'ಸ್ವ ಸಹಾಯ ಪುಸ್ತಕ', ಎನ್ನುವ ಶಬ್ದವೇ ಅಷ್ಟು ಸರಿಯಾದದ್ದಲ್ಲ ಎಂದು ನನಗನ್ನಿಸುತ್ತದೆ. ಒಂದು ಪುಸ್ತಕದ ಸಹಾಯ ಹೇಗೆ ಸ್ವ ಸಹಾಯವಾಗಲು ಸಾಧ್ಯ? ಪುಸ್ತಕಗಳು ನಮ್ಮಲ್ಲಿನ ಸ್ವ ಸಹಾಯ ಗುಣವನ್ನು ಸಕ್ರಿಯ ಗೊಳಿಸಲು ಸಹಾಯ ಮಾಡಬಹುದು ಅಷ್ಟೇ. ಇನ್ನು ಭಾಷೆ ಕಲಿಯಲು, ಅಡಿಗೆ ಮಾಡಲು ಸಹಾಯ ಮಾಡುವ ಪುಸ್ತಕಗಳನ್ನು ಸ್ವಸಹಾಯ ಪುಸ್ತಕ ಎಂದು ಕರಿಯಬಹುದೇನೋ. ಮತ್ತು ಅಂಥವು ಮಾತ್ರ ಪ್ರಯೋಜನಕಾರಿ ಎಂದು ಅನ್ನಿಸುತ್ತದೆ. ಕೆಲವು ಪ್ರಸಿದ್ದ ಸ್ವಸಹಾಯ ಪುಸ್ತಕಗಳೆಂದು ಹೇಳಲಾಗುವ How to Win Friends & Influence People , The One Minute Manager ಅಥವಾ The 7 Habits of Highly Effective People ಇಂತಹ ಪುಸ್ತಕಗಳು ನನಗೆ ಯಾವರೀತಿಯಲ್ಲೂ ಪ್ರಯೋಜನಕಾರಿಎಂದು ಅನ್ನಿಸುವುದಿಲ್ಲ. ಇನ್ನು 'The secret' ,'The magic of believing', 'Magic of thinking big', 'Power of positive thinking' ಇಂತಹ ಪುಸ್ತಕಗಳು ತುಂಬಾ ಒಳ್ಳೆಯ ಮಾಹಿತಿ ಕೊಡುವಂಥವುಗಳಾದರೂ ಒಬ್ಬ ವ್ಯಕ್ತಿಯ ಜೀವನದ ಮೇಲೆ ಪ್ರಭಾವ ಬೀರುವ ಗ್ರಂಥಗಳಾಗಿ ನನಗೆ ತೋರುವುದಿಲ್ಲ. ಇದು ನನ್ನ ವಯಕ್ತಿಕ ಅಭಿಪ್ರಾಯ.
