Thursday, September 24, 2009

ಕನ್ನಡ ಸಾಹಿತ್ಯದಲ್ಲಿ ಅನುಭಾವ-೧

ಅನುಭಾವ ಎಂಬ ಶಬ್ದಕ್ಕೆ ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟವಾದ ಅರ್ಥ ಬೆಳೆದು ಬಂದಿದೆ. ಸಂಸ್ಕೃತದ ಅಲಂಕಾರ ಗ್ರಂಥಗಳಲ್ಲಿ ಬರುವ 'ಭಾವ' , 'ವಿಭಾವ', 'ಅನುಭಾವ' ಮುಂತಾದ ಶಬ್ದಗಳು ಕನ್ನಡದ ಈ ಶಬ್ದಕ್ಕೆ ಮೂಲವಾದರೂ, ಕನ್ನಡದಲ್ಲಿ ಅನುಭಾವ ಶಬ್ದ ಇವೆಲ್ಲಕ್ಕಿಂತ ತೀರ ಭಿನ್ನವಾದ ಮತ್ತು ಮಹತ್ವಪೂರ್ಣ ಅರ್ಥ ಪಡೆದುಕೊಂಡಿದೆ. ಅನುಭಾವ ಶಬ್ದಕ್ಕೆ ಸಂಸ್ಕೃತದಲ್ಲಿ ಗ್ರಹಿಕೆ ಎಂಬ ಅರ್ಥವಿದೆ ಅಷ್ಟೇ. ಮತ್ತು ಆ ಶಬ್ದದ ಪ್ರಯೋಗವನ್ನು ಸಾಹಿತ್ಯದಲ್ಲಿ ವ್ಯಾಪಕವಾಗಿ ಎಲ್ಲೂ ಮಾಡಲಾಗಿಲ್ಲ ಕೂಡ. ಆದರೆ ಕನ್ನಡ ಸಾಹಿತ್ಯದಲ್ಲಿ ಅನುಭಾವ, ಸಾಹಿತ್ಯದ ಒಂದು ಪ್ರಾಕಾರವಾಗಿಯೇ ರೂಪುಗೊಂಡುಬಿಟ್ಟಿದೆ. ಸಾಮಾನ್ಯವಾಗಿ, ಯಾವುದೇ ಭಾಷೆಯಲ್ಲಿನ ಶಬ್ದಗಳು ಮತ್ತು ಅವುಗಳಿಂದ ಸ್ಫುರಣಗೊಳ್ಳುವ ಅರ್ಥ ಎರಡೂ ಆಡುಭಾಷೆಯಿಂದ ಆ ಭಾಷೆಯ ಗ್ರಂಥ ಲೇಖನ ಕ್ರಮ ಅಥವಾ ಸಾಹಿತ್ಯಕ್ಕೆ ಸೇರಿಹೋಗುತ್ತವೆ. ಆದರೆ ಕೆಲವೇ ಶಬ್ದಗಳು ಸಾಹಿತ್ಯದಿಂದ ದಿನನಿತ್ಯದ ಭಾಷೆಗೆ ಸೆರ್ಪಡೆಯಾಗುತ್ತವೆ. ಹೀಗೆ ಅನುಭಾವ ಶಬ್ದಕ್ಕೆ ಒಂದು ಮಹತ್ವಪೂರ್ಣವಾದ ಅರ್ಥವೊಂದು ಕನ್ನಡ ಸಾಹಿತ್ಯದಿಂದ ಬೆಳೆದುಬಂದಿದೆ. "ಅನುಭಾವವೆಂಬುದು ಆತ್ಮವಿದ್ಯೆ, ಅನುಭಾವವೆಂಬುದು ನಿಜನಿವಾಸದಲ್ಲಿರಿಸುವುದು." ಎಂಬ ಶಿವಶರಣರ ಮಾತುಗಳಿಂದ ಅನುಭಾವ ಶಬ್ದದ ಅರ್ಥ ಕಲ್ಪನೆಯನ್ನು ಮಾಡಿಕೊಳ್ಳಬಹುದು. ತಮ್ಮ ಅರಿವಿನಿಂದ ಮತ್ತು ಆಚರಣೆಯಿಂದ ಪಡೆದ ಅನುಭವವನ್ನು ಶಿವಶರಣರು ಅನುಭಾವ ಎಂದು ಕರೆದರು. ಹೀಗೆ ಅನುಭಾವ ಶಬ್ದವನ್ನು ತಮ್ಮ ನುಡಿಗಳಲ್ಲಿ ವಚನಗಳಲ್ಲಿ ವ್ಯಾಪಕವಾಗಿ ಬಳಸಿದ್ದು ಮಾನವ ಜೀವನದ ಮಹೋದ್ದೇಶವನ್ನೇ ಒಳಗೊಳ್ಳಬಲ್ಲ ವಿಶಾಲ ಅರ್ಥದಿಂದ ಅದನ್ನು ಶ್ರೀಮಂತಗೊಳಿಸಿದ್ದಾರೆ.


ಕನ್ನಡದ ಸಾಹಿತ್ಯದ ಇತಿಹಾಸವನ್ನು ಗಮನಿಸಿದಾಗ ಅನುಭಾವ ಸಾಹಿತ್ಯ ಕನ್ನಡದಲ್ಲಿ ಜೈನಸಾಹಿತ್ಯದೊಂದಿಗೆ ಆರಂಭವಾಯಿತು ಎನ್ನಬಹುದು. ಆದರೂ ಜೈನ ಸಾಹಿತ್ಯಕ್ಕೆ ರಾಜಾಶ್ರಯದೊರೆತ ಕಾರಣದಿಂದಾಗಿ ಅಲ್ಲಿ ಅನುಭಾವದ ಅಂಶ ಅಷ್ಟಾಗಿ ತೋರದೆ ಸಾಹಿತ್ಯಿಕ ಅಂಶಗಳೇ ಹೆಚ್ಚಾಗಿ ಕಾಣಬರುತ್ತವೆ ಎಂದು ನನಗನ್ನಿಸುತ್ತದೆ. ಏಕೆಂದರೆ ಸಾಹಿತ್ಯ ರಚನೆ ಮತ್ತು ಅನುಭಾವ ಸಾಹಿತ್ಯದ ಉದ್ದೇಶಗಳು ಬೇರೆ ಬೇರೆ. ಸಾಹಿತ್ಯವೆಂದರೆ, ಒಂದು ಸಾಮಾನ್ಯ ಅರ್ಥದಲ್ಲಿ, ಅದು ಭಾವನಿಷ್ಠವಾದ, ಮನೋಲ್ಲಾಸಗೊಳಿಸುವ ಮತ್ತು ಸ್ವಲ್ಪ ಮಟ್ಟಿಗೆ ನೀತಿ ಸಾರುವ ಬರವಣಿಗೆ. ಆದರೆ, ಅನುಭಾವ ಸಾಹಿತ್ಯದ ರಸ, ಕೇವಲ ಬುದ್ದಿ ಮತ್ತು ಮನಸ್ಸನ್ನು ಮಾತ್ರ ತೃಪ್ತಿ ಪಡಿಸುವುದಾಗಿ ಉಳಿಯುವುದಿಲ್ಲ. ಅದು ಹೃದಯವನ್ನು ಅರಳಿಸಿ ಸತ್ಯದ ಪ್ರತ್ಯಕ್ಷ ದರ್ಶನ ಪಡೆಯವ ಹಂಬಲವನ್ನೂ ಜಿಜ್ಜ್ನಾಸೆಯನ್ನೂ ತುಂಬಿಸುತ್ತದೆ. ಮತ್ತು ಅತೀ ಮುಖ್ಯವಾಗಿ ಅನುಭಾವ ಸಾಹಿತ್ಯ, ಅನುಭಾವಿಯ ಅನುಪಮ ಆನಂದದಿಂದ ಜನ್ಮ ಪಡೆದದ್ದು. ಮಾತು ಮನಗಳಿಗೆ ಮೀರಿದ್ದು. ಅದು, ನಾರದರು ತಮ್ಮ ಭಕ್ತಿಸೂತ್ರದಲ್ಲಿ ಹೇಳುವಂತೆ "ಮೂಕಂ ಸ್ವಾದನವತ್", ಮೂಕನು ರುಚಿ ನೋಡಿದಂತೆ (ಅಂದರೆ ರುಚಿಯ ಅನುಭವವನ್ನು ಅವನಿಗೆ ತಿಳಿಸಲು ಶಕ್ಯವಿಲ್ಲ). ಆದರೂ ಅನುಭಾವಿಗೆ, ತಾನು ನಡೆದ ಹಾದಿ, ತಾನು ಕಂಡ ಸತ್ಯ ಮತ್ತು ಪಡೆದ ಆ ಆನಂದವನ್ನು ಲೋಕಕಲ್ಯಾಣಕ್ಕಾಗಿ ತಿಳಿಸಲು ಅನಿವಾರ್ಯ ವಾಹಕವಾಗಿ ಸಾಹಿತ್ಯ ಅವತರಿಸುತ್ತದೆ. ಹೊರತೂ ಸಾಹಿತ್ಯರಚನೆಯೇ ಮುಖ್ಯ ಉದ್ದೇಶವಾಗಿರುವುದಿಲ್ಲ. ಆದ್ದರಿಂದ ಕನ್ನಡ ಸಾಹಿತ್ಯದಲ್ಲಿ, ಮುಖ್ಯವಾಗಿ ಹನ್ನೆರಡನೇ ಶತಮಾನದಲ್ಲಿ ಸೃಷ್ಟಿಯಾದ ಶರಣ ಸಾಹಿತ್ಯ ಮತ್ತು ಹದಿನೈದನೇ ಶತಮಾನದಲ್ಲಿ ದಾಸರು ಹಾಡಿದ ದಾಸಸಾಹಿತ್ಯ ಇವೆರಡೂ ಅನುಭಾವ ಸಾಹಿತ್ಯದಲ್ಲಿ ಪ್ರಮುಖವಾದ ಘಟ್ಟಗಳಾಗಿವೆ.

ಶರಣ ಸಾಹಿತ್ಯ
ದರ್ಶನ, ಜೀವನದ ಗುರಿ ಮುಂತಾದ ಮಾತುಗಳಿಂದ ಸಾಹಿತ್ಯ ತನ್ನ ಸ್ವರೂಪವನ್ನು ಕಳೆದುಕೊಳ್ಳುತ್ತದೆ ಎಂಬ ಅಭಿಪ್ರಾಯ ಸಹಜ. ಸಾಹಿತ್ಯದ ಮುಖ್ಯ ಲಕ್ಷಣ ಭಾವ ಮತ್ತು ಆನಂದ. ಸೌಂದರ್ಯವನ್ನು ಕಂಡಾಗ ಸಾಹಿತಿಯ ಮನ ಭಾವದಿಂದ ತುಂಬಿ ಅದನ್ನು ತಾನೇ ಆಗಿ ಅನುಭವಿಸಿ, ಆ ರಸಾನುಭವದ ಆನಂದವನ್ನು ಕಾವ್ಯದ ಮೂಲಕ ಅಭಿವ್ಯಕ್ತಗೊಳಿಸುತ್ತಾನೆ. ’ಅದು ತಾನೇ ಆಗುವ’ ತಲ್ಲೀನತೆಯೇ ಸಾಹಿತಿ ಮತ್ತು ಅನುಭಾವಿಯಲ್ಲಿರುವ ಸಮಾನ ಧರ್ಮ. ಆದರೆ ಆ ’ಅದು’ ಯಾವುದು ಎಂಬುದರ ಮೇಲೆ ’ರಸಾನುಭವ’ ಅಥವಾ ’ಅನುಭಾವ’ ಸಿದ್ದವಾಗುತ್ತದೆ. ಆ ಬಾಹ್ಯ ಸೌಂದರ್ಯದ ಹಿಂದಿರುವ ಚಿರಂತನ ಸೌಂದರ್ಯವನ್ನು ಅನುಭಾವಿ ಕಾಣುತ್ತಾನೆ. ಮತ್ತು ಆನಂದ ಶಬ್ದವನ್ನು ವಿಶಾಲ ಅರ್ಥದಲ್ಲಿ ಪರಿಗಣಿಸಿದಾಗ ಅದು ಕೇವಲ ಮನಸನ್ನು ಉದ್ದೀಪನಗೊಳಿಸುವ ಭಾವ ಮಾತ್ರವಲ್ಲದೇ ಹೃದಯವನ್ನೂ ಧನ್ಯಗೊಳಿಸುವ ಭಾವ. ಅಂತಹ ಶಕ್ತಿಯನ್ನು ಒಳಗೊಂಡಾಗಲೇ ಸಾಹಿತ್ಯ ಸಾರ್ಥಕ. ಆ ಸಾರ್ಥಕತೆಯನ್ನೇ ಶರಣಸಾಹಿತ್ಯ ಪಡೆದಿದೆ.

ಶರಣಸಾಹಿತ್ಯ ಹುಟ್ಟಿದ್ದು ಉತ್ತರ ಕರ್ನಾಟಕದ ಭಾಗದಲ್ಲಿ. ಆದ್ದರಿಂದಲೇ ಶರಣರ ವಚನಗಳಲ್ಲಿ ಉತ್ತರ ಕರ್ನಾಟಕದ ಭಾಷೆಯ ಸೊಗಡೂ ಸೇರಿಹೊಗಿದೆ. ಬಸವಣ್ಣ, ಅಲ್ಲಮ ಪ್ರಭು, ಹಾವಿನಾಳ ಕಲ್ಲಯ್ಯ, ಅಕ್ಕಮಹಾದೇವಿ, ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ ಹೀಗೆ ನೂರಾರು ಶರಣರು ವಚನಗಳ ಮೂಲಕ ಸಾಮಾನ್ಯ ಜನತೆಯಲ್ಲೂ ಆಧ್ಯಾತ್ಮವನ್ನು ಬಿತ್ತಿದರು. ಬಸವಣ್ಣನವರ ಅನುಭವ ಮಂಟಪ ಶರಣರಿಗೆ ನೆಲೆಯಾಗಿ ಶರಣ ಸಾಹಿತ್ಯಕ್ಕೆ ಕೇಂದ್ರವಾಯಿತು.

ಶರಣರು ತೆರೆದ ಕಂಗಳಿಂದ ಜೀವನವನ್ನು ನೋಡಿದವರು. ಅವರ ಅಭಿವ್ಯಕ್ತಿಯ ಪ್ರಬಲವಾದ ಸಂವಹನ ವಚನಗಳ ಮೂಲಕವಾಗಿ ನಡೆದದ್ದು. ಮತ್ತು ಆ ಸಂವಹನವು ಯಶಸ್ವಿಯಾದದ್ದು ಅವರ ವಚನಗಳ ಮಾರ್ಮಿಕತೆಯಿಂದಾಗಿ. ಸಾಹಿತಿ ವಸ್ತುವಿನ ರೂಪವನ್ನು ವರ್ಣಿಸಿದರೆ, ಅನುಭಾವಿ ವಸ್ತುವಿನ ರಹಸ್ಯ ಸ್ವರೂಪವನ್ನು ಕುರಿತು ಯೋಚಿಸುತ್ತಾನೆ. ಶರಣರಲ್ಲಿ ಈ ಶಕ್ತಿಯನ್ನು ಕಾಣುತ್ತೇವೆ. ಲೋಕದ ಘಟನೆಗಳಿಂದ ಅವರ ಮನಸ್ಸು ಕವಿಯಂತೆ ಮಿಡಿಯುತ್ತದೆ. ಆದರೆ ಅಷ್ಟರಲ್ಲೇ ಕೊನೆಗೊಳ್ಳದೇ ಅವರ ಮುಂದಿನ ಸಾಧನೆಗೂ ಪ್ರೆರಣೆಯಾಗಿದೆ. ಆದ್ದರಿಂದಲೇ ಮೋಕ್ಷ, ಸೃಷ್ಟಿ ಮುಂತಾದ ವಿವೇಚನೆಯ ಭಾರವನ್ನು ಶರಣರ ವಚನಗಳು ಸುಲಭವಾಗಿ ಹೊರಬಲ್ಲವು ಮತ್ತು ಕಾವ್ಯಸೌಂದರ್ಯವನ್ನೂ ಬೀರಬಲ್ಲವು.

ಅನಿರ್ವಚನೀಯವಾದ ತಮ್ಮ ಅನುಭವವನ್ನು ಮಾತಿನಲ್ಲಿ ಹಿಡಿದಿಡುವ ಶರಣರ ಸಾಹಸ ಕನ್ನಡ ಭಾಷೆಗೇ ಆಶ್ಚರ್ಯಕರವಾದ ಶಕ್ತಿಯನ್ನು ತಂದು ಕೊಟ್ಟಿದೆ. ಉದಾಹರಣೆಗೆ ಅಲ್ಲಮ ಪ್ರಭುವಿನ ಈ ವಚನವನ್ನೇ ನೋಡಿ.
"ಆದಿ ಅನಾದಿಯಿಲ್ಲದಂದು, ಹಮ್ಮುಬಿಮ್ಮುಗಳಿಲ್ಲದಂದು,
ಸುರಾಳ ನಿರಾಳವಿಲ್ಲದಂದು, ಶೂನ್ಯ ನಿಶ್ಯೂನ್ಯವಿಲ್ಲದಂದು
ಸಚಾರಚರವೆಲ್ಲ ರಚನೆಗೆ ಬಾರದಂದು,
ಗುಹೇಶ್ವರನೊಬ್ಬನೇ ಇದ್ದೆಯಲ್ಲ, ಇಲ್ಲದಂತೆ."
ಎಂದು ಅಲ್ಲಮಪ್ರಭುವು ಅವ್ಯಕ್ತವನ್ನು ಅತ್ಯಂತ ಸುಂದರವಾಗಿ ವರ್ಣಿಸುತ್ತಾನೆ.

"ಸಮುದ್ರದೊಳಗೆ ನೆರೆತೊರೆಗಳು ನೆಗಳ್ದವೆಂದರೆ
ಸಮುದ್ರದಿಂದನ್ಯಎಪ್ಪವೇ?
ನಿರ್ವಿಕಾರ, ನಿತ್ಯ, ನಿರಂಜನ, ನಿರ್ಗುಣ, ಪರಿಪೂರ್ಣ, ನಿರ್ವಿಕಲ್ಪ
ಪರಬ್ರಹ್ಮ ಶಿವನಿಂದನ್ಯವೆನ್ನಬಹುದೇ?"
ಸಮುದ್ರದಿಂದ ತೆರೆಗಳು ಎದ್ದರೂ ಸಮುದ್ರದಿಂದ ಭಿನ್ನ, ಅನ್ಯ ಎನ್ನಬಹುದೇ? ಹೀಗೆಯೇ ಸೃಷ್ಟಿಕರ್ತ ಮತ್ತು ಸೃಷ್ಟಿಯ ಸಂಬಂಧ ಎನ್ನುತ್ತಾನೆ ಅಲ್ಲಮ.

"ಗಗನವೇ ಹುಂಡಿಗೆ , ಆಕಾಶವೇ ಅಗ್ಗವಣಿ,
ಚಂದ್ರ ಸೂರ್ಯರಿಬ್ಬರೂ ಪುಷ್ಪ,
ರುದ್ರನೋಗರ, ಸುಯಿಧಾನ ನೋಡಾ,
ಗುಹೇಶ್ವರಲಿಂಗಕ್ಕೆ ಪೂಜೆನೋಡಾ!"
ಗಗನವೇ ಹುಂಡಿ, ಆಕಾಶವೇ ಅರ್ಘ್ಯ, ಸೂರ್ಯಚಂದ್ರರು ಪುಷ್ಪದಂತೆ, ಈ ಸರ್ವ ಸೃಷ್ಟಿಯೇ ಶಿವಲಿಂಗಕ್ಕೆ ಪೂಜೆಯಂತೆ ತೋರುತ್ತದೆ ಅಲ್ಲಮನಿಗೆ. ಪ್ರಭುದೇವನ ಇಂತಹ ವಚನಗಳಲ್ಲಿನ ಭ್ಹವ್ಯವಾದ ಕಲ್ಪನೆ, ಅನುಭವ, ಎಲ್ಲವೂ ಕವೀತ್ವದ ಎಲ್ಲ ಸ್ತರಗಳನ್ನೂ ಮೀರಿಸುತ್ತವೆ. ಪ್ರಭುವೇ ಹೇಳುವಂತೆ ಮಾತೇ ಜ್ಯೋತಿರ್ಲಿಂಗವಾದಂತೆ ತೋರುತ್ತದೆ.

ಅದೃಶ್ಟವನ್ನೂ ದೃಶ್ಟವಾಗಿಸುವ ಕಾವ್ಯ ಶರಣರದ್ದು. ಸರ್ವ ವಸ್ತುಗಳಲ್ಲೂ ವ್ಯಾಪಿಸಿರುವ ಶಿವನನ್ನು ಕುರಿತು ಬಸವಣ್ಣನವರು ಹೀಗೆ ಹೇಳಿದ್ದಾರೆ.
"ಮರೀಚಿಕೆಯೊಳಗಣ ಬಿಸಿಲಿನಂತೆ ಇದ್ದಿತ್ತ,
ಕ್ಷೀರದೊಳಗಣ ತುಪ್ಪದಂತೆ ಇದ್ದಿತ್ತ,...
ನುಡಿಯೊಳಗಣ ಅರ್ಥದಂತೆ ಇದ್ದಿತ್ತ..."

ಬಸವೇಶ್ವರರ ವಚನಗಳಲ್ಲಿಯಂತೂ ಭಕ್ತಿಯ ಮಿಡಿತ ಎಲ್ಲರ ಚೈತನ್ಯಗಳಲ್ಲಿ ದಿವ್ಯತೆ ತುಂಬುವಂತೆ ಮಾಡುತ್ತದೆ. ಅವರ "ಎನ್ನ ಕಾಲೇ ಕಂಬ, ದೇಹವೇ ದೇಗುಲ, ಸಿರ ಹೊನ್ನ ಕಳಶವಯ್ಯ.. ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ.." ಎಂಬ ಮಾತುಗಳಲ್ಲಿ ಅವರ ಸರ್ವಾರ್ಪಣೆ, ಅಹಂಕಾರ ನಿರಸನ ಇವುಗಳನ್ನು ಕಾಣಬಹುದು. ಅನುಭಾವದ ಕುರಿತ ಬಸವಣ್ಣನವರ ನಿಲುವನ್ನು ಈ ವಚನದ ಕೆಲವು ಸಾಲುಗಳಲ್ಲಿ ನೋಡಬಹುದು.
"ಪೂಜೆಯುಳ್ಳನ್ನಬರ ಲಿಂಗವ ಹಾಡಿದೆ,
ಮಾಟವುಳ್ಳನ್ನಬರ ಜಂಗಮವ ಹಾಡಿದೆ,
ಜಿಹ್ವೆಯುಳ್ಳನ್ನಬರ ಪ್ರಸಾದವ ಹಾಡಿದೆ,
ಈ ತ್ರಿವಿಧ ನಾಸ್ತಿಯಾದ ಬಳಿಕ
ಎನ್ನ ನಾ ಹಾಡಿಕೊಂಡೆ ಕಾಣಾ ಕೂಡಲ ಸಂಗಮದೇವಾ."
ಮಾತಿನ ಅರ್ಥಕ್ಕೆ ಮೀರಿದ ಪರಿಶುದ್ದ ಭಾವನೆಯನ್ನ ಈ ವಚನದಲ್ಲಿ ಕಾಣಬಹುದು.

ತಮ್ಮ ಸಾಧನೆಯಲ್ಲಿ ಸಿದ್ದಿಯನ್ನು ಪಡೆದ ಶರಣರೆಲ್ಲಾ ಈ ಎತ್ತರಕ್ಕೇ ಏರಿದವರು. ಅನುಭಾವವನ್ನು ಹೇಳಿದ ಅವರ ಮಾತುಗಳಲ್ಲಿ ಒಂದೇ ಸತ್ಯವನ್ನೇ ಕಾಣಬಹುದು. ’ಸಾವ ಕೆಡುವ ಗಂಡನರೊಯ್ದು ಒಲೆಯೊಳಗೆ ಇಕ್ಕಿ, ಸಾವಿಲ್ಲದ ಕೇಡಿಲ್ಲದ ಚೆಲುವಂಗೊಲಿದೆನಯ್ಯಾ’ ಎಂದು ಹಾಡಿ, "ಚಿಲಿ ಮಿಲಿ ಎಂದೋದುವ ಗಿಳಿಗಳಿರಾ ನೀವು ಕಾಣೀರೇ’ ಎಂದು ತನ್ನ ಪತಿ ಮಲ್ಲಿಕಾರ್ಜುನನಿಗೆ ಪರಿತಪಿಸುವ ಅಕ್ಕಮಹಾದೇವಿಯೂ, ತನ್ನ ಸತಿಪತಿ ಭಾವದ ಸಾಧನೆಯ ಕೊನೆಯಲ್ಲಿ ತಾನೇ ಪತಿಯಾಗಿ ಪರಿಣಮಿಸಿ ಹೀಗೆ ಹಾಡುತ್ತಾಳೆ.
"ತನು ನಿಮ್ಮ ರೂಪಾದ ಬಳಿಕ ನಾನಾರಿಗೆ ಮಾಡುವೆ?
ಮನ ನಿಮ್ಮ ರೂಪಾದ ಬಳಿಕ ನಾನಾರಿಗೆ ನೆನೆವೆ?
ಪ್ರಾಣ ನಿಮ್ಮ ರೂಪಾದ ಬಳಿಕ ನಾನಾರನಾರಾಧಿಸುವೆ?
ಅರಿವು ನಿಮ್ಮಲ್ಲಿ ಸ್ವಯವಾದ ಬಳಿಕ ನಾನಾರನರಿವೆ?
ಚೆನ್ನಮಲ್ಲಿಕಾರ್ಜುನ ನಿಮ್ಮಲ್ಲಿ ನೀವಾಗಿ ನಿಮ್ಮಿಂದ ನಿಮ್ಮ ಮರೆದೆನಯ್ಯಾ."

ವಚನ ಸಾಹಿತ್ಯದ ಸೌಂದರ್ಯವು ಉಳಿದ ಎಲ್ಲ ಸಾಹಿತ್ಯಗಳಿಗಿಂತ ಮಿಗಿಲಾದದ್ದು. ಅಲ್ಲಿಯವರೆಗೂ ಕನ್ನಡದಲ್ಲಿ ಬಳಕೆಯಲ್ಲಿದ್ದ ಚಂಪೂ ಶೈಲಿಯನ್ನು ಸಡಿಲಗೊಳಿಸಿ ಸರಳವಾದ ಮತ್ತು ಆಕರ್ಷಕವಾದ ಪರಿಣಾಮಕಾರಿಯಾದ ಭಾಷೆಯ ರೂಪವೊಂದನ್ನು ಕನ್ನಡ ಸಾಹಿತ್ಯದಲ್ಲಿ ಶರಣರು ತಂದರು. ತಮ್ಮ ಭಾವನೆಗಳನ್ನು ಮನಮುಟ್ಟುವಂತೆ ಹೇಳುವುದಕ್ಕಾಗಿ ಅವರು ಬಳಸಿಕೊಂಡ ಅಲಂಕಾರಗಳು, ಸಾದೃಶ್ಯಗಳೂ, ವಚನಗಳಿಗೆ ಅನೇಕ ಬಾರಿ ಭಾವಗೀತೆಗಳ ಸ್ವರೂಪವನ್ನು ತಂದು ಕೊಟ್ಟಿವೆ.
ಉದಾಹರಣೆಗೆ,
"ಚಕೋರಂಗೆ ಚಂದ್ರಮನ ಚಿಂತೆ,
ಅಂಬುಜಕೆ ಭಾನುವಿನ ಚಿಂತೆ,
ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ,
ಎನಗೆ ನಮ್ಮ ಕೂಡಲ ಸಂಗಮದೇವರ ನೆನೆವುದೇ ಚಿಂತೆ."

ಎಂಬ ವಚನಗಳಲ್ಲಿನ ಪ್ರಾಸಗಳ ಸೊಬಗು,

"ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ,
ಸುಳಿದು ಬೀಸುವ ವಾಯು ನಿಮ್ಮ ದಾನ,
ನಿಮ್ಮ ದಾನವನುಂಡು ಅನ್ಯರ ಹೊಗಳುವ
ಕುನ್ನಿಗಳನೇನೆಂಬೆ ರಾಮನಾಥ"

ಎನ್ನುವ ವಚನಗಳಲ್ಲಿರುವ ಶ್ಲೇಷೆಯನ್ನಾಗಲಿ ಗಮನಿಸಿದಾಗ ವಚನಕಾರರು ತಮ್ಮ ಭಾಷೆಯಲ್ಲಿ ಸಾಧಿಸಿರುಸುವ ಸಹಜತೆ ಕಾಣುತ್ತದೆ. ಅಲ್ಲದೆ ಅವರು ನೀಡುವ ಉಪಮಾನಗಳು, ರೂಪಕಗಳು ಓದುಗರ ಅನುಭವದ ಪರಿಧಿಯನ್ನೂ ಹೆಚ್ಚಿಸುತ್ತವೆ.

ಶರಣರ ಸ್ವತಂತ್ರ ಮನೋಭಾವ, ಆಚಾರ-ವಿಚಾರಗಳ ಸಮನ್ವಯ ಎಲ್ಲವೂ ಇಂದಿನ ವಿಚಾರವಂತ ಯುಗಕ್ಕೆ ಹೆಚ್ಚಾಗಿ ಹಿಡಿಸುತ್ತವೆ. ಸುಮಾರು ಒಂಭೈನೂರು ವರುಷಗಳ ಹಿಂದೆಯೇ ಶರಣರು ಕಾಯಕದ ಮಹತ್ವವನ್ನೂ ಆದರ್ಶವನ್ನೂ ಸಾರಿದ್ದಾರೆ. ಅವು ಇಂದಿಗೂ ಅಷ್ಟೇ ಪ್ರಸ್ತುತ. ಶರಣರು ತಾವು ಕಂಡ ಉಚ್ಚ ಆದರ್ಶಗಳು, ಎಲ್ಲರನ್ನೂ ಸಮಾನವಾಗಿ ಕಾಣುವ ಗುಣ, ಹೀಗೆ ಎಲ್ಲವನ್ನೂ ತಮ್ಮ ವಚನಗಳ ಮೂಲಕ ಸರಳವಾದ ಭಾಷೆಯಲ್ಲಿ ವ್ಯಕ್ತವಡಿಸಿದ್ದಾರೆ. ಅಲ್ಲದೇ ಕನ್ನಡ ಭಾಷೆಯನ್ನೂ ಶಕ್ತಿಯುತವನ್ನಾಗಿ ಮಾಡಿದ್ದಾರೆ. ಆದ್ದರಿಂದಲೇ ಶರಣ ಸಾಹಿತ್ಯ ವಿಶ್ವ ಸಾಹಿತ್ಯದಲ್ಲೇ ಶ್ರೇಷ್ಠ ಅನುಭಾವ ಸಾಹಿತ್ಯವಾಗಿ ಪರಿಣಮಿಸಿದೆ. ಮತ್ತು ಕನ್ನಡ ಸಾಹಿತ್ಯ ವಾಹಿನಿಯಲ್ಲಿ ಒಂದು ಉಜ್ವಲ ಘಟ್ಟವಾಗಿ ಇಂದಿಗೂ ಸಾಮಾನ್ಯ ಜನತೆಯಲ್ಲಿಯೂ ಆನುಭಾವದ ಆನಂದವನ್ನು ನೀಡಿ, ಆಧ್ಯಾತ್ಮದ ಜಾಗೃತಿಯನ್ನು ಮೂಡಿಸುವಲ್ಲಿ ಸಮರ್ಥವಾಗಿದೆ.

(ಅನುಭಾವ ಸಾಹಿತ್ಯದ ಇನ್ನೊಂದು ಪ್ರಮುಖ ಘಟ್ಟ ’ದಾಸ ಸಾಹಿತ್ಯ’. ಆ ಬಗ್ಗೆ ನನ್ನ ಮುಂದಿನ ಪೋಸ್ಟನಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.)

8 comments:

  1. ಗೋದಾವರಿ,
    ವಚನ ಸಾಹಿತ್ಯದಲ್ಲಿಯ ಅನುಭಾವದರ್ಶನವನ್ನು ಚೆನ್ನಾಗಿ ಮೂಡಿಸಿದ್ದೀರಿ. ಮುಂದಿನ ಭಾಗಕ್ಕಾಗಿ ಎದುರು ನೋಡುತ್ತೇನೆ.

    ReplyDelete
  2. ಗೋದಾವರಿಯವರೇ, ಅನುಭಾವದ ಭಾವಾರ್ಥ, ನಿಜಾರ್ಥ, ಮೂಲಾರ್ಥ ಹೀಗೆ ವಿಂಗಡಿಸಿ ಬರೆದಿದ್ದೀರಿ, ಭಾಷೆಯನ್ನು ಆಡು-ಓದು-ಬರೆ ಗೆ ಸೀಮಿತವಾಗಿ ನೋಡುವ ನನಗೆ ಇದು ನಿಜ ಅನುಭಾವ...ಸರೀನ..?? ನನ್ನ ಪದ ಪ್ರಯೋಗ. ಹೀಗೇ ಹೆಚ್ಚು ಹೆಚ್ಚು ಅಪರೂಪದ ಪದಗಳನ್ನು ಪರಿಚಯಿಸಿ...ನಮಗೆ...ಧನ್ಯವಾದಗಳು.

    ReplyDelete
  3. ಸುನಾಥ್ ಅವರೇ, ಧನ್ಯವಾದಗಳು..

    ಜಲನಯನ ಅವರೇ,
    ಸರಿಯಾಗಿಯೇ ಇದೆ ನಿಮ್ಮ ಪದ ಪ್ರಯೋಗ.. ಕನ್ನಡ ನಾಡಿನಿಂದ ಅಷ್ಟು ದೂರದಲ್ಲಿದ್ದರೂ ನಿಮ್ಮಲ್ಲಿ ಕನ್ನಡ ಭಾಷೆಯ ಮೆಲಿರುವ ಆಸಕ್ತಿ ಮತ್ತು ಪ್ರೀತಿಯನ್ನು ನಿಜಕ್ಕೂ ಮೆಚ್ಚಲೇ ಬೇಕು..
    ತುಂಬಾ ದನ್ಯವಾದಗಳು.. ಹೀಗೆ ಬರುತ್ತಿರಿ..

    ReplyDelete
  4. vachana saahithya kannada saahithya kshethradalli bahala mannane padedide..bahu mukhya kaarana andare idu jana saamanyarige artha aguva haage ittu...adakku munche bandha saahithya prakaaragalu halegannadadalli ittu...allade kannadada modala kavayithri akkamahadevi kude e ygadalle baruttare...

    ReplyDelete
  5. ಸುಂದರ ವಿವರಣೆ

    ReplyDelete
  6. ಬಹಳ ಅತ್ಯುತ್ತಮ ಬರಹ

    ReplyDelete
  7. ಸರಿಯಾಗಿದೆ,ಸಂಕ್ಷಿಪ್ತವಾಗಿದೆ, ಆದರೂ ಪರಿಪೂರ್ಣವಾಗಿದೆ.ತುಂಬಾ ಧನ್ಯವಾದಗಳು.

    ReplyDelete
  8. ಮಹೀಪಾಲ ದೇಸಾಯಿ Magical Desai ಅಲ್ಲ

    ReplyDelete