರಚನೆ ಸಾಧ್ಯವಾಗಬೇಕು. ಹೀಗೆ ಪದ ಪ್ರಯೋಗಗಳಲ್ಲಿನ ಚಾಕಚಕ್ಯತೆ, ಶೈಲಿ, ಛಂದಸ್ಸು, ವಸ್ತುವಿನ ಆಯ್ಕೆ ಹಾಗೂ ಇವೆಲ್ಲವುಗಳ ಸಮಯೋಚಿತ ಬಳಕೆ, ಈ ಮುಂತಾದ ಗುಣಗಳು ನಿರಂತರ ಕಾವ್ಯ ಪ್ರಯತ್ನದಿಂದ ಮಾತ್ರ ಕವಿಗೆ ಲಭಿಸುವಂಥವುಗಳು.

ಇನ್ನು, ಕಾವ್ಯ ವ್ಯಕ್ತಿಯ ಶ್ರ‍ೇಷ್ಠ ಅಭಿವ್ಯಕ್ತಿಯೇ, ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವುದು ಕಷ್ಟ. ಇಲ್ಲಿ ಕಾವ್ಯದ ಒಂದು ಅತೀ ಮುಖ್ಯವಾದ ಗುಣವೊಂದನ್ನು ಗಮನಿಸೋಣ. ಯಾವುದೇ ಕಲೆಯೂ ಅದರ ಆಸ್ವಾದನೆಯ ಸಾಧ್ಯತೆಯಿಂದ ಮಾತ್ರ ಕಲೆ ಎನಿಸಿಕೊಳ್ಳುತ್ತದೆ. ಕಲೆಗೆ ಆಸ್ವಾದನೆಯ ಅವಕಾಶ ದೊರೆಯದಿದ್ದಲ್ಲಿ, ಅದಕ್ಕೆ ಅಸ್ತಿತ್ವವೇ ಇಲ್ಲ. ನೃತ್ಯ, ಕಾವ್ಯ ಅಥವಾ ಸಂಗೀತ, ಯಾವ ಕಲೆಯೇ ಆಗಲಿ ಅವುಗಳ ಶ್ರ‍ೇಷ್ಠತೆ, ಅವುಗಳ ಆಸ್ವಾದನೆಯಿಂದ ಉಂಟಾಗುವ ಆನಂದದ ಮೇಲೆ ನಿರ್ಭರವಾಗಿರುತ್ತದೆ. ಕಾವ್ಯವು, ನೃತ್ಯ ಮತ್ತು ಸಂಗೀತದಂತಹ ಕಲೆಗಳಿಗಿಂತ ಭಿನ್ನವಾದುದು. ಏಕೆಂದರೆ ನೃತ್ಯ ಅಥವಾ ಸಂಗೀತದಲ್ಲಿ, ಕಲಾವಿದನು ನಾಟ್ಯ ಅಥವಾ ಗಾಯನವನ್ನು ನಿಲ್ಲಿಸಿದನೆಂದರೆ ಅಲ್ಲಿಗೆ ನೃತ್ಯದ, ಸಂಗೀತದ ಹರಿವು ನಿಂತು ಹೋಗುತ್ತದೆ. ಅಂದರೆ ಸಂಗೀತ ಮತ್ತು ನೃತ್ಯದಂತಹ ಕಲೆಗಳ ಆಸ್ವಾದನೆ ಕಲಾಕಾರನ ಉಪಸ್ಥಿತಿಯಲ್ಲೇ ಆಗಬೇಕು. ಇಂತಹ ಕಲೆಗಳ ಅಸ್ತಿತ್ವ ಕಲೆಗಾರನೊಂದಿಗೆ ಆರಂಭವಾಗಿ ಅವನಲ್ಲಿಯೇ ಮುಕ್ತಾಯಗೊಳ್ಳುವಂಥದ್ದು. ಆದರೆ ಕಾವ್ಯದ ವಿಷಯದಲ್ಲಿ ಹಾಗಲ್ಲ. ಕಾವ್ಯದ ಆಸ್ವಾದನೆ ಕವಿಯ ಮೇಲೆ ಅವಲಂಬಿತವಾಗಿಲ್ಲ. ಕಾವ್ಯವೊಂದು ಜನಿಸಿದ ಮೇಲೆ ಅದು ಸ್ವತಂತ್ರ. ಅದರ ಹರಿವಿಗೆ ಕವಿಯ ಹಂಗಿಲ್ಲ. ಮತ್ತು ಕಾವ್ಯದ ಆಸ್ವಾದನೆ ಸಾಧ್ಯವಾಗುವುದು ಎಂದೂ ಭವಿಷ್ಯತ್ತಿನಲ್ಲಿಯೇ. ಕಾವ್ಯವು ಕವಿಯಿಂದ ಬೇರ್ಪಟ್ಟ ನಂತರದಲ್ಲೇ ಕಾವ್ಯವನ್ನು ಅನುಭವಿಸಿಲು ಸಾಧ್ಯ.

ಹೀಗೆ ಕವಿಯು ಅನುಭವಿಸಿದ ಭಾವದ ಅಭಿವ್ಯಕ್ತಿಯೇ ಕಾವ್ಯ. ಅದು ಎಂದೂ ಕವಿಯಿಂದ ಬೇರ್ಪಟ್ಟದ್ದು. ಕಾವ್ಯದ ಈ ಗುಣವೇ ಅದನ್ನು ವ್ಯಕ್ತಿಯ ಶ್ರ‍ೇಷ್ಠ ಅಭಿವ್ಯಕ್ತಿಯಾಗಿಸುವಲ್ಲಿ ಅಸಮರ್ಥವಾಗಿಸುತ್ತದೆಯೇನೋ. ಇಲ್ಲಿ ಸೂಕ್ಷ್ಮವಾದ ವಿಚಾರವೊಂದಿದೆ. ನಾವು ನಾಟ್ಯದ ಅಧಿದೇವತೆ ನಟರಾಜನನ್ನು ಅಥವಾ ವೀಣೆನುಡಿಸುತ್ತಿರುವ ಶಾರದೆಯನ್ನು ಉಪಾಸಿಸುತ್ತೇವೆ. ಆದರೆ ಕಾವ್ಯವನ್ನು ಬರೆಯುತ್ತಿರುವ ಯಾವ ದೇವನನ್ನೂ ನಾವು ಪೂಜಿಸುವುದಿಲ್ಲ, ನಮ್ಮ ಶಾಸ್ತ್ರಗಳಲ್ಲಿ ಹೇಳೀಯೂ ಇಲ್ಲ. ಏಕೆಂದರೆ ಕಲೆ ಮತ್ತು ಕಲಾಕಾರ ಒಟ್ಟಿಗೆ ಅಸ್ತಿತ್ವದಲ್ಲಿ ಇರುವ ಕಲೆಯನ್ನು ಮಾತ್ರ ನಾವು ಶ್ರ‍ೇಷ್ಟ ಕಲೆಯಾಗಿ ಪರಿಗಣಿಸಿ ದೈವತ್ವಕ್ಕೆ ಏರಿಸಿದ್ದೇವೆ. ಏಕೆಂದರೆ ಇಂತಹ ಕಲೆಗಳು ಸೃಷ್ಟಿ ಮತ್ತು ಸೃಷ್ಟಿಕರ್ತರ ಸಂಬಂಧದ ಹಾಗೆ. ಸೃಷ್ಟಿ ಮತ್ತು ಸೃಷ್ಟಿಕರ್ತ, ಎರಡೂ ಒಟ್ಟಿಗೆ ಅಸ್ತಿತ್ವದಲ್ಲಿರುವಂಥವು. ಅವನ್ನು ಬೇರ್ಪಡಿಸಲು ಅಸಾಧ್ಯ. ಅಂತೆಯೇ ವ್ಯಕ್ತಿಯಿಂದ ಬೇರ್ಪಡಿಸಲಾರದಂತಹ ಅಭಿವ್ಯಕ್ತಿ ಮಾತ್ರ ಎಂದಿಗೂ ಶ್ರ‍ೇಷ್ಟವಾದುದಾಗಿ ಪರಿಗಣಿಸಲಾಗುತ್ತದೆ. ಆದರೆ ಅನುಭಾವ ಕಾವ್ಯಗಳು ಮಾತ್ರ ಇದಕ್ಕೆ ಹೊರತಾದವು. ಏಕೆಂದರೆ ಅವು ಸಿದ್ಧ ಸಂತರ ಸಮೃದ್ಧ ಜೀವನದ ಅಭಿವ್ಯಕ್ತಿಗಳು. ಮತ್ತು ಅನುಭಾವಿಯ ಅನುಪಮ ಆನಂದದಿಂದ ಜನ್ಮ ಪಡೆದವುಗಳು. ಅನುಭಾವಿಗಳ ಅತೀವ ಕಾರುಣ್ಯದಿಂದ ಅವರ ಉಕ್ತಿಗಳು ಕಾವ್ಯವಾಗಿ ಮಾರ್ಪಾಡು ಹೊಂದಿದವೇ ಹೊರತು ಕಾವ್ಯ ರಚನೆಯ ಯಾವ ಉದ್ದೇಶದಿಂದಲೂ ಅಲ್ಲ. ಅಂದ ಮಾತ್ರಕ್ಕೆ ಅನುಭಾವವಲ್ಲದ ಕಾವ್ಯಗಳಿಂದ ಪ್ರಯೋಜನವಿಲ್ಲವೆಂದಲ್ಲ. ಮನಸಿಗೆ ಆನಂದ ತರುವ ಎಲ್ಲ ಕಾವ್ಯಗಳೂ ಮತ್ತು ಅವುಗಳ ಕರ್ತರೂ ಎಂದಿಗೂ ಅತ್ಯಂತ ಆದರಣೀಯರು.

ಹೀಗೆ ಮೇಲೆ ಚರ್ಚಿಸಿದ ವಿಚಾರಗಳು ಎನೇ ಇದ್ದರೂ, ಇವು ಕವಿ ಅಲ್ಲದವರ ಯೋಚನೆಗಳು! ಇವು ಎಷ್ಟರಮಟ್ಟಿಗೆ ಸತ್ಯ ಎನ್ನುವುದು ಕವಿಯಾದವನಿಗೆ ಮಾತ್ರ ಅರಿವಾಗುವಂಥದ್ದು. ಆದರೆ ಕವಿಯಾದವನು ತನ್ನ ಕವಿತ್ವದ ಬಗ್ಗೆ, ಕಾವ್ಯ ಕರ್ಮದ ಬಗ್ಗೆ ಇಷ್ಟೆಲ್ಲಾ ಗಹನವಾಗಿ ಆಲೋಚಿಸುತ್ತಾನೋ ಇಲ್ಲವೋ ತಿಳಿಯದು. ಮತ್ತು ಇದನ್ನೆಲ್ಲ ಯೋಚಿಸುವುದು ಕವಿಯಾದವನಿಗೆ ಯಾವ ಪ್ರಯೋಜನವನ್ನು ನೀಡೀತು? ಆದರೆ ಕವಿಗಳಲ್ಲದ ನಮಗೆ, ಹೃದಯವನ್ನು ಮುದಗೊಳಿಸುವ, ಮನ ರಂಜಿಸುವ ಕಾವ್ಯಗಳನ್ನು ಓದಿದಾಗ, ಕಾವ್ಯ ಮತ್ತು ಕವಿಯ ಬಗ್ಗೆ ಇಂತಹ ಜಿಜ್ಞಾಸೆಗಳು ಮತ್ತು ಆಲೋಚನೆಗಳು ಹುಟ್ಟುವುದಂತೂ ನಿಜ.

5 comments:

  1. ಕವಿ ಮತ್ತು ಕಾವ್ಯ ಇದರ ಸ೦ಬ೦ದವನ್ನು ಸೂಕ್ಷ್ಮವಾಗಿ ವಿವರಿಸಿದ್ದೀರಿ.. ನನಗೂ ಹೌದಾಗೆ ಕಾಣುತ್ತಿದೆ.. ಸು೦ದರ ಬರಹಕ್ಕೆ ಅಭಿನ೦ದನೆಗಳು.

    ReplyDelete
  2. ತುಂಬಾ ಸುಂದರವಾಗಿ ಕವಿ ಮತ್ತು ಕವಿತೆಯ ಬಗೆಗೆ ಹೇಳಿದ್ದಿರಿ,
    ನಮ್ಮಲ್ಲಿ ಎಷ್ಟು ಜನರಿಗೆ ಈ ಗುಣಗಳಿವೆ?
    ಒಳ್ಳೆಯ ಬರಹ

    ReplyDelete
  3. ಗೋದಾವರಿಯವರೆ,
    ದೀರ್ಘ ಕಾಲದ ಬಳಿಕ ಬೆಳದಿಂಗಳು ಮತ್ತೆ ಪಸರಿಸಿತು! ಕವಿ ಮತ್ತು ಕಾವ್ಯದ ಬಗೆಗೆ ಉತ್ತಮ ಜಿಜ್ಞಾಸೆ ಮಾಡಿದ್ದೀರಿ. ಧನ್ಯವಾದಗಳು.

    ReplyDelete
  4. ಗೋದಾವರಿ ಮೇಡಮ್,
    ಇದು ಹೊಸದಾಗಿ ಬರೆಯುವ ನನ್ನಂಥವರಿಗೆ ತುಂಬಾ ಉಪಯುಕ್ತ ಲೇಖನವೆನೆಸಿತು. ಕೆಲವು ಸೂಕ್ಷ್ಮಗಳನ್ನು ತಿಳಿಸಿದ್ದೀರಿ..ಧನ್ಯವಾದಗಳು.

    ReplyDelete
  5. ಚುಕ್ಕಿ ಚಿತ್ತಾರ, ಗುರುಮೂರ್ತಿ, ಸುನಾಥ ಮತ್ತು ಶಿವು ಅವರೇ,

    ಧನ್ಯವಾದಗಳು.

    -
    ಗೋದಾವರಿ

    ReplyDelete