ಬಹುಪಾಲು ಸ್ವಸಹಾಯ ಪುಸ್ತಕಗಳು ಜೀವನವನ್ನು ಹೀಗೆ ಸಾಫಲ್ಯ ಗೊಳಿಸಿಕೊಳ್ಳಬಹುದು ಎನ್ನುವುದರ ಬಗ್ಗೆ ಬರೆದವುಗಳಾಗಿವೆ. ಮತ್ತು ಅವುಗಳಲ್ಲಿನ ವಿಧಾನಗಳನ್ನು ಅನುಸರಿಸಿದರೆ ಸಫಲತೆ ಖಂಡಿತ ಎಂದು ಪ್ರತಿಪಾದಿಸಲಾಗಿರುತ್ತದೆ. ಅಲ್ಲದೆ ಅದನ್ನು ಅನುಸರಿಸಿದ ಸಾವಿರಾರು ಜನರ ಉದಾಹರಣೆಗಳನ್ನು ಕೊಟ್ಟಿರುತ್ತಾರೆ. ಆದರೆ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಗುರಿ, ಉದ್ದೇಶ ಎಲ್ಲವೂ ಭಿನ್ನ. ಆದುದರಿಂದ ಜೀವನದ ಸಾಫಲ್ಯದ ಕಲ್ಪನೆಯೂ ಭಿನ್ನವಾಗಿರುವುದು ಸಹಜ. ಹೀಗಿರುವಾಗ ಹೇಗೆ ಒಂದು ಪುಸ್ತಕದಲ್ಲಿನ ವಿಧಾನಗಳು ಸಹಾಯಕಾರಿ ಆಗಲು ಸಾಧ್ಯ? ನನಗನ್ನಿಸುವಂತೆ ನಮ್ಮಲ್ಲರಿಗಿರುವ ಮೂಲ ತೊಂದರೆ ನಮಗೆ ಏನು ಎಂದರೆ ನಮಗೆ ನಮ್ಮ ಜೀವನದ ಗುರಿ ಅಥವಾ ನಮಗೆ ಸಂತೋಷ ನೀಡುವ ವಿಷಯಗಳಾವವು ಎನ್ನುವ ಅರಿವು ಇಲ್ಲದಿರುವುದು. ನಾವು ನಮಗೆ ಹಿಡಿಸದ ಯಾವುದೋ ಕೆಲಸವನ್ನು ಮಾಡುತ್ತಿರುತ್ತೇವೆ. ಆ ಕೆಲಸದ ಉದ್ದೇಶವೂ ನಮಗೆ ತಿಳಿದಿರುವುದಿಲ್ಲ. ಇದಕ್ಕೆ ನಮ್ಮ ಸುತ್ತಲಿನ ಸಮಾಜ, ನಮ್ಮನ್ನು ನಮ್ಮ ಕುಟುಂಬ ಬೆಳೆಸಿದ ಪರಿ ಎಲ್ಲವೂ ಕಾರಣ. ನಮ್ಮ ಸಮಾಜದಲ್ಲಿ ತೀರ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಅವರಿಗೆ ಏನು ಆನಂದ ತರುತ್ತದೆ ಎಂಬುದರ ತಿಳುವಳಿಕೆ ಇರುತ್ತದೆ ಮತ್ತು ಅದನ್ನೇ ಅನುಸರಿಸುವ ಎದೆಗಾರಿಕೆ ಇರುತ್ತದೆ. ಮತ್ತು ಅಂಥವರ ಜೀವನ ನಮಗೆ ಸಫಲವಾಗಿ ತೋರುತ್ತದೆ. ಆದರೆ ಅವರು ಯಾರೂ ಇಂತಹ ಸ್ವಸಾಯ ಪುಸ್ತಕಗಳನ್ನು ಓದಿದವರಾಗಿ ನನಗೆ ಗೊತ್ತಿಲ್ಲ. ಜೀವನದ ಸಾಫಲ್ಯಕ್ಕೆ ಯಾವ ವಿಧಾನ ಅಥವಾ ಸಲಕರಣೆಗಳು ಬೇಕಾಗಿಲ್ಲ. ಅದಕ್ಕೆ ಬೇಕಾಗಿರುವುದು ನಮಗೆ ಯಾವುದು ಆನಂದ ತರುತ್ತದೆ ಎನ್ನುವುದರ ಅರಿವು. ಒಮ್ಮೆ ಅದನ್ನು ಅನುಸರಿಸಲು ಪ್ರಾರಂಭಿಸಿದರೆ ಮತ್ಯಾವ ಸಹಾಯದ ಅವಶ್ಯಕತೆಯೂ ಇರುವುದಿಲ್ಲ. ಆ ಆನಂದ ಮತ್ತು ನಾವು ಮಾಡುತ್ತಿರುವ ಕೆಲಸದ ಮೇಲಿನ ಪ್ರೀತಿ ಉಳಿದದ್ದನ್ನು ನೋಡಿಕೊಳ್ಳುತ್ತದೆ. ಆದರೆ ಯಾವ ಸ್ವಸಹಾಯ ಪುಸ್ತಕವೂ ನಮ್ಮಲ್ಲಿ ಆನಂದ ತರುವ ವಿಷಯಗಳ ಬಗ್ಗೆ ಹೇಳುವುದಿಲ್ಲ. ಮತ್ತು ಅದನ್ನು ಕಂಡುಕೊಳ್ಳುವ ಬಗ್ಗೆಯೂ ಹೇಳುವುದಿಲ್ಲ. ಮತ್ತು ಅದನ್ನು ಹೇಳಿಕೊಡಲೂ ಸಾಧ್ಯವಿಲ್ಲವೇನೋ.
ಉದಾಹರಣೆಗೆ Norman Vincent Peale ಬರೆದ Power of Positive Thinking ಎನ್ನುವ ಪುಸ್ತಕವೊಂದಿದೆ. ಪೀಲೆ ಆ ಪುಸ್ತಕದಲ್ಲಿ ಧನಾತ್ಮಕ ಯೋಚನೆಗಳ ಪ್ರಭಾವ ಮತ್ತು ಅವುಗಳ ಪ್ರಯೋಜನಗಳ ಬಗ್ಗೆ ಬಹಳ ವಿವರವಾಗಿ ಮತ್ತು ಸುಂದರವಾಗಿ ಬರೆದಿದ್ದಾನೆ. ಹೀಗೆ ಧನಾತ್ಮಕ ಯೋಚನೆಗಳ ಬಗ್ಗೆ ಇನ್ನು ಹಲವು ಪುಸ್ತಕ ಸರಣಿಗಳನ್ನೇ ಪೀಲೆ ಬರೆದಿದ್ದಾನೆ. ಹೆಚ್ಚು ಹೆಚ್ಚು ಧನಾತ್ಮಕ ಯೋಚನೆಗಳನ್ನು ನಾವು ಮಾಡಿದಷ್ಟು ನಮ್ಮ ಸುತ್ತಲೂ ಧನಾತ್ಮಕ ಘಟನೆಗಳು ಘಟಿಸಲು ಆರಂಭಿಸುತ್ತವೆ ಎಂದು ಪೀಲೆ ಆ ಪುಸ್ತಕಗಳಲ್ಲಿ ಬರೆದಿದ್ದಾನೆ. ನಾನು ಚಿಕ್ಕವಳಿದ್ದಾಗ ಆ ಪುಸ್ತಕಗಳು ಬಹಳ ಪರಿಣಾಮಕಾರಿಯಾಗಿ ಅನ್ನಿಸಿತ್ತು. ಅದರಲ್ಲಿ ಹೇಳಿರುವ ವಿಧಾನಗಳನ್ನು ಅನುಸರಿಸುವ ಪ್ರಯತ್ನವನ್ನೂ ಮಾಡಿದ್ದರೂ, ಆ ಪುಸ್ತಕಗಳನ್ನು ಓದಿ ಸ್ವಲ್ಪ ದಿನಗಳಲ್ಲೇ ಆ ಪುಸ್ತಕಗಳ ಪ್ರಭಾವ ಮತ್ತು ಆಸಕ್ತಿ ಎರಡೂ ಇಳಿದುಹೋಯಿತು. ಇದಕ್ಕೆ ಕಾರಣ ಆ ಧನಾತ್ಮಕ ಯೋಚನೆಗಳು ಪರಿಣಾಮಕಾರಿ ಆಗಿಲ್ಲವೆಂದಲ್ಲ. ಅದಕ್ಕೆ ಕಾರಣವನ್ನು ಹೀಗೆ ವಿವರಿಸಬಹುದೇನೋ. ಒಬ್ಬ ವ್ಯಕ್ತಿ ಶ್ರೀಮಂತನಾದಂತೆ ಧನಾತ್ಮಕ ವಿಚಾರಗಳನ್ನು ಮಾಡುವ ಪ್ರಯತ್ನವನ್ನು ಮಾಡುತ್ತಿರುತ್ತಾನೆ. ಆದರೆ ಅವನಿಗೆ ಆಸಕ್ತಿ ಇರುವುದು ಸಂಗೀತದಲ್ಲಾದರೆ ಅವನು ಹಣದ ಬಗ್ಗೆ ಧನಾತ್ಮಕ ಯೋಚನೆಗಳನ್ನು ತಲೆಯಲ್ಲಿ ಎಷ್ಟು ತುಂಬಿಕೊಂಡರೂ ಅದು ಘಟಿಸುವುದಿಲ್ಲ. ಮತ್ತು ಅವನಲ್ಲಿ ತನ್ನ ಆಸಕ್ತಿಯ ಬಗ್ಗೆ ಅರಿವು ಮೂಡಿತೆಂದರೆ ಅವನು ಅದನ್ನು ಸಾಧಿಸಲು ಯಾವ ರೀತಿಯ ಪುಸ್ತಕಗಳನ್ನೂ ಓದಬೇಕಾಗಿಲ್ಲ. ಸಂಗೀತದ ಮೇಲಿರುವ ಅವನ ಪ್ರೀತಿ ಎಲ್ಲವನ್ನೂ ಅವನಿಂದ ಸಾಧ್ಯ ಮಾಡಿಸುತ್ತದೆ. ಇದರರ್ಥ ಇಂತಹ ಸ್ವಸಹಾಯ ಪುಸ್ತಕಗಳಲ್ಲಿನ ಮಾಹಿತಿ ತಪ್ಪೆಂದಲ್ಲ. ಆದರೆ ಅವು ಪ್ರಯೋಜನಕಾರಿಯಗಿಲ್ಲ. ಇನ್ನು ಭಗವದ್ಗೀತೆ ಮತ್ತು ಬೈಬಲ್ ಅಂತಹ ಗ್ರಂಥಗಳನ್ನು ನಾವು ತೀರ ಉನ್ನತ ಸ್ಥಾನದಲ್ಲಿಟ್ಟಿದ್ದೇವೆ. ಇವು ಆಂತರ್ಯದತ್ತ ಒಲವಿರುವವರ ಅಧ್ಯಯನ ಮತ್ತು ಆಚರಣೆಗೆ ಸಂಬಂಧಿಸಿದವುಗಳು. ಇವುಗಳನ್ನು ಸ್ವಸಹಾಯ ಪುಸಕಗಳೆಂದು ಪರಿಗಣಿಸುವುದು ತೀರ ಅಸಮಂಜಸ ಎನ್ನಿಸುತ್ತದೆ.
ಆದುದರಿಂದ ಜೀವನದ ಸಾಫಲ್ಯಕ್ಕೆ ಮತ್ತು ಆನಂದಕ್ಕೆ ಯಾವ ಸ್ವಸಹಾಯ ಪುಸ್ತಕದ ಅವಶ್ಯಕತೆ ಇಲ್ಲ. ನಮಲ್ಲಿ ಆನಂದ ತರುವ ಮತ್ತು ನಾವು ಪ್ರೀತಿಸುವ ಮಾರ್ಗವೊಂದರ ಅರಿವಿದ್ದರೆ ಸಾಕು. ಉಳಿದದ್ದು ತನಗೆ ತಾನೇ ಘಟಿಸುತ್ತದೆ. ಅದರ ಅರಿವಿಲ್ಲದಿದ್ದರೆ ಯಾವ ಸ್ವಸಹಾಯ ಪುಸ್ತಕವೂ ಜೀವನದಲ್ಲಿ ಯಾವ ಬದಲಾವಣೆಯನ್ನೂ ತರುವುದಿಲ್ಲ. ಆದುದರಿಂದ ಸ್ವಸಹಾಯ ಪುಸ್ತಕಗಳಿಗಿಂತ ಒಳವಿಮರ್ಶೆ ಮುಖ್ಯ ಎಂದು ನನಗೆ ಅನ್ನಿಸುತ್ತದೆ